ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾದಾಯಿ ತೀರ್ಪಿಗೆ ವ್ಯಾಪಕ ವಿರೋಧ

ವಿವಿಧ ಸಂಘಟನೆಗಳಿಂದ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ
Last Updated 29 ಜುಲೈ 2016, 9:32 IST
ಅಕ್ಷರ ಗಾತ್ರ

ರಾಮನಗರ: ಮಹಾದಾಯಿ ನದಿ ನೀರು ಹಂಚಿಕೆ ಸಂಬಂಧ ನ್ಯಾಯಾಧೀಕರಣವು ನೀಡಿರುವ ಮಧ್ಯಂತರ ತೀರ್ಪು ಖಂಡಿಸಿ ನಗರದಲ್ಲಿ ವಿವಿಧ ಸಂಘಟನೆಗಳು ಗುರುವಾರ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದವು.

ಜಿಲ್ಲಾ ಕಂದಾಯ ಭವನದ ಎದುರು ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತಡೆಯೊಡ್ಡಿದ ರೈತ ಸಂಘದ ಸದಸ್ಯರು ನ್ಯಾಯಾಧೀಕರಣ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಉಪಾಧ್ಯಕ್ಷೆ ಅನಸೂಯಮ್ಮ ಮಾತನಾಡಿ, ‘ಕುಡಿಯುವ ನೀರಿನ ಸಲುವಾಗಿ ಕೇವಲ 7 ಟಿಎಂಸಿ ಬಳಕೆಗೆ ಅನುಮತಿ ನೀಡದ ನ್ಯಾಯಾಧೀಕರಣದ ತೀರ್ಪು ಖಂಡನೀಯ. ಇದರ ಹಿಂದೆ ಕೇಂದ್ರ ಸರ್ಕಾರದ ರಕ್ಕಸ ಮನೋಭಾವ ಕೆಲಸ ಮಾಡಿದೆ. ಸಮುದ್ರದ ಪಾಲಾಗುವ ನೀರನ್ನು ಬಳಕೆ ಮಾಡಲು ಕರ್ನಾಟಕಕ್ಕೆ ಅವಕಾಶ ನೀಡಬೇಕು’ ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಲಕ್ಷ್ಮಣಸ್ವಾಮಿ ಮಾತನಾಡಿ ‘ರೈತರ ಒಂದು ವರ್ಷ ಕಾಲ ಹೋರಾಟಕ್ಕೆ ನ್ಯಾಯಾಧೀಶರು ಮನ್ನಣೆ ನೀಡಿಲ್ಲ. ಇದರ ಹಿಂದೆ ಕೇಂದ್ರ ಸರ್ಕಾರದ ಹುನ್ನಾರ ಅಡಗಿದೆ. ಪ್ರಧಾನಮಂತ್ರಿ ಮಧ್ಯ ಪ್ರವೇಶಿಸಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿ ನ್ಯಾಯ ದೊರಕಿಸಿಕೊಡಬೇಕು’ ಎಂದು ಆಗ್ರಹಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಶಾಂತ್‌ ಅವರಿಗೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ಸಂಪತ್‌ಕುಮಾರ್‌, ಎಂ.ಡಿ.ಶಿವಕುಮಾರ್‌, ಎಂ.ಜಿ. ಗೋವಿಂದರಾಜು, ಬೋರೇಗೌಡ, ಕೃಷ್ಣಪ್ಪ, ವಿಶ್ವನಾಥ್‌ ಇತರರು ಪಾಲ್ಗೊಂಡಿದ್ದರು.

ರೈತ ಸಂಘ: ರೈತ ಸಂಘದ ಮತ್ತೊಂದು ಬಣದ ನೇತೃತ್ವದಲ್ಲಿ ಐಜೂರು ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು, ಕೆಲ ಕಾಲ ರಸ್ತೆ ತಡೆ ನಡೆಸಿ ನ್ಯಾಯಾಧೀಕರಣದ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ಒಂದು ವರ್ಷದಿಂದ ನಿರಂತರ ಹೋರಾಟ ಕೈಗೊಂಡಿದ್ದರೂ ರೈತರಿಗೆ ನ್ಯಾಯ ದೊರೆತಿಲ್ಲ. ಮುಖ್ಯಮಂತ್ರಿಗಳು ಮತ್ತೊಮ್ಮೆ ಕೇಂದ್ರ ಸರ್ಕಾರದ ಬಳಿಗೆ ಸರ್ವಪಕ್ಷ ನಿಯೋಗ ಕೊಂಡೊಯ್ದು ಪ್ರಧಾನಮಂತ್ರಿಗೆ ನೀರಿನ ಅಗತ್ಯತೆ ಕುರಿತು ಮನವರಿಕೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಜಿಲ್ಲಾ ಸಂಚಾಲಕ ಅಧ್ಯಕ್ಷ ತುಂಬೇನಹಳ್ಳಿ ಶಿವಕುಮಾರ್‌, ಮುಖಂಡರಾದ ಸಿ. ಕುಮಾರಸ್ವಾಮಿ, ಮೇಳೆಹಳ್ಳಿ ಎಂ.ಆರ್‌. ಕುಮಾರ್‌ ನೇತೃತ್ವ ವಹಿಸಿದ್ದರು.
ಜೆಡಿಎಸ್‌: ಜೆಡಿಎಸ್‌ ಕಾರ್ಯಕರ್ತರು ಐಜೂರು ವೃತ್ತದಲ್ಲಿ ಮಾನವ ಸರಪಳಿ ರಚಿಸಿ, ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು, ಮಹಾದಾಯಿ ನದಿ ನೀರು ಹಂಚಿಕೆ ವಿವಾದ ಜಟಿಲಗೊಳ್ಳಲು ಸರ್ಕಾರಗಳ ಉದಾಸೀನತೆಯೇ ಕಾರಣ ಎಂದು ಆರೋಪಿಸಿದರು.

ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ರಾಜ್ಯದ ಸಂಸದರು ಪ್ರಧಾನಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ಎಚ್‌. ರಾಜಣ್ಣ, ಜೆಡಿಎಸ್‌ ರಾಜ್ಯ ಎಸ್‌ಸಿ/ಎಸ್‌ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ. ಉಮೇಶ್‌, ಮುಖಂಡರಾದ ಎ.ಆರ್. ಮಂಜುನಾಥ್‌, ಮುಕುಂದರಾಜ್‌ ರೈಡ್‌ ನಾಗರಾಜ್‌, ಉಮೇಶ್‌, ಜಯಕುಮಾರ್‌ ಇತರರು ಪಾಲ್ಗೊಂಡಿದ್ದರು.
ವಕೀಲರ ಸಂಘ: ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದ ವಕೀಲರು ಐಜೂರು ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ. ಧನಂಜಯ ಮಾತನಾಡಿ ‘ರಾಜ್ಯದ ಪರ ವಕೀಲರಾದ ನಾರಿಮನ್‌ ಸಮರ್ಥ ವಾದ ಮಂಡಿಸದ ಕಾರಣ ಹಿನ್ನಡೆ ಉಂಟಾಗಿದೆ. ಕಾವೇರಿ ವಿಷಯದಲ್ಲೂ ರಾಜ್ಯಕ್ಕೆ ಇದೇ ರೀತಿ ಅನ್ಯಾಯ ಆಗಿತ್ತು. ಹೀಗಾಗಿ ಮುಂದಿನ ಹಂತದಲ್ಲಿ ನೀರಾವರಿ ತಜ್ಞರನ್ನು ನೇಮಕ ಮಾಡಿಕೊಂಡು ಸೂಕ್ತ ವಾದ ಮಂಡಿಸಬೇಕು’ ಎಂದು ಆಗ್ರಹಿಸಿದರು.  ಜಿಲ್ಲೆಯ ವಕೀಲರು ಪಾಲ್ಗೊಂಡಿದ್ದರು.

ಜಯ ಕರ್ನಾಟಕ ಸಂಘಟನೆ: ಸಂಘಟನೆಯ ಕಾರ್ಯಕರ್ತರು ಐಜೂರು ವೃತ್ತದಲ್ಲಿ ಸರ್ಕಾರ ಹಾಗೂ ನ್ಯಾಯಾಧೀಕರಣದ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ನದಿ ನೀರು ಬಳಕೆ ವಿಷಯದಲ್ಲಿ ರಾಜ್ಯಕ್ಕೆ ಪದೇ ಪದೇ ಅನ್ಯಾಯವಾಗುತ್ತಿದೆ. ರಾಜ್ಯ ಸರ್ಕಾರವು ಈ ವಿಷಯದಲ್ಲಿ ಇಚ್ಛಾ ಶಕ್ತಿ ಪ್ರದರ್ಶಿಸುವ ಜೊತೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಜೆ. ಕುಮಾರ್‌, ಕಾರ್ಯಾಧ್ಯಕ್ಷ ರವಿ, ಮುಖಂಡರಾದ ಅರುಣ್‌, ಪ್ರಶಾಂತ್‌, ಪ್ರಕಾಶ್‌ ಇತರರು ಇದ್ದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆ:  ಸಂಘಟನೆಯ ಕಾರ್ಯಕರ್ತರು ಬೆಳಿಗ್ಗೆ ಐಜೂರು ವೃತ್ತದಲ್ಲಿ ಅಣಕು ಶವಯಾತ್ರೆ ನಡೆಸಿದರು.

ರಾಜ್ಯ ಘಟಕದ ಅಧ್ಯಕ್ಷ ರಮೇಶ್‌ ಗೌಡ ಮಾತನಾಡಿ, ‘ರಾಜ್ಯದ ವಿಷಯದಲ್ಲಿ ಕೇಂದ್ರ ಸರ್ಕಾರವು ಮಲತಾಯಿ ಧೋರಣೆ ಅನುಸರಿಸುತ್ತಲೇ ಬಂದಿದೆ. ಕೇವಲ 7 ಟಿಎಂಸಿ ನೀರು ಬಳಕೆಗೆ ನ್ಯಾಯಾಧೀಕರಣವು ಅನುಮತಿ ನೀಡದೇ ಅನ್ಯಾಯ ಮಾಡಿದೆ. ಕೇಂದ್ರವು ಗೋವಾ ಹಾಗೂ ಕರ್ನಾಟಕ ರಾಜ್ಯಗಳ ಜೊತೆ ಸಮನ್ವಯ ಸಾಧಿಸಿ ಸಮಸ್ಯೆ ಇತ್ಯರ್ಥಪಡಿಸಬೇಕು’ ಎಂದು ಆಗ್ರಹಿಸಿದರು. ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಯೋಗೀಶ್‌ ಗೌಡ, ಮಹಿಳಾ ಘಟಕದ ಅಧ್ಯಕ್ಷೆ ಮಂಗಳಮ್ಮ, ರಂಜಿತ್‌ಗೌಡ, ಎಲೆಕೇರಿ ರಾಜೇಶ್‌, ದೇವೇಗೌಡ ಇತರರು ಪಾಲ್ಗೊಂಡಿದ್ದರು.

ಆಮ್ ಆದ್ಮಿ ಪಕ್ಷ: ಪಕ್ಷದ ಕಾರ್ಯಕರ್ತರು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಶಾಂತ್‌ ಅವರಿಗೆ ಮನವಿ ಸಲ್ಲಿಸಿದರು. ‘ನ್ಯಾಯಾಧೀಕರಣದ ತೀರ್ಪಿನಲ್ಲಿ ಉಲ್ಲೇಖವಾಗಿರುವಂತೆ ಸಮರ್ಥ ವಾದ ಮಂಡಿಸುವಲ್ಲಿ ರಾಜ್ಯ ಸರ್ಕಾರವು ವಿಫಲವಾಗಿದೆ. ಹೀಗಾಗಿ ತಜ್ಞರನ್ನು ಒಳಗೊಂಡ ಸಮಿತಿ ರಚಿಸಿ, ಅದರ ವರದಿ ಪಡೆದು ನ್ಯಾಯಾಧೀಕರಣದ ಎದುರು ಮಂಡಿಸಬೇಕು. ಯೋಜನೆಯಿಂದಾಗುವ ಲಾಭ–ನಷ್ಟದ ಕುರಿತು ಅಂಕಿ–ಅಂಶ ಸಹಿತ ವಿಸ್ತೃತ ವಿವರಣೆ ನೀಡಬೇಕು. ಉತ್ತರ ಕರ್ನಾಟಕದ ಪರಿಸ್ಥಿತಿ ಅರಿವು ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.

ಪಕ್ಷದ ಕಾರ್ಯಕರ್ತರಾದ ಮಂಜುನಾಥ್‌, ಗೋವಿಂದರಾಜು, ಮೆಹಬೂಬ್‌,ಫಿಲೋಮಿನ್‌ ಪಾಷಾ, ಮಹೇಶ, ರಾಮರಾವ್‌ ಮಾನೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT