ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾದಾಯಿ: ತಡೆಗೋಡೆ ನಿರ್ಮಾಣಕ್ಕೆ ಸೂಚನೆ

Last Updated 17 ಏಪ್ರಿಲ್ 2014, 19:33 IST
ಅಕ್ಷರ ಗಾತ್ರ

ನವದೆಹಲಿ: ಮಹಾದಾಯಿ ನದಿ ನೀರು ಹಂಚಿಕೆ ವಿವಾದ ಬಗೆಹರಿಯುವ­ವರೆಗೂ ಈ ನದಿ ಪಾತ್ರದ ಕಳಸಾ– ಬಂಡೂರಿ ಹಳ್ಳಗಳ ಮೂಲಕ ಮಲಪ್ರಭಾ ಕೊಳ್ಳಕ್ಕೆ ನೀರು ಹರಿಸಲು ಉದ್ದೇಶಿಸಿರುವ ಕಳಸಾ –­ಬಂಡೂರಿ ನಾಲೆಗೆ ತಡೆಗೋಡೆ ನಿರ್ಮಿಸುವಂತೆ ಮಹಾದಾಯಿ ನದಿ ನೀರು ಹಂಚಿಕೆ ನ್ಯಾಯಮಂಡಳಿಯು ಕರ್ನಾಟಕಕ್ಕೆ ಸೂಚಿಸಿದೆ.

ಕರ್ನಾಟಕವು ಕೈಗೆತ್ತಿಕೊಂಡಿರುವ ಕಳಸಾ– ಬಂಡೂರಿ ನಾಲಾ ತಿರುವು ಯೋಜನೆ ಕಾಮಗಾರಿಗೆ ತಡೆಯಾಜ್ಞೆ ನೀಡಲು ನ್ಯಾಯಮಂಡಳಿ
ನಿರಾಕರಿಸಿದೆ.

ಮೇ 31ರ ಒಳಗೆ ಈ ನಾಲೆಗೆ ಇಟ್ಟಿಗೆಯ ತಡೆಗೋಡೆ ನಿರ್ಮಿಸಬೇಕು. ಮಳೆಗಾಲದಲ್ಲಿ ಭೋರ್ಗರೆವ ಈ ಹಳ್ಳಗಳ ನೀರು ಉದ್ದೇಶಿತ ನಾಲೆ ಮೂಲಕ ಮಲಪ್ರಭಾ ನದಿ ಕೊಳ್ಳ ಸೇರ­ದಂತೆ ಖಾತರಿಪಡಿಸಬೇಕು ಎಂದು ಮಹಾ­ದಾಯಿ ನದಿ ನೀರು ಹಂಚಿಕೆ ನ್ಯಾಯ­ಮಂಡಳಿ ಅಧ್ಯಕ್ಷರಾದ ನಿವೃತ್ತ ನ್ಯಾಯಮೂರ್ತಿ ಜೆ.ಎಂ.ಪಾಂಚಾಲ್‌  ಗುರುವಾರ ನೀಡಿದ ಮಧ್ಯಾಂತರ ಆದೇಶದಲ್ಲಿ ತಿಳಿಸಿ­ದ್ದಾರೆ. ಇದರಿಂದ ರಾಜ್ಯಕ್ಕೆ ತಾತ್ಕಾಲಿಕ ಹಿನ್ನಡೆಯಾಗಿದೆ.

ಕಳಸಾ– ಬಂಡೂರಿ ನಾಲಾ ಯೋಜನೆಯ ಕಾಮಗಾರಿಯನ್ನೇ ಸ್ಥಗಿತಗೊಳಿಸಲು ನಿರ್ದೇಶನ ನೀಡಬೇಕು ಎಂಬ ಗೋವಾದ ಮನವಿಯನ್ನು ನ್ಯಾಯಮಂಡಳಿ ಇದೇ ವೇಳೆ ತಿರಸ್ಕರಿಸಿದೆ.

ತಡೆಗೋಡೆ ನಿರ್ಮಾಣ ಮತ್ತು ನಾಲೆಯ ಇನ್ನಿತರ ಕಾಮಗಾರಿಗಳ ಬಗ್ಗೆ ನಿಗಾ ಇರಿಸಲು ಮೇಲ್ವಿಚಾರಣಾ ಸಮಿತಿಯನ್ನು ಇದೇ 30ರೊಳಗೆ ರಚಿಸು­ವಂತೆ ಸೂಚಿಸಿರುವ ನ್ಯಾಯಮಂಡ­ಳಿಯು, ಸಮಿತಿಯಲ್ಲಿ ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ ರಾಜ್ಯಗಳ ಅಧೀಕ್ಷಕ ಎಂಜಿನಿಯರ್‌ ದರ್ಜೆಯ ಅಧಿಕಾರಿಗಳು ಇರಬೇಕು ಎಂದು ಹೇಳಿದೆ.

ಈ ಸಮಿತಿಯು ಮಧ್ಯಾಂತರ ವರದಿಯನ್ನು ಮೇ 15ರ ಒಳಗೆ ಮತ್ತು ಅಂತಿಮ ವರದಿಯನ್ನು ಜೂನ್‌ ಮೊದಲ ವಾರದಲ್ಲಿ ಸಲ್ಲಿಸಬೇಕು ಎಂದು ನ್ಯಾಯಮಂಡಳಿ ನಿರ್ದೇಶನ ನೀಡಿದೆ.

ಹಿನ್ನೆಲೆ: ಕಳಸಾ ಮತ್ತು ಬಂಡೂರಿ ಹಳ್ಳಗಳು  ಮಹಾದಾಯಿ ನದಿಯ ಉಪತೊರೆ­ಗಳು. ಹುಬ್ಬಳ್ಳಿ–ಧಾರವಾಡ ಅವಳಿ ನಗರ ಸೇರಿದಂತೆ ಬೆಳಗಾವಿ ಮತ್ತು ಗದಗ ಜಿಲ್ಲೆಗಳ ಹಲವು ಪಟ್ಟಣ, ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಕರ್ನಾಟಕ ಕಳಸಾ–ಬಂಡೂರಿ ನಾಲಾ ತಿರುವು ಯೋಜನೆ ಕೈಗೊಂಡಿದೆ. ಇದಕ್ಕೆ ಕೇಂದ್ರ ಸರ್ಕಾರ 2002ರಲ್ಲಿ ಅನುಮತಿ  ನೀಡಿತ್ತು. 

ಈ ಯೋಜನೆಯಿಂದ ಗೋವಾ ಉತ್ತರ ಭಾಗದ ಜೀವನದಿಯಾದ ಮಹಾದಾಯಿ ಒಣಗುತ್ತದೆ. ಕೃಷಿ, ಮೀನುಗಾರಿಕೆ ಮತ್ತು ಕುಡಿಯುವ ನೀರಿಗೆ ಈ ನದಿಯನ್ನೇ ಅವಲಂಬಿಸಿರುವ ಈ ಭಾಗದ ಜನಜೀವನ ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ಗೋವಾದ ನಾಗರಿಕ ಹಿತರಕ್ಷಣಾ ಸಮಿತಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಇದರಿಂದಾಗಿ ಕಳಸಾ– ಬಂಡೂರಿ ನಾಲಾ ತಿರುವು ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದ ಗೋವಾ, ಕೇಂದ್ರ ಜಲಸಂಪನ್ಮೂಲ ಸಚಿವಾಲಯಕ್ಕೆ ದೂರು ಸಲ್ಲಿಸಿತು.

ಈ ಹಿನ್ನೆಲೆಯಲ್ಲಿ ಮಹಾದಾಯಿ ನದಿ ಪಾತ್ರಕ್ಕೆ ಬರುವ ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾ ರಾಜ್ಯ­ಗಳನ್ನು ನದಿ ನೀರು ಹಂಚಿಕೆ ವ್ಯಾಜ್ಯದ ಸದಸ್ಯರನ್ನಾಗಿಸಿ ‘ಮಹಾದಾಯಿ ನದಿ ನೀರು ಹಂಚಿಕೆ ನ್ಯಾಯಮಂಡಳಿ’ಯನ್ನು ಕೇಂದ್ರ ಸರ್ಕಾರ ರಚನೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT