ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾನಗರದ ಅಂಚಿನ ಒಡಕಲು ಬಿಂಬ

Last Updated 22 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

ಇದೊಂದು ಜಿಲ್ಲೆ. ಆದರೆ ಇದಕ್ಕೆ ತನ್ನದೇ ಆದ ಜಿಲ್ಲಾ ಕೇಂದ್ರವಿಲ್ಲ. ಜಿಲ್ಲಾ ಆಸ್ಪತ್ರೆಯೂ ಇಲ್ಲ. ನಗರೀಕರಣವೇನೋ ಅತಿವೇಗದಲ್ಲಿ ನಡೆಯುತ್ತಿದೆ. ಇದರ ಋಣಾತ್ಮಕ ಪರಿಣಾಮಗಳು ಜಿಲ್ಲೆಯ ಸಕಲರ ಮೇಲೂ ಪರಿಣಾಮ ಬೀರುತ್ತಿವೆ. ಧನಾತ್ಮಕ ಪರಿಣಾಮಗಳ ಫಲಾನುಭವಿಗಳಾಗಿರುವುದು ಕೆಲವರು ಮಾತ್ರ. ಅವರಲ್ಲೂ ಹೆಚ್ಚಿನವರು ಎಲ್ಲಿಂದಲೋ ಬಂದು ಇಲ್ಲಿ ಬೀಡುಬಿಟ್ಟವರು. ಜಿಲ್ಲೆಯ ಹೆಸರಿನಲ್ಲಿ ‘ಗ್ರಾಮಾಂತರ’ವೆಂಬ ವಿಶೇಷಣವಿದೆ. ಆದರೆ ಇಲ್ಲಿ ಗ್ರಾಮಗಳನ್ನು ಹುಡುಕಿ ಕಂಡುಕೊಳ್ಳಬೇಕು. ಇದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಂಬ ಆಡಳಿತಾತ್ಮಕ ಘಟಕದ ಸಾಮಾನ್ಯ ಗುಣಲಕ್ಷಣ. ಅಷ್ಟು ಮಾತ್ರವಲ್ಲ ಇದು ಭಾರತದ ಮಹಾನಗರಗಳ ಅಂಚಿನಲ್ಲಿರುವ ತಥಾಕಥಿತ ‘ಗ್ರಾಮೀಣ ಪ್ರದೇಶ’ಗಳ ಸಾಮಾನ್ಯ ಲಕ್ಷಣವೂ ಹೌದು.

ಬೆಂಗಳೂರು ನಗರವೇ ಈ ಗ್ರಾಮಾಂತರ ಜಿಲ್ಲೆಯ ಕೇಂದ್ರ. ಸ್ವಂತ ಜಿಲ್ಲಾ ಕೇಂದ್ರವೊಂದು ಇಲ್ಲದೇ ಇರುವುದರಿಂದ ಇದಕ್ಕೊಂದು ಜಿಲ್ಲಾ ಆಸ್ಪತ್ರೆಯೂ ಇಲ್ಲ! ಗ್ರಾಮಾಂತರ ಜಿಲ್ಲಾ ವಾಸಿಗಳಿಗೆ ಮಹಾನಗರದ ದುಬಾರಿ ಖಾಸಗಿ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಪಡೆಯುವ ಹೊರತಾದ ಮತ್ತೊಂದು ಆಯ್ಕೆ ಇಲ್ಲ. ಇಲ್ಲಿನ ತಾಲ್ಲೂಕುಗಳೆಲ್ಲವೂ ಬೆಂಗಳೂರು ಮಹಾನಗರದ ಉಪನಗರಗಳಾಗಿಬಿಟ್ಟಿವೆ. ಈ ತಾಲ್ಲೂಕುಗಳ ಜನರು ತಮ್ಮದೇ ಜಿಲ್ಲೆಯ ಮತ್ತೊಂದು ತಾಲ್ಲೂಕಿಗೆ ಹೋಗಬೇಕೆಂದರೆ ಮತ್ತೊಂದು ಜಿಲ್ಲೆಯನ್ನೇ ದಾಟಿ ಹೋಗಬೇಕು. ಹಾಗೆಂದು ಈ ಎಲ್ಲಾ ತಾಲ್ಲೂಕುಗಳ ನಡುವಣ ಸಂಚಾರಕ್ಕೆ ಅತ್ಯುತ್ತಮ ಸಾರ್ವಜನಿಕ ಸಂಚಾರ ವ್ಯವಸ್ಥೆಯೇನೂ ಇಲ್ಲ. ಈ ಎಲ್ಲವೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾನವ ಅಭಿವೃದ್ಧಿಯ ಸೂಚ್ಯಂಕದ ಮೇಲೆ ಪರಿಣಾಮ ಬೀರುತ್ತಿವೆ ಎಂಬುದನ್ನು ಈಚೆಗೆ ಬಿಡುಗಡೆಯಾಗಿರುವ ಜಿಲ್ಲಾ ಮಾನವ ಅಭಿವೃದ್ಧಿ ಸ್ಪಷ್ಟವಾಗಿ ಸೂಚಿಸುತ್ತಿದೆ.

1986ರಲ್ಲಿ ಬೆಂಗಳೂರು ಜಿಲ್ಲೆಯನ್ನು ಗ್ರಾಮಾಂತರ ಮತ್ತು ನಗರ ಜಿಲ್ಲೆಗಳಾಗಿ ವಿಭಜಿಸಲಾಯಿತು. ಗ್ರಾಮಾಂತರ ಜಿಲ್ಲೆಯಿಂದ ನಾಲ್ಕು ತಾಲ್ಲೂಕುಗಳನ್ನು ಪ್ರತ್ಯೇಕಿಸಿ ರಾಮನಗರ ಜಿಲ್ಲೆಯನ್ನು ಸೃಷ್ಟಿಸಲಾಯಿತು. ಅಲ್ಲಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯೆಂಬುದು ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ನೆಲಮಂಗಲ ತಾಲ್ಲೂಕುಗಳಿಗೆ ಸೀಮಿತವಾಗಿ ಉಳಿಯಿತು. ಅತಿವೇಗದಲ್ಲಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರಕ್ಕೆ ಅಂಟಿಕೊಂಡಂತಿರುವ ಈ ಜಿಲ್ಲೆಯ ಬದುಕಿನ ಎಲ್ಲ ಮಜಲುಗಳ ಮೇಲೂ ಮಹಾನಗರದ ಪ್ರಭಾವವಿದೆ.

‘ಗ್ರಾಮಾಂತರ’ವೆಂಬ ಅಂಕಿತವನ್ನು ತನ್ನದಾಗಿಸಿಕೊಂಡಿರುವ ಈ ಜಿಲ್ಲೆಯಲ್ಲಿ ಗ್ರಾಮಗಳೇ ಇಲ್ಲ ಎನ್ನುವಷ್ಟು ಕಡಿಮೆ ಎಂಬುದು ಮತ್ತೊಂದು ವ್ಯಂಗ್ಯ. ಬೆಂಗಳೂರು ಮಹಾನಗರಕ್ಕೆ ಹತ್ತಿರವಾಗಿರುವುದರಿಂದ ಈ ಜಿಲ್ಲೆಯ ನಗರೀಕರಣದ ಗತಿ ಕರ್ನಾಟಕದ ಇತರ ಎಲ್ಲಾ ಜಿಲ್ಲೆಗಳಿಗಿಂತ ಹೆಚ್ಚು. ಹಳ್ಳಿಗಳಲ್ಲಿರುವ ಜಾತಿ ಆಧಾರಿತ ಸಾಮಾಜಿಕ ಸ್ತರೀಕರಣ ನಗರೀಕರಣ ಪ್ರಕ್ರಿಯೆಯಲ್ಲಿ ಸಡಿಲಗೊಳ್ಳುತ್ತದೆ. ಸಂಪನ್ಮೂಲದ ಹಂಚಿಕೆಯಲ್ಲಿನ ಏರುಪೇರುಗಳು ಹೊಸ ಸ್ವರೂಪವನ್ನು ಪಡೆದುಕೊಳ್ಳುತ್ತವೆ. ಇದು ಅನೇಕ ಸಂದರ್ಭಗಳಲ್ಲಿ ಕೆಳವರ್ಗಗಳಿಗೆ ಒಂದು ಮಟ್ಟದ ಶಕ್ತಿಯನ್ನೂ ಒದಗಿಸುತ್ತದೆ. ಈ ದೃಷ್ಟಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪಲ್ಲಟಗಳನ್ನು ನೋಡಲು ಹೊರಟರೆ ಸಿಗುವ ಚಿತ್ರಣವೇ ಬೇರೆ.

ಇಲ್ಲಿ ಭಾರೀ ಪ್ರಮಾಣದ ಭೂಸ್ವಾಧೀನ ಮತ್ತು ಪರಭಾರೆಗಳೆರಡೂ ನಡೆದಿವೆ. ದಲಿತರು ಹೊಂದಿರುವ ಭೂಮಿ ಪ್ರಮಾಣ ಗಮನಾರ್ಹ ಎನಿಸುವಷ್ಟು ಕಡಿಮೆಯಾಗಿದೆ. ಇದೇ ವೇಳೆ ಭೂಮಿಯನ್ನು ಹೊಂದಿರುವ ದಲಿತರ ಸಂಖ್ಯೆಯಲ್ಲಿ ದೊಡ್ಡ ವ್ಯತ್ಯಾಸವಾಗಿಲ್ಲ ಎಂಬುದು ಭೂದಾಖಲೆಗಳ ಸೂಕ್ಷ್ಮ ಅವಲೋಕನದಲ್ಲಿ ಕಂಡುಬರುತ್ತದೆ. ಹೊಸಕೋಟೆ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕುಗಳಲ್ಲಿ ಇದು ಹೆಚ್ಚು ಸ್ಪಷ್ಟ. ದಲಿತೇತರರು ಹೊಂದಿರುವ ಭೂಮಿಯ ಪ್ರಮಾಣದಲ್ಲಿ ಶೇ 25ರಷ್ಟು ಹೆಚ್ಚಳವಾಗಿರುವುದೇ ಇದಕ್ಕೆ ಸಾಕ್ಷಿ. ಅಂದರೆ ರಿಯಲ್ ಎಸ್ಟೇಟ್ ಉದ್ದೇಶಕ್ಕಾಗಿ ದಲಿತರ ಭೂಮಿಯನ್ನು ದಲಿತೇತರರು ಖರೀದಿಸಿರುವಂತೆ ಕಾಣಿಸುತ್ತದೆ. ರಿಯಲ್ ಎಸ್ಟೇಟ್ ಉದ್ಯಮದ ಒತ್ತಡ ಜಮೀನು ಪರಭಾರೆ ನಿಷೇಧ ಕಾಯ್ದೆಯ ಉಲ್ಲಂಘನೆಯಲ್ಲಿ ಪರ್ಯವಸಾನಗೊಂಡಿರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಾಪನೆ ಮತ್ತು ಕೈಗಾರಿಕೆಗಳಿಗಾಗಿ ವಶಪಡಿಸಿಕೊಂಡ ಭಾರೀ ಪ್ರಮಾಣದ ಭೂಮಿ ಈ ಪ್ರದೇಶದ ಜೀವವೈವಿಧ್ಯ ಮತ್ತು ಅರಣ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಸಣ್ಣ ಹಿಡುವಳಿದಾರರು ತಮ್ಮ ಭೂಮಿ ಕಳೆದುಕೊಂಡು ಕೂಲಿ ಕಾರ್ಮಿಕರಾಗಿದ್ದರೆ, ದೊಡ್ಡ ಹಿಡುವಳಿಗಳನ್ನು ಹೊಂದಿರುವವರು ತರಕಾರಿ, ಹಣ್ಣು ಮತ್ತು ಹೂವಿನ ಕೃಷಿ ಮೂಲಕ ಲಾಭಗಳಿಸುವಂತಾಗಿದೆ. ರಿಯಲ್ ಎಸ್ಟೇಟ್ ಉದ್ಯಮದ ಲಾಭಕೋರತನಕ್ಕೆ ಬಲಿಯಾದವರಲ್ಲಿ ಸಣ್ಣ ಹಿಡುವಳಿದಾರರೇ ಹೆಚ್ಚು. ಇದಕ್ಕೆ ಮುಖ್ಯ ಕಾರಣ ಪ್ರಸ್ತಾಪಿತ ಭೂಸ್ವಾಧೀನ ಯೋಜನೆಗಳ ಕುರಿತ ಮಾಹಿತಿಯ ಕೊರತೆ. ಭೂಸ್ವಾಧೀನ ಪ್ರಕ್ರಿಯೆಯನ್ನು ಗುಟ್ಟಿನ ವಿಷಯವನ್ನಾಗಿಸದೆ ಸ್ಥಳೀಯ ಸಮುದಾಯದ ಜೊತೆ ಮುಕ್ತ ಚರ್ಚೆಗೆ ಮುಂದಾಗಬೇಕಾದ ಅಗತ್ಯವನ್ನು ಇದು ತೋರಿಸುತ್ತಿದೆ.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಎ.ಎಂ.ಮಯೂರ್ ಮತ್ತು ತಂಡದ ವಿಜ್ಞಾನಿಗಳು 2013ರಲ್ಲಿ ನಡೆಸಿದ ಅಧ್ಯಯನ ಹೇಳುತ್ತಿರುವಂತೆ ಇಲ್ಲಿನ ಅರಣ್ಯ ಪ್ರದೇಶ ಪ್ರಮಾಣಾತ್ಮಕವಾಗಿಯಷ್ಟೇ ಅಲ್ಲದೆ ಗುಣಾತ್ಮಕವಾಗಿಯೂ ನಷ್ಟಕ್ಕೀಡಾಗಿದೆ. ಪರಿಣಾಮವಾಗಿ ಇಲ್ಲಿನ ಬೆಲೆಬಾಳುವ ಮರಗಳ ಪ್ರಭೇದಗಳಷ್ಟೇ ಇಲ್ಲವಾಗುವುದರ ಜೊತೆಗೆ ಇವನ್ನು ಆಶ್ರಯಿಸಿದ್ದ ಪ್ರಾಣಿ ಮತ್ತು ಪಕ್ಷಿಗಳಾದಿಯಾದ ಜೀವ ಸಂಕುಲವೂ ಅಳಿವಿನಂಚಿಗೆ ಸರಿದಿದೆ. ಈಗ ಇಲ್ಲಿ ಉಳಿದಿರುವುದು ಅಕೇಶಿಯಾ ಮತ್ತು ನೀಲಗಿರಿ ಕಾಡುಗಳಲ್ಲಿ ಬದುಕಬಲ್ಲ ಜೀವಿಗಳು ಮಾತ್ರ. ಅಂದರೆ ಇಲ್ಲಿನ ಜೀವವೈವಿಧ್ಯ ಸಂಪೂರ್ಣ ಅಳಿದಿದೆ.

ಅತಿವೇಗದಲ್ಲಿ ಬೆಳೆಯುತ್ತಿರುವ ಸೇವಾ ಕ್ಷೇತ್ರ ಮತ್ತು ಉತ್ಪಾದನಾ ಕ್ಷೇತ್ರಗಳಿಂದಾಗಿ ಜಿಲ್ಲೆಯ ತಲಾ ವರಮಾನ ರಾಜ್ಯ ಸರಾಸರಿಗಿಂತ ಹೆಚ್ಚಿದೆ. ಇದೇ ವೇಳೆ ಕೃಷಿಯಿಂದ ದೊರೆಯುತ್ತಿದ್ದ ವರಮಾನದ ಪ್ರಮಾಣ ಇನ್ನಿಲ್ಲದಂತೆ ಇಳಿಕೆ ಕಂಡಿದೆ. ವಿಪರ್ಯಾಸವೆಂದರೆ ಈಗಲೂ ಕೃಷಿ ಉದ್ಯೋಗವನ್ನು ಅವಲಂಬಿಸಿರುವವರ ಪ್ರಮಾಣ ಇಲ್ಲಿ ಶೇ 70ರಷ್ಟಿದೆ. ಕೃಷಿಯೇತರ ಉದ್ಯೋಗಗಳಲ್ಲಿ ತೊಡಗಿಸಿಕೊಂಡವರೆಲ್ಲರೂ ಪ್ರತಿನಿತ್ಯ ಬೆಂಗಳೂರು ನಗರ ಜಿಲ್ಲೆಗೆ ಪ್ರಯಾಣಿಸುತ್ತಾರೆ. ಇದಕ್ಕೆ ಪುಟವಿಟ್ಟಂತೆ ಬೆಂಗಳೂರು ನಗರದಲ್ಲಿ ಉದ್ಯೋಗಿಗಳಾಗಿರುವ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಗೆ ಸೇರಿದ ದೊಡ್ಡ ಸಂಖ್ಯೆಯ ಜನರ ವಸತಿಗಳಿರುವುದು ಇದೇ ಗ್ರಾಮಾಂತರ ಜಿಲ್ಲೆಯಲ್ಲಿ.

ಗ್ರಾಮೀಣ ಪ್ರದೇಶಗಳಲ್ಲಿ ಬಡತನ ರೇಖೆ ಕೆಳಗಿರುವ ಜನರ ಪ್ರಮಾಣ ಶೇ 6ರಷ್ಟಿದೆ. ಆದರೆ ನಗರ ಪ್ರದೇಶಗಳಲ್ಲಿ ಬಡತನದ ಪ್ರಮಾಣ ಬಹಳ ಹೆಚ್ಚು. ಕಾರ್ಮಿಕರ ಉತ್ಪಾದಕತೆ ಮತ್ತು ಸಂಬಳದ ಪ್ರಮಾಣವೇನೋ ಮೇಲಕ್ಕೇರುತ್ತಿದೆ. ಆದರೆ ಉದ್ಯೋಗಸ್ಥ ಮಹಿಳೆಯರ ಪ್ರಮಾಣ ಪುರುಷ ಉದ್ಯೋಗಿಗಳ ಮೂರನೇ ಎರಡರಷ್ಟು ಮಾತ್ರ ಇದೆ. ಒಟ್ಟು ಭೂ ಹಿಡುವಳಿಯ ಐದನೇ ಒಂದರಷ್ಟು ಮಾತ್ರ ಮಹಿಳೆಯರ ಕೈಯಲ್ಲಿದೆ. ಇವರೆಲ್ಲರೂ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕೂಲಿಯಲ್ಲಿ ತೊಡಗಿದ್ದಾರೆ ಇಲ್ಲವೇ ನಗರ ಪ್ರದೇಶಗಳಲ್ಲಿ ಮನೆಗೆಲಸದಂತಹ ವೃತ್ತಿಯನ್ನು ಅವಲಂಬಿಸಿದ್ದಾರೆ. ಜಿಲ್ಲೆಯ ನಗರ ಪ್ರದೇಶಗಳಲ್ಲಿ ಮಹಿಳೆಯರ ನಿರುದ್ಯೋಗದ ಪ್ರಮಾಣವೂ ಹೆಚ್ಚು. ಪುರುಷರ ನಿರುದ್ಯೋಗದ ಪ್ರಮಾಣ ಶೇ 4.6ರಷ್ಟಿದರೆ ಮಹಿಳೆಯರಲ್ಲಿ ಇದು ಶೇ 17.5ರಷ್ಟಿದೆ. ಇದರ ಜೊತೆಗೆ ಪುರುಷ– ಮಹಿಳೆಯರ ನಡುವಣ ಸಂಬಳದ ಅಂತರವೂ ದೊಡ್ಡದು.

ಮನೆ ಮತ್ತಿತರ ಸೊತ್ತುಗಳ ಮಾಲೀಕತ್ವ ಮತ್ತು ನೀರು ಮತ್ತು ಶೌಚಾಲಯಗಳ ಸವಲತ್ತುಗಳನ್ನು ಪರಿಗಣಿಸಿದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನರ ಜೀವನಮಟ್ಟ ಇತರ ಜಿಲ್ಲೆಗಳಿಗಿಂತ ಹೆಚ್ಚು ಉತ್ತಮ. ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆಡಳಿತ ಮತ್ತು ಹಲವು ಪಂಚಾಯಿತಿಗಳು ತೋರಿರುವ ಉತ್ಸಾಹವೂ ಇದಕ್ಕೆ ಕಾರಣವಾಗಿದೆ. ಕುಡಿಯುವ ನೀರಿನಲ್ಲಿರುವ ಕಲ್ಮಷಗಳ ಪ್ರಮಾಣವೂ ಇಲ್ಲಿ ಕಡಿಮೆ ಇದೆ. ಗಮನಾರ್ಹ ಸಂಖ್ಯೆಯ ಪಂಚಾಯಿತಿಗಳು ಘನತ್ಯಾಜ್ಯ ನಿರ್ವಹಣೆಗೆ ಬೇಕಿರುವ ಕ್ರಮಗಳನ್ನು ಕೈಗೊಂಡಿವೆ. ಇಷ್ಟೆಲ್ಲಾ ಇದ್ದರೂ ದಲಿತ ಕೇರಿಗಳಲ್ಲಿ ನೀರು ಮತ್ತು ಶೌಚಾಲಯದ ಸಮಸ್ಯೆ ತೀವ್ರವಾಗಿದೆ. ಮಹಿಳೆಯರೇ ಕುಟುಂಬದ ಮುಖ್ಯಸ್ಥರಾಗಿರುವ ಮನೆಗಳ ಸ್ಥಿತಿಯಂತೂ ಇನ್ನೂ ಕಷ್ಟದ್ದು. ಇವರು ನೀರು, ಶೌಚಾಲಯ, ವಿದ್ಯುತ್ ಹಾಗೂ ಅಡುಗೆಗೆ ಇಂಧನಕ್ಕೂ ಕಷ್ಟಪಡಬೇಕಾಗಿದೆ.

ನಗರಾಡಳಿತಕ್ಕೆ ಸಂಬಂಧಿಸಿದ ಬಹುಮುಖ್ಯ ಸೂಚಿಕೆಗಳಲ್ಲೊಂದು ತೆರಿಗೆ ಸಂಗ್ರಹದ ಸಾಮರ್ಥ್ಯ. ಇಲ್ಲಿರುವ ಐದು ನಗರಾಡಳಿತ ಸಂಸ್ಥೆಗಳಲ್ಲಿ ಮೂರು ಸಂಸ್ಥೆಗಳು ಆಸ್ತಿ ತೆರಿಗೆ ಸಂಗ್ರಹದಲ್ಲಿ ಅತಿ ಹೆಚ್ಚು ದಕ್ಷತೆಯನ್ನು ಪ್ರದರ್ಶಿಸಿವೆ. ಆದರೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾಗಿರುವ ಯೋಜನೆಗಳಿಗೆ ಹಣವನ್ನು ವ್ಯಯಿಸುವ ವಿಷಯದಲ್ಲಿ ಇಡೀ ಜಿಲ್ಲೆಯೇ ಹಿಂದುಳಿದಿದೆ. 2011–12ರ ಅವಧಿಯಲ್ಲಿ ಜಿಲ್ಲೆಯ ಎಲ್ಲಾ ನಗರಾಡಳಿತ ಸಂಸ್ಥೆಗಳು ಪರಿಶಿಷ್ಟರಿಗೆ ಸಂಬಂಧಿಸಿದ ಯೋಜನೆಗಳಿಗೆ ಮೀಸಲಿದ್ದ ಒಟ್ಟು ಮೊತ್ತದ ಶೇ 42ರಷ್ಟನ್ನು ಖರ್ಚು ಮಾಡದೆಯೇ ಉಳಿಸಿಕೊಂಡಿದ್ದವು.

ಸಾಕ್ಷರತೆ ಮತ್ತು ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಾಧನೆ ಉತ್ತಮ ಮಟ್ಟದ್ದಾಗಿದೆ. 2001ರಿಂದ 2011ರ ನಡುವಣ ಅವಧಿಯಲ್ಲಿ ನಿರಕ್ಷರರ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣಕ್ಕೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಲ್ಲಿ ಲಿಂಗ ತಾರತಮ್ಯ ಕಾಣಿಸುವುದಿಲ್ಲ. ಆದರೂ ಗುಣಮಟ್ಟದ ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ. ಪ್ರೌಢಶಿಕ್ಷಣಕ್ಕಾಗಿ ಪ್ರವೇಶ ಪಡೆಯುವವರ ಸಂಖ್ಯೆಯಲ್ಲಿ ಲಿಂಗತಾರತಮ್ಯ ಇಲ್ಲದಿದ್ದರೂ ಒಟ್ಟಾರೆ ಪ್ರವೇಶಾತಿಯ ಅನುಪಾತ ಅತ್ಯುತ್ತಮ ಎನ್ನುವ ಮಟ್ಟದಲ್ಲೇನೂ ಇಲ್ಲ. 10ನೇ ತರಗತಿಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿಯೂ ಗಮನಾರ್ಹ ಪ್ರಮಾಣದ ಪ್ರಗತಿಯಿದೆ.

ಆದರೆ ಈ ಹಂತದ ನಂತರ ದಿಢೀರೆಂದು ಲಿಂಗತಾರತಮ್ಯದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರ ಪ್ರಮಾಣ ಪಾಲಿಟೆಕ್ನಿಕ್‌ಗಳು ಮತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಬಹಳ ಹೆಚ್ಚು. ಈ ಪ್ರದೇಶದಲ್ಲಿ ಭಾರೀ ಶುಲ್ಕ ವಸೂಲು ಮಾಡುವ ಖಾಸಗಿ ವಿದ್ಯಾಸಂಸ್ಥೆಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಒಟ್ಟಾರೆಯಾಗಿ ಹೆಣ್ಣು ಮಕ್ಕಳ ಶಿಕ್ಷಣದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಬಡಕುಟುಂಬಗಳ ಹೆಣ್ಣು ಮತ್ತು ಗಂಡು ಮಕ್ಕಳಿಬ್ಬರ ಶಿಕ್ಷಣ ಮೇಲೂ ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕದ ಪ್ರಮಾಣ ಪ್ರಭಾವ ಬೀರುತ್ತಿದೆ. ಈ ಶಿಕ್ಷಣ ಸಂಸ್ಥೆಗಳು ಸ್ಥಳೀಯರಿಗಿಂತ ಹೆಚ್ಚಾಗಿ ಹೊರಗಿನಿಂದ ಇಲ್ಲಿ ವಾಸಿಸಲು ಬರುವ ಉಳ್ಳವರನ್ನೇ ದೃಷ್ಟಿಯಲ್ಲಿಟ್ಟುಕೊಂಡಿರುವುದೂ ಇದಕ್ಕೊಂದು ಕಾರಣವೆನ್ನಬಹುದು.

ಆರೋಗ್ಯ ಕ್ಷೇತ್ರದ ಚಿತ್ರಣ ಹಲವು ವಿಪರ್ಯಾಸಗಳಿಂದ ಕೂಡಿದೆ. ರೋಗನಿರೋಧಕ ಲಸಿಕೆಗಳ ಬಳಕೆ ಅತ್ಯುತ್ತಮ ಎನ್ನುವ ಮಟ್ಟದಲ್ಲಿದೆ, ಶಿಶು ಮರಣ ಪ್ರಮಾಣವೂ ಕಡಿಮೆ. ಇದೇ ವೇಳೆ ಪ್ರಸವದ ವೇಳೆ ತಾಯಂದಿರ ಮರಣದ ಪ್ರಮಾಣ ಅಪಾಯಕಾರಿ ಮಟ್ಟದಲ್ಲಿದೆ. ಹಾಗೆಯೇ ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ ರೋಗಗಳ ಪ್ರಮಾಣವೂ ಬಹಳ ಹೆಚ್ಚು. ಸಾರ್ವಜನಿಕ ವೈದ್ಯಕೀಯ ಸೇವೆಯ ಲಭ್ಯತೆ ವ್ಯಾಪಕವಾಗಿರುವಾಗಲೂ ಇದು ಸಂಭವಿಸುತ್ತಿರುವುದು ಈ ಸೇವೆಗಳ ಗುಣಮಟ್ಟ ಕುಸಿತವನ್ನು ಸೂಚಿಸುತ್ತಿದೆ.

ದಲಿತ ಕುಟುಂಬಗಳಿಗೆ ಈ ಸೌಲಭ್ಯದ ಪ್ರಮಾಣ ಕಡಿಮೆ ಇರುವುದು ಆತಂಕದ ಸಂಗತಿ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರ ಮಾಡುತ್ತಿರುವ ವೆಚ್ಚದ ಕುಸಿತ ಅಷ್ಟೇನೂ ಒಳ್ಳೆಯ ಸೂಚನೆಯಲ್ಲ. ಅಮರ್ತ್ಯ ಸೇನ್ ಅವರ ಪರಿಭಾಷೆಯನ್ನು ಬಳಸಿ ಹೇಳುವುದಾದರೆ ಈ ಜಿಲ್ಲೆ ‘ಆರ್ಥಿಕ ಶ್ರೀಮಂತಿಕೆ’ಯನ್ನು ಉತ್ತೇಜಿಸುತ್ತಿದೆಯೆಂಬುದು ನಿಜವಾದರೂ ಅದು ‘ಜನಜೀವನದ ಶ್ರೀಮಂತಿಕೆ’ಯನ್ನು ಉತ್ತೇಜಿಸುವುದಕ್ಕೆ ಪೂರಕವಾಗಿಲ್ಲ. ದೇವನಹಳ್ಳಿ ವಿಮಾನ ನಿಲ್ದಾಣಕ್ಕೂ ಬೆಂಗಳೂರು ನಗರಕ್ಕೂ ಸಂಪರ್ಕ ಕಲ್ಪಿಸುವ ಮೇಲ್ಸೇತುವೆಯೇ ಇದಕ್ಕೊಂದು ರೂಪಕದಂತೆ ಕಾಣಿಸುತ್ತದೆ. ಮೇಲೆ ಪ್ರಯಾಣಿಸುವ ಪುಣ್ಯವಂತರಲ್ಲಿ ಈ ಜಿಲ್ಲೆಯ ಸಾಮಾನ್ಯರಿಲ್ಲ. ಅವರೇನಿದ್ದರೂ ತಮ್ಮನ್ನು ತಲುಪದ, ತಮ್ಮನ್ನು ಒಳಗೊಳ್ಳದ ಅಭಿವೃದ್ಧಿಯ ಆಕಾಂಕ್ಷಿಗಳು ಮಾತ್ರ.

ಲೇಖಕಿ ಸೆಂಟರ್ ಫಾರ್ ಬಜೆಟ್ ಅಂಡ್ ಪಾಲಿಸಿ ಸ್ಟಡೀಸ್‌ನ ನಿರ್ದೇಶಕಿ.
ಈ ಸಂಸ್ಥೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾನವ ಅಭಿವೃದ್ಧಿ ವರದಿ ರಚಿಸುವ ಕೆಲಸಕ್ಕೆ ನೇತೃತ್ವ ನೀಡಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT