ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ಥಾಲಿ ಊಟದ ತಾಣ...

ರಸಾಸ್ವಾದ
Last Updated 25 ಜೂನ್ 2015, 19:30 IST
ಅಕ್ಷರ ಗಾತ್ರ

ಡಯಟ್‌, ಫುಲ್‌ ಸ್ಪೈಸಿ, ಪ್ರಗ್ನೆಂಟ್‌ ಸ್ಪೆಷಲ್‌, ಉಪವಾಸದ ವಿಶೇಷ, ಮಕ್ಕಳಿಗೆ ಬಾಲ ಗೋಪಾಲ ಸ್ಪೆಷಲ್‌ ಹೀಗೆ ಐದು ತಿಂಗಳ ಮಕ್ಕಳಿಂದ ಹಿಡಿದು 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರವರೆಗೂ ಇಷ್ಟಪಡುವ ಪಕ್ಕಾ ಮಹಾರಾಷ್ಟ್ರಿಯನ್‌ ಖಾದ್ಯಗಳು ಒಂದೆಡೆ ಲಭ್ಯ. ಇದರೊಂದಿಗೆ ಮರಾಠಿ ಹಾಡುಗಳನ್ನು ಕೇಳುತ್ತಾ ಗದ್ದಿ(ಹಾಸಿಗೆ) ಮೇಲೆ ಕುಳಿತು, ಮರಾಠಿಗರು ಬಳಸುವ ಫುಲ್‌ ಪಾತ್ರಾದಲ್ಲಿ ನೀರನ್ನು ಕುಡಿಯುತ್ತಾ ಖಾದ್ಯಗಳನ್ನು ಸವಿಯುವ ಅವಕಾಶ ಇಲ್ಲಿದೆ. 

ನಗರದ ಎಚ್‌ಎಸ್‌ಆರ್‌ ಲೇಔಟ್‌ನ 4ನೇ ಸೆಕ್ಟರ್‌ನಲ್ಲಿರುವ ‘ಪೂರ್ಣಬ್ರಹ್ಮ’ ಮಹಾರಾಷ್ಟ್ರಿಯನ್‌ ಸಸ್ಯಾಹಾರಿ ಹೋಟೆಲ್‌ ಮೂರು ಅಂತಸ್ತಿನ ಕಟ್ಟಡ. ನೆಲ ಮಹಡಿಯಲ್ಲಿ ಸ್ಯಾಕ್ಸ್‌ ತಿನ್ನುವವರಿಗಾಗಿ ಎರಡು ರೀತಿಯ ವ್ಯವಸ್ಥೆ ಇದೆ. ಹಾಲ್‌ನಲ್ಲಿ ಕುಳಿತುಕೊಳ್ಳಲು ಬಯಸುವವರು ಅಲ್ಲೇ ಕುಳಿತು ಆರ್ಡರ್‌ ಮಾಡಬಹುದು. ಹಾಲ್‌ನಲ್ಲಿ ಮರಾಠಿಗರ ಮನೆಯ ವಾತಾವರಣ ಸೃಷ್ಟಿಸಲು ಮರಾಠಿಗರು ತಮ್ಮ ಮನೆಗಳಲ್ಲಿ ಬಳಸುವ ಉಯ್ಯಾಲೆ(ಜೂಲ)ಯನ್ನು ಇಡಲಾಗಿದೆ.

ಇನ್ನು ಸ್ವಲ್ಪ ಪ್ರೈವೆಸಿ ಬಯಸುವವರಿಗಾಗಿ ಕಿಚನ್‌ ಸಮೀಪದಲ್ಲೇ ಮತ್ತೊಂದು ಹಾಲ್‌ ಮಾಡಲಾಗಿದೆ. ಇಲ್ಲಿ ಕುಳಿತು ತಮಗೆ ಇಷ್ಟವಾದ ಲೈಟ್‌ ಹಾಗೂ ಕೊಂಚ ಹೆವಿ ಸ್ಯ್ನಾಕ್ಸ್‌ ಮಾತ್ರ ಆರ್ಡರ್‌ ಮಾಡಬಹುದು. ಪಕ್ಕದಲ್ಲೇ ಇರುವ ಓಪನ್‌ ಕಿಚನ್‌ಗೆ ಯಾರು ಬೇಕಾದರೂ ಭೇಟಿ ನೀಡಬಹುದು. 

ಈ ಹಾಲ್‌ ಅನ್ನು ಅಲಂಕಾರ ಮಾಡಲು ಯಾವುದೇ ವಸ್ತುಗಳನ್ನು ಬಳಸಿಲ್ಲ. ಬದಲಾಗಿ ನುರಿತ ವೈದ್ಯರು ಹಾಗೂ ಯೋಗ ಪರಿಣತರ ಸಲಹೆ ಮೇರೆಗೆ ತಿಂಡಿ ತಿನ್ನುವಾಗ ಕುರ್ಚಿಗಳ ಮೇಲೆ ಹೇಗೆ ಕೂರಬೇಕು ಎಂದು ತಿಳಿಸಿಕೊಡಲು ಕೆಲವು ಚಿತ್ರಗಳನ್ನು ಹಾಕಲಾಗಿದೆ.
ಮೊದಲ ಮಹಡಿ ಕೇವಲ ಥಾಲಿ ಆರ್ಡರ್ ಮಾಡುವವರಿಗಾಗಿ. ಇಲ್ಲಿ 75 ಮಂದಿ ಒಂದೇ ಬಾರಿ ಕುಳಿತು ಖಾದ್ಯಗಳನ್ನು ಸವಿಯಬಹುದು.

ಇಲ್ಲಿ ಥಾಲಿ ಸವಿಯಲು ಮರಾಠಿ ಶೈಲಿಯಲ್ಲೇ ಕುಳಿತುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಮರಾಠಿಗರು ಬಳಸುವ ಗದ್ದಿ, ಪುಟ್ಟ ಮಣೆ, ನೀರು ಕುಡಿಯಲು ಬಳಸುವ ತಪ್ಪಲೆ ಹಾಗೂ ಬಟ್ಟಲು(ಫುಲ್‌ ಪಾತ್ರ). ಅವರು ಬಳಸುವ ತಟ್ಟೆ ಹೀಗೆ ಇಲ್ಲಿ ಪ್ರತಿಯೊಂದು ಮರಾಠಿಮಯವಾಗಿರುತ್ತದೆ.

ಥಾಲಿ ವಿಶೇಷಗಳು
ಸೋಮವಾರ ರಾಯಗಡದ ‘ಶಿವ ಥಾಲಿ’, ಮಂಗಳವಾರ ಸೋಲಾಪುರದ ‘ಸ್ವಾಮಿ ಸರ್ಮರ್ಥ್‌ ಥಾಲಿ’, ಬುಧವಾರ ಪಂಡರಾಪುರದ ‘ವಿಥಾಯೆ ಥಾಲಿ’, ಗುರುವಾರ ಗಂಗಾಪುರದ ‘ದತ್ತಗುರು ಥಾಲಿ’, ಶುಕ್ರವಾರ ದೇವುಲ್‌ಗಾವ್‌ ರಾಜಾ ಪ್ರದೇಶದ ‘ಬಾಲಾಜಿ ಥಾಲಿ’, ಶನಿವಾರ ಶಿರಡಿಯ ‘ಗಜಾನನ್‌ ಮಹಾರಾಜ್‌ ಥಾಲಿ’ ಹಾಗೂ ಭಾನುವಾರ ಕೊಲ್ಲಾಪುರದ ‘ಮಹಾಲಕ್ಷ್ಮಿ ಥಾಲಿ’ ಇರುತ್ತದೆ. ಪ್ರತಿ ಥಾಲಿಯಲ್ಲೂ ಒಂದು ವೆಲ್‌ಕಮ್‌ ಡ್ರಿಂಕ್‌, ಮೂಂಗ್‌ದಾಲ್‌ ವಡಾ, ಗೋಟಿ ವಡಾ, ಮಿಸಲ್‌ ಉಸಲ್, ರೋಟಿ, ದಾಲ್‌, ಕಡಿ, ಪಲ್ಯ, ಎರಡು ರೀತಿಯ ಸಿಹಿ ತಿನಿಸು, ಕಿಚಡಿ, ರೈಸ್‌ ಸೇರಿದಂತೆ 12ರಿಂದ 15 ರೀತಿಯ ತಿನಿಸುಗಳಿರುತ್ತವೆ. ಕೊಲ್ಲಾಪುರದ ಖಾದ್ಯಗಳು ತುಂಬಾ ಖಾರ. ಆದರೆ ಇಲ್ಲಿ ಖಾರವನ್ನು ಕೊಂಚ ಕಡಿಮೆ ಮಾಡಲಾಗಿದೆ.

ಈ ಹೋಟೆಲ್‌ ಪ್ರಾರಂಭಿಸುವ ಮೊದಲು ಜಯಂತಿ ಪ್ರಣವ್‌ ಕಟಾಳೆ ಐಟಿ ಕಂಪೆನಿಯಲ್ಲಿ ಪ್ರಾಜೆಕ್ಟ್‌ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದರು. ನಂತರ ಸಮಾನ ಮನಸ್ಕರಾದ ವಿಶಾಖಾ ಹಾಗೂ ಕಿರಣ್ಮಯಿ ಅವರೊಡನೆ ಸೇರಿ ಇದನ್ನು ಪ್ರಾರಂಭಿಸಿದರು. ಒಂದು ವಿಭಿನ್ನ ಹಾಗೂ ವಿಶೇಷ ಮೆನು ಸೆಟ್‌ ಮಾಡಬೇಕು ಎಂಬ ಉದ್ದೇಶದಿಂದ ಮೂರು ತಿಂಗಳು ಸಮಯ ತೆಗೆದುಕೊಂಡರು. ನಂತರ ಸತತವಾಗಿ ಆರು ತಿಂಗಳು ಅಡುಗೆ ಮಾಡುವವರಿಗೆ ತರಬೇತಿ ನೀಡಿದರು.  

ಮೂಂಗ್‌ದಾಲ್‌ ಕಿಚಡಿ, ಥಾಲಿಪಿತ್‌, ಮುಗ್‌ವಾಡಿ ರಸ್ಸ, ಬ್ರಿಂಜಾಲ್ ಬರ್ತಾ, ಕಂಡೆ ರೈಸ್‌, ವಿಶೇಷವಾಗಿ ತಯಾರಿಸಲಾದ ಪಾಯಸ, ಶಿರ, ಗೋಳಾಭಾತ್‌, ಕಟ್‌, ಪೊಡಿ, ಹೀಗೆ ನಾನಾ ರೀತಿಯ ಮಾರಾಠಿ ಸ್ಪೆಷಲ್‌ ದೊರೆಯುತ್ತದೆ. ಇವುಗಳೊಂದಿಗೆ ಸಿಹಿತಿನಿಸು ಪೂರನ್‌ಪೊಳಿ, ಸ್ಯ್ನಾಕ್‌ಗಳಾದ ವಡಾಪಾವ್‌, ಮಿಸಳ್‌ ಪವಾವ್‌, ಮೂಂಗ್‌ವಡಾ ಮುಂತಾದವು ಇಲ್ಲಿ ಲಭ್ಯ. 

ಎರಡನೇ ಮಹಡಿಯಲ್ಲಿ ಹುಟ್ಟಿದ ಹಬ್ಬ, ಸೀಮಂತ, ವಾರ್ಷಿಕೋತ್ಸವ ಆಚರಿಸಲು ಸ್ಥಳವಿದೆ. ಇಲ್ಲಿ ಪ್ರತಿಯೊಂದು ಹಬ್ಬವನ್ನು ಮರಾಠಿಗರು ಆಚರಿಸುವ ಶೈಲಿಯಲ್ಲಿ ಆಚರಿಸಲಾಗುತ್ತದೆ. ದೀಪಾವಳಿ ಸಮಯದಲ್ಲಿ ಹೋಟೆಲ್‌ಗೆ ಬರುವ ಗ್ರಾಹಕರಿಗೆ ಹತ್ತಿ ಕೊಟ್ಟು ದೀಪಕ್ಕೆ ಹಾಕುವ ಬತ್ತಿ ಮಾಡಲು ಹೇಳುತ್ತಾರೆ. ಅದನ್ನು ದೀಪಾವಳಿ ಹಬ್ಬದ ಕೊನೆಯ ದಿನ ಹೋಟೆಲ್‌ನಲ್ಲಿ ಹಚ್ಚಿ ಸಂಭ್ರಮಿಸುತ್ತಾರೆ. 
 
‌ಊಟದ ಜತೆಗೆ ಮರಾಠಿ ಸಂಗೀತ, ಜತೆಯಲ್ಲಿ ಬರುವ ಮಕ್ಕಳು ಆಟವಾಡಲು ಸ್ವಲ್ಪ ಸ್ಥಳ, ಹಿರಿಯರು ಓದಲು ಕೆಲವು ಮರಾಠಿ ಪುಸ್ತಕಗಳು, ಯುವಜನರು ತಮ್ಮ ಭಾವಚಿತ್ರಗಳನ್ನು ತೆಗೆದುಕೊಳ್ಳಲು ಮರಾಠಿಗಳು ಬಳಸುವ ಪಗಡಿ ಹೀಗೆ ಖುಷಿಯಾಗಿ ಕಾಲ ಕಳೆಯಲು ಅವಕಾಶವಿದೆ. ಇದರೊಂದಿಗೆ ಹೋಟೆಲ್‌ನ ಒಡತಿ ಜಯಂತಿ ಪ್ರಣವ್‌ ಕಟಾಳೆ ಹಾಗೂ ವಿಶಾಖಾ 9 ಗಜದ ಸೀರೆಯನ್ನು ಮರಾಠಿ ಶೈಲಿಯಲ್ಲಿ ತೊಟ್ಟು, ತಲೆಗೆ ಗಜರ ಮುಡಿದು ಮೂಗಿಗೆ ಮರಾಠಿಗರ ಮೂಗಿನ ನತ್ತನ್ನು ತೊಟ್ಟು ಗ್ರಾಹಕರ ಕುಶಲೋಪರಿ ವಿಚಾರಿಸುವುದು ಸಾಮಾನ್ಯ.

ಹಿರಿಯ ದಂಪತಿಗಳಿಗೆ ಕ್ಯಾಂಡಲ್‌ಲೈಟ್‌ ಡಿನ್ನರ್‌
ಪ್ರತಿ ತಿಂಗಳ ಕೊನೆಯ ಮಂಗಳವಾರ ‘ಸಾಂಜ್‌ ಗಾರ್ವ’ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ. ಇದರಲ್ಲಿ ಕೇವಲ ಹಿರಿಯ ದಂಪತಿಗಳಿಗಾಗಿ ಕ್ಯಾಂಡಲ್‌ಲೈಟ್‌ ಡಿನ್ನರ್‌ ಆಯೋಜನೆ ಮಾಡುತ್ತಾರೆ. ತಂಪಾದ ಸಂಜೆಯಲ್ಲಿ ಮರಾಠಿ ಗೀತೆಗಳನ್ನು ಕೇಳುತ್ತಾ ಹಿರಿಯರು ಕ್ಯಾಂಡಲ್‌ ಲೈಟ್‌ನಲ್ಲಿ ಡಿನ್ನರ್‌ ಮಾಡುತ್ತಾರೆ. ಡಿನ್ನರ್‌ ಮುಗಿಸಿದ ನಂತರ ಹೆಣ್ಣು ಮಕ್ಕಳಿಗೆ ಒಂದು ತುಳಸಿ ಗಿಡ, ಬಳೆ ಹಾಗೂ ಬಾಗಿನದ ಸಾಮಾನುಗಳನ್ನು ಕೊಡುತ್ತಾರೆ. ಈ ಡಿನ್ನರ್‌ಗೆ ಒಬ್ಬರಿಗೆ ₹ 500 ನಿಗದಿ ಮಾಡಿದ್ದಾರೆ.

‘ಎಚ್‌ಎಸ್‌ಆರ್‌ ಲೇಔಟ್‌ನಿಂದ ಐದು ಕಿ.ಮೀ. ವ್ಯಾಪ್ತಿಯಲ್ಲಿ ಉಚಿತ ಹೋಂ ಡೆಲಿವರಿ ನೀಡಲಾಗುತ್ತದೆ. ಜೊತೆಗೆ ಕೆಲವೊಂದು ಐಟಿ ಕಂಪೆನಿಗಳಿಗೂ ಥಾಲಿಗಳನ್ನು ಪಾರ್ಸೆಲ್‌ ಮಾಡುತ್ತೇವೆ. ಕಚೇರಿಗಳಿಗೆ ಹೋಗುವವರು ಮನೆಗಳಿಂದ ಹೊರಡುವ ಮುನ್ನ ಆರ್ಡರ್‌ ಮಾಡಿ ಕಚೇರಿಗೆ ಹೋಗುವ ದಾರಿ ಮಧ್ಯೆ ಹಣ ನೀಡಿ ಪಾರ್ಸೆಲ್‌ ಪಡೆಯುತ್ತಾರೆ. ಹೋಟೆಲ್‌ನ ವಾರ್ಷಿಕೋತ್ಸವದ ಅಂಗವಾಗಿ ಆಗಸ್ಟ್‌ ಕೊನೆಯವರೆಗೆ ಟೋಟಲ್‌ ಬಿಲ್‌ ಮೇಲೆ ಶೇ 15ರಷ್ಟು ರಿಯಾಯಿತಿ ನೀಡುತ್ತಿದ್ದೇವೆ’ ಎನ್ನುತ್ತಾರೆ ಹೋಟೆಲ್‌ನ ನಿರ್ದೇಶಕಿ ಜಯಂತಿ ಪ್ರಣವ್‌ ಕಟಾಳೆ. 

ಮಾಹಿತಿಗೆ ಹಾಗೂ ಟೇಬಲ್‌ ಕಾಯ್ದಿರಿಸಲು: ದೂರವಾಣಿ ಸಂಖ್ಯೆ– 080–68888911. 
ವಿಳಾಸ: ಪೂರ್ಣಬ್ರಹ್ಮ ರೆಸ್ಟೋರೆಂಟ್‌, ಶ್ರೀ ಆರ್ಕೇಡ್‌, 17ನೇ ಅಡ್ಡರಸ್ತೆ, 19ನೇ ಮುಖ್ಯ ರಸ್ತೆ, 4ನೇ ಸೆಕ್ಟರ್, ಎಚ್‌ಎಸ್‌ಆರ್‌ ಲೇಔಟ್‌. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT