ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ವಿಧಾನಸಭೆ 12ರಂದು ವಿಶ್ವಾಸ ಮತ

Last Updated 2 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ನವೆಂಬರ್‌ 10ರಿಂದ  ಮೂರು ದಿನ ಮಹಾರಾಷ್ಟ್ರ ವಿಧಾನ­ಸಭಾ ಅಧಿವೇಶನ ನಡೆಯಲಿದ್ದು,  ಇದೇ ಸಂದರ್ಭದಲ್ಲಿಯೇ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ನೇತೃತ್ವದ ಬಿಜೆಪಿ ಸರ್ಕಾರ ವಿಶ್ವಾಸಮತ ಯಾಚಿಸಲಿದೆ.

ನ.10ರಂದು   ಹಂಗಾಮಿ ಸ್ಪೀಕರ್ ಆಯ್ಕೆ ನಡೆಯಲಿದ್ದು,  12ರಂದು ಹೊಸದಾಗಿ ಆಯ್ಕೆಯಾದ ಶಾಸಕರು ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ. ಇದಾದ ನಂತರ ಫಡ್ನವೀಸ್‌  ವಿಶ್ವಾಸಮತ ಕೋರಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.
ಬಿಜೆಪಿ ಸರ್ಕಾರಕ್ಕೆ ಬಹುಮತ ಸಾಬೀತು ಪಡಿಸಲು ರಾಜ್ಯಪಾಲ ಸಿ. ವಿದ್ಯಾಸಾಗರ ರಾವ್ 15 ದಿನಗಳ ಗಡುವು ನೀಡಿದ್ದಾರೆ.

ಫಡ್ನವೀಸ್‌ ಮುಖ್ಯಮಂತ್ರಿ­ಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನದಿಂದ 15 ದಿನಗಳನ್ನು ಗಣನೆಗೆ ತೆಗೆದು­ಕೊಳ್ಳಲಾಗಿದೆ.
288 ಸದಸ್ಯರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಾಸಕರೊಬ್ಬರ ಸಾವಿನ ನಂತರ ಬಿಜೆಪಿ ಸದಸ್ಯರ ಸಂಖ್ಯೆ 121ಕ್ಕೆ ಕುಸಿದಿದೆ. ಏಳು ಪಕ್ಷೇತರರು ಹಾಗೂ ಪ್ರಾದೇಶಿಕ ಪಕ್ಷಗಳ ಆರು ಶಾಸಕರ ಬೆಂಬಲ ತನಗಿದೆ ಎಂದು ಬಿಜೆಪಿ ಹೇಳಿಕೊಂಡಿದೆ.

41 ಶಾಸಕರನ್ನು ಹೊಂದಿರುವ  ಎನ್‌ಸಿಪಿ ಬಿಜೆಪಿಗೆ ಬಾಹ್ಯ ಬೆಂಬಲ ಘೋಷಿಸಿದೆ. ಆದರೆ, ಬೆಂಬಲ ಸ್ವೀಕರಿಸಿದ ಅಥವಾ ತಿರಸ್ಕರಿಸಿದ ಬಗ್ಗೆ ಬಿಜೆಪಿ ಇನ್ನೂ ತನ್ನ ನಿಲುವನ್ನು ಬಹಿರಂಗಪಡಿಸಿಲ್ಲ. ಸರ್ಕಾರ ವಿಶ್ವಾಸಮತ ಕೋರುವ ಸಂದರ್ಭದಲ್ಲಿ ಎನ್‌ಸಿಪಿ ಶಾಸಕರು ಗೈರು ಹಾಜರಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ ಶಿವಸೇನಾ ಜತೆ ಮಾತು­ಕತೆ ಸರಿಯಾದ ದಿಕ್ಕಿನಲ್ಲಿ ಸಾಗಿದೆ ಎಂದು ಮುಖ್ಯಮಂತ್ರಿ ಫಡ್ನವೀಸ್‌ ಹೇಳಿದ್ದು,  ಸೇನಾ ಜತೆ ಸೇರಿ ಸದೃಢ ಸರ್ಕಾರ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಮ್ಮೊಂದಿಗೆ ಪ್ರಮಾಣವಚನ ಸ್ವೀಕರಿಸಿದ ಹತ್ತು ಸಚಿವರಿಗೆ ಫಡ್ನವೀಸ್‌ ಭಾನುವಾರ ಖಾತೆಗಳನ್ನು ಹಂಚಿದ್ದಾರೆ. ಪ್ರಮುಖವಾದ ಗೃಹ, ನಗರಾಭಿವೃದ್ಧಿ, ವಸತಿ ಹಾಗೂ ಆರೋಗ್ಯ ಖಾತೆಗಳನ್ನು ತಾವೇ ಇಟ್ಟುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT