ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾನಗರದ ರೂಪಾಂತರ ಕಥನ

Last Updated 17 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು ತನಗಿದ್ದ ‘ಉದ್ಯಾನ ನಗರಿ’ ಎಂಬ ಬಿರುದನ್ನು ಕಳಚಿಟ್ಟು ಜಾಗತಿಕ ನಗರಿಯ ವೇಷದಲ್ಲಿ ಮಿನುಗುತ್ತಿದೆ. ಕಳೆದ ಒಂದು ದಶಕದಲ್ಲಿ ಈ ಮಹಾನಗರ ರೂಪಾಂತರ ಹೊಂದಿದ ಪರಿಯನ್ನು ಗಮನಿಸಿದರೆ ಬೆರಗಾಗುತ್ತದೆ. ಮೆಟ್ರೊ, ವಿಮಾನನಿಲ್ದಾಣ, ಗಗನಚುಂಬಿ ಕಟ್ಟಡಗಳು, ವಿಶಾಲ ರಸ್ತೆಗಳು ನಗರಕ್ಕೆ ಬೇರೆಯದ್ದೇ ಆದ ಹೊಳಪನ್ನು ನೀಡಿವೆ.

ಆದರೆ ಈ ಹೊಳಪನ್ನು ಗಳಿಸಿಕೊಳ್ಳುವ ಭರದಲ್ಲಿ ಏನನ್ನು ಕಳೆದುಕೊಂಡಿದ್ದೇವೆ ಎನ್ನುವುದರ ಬಗ್ಗೆ ಚರ್ಚೆಯಾಗಿರುವುದು ಕಡಿಮೆಯೇ.ಅಭಿವೃದ್ಧಿಯ ಅಡ್ಡಪರಿಣಾಮಗಳ ಬಗ್ಗೆ ಆಗೀಗ ಪ್ರತಿಭಟನೆಯ ಸ್ವರಗಳು ಕೇಳಿದರೂ ಅವುಗಳು ಪ್ರಭುತ್ವದ ಗದ್ದಲದಲ್ಲಿ ಅಡಗಿ ಹೋಗುವುದೇ ಹೆಚ್ಚು.

ಎಷ್ಟು ಭ್ರಮೆ ಎಷ್ಟು ವಾಸ್ತವ ಎಂದು ಸುಲಭಕ್ಕೆ ನಿರ್ಧರಿಸಲಾಗದ ಸಂಕೀರ್ಣ ವಿದ್ಯಮಾನವಿದು. ಪರವೂ ಅಲ್ಲದೆ ವಿರೋಧವೂ ಅಲ್ಲದೆ  ವಿದ್ಯಮಾನಗಳ ಕುರಿತ ನಾಗರಿಕರ ಅಭಿಪ್ರಾಯವನ್ನು ದಾಖಲಿಸುವ ಉದ್ದೇಶದಿಂದ ರೂಪುಗೊಂಡ ಸಾಕ್ಷ್ಯಚಿತ್ರ ‘ಅವರ್ ಮೆಟ್ರೋಪೊಲೀಸ್‌’.

ಗೌತಮ್ ಸೊಂಟಿ ಮತ್ತು ಉಷಾ ರಾವ್‌ ರೂಪಿಸಿರುವ 70 ನಿಮಿಷ ಅವಧಿಯ ಈ ಸಾಕ್ಷ್ಯಚಿತ್ರ 2008–-2013 ನಡುವಣ ಅವಧಿಯಲ್ಲಿ ಬೆಂಗಳೂರು ನಗರ ಹೊಂದಿದ ರೂಪಾಂತರಗಳನ್ನು ಹಲವು ಕಥನಗಳ ಮೂಲಕ ದರ್ಶಿಸುತ್ತವೆ.

ಗೌತಮ್‌ ಕಳೆದ 20 ವರ್ಷಗಳಿಂದ ಡಾಕ್ಯುಮೆಂಟರಿ ಫಿಲಂ ಮೇಕಿಂಗ್‌ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದವರು. ಉಷಾ ರಾವ್‌ ಮಾನವಶಾಸ್ತ್ರದ ವಿದ್ಯಾರ್ಥಿನಿಯಾಗಿದ್ದರೂ, ನಗರಕೇಂದ್ರಿತ ಬದಲಾವಣೆಗಳ ಬಗ್ಗೆ ವಿಪರೀತ ಆಸಕ್ತಿ ಹೊಂದಿದವರು. ‘‘ಅವರ್ ಮೆಟ್ರೋಪೊಲೀಸ್‌’ನಲ್ಲಿನ ಕಥನಗಳು ಬೆಂಗಳೂರಿನವೇ ಆದರೂ ಇದು ಭಾರತದ ಎಲ್ಲ ಪ್ರಮುಖ ನಗರಗಳ ಆತ್ಮಕಥನವೂ ಆಗಬಲ್ಲದು ಎಂಬುದು ಅವರ ನಂಬಿಕೆ.

‘ಕಳೆದ ಹತ್ತು ವರ್ಷಗಳಿಂದ ಬೆಂಗಳೂರನ್ನು ಸಿಂಗಪೂರ ಮಾಡುತ್ತೇವೆ. ಶಾಂಘೈ ಮಾಡುತ್ತೇವೆ ಎಂಬೆಲ್ಲ ಮಾತುಗಳು ಕೇಳಿಬರುತ್ತಲೇ ಇದ್ದವು. ಆಗಿನಿಂದಲೂ ಬೆಂಗಳೂರು ನಗರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತ ಬಂದಿದ್ದೆವು. ಕೊನೆಗೊಮ್ಮೆ ಈ ಬದಲಾವಣೆಗಳನ್ನು ದಾಖಲಿಸಬೇಕು ಎಂಬ ನಿರ್ಧಾರಕ್ಕೆ ಬಂದೆವು’ ಎಂದು ಈ ಸಾಕ್ಷ್ಮಚಿತ್ರದ ಹಿಂದಿನ ಪ್ರೇರಣೆ ಬಗ್ಗೆ ವಿವರಿಸುತ್ತಾರೆ ಉಷಾ ರಾವ್‌.

‘ಅಭಿವೃದ್ಧಿಯ ಮಾತುಗಳು ದಶಕಗಳಿಂದ ಕೇಳಿಬಂದಿದ್ದರೂ ಅದು ಬಿರುಸಿನ ಚಟುವಟಿಕೆಯಾಗಿ ರೂಪುಗೊಂಡಿದ್ದು ಕಳೆದ ಐದು ವರ್ಷಗಳ ಹಿಂದೆ. 2008ರಲ್ಲಿ ಆರಂಭವಾದ ಮೆಟ್ರೋ ರೈಲು ಕಾಮಗಾರಿ ಮತ್ತು ರಸ್ತೆ ಅಗಲೀಕರಣ ಯೋಜನೆಗಳು ಡೆವಲೆಪ್‌ಮೆಂಟ್‌ನ ಮೂರ್ತ ರೂಪಗಳಾಗಿದ್ದವು. ಉಷಾ ಮತ್ತು ಗೌತಮ್‌ ಸಾಕ್ಷ್ಮಚಿತ್ರದ ತಯಾರಿಯನ್ನು ಆರಂಭಿಸಿದ್ದೂ 2008ರಲ್ಲಿಯೇ.

‘ರಸ್ತೆ ಅಗಲೀಕರಣ ಯೋಜನೆಯಲ್ಲಿ 210 ರಸ್ತೆಗಳನ್ನು ಅಗಲೀಕರಿಸುವುದಾಗಿ ಸರ್ಕಾರ ಹೇಳಿತ್ತು. ಅವುಗಳಲ್ಲಿ ಅವೆನ್ಯೂ ರಸ್ತೆಯೂ ಸೇರಿತ್ತು. ಅವೆನ್ಯೂ ರಸ್ತೆಗೆ ತುಂಬ ಸುದೀರ್ಘ ಇತಿಹಾಸವಿದೆ. ಅದನ್ನು ಅಗಲೀಕರಿಸಲಾಗುವುದು ಎಂಬ ಸಂಗತಿ ಅನೇಕರಲ್ಲಿ ಆತಂಕವನ್ನು ಹುಟ್ಟಿಸಿತ್ತು. ಇಂತಹ ಅಭಿವೃದ್ಧಿ ಕಾರ್ಯಗಳ ಬೇರೆ ಬೇರೆ ಆಯಾಮಗಳನ್ನು ತೋರಿಸಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು’ ಎಂದು ವಿವರಿಸುತ್ತಾರೆ ಗೌತಮ್‌.

‘ನಗರದ ಬಗೆಗಿನ ಕಾಳಜಿಯೇ ನಮ್ಮ ಸಾಕ್ಷ್ಯಚಿತ್ರಕ್ಕೆ ಪ್ರೇರಣೆ’ ಎನ್ನುವ ಅವರು, ‘ಸಾಮಾನ್ಯವಾಗಿ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಅಭಿವೃದ್ಧಿ ಚಟುವಟಿಕೆಗಳೇ ಸುದ್ದಿಯಾಗುತ್ತವೆ. ಆ ಅಭಿವೃದ್ಧಿ ಚಟುವಟಿಕೆಗಳ ಕುರಿತ ಜನರ ಅಭಿಪ್ರಾಯಗಳು ಏನಿವೆ ಎಂಬ ಕುರಿತು ಯಾರೂ ಲಕ್ಷ್ಯ ವಹಿಸುವುದೇ ಇಲ್ಲ. ಅದನ್ನೇ ಗಮನದಲ್ಲಿರಿಸಿಕೊಂಡು ನಾವು ಅವರ್‌ ಮೆಟ್ರೋಪೊಲೀಸ್‌ ರೂಪಿಸಿದ್ದೇವೆ’ ಎಂದು ಅವರು ವಿವರಿಸುತ್ತಾರೆ.

ವಿಶೇಷ ಸಿದ್ಧತೆ ಇಲ್ಲ
ಈ ಸಾಕ್ಷ್ಯಚಿತ್ರಕ್ಕಾಗಿ ಗೌತಮ್‌ ಮತ್ತು ಉಷಾ ವಿಶೇಷ ಸಿದ್ಧತೆಯನ್ನೇನೂ ಮಾಡಿಕೊಂಡಿಲ್ಲ. ನಗರದ ಬದಲಾವಣೆ ಸಾಕ್ಷಿಯಾದ ಸ್ವಂತ ಅನುಭವವೇ ಅವರ ಬಂಡವಾಳವಾಗಿತ್ತು. ಅಭಿವೃದ್ಧಿ ಚಟುವಟಿಕೆಗಳು ನಡೆಯುವ ಸ್ಥಳಕ್ಕೆ ತೆರಳಿ ಅಲ್ಲಿನ ಕಥನಗಳನ್ನು ಚಿತ್ರೀಕರಿಸಿದ್ದಾರೆ. ಕೆಲವು ಕಥನಗಳನ್ನು ಹಲವು ವರ್ಷಗಳ ಕಾಲ ನಿರಂತರವಾಗಿ ಚಿತ್ರೀಕರಿಸಿದ್ದರೆ ಇನ್ನು ಕೆಲವು ಅಲ್ಪಾವಧಿಯಲ್ಲಿ ಮುಗಿಸಲಾಗಿದೆ. ಹೀಗೆ 2008ರಲ್ಲಿ ಆರಂಭಿಸಿದ ಈ ಚಿತ್ರೀಕರಣ ಪ್ರಕ್ರಿಯೆ ನಿರಂತರವಾಗಿ ಐದು ವರ್ಷಗಳ ಕಾಲ ಅಂದರೆ 2013ರವರೆಗೂ ನಡೆಸಿದ್ದಾರೆ.

ಪರವೂ ಅಲ್ಲ ವಿರೋಧವೂ ಅಲ್ಲ
‘ನಗರದ ಬದಲಾವಣೆಗಳನ್ನು ದಾಖಲಿಸುವುದಷ್ಟೇ ನಮ್ಮ ಉದ್ದೇಶವಾಗಿತ್ತೇ ಹೊರತು ಆ ಬದಲಾವಣೆಗಳನ್ನು ವ್ಯಾಖ್ಯಾನಿಸುವುದಲ್ಲ. ನಾವು ಯಾವುದನ್ನೂ ಯಾರನ್ನೂ ಖಂಡಿಸುವ ಉದ್ದೇಶದಿಂದ ಈ ಚಿತ್ರ ಮಾಡಿಲ್ಲ. ಆದ್ದರಿಂದಲೇ ನಾವು ಯಾವುದನ್ನೂ ನಿರ್ಧಾರಾತ್ಮಕವಾಗಿ ತೋರಿಸಲು ಹೋಗಿಲ್ಲ.’ ಎಂದು ಅವರು ತಮ್ಮ ಕಾರ್ಯವೈಖರಿಯನ್ನು ಸ್ಪಷ್ಟಪಡಿಸುತ್ತಾರೆ.

‘ಬೆಂಗಳೂರಿನ ಬದಲಾವಣೆಗಳ ಬಗ್ಗೆ ನಮಗೆ ಯಾವ ಅಭಿಪ್ರಾಯವೂ ಇಲ್ಲ ಎಂದಲ್ಲ. ನಮಗೆ ನಮ್ಮದೇ ಅಭಿಪ್ರಾಯಗಳಿವೆ. ಆದರೆ ಅದನ್ನು ನಾವು ನಮ್ಮ ಚಿತ್ರದ ಮೇಲೆ ಹೇರಲು ಹೋಗಿಲ್ಲ’ ಎನ್ನುವುದು ಅವರ ಸಮರ್ಥನೆ.

‘ನಾವೇನೂ ಡೆವಲೆಪ್‌ಮೆಂಟ್‌ ವಿರೋಧಿಗಳಲ್ಲ. ಅಭಿವೃದ್ಧಿ ಬೇಡವೇ ಬೇಡ ಎನ್ನುವುದೂ ಸರಿಯಲ್ಲ. ಆದರೆ ಅಂತಹ ಅಭಿವೃದ್ಧಿ ಕಾರ್ಯಗಳು ಜನರಿಗೆ ಹಿತಕರವಾಗಿರಬೇಕು’ ಎನ್ನುವುದು ಅವರ ನಿಲುವು.

‘ಭಿನ್ನಾಭಿಪ್ರಾಯಗಳು ಎಲ್ಲೆಡೆ ಇದ್ದೇ ಇರುತ್ತವೆ. ಕೆಲವರಿಗೆ ಅಭಿವೃದ್ಧಿ ಚಟುವಟಿಕೆಗಳ ದುಷ್ಪರಿಣಾಮಗಳು ಆತಂಕ ಹುಟ್ಟಿಸಿದರೆ, ಇನ್ನು ಕೆಲವರಿಗೆ ಅಭಿವೃದ್ಧಿ ಹೊಂದಿದ ಜಗಮಗ ಜಗತ್ತು ಬೇಕು. ಇಂತಹ ಭಿನ್ನಾಭಿಪ್ರಾಯಗಳ ಕಾರಣದಿಂದಲೇ ಅನೇಕ ಚಳವಳಿಗಳು ಪ್ರತಿಭಟನೆಗಳೂ ವಿಫಲಗೊಳ್ಳುತ್ತವೆ. ಇಂತಹ ಪ್ರತಿಭಟನೆಗಳು ಹೇಗೆ ವಿಫಲವಾಗುತ್ತವೆ ಎಂಬುದು ಕೂಡ ಆಸಕ್ತಿದಾಯಕ ಸಂಗತಿ’ ಎನ್ನುತ್ತಾರೆ ಗೌತಮ್‌.

ಡಾಕ್ಟರ್‌, ಎಂಜಿನಿಯರ್‌, ಆರ್ಕಿಟೆಕ್ಚರ್‌, ವಿಜ್ಞಾನಿ ಹೀಗೆ ಹಲವಾರು ವರ್ಗಗಳು ಬೆಂಗಳೂರಿನ ಬದಲಾವಣೆಗಳ ಬಗ್ಗೆ ಯಾವ ಅಭಿಪ್ರಾಯ ಹೊಂದಿದ್ದಾರೆ ಎಂಬುದನ್ನು ತೋರಿಸಿರುವುದು ಈ ಸಾಕ್ಷ್ಮಚಿತ್ರದ ವಿಶೇಷತೆ.

‘ಅಭಿವೃದ್ಧಿ ಪ್ರಕ್ರಿಯೆಗಳ ಬಗ್ಗೆ ನಾನು ನಂಬಿದ್ದೇ ಸತ್ಯ ಎಂಬ ಸಂಕುಚಿತ ದೃಷ್ಟಿಯನ್ನು ಮುರಿದು ಇದಕ್ಕೆ ನಾನು ಅಂದುಕೊಂಡಿದ್ದಕ್ಕಿಂತ ಬೇರೆ ಆಯಾಮಗಳೂ ಇರಬಹುದೇ ಎಂಬ ಚಿಂತನೆಗೆ ಹಚ್ಚುವುದು ನಮ್ಮ ಉದ್ದೇಶ‘ ಎನ್ನುತ್ತಾರೆ ಉಷಾ ಮತ್ತು ಗೌತಮ್‌.

ಹಲವು ಕಡೆ ಪ್ರದರ್ಶನ
ಈಗಾಗಲೇ ‘ಅವರ್‌ ಮೆಟ್ರೋ ಪೊಲೀಸ್‌’ ಸಾಕ್ಷ್ಯಚಿತ್ರ ಸೌತ್‌ ಕೊರಿಯನ್ ಮತ್ತು ದುಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿವೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಇಂದು (ಡಿಸೆಂಬರ್ 18) ‘ವಿಕಲ್ಪ ಬೆಂಗಳೂರು’ ‘ಅವರ್‌ ಮೆಟ್ರೊಪೊಲೀಸ್‌’ನ ಪ್ರದರ್ಶನ ಏರ್ಪಡಿಸಿದೆ. ನಗರದ ಫ್ರೇಜರ್‌ ಟೌನ್‌ನ ಎವರೆಸ್ಟ್‌ ಟಾಕೀಸ್‌ನಲ್ಲಿ ಸಂಜೆ 7.30ಕ್ಕೆ ಪ್ರದರ್ಶಿತವಾಗಲಿರುವ ಈ ಸಾಕ್ಷ್ಯಚಿತ್ರ ವೀಕ್ಷಣೆಗೆ ಪ್ರವೇಶ ಉಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT