ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾವೀರನಿಗೆ ಗೌರವ ಸೂಚಿಸಿ

ಮಾಂಸ ನಿಷೇಧದ ಸುತ್ತ...
Last Updated 18 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

ಮಹಾತ್ಮ ಗಾಂಧೀಜಿ ಜೈನ ಧರ್ಮದ 24ನೇ ತೀರ್ಥಂಕರ ಮಹಾವೀರನ ಅಹಿಂಸಾ ತತ್ವದಿಂದ ಪ್ರೇರಣೆ ಹೊಂದಿದ್ದರು. ನಂತರ ಅಹಿಂಸೆ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು.

ಪ್ರಸ್ತುತ ಜೈನ ಸಮುದಾಯದ ‘ಪರ್ಯೂಷಣ’ ಉಪವಾಸದ ಅವಧಿಯಲ್ಲಿ ಮಾಂಸ ಮಾರಾಟ ನಿಷೇಧದ ಬಗ್ಗೆ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ. ಉಪವಾಸದ ಎಲ್ಲ ದಿನಗಳಲ್ಲಿಯೂ ಮಾಂಸ ನಿಷೇಧ ಮಾಡುವಂತೆ ನಾವು ಹೇಳುತ್ತಿಲ್ಲ. ಮಾಂಸ ಮಾರಾಟ ಮಾಡಲು ಮತ್ತು ತಿನ್ನಲು ನಮ್ಮ ವಿರೋಧವಿಲ್ಲ. ಗಾಂಧಿ ಜಯಂತಿ, ಶಿವರಾತ್ರಿ, ಗಣೇಶ ಚತುರ್ಥಿ ಸೇರಿದಂತೆ ಹಲವು ಹಬ್ಬಗಳಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಲಾಗುತ್ತದೆ. ಅದೇ ರೀತಿ ವಿಶ್ವಕ್ಕೆ ಅಹಿಂಸಾ ತತ್ವ ಸಾರಿದ ಮಹಾವೀರನಿಗೆ ಗೌರವ ಸೂಚಿಸಲು ಮಹಾವೀರ ಜಯಂತಿಯಂದು ಮಾಂಸ ಮಾರಾಟ ನಿಷೇಧ ಮಾಡಬೇಕು.

ಜತೆಗೆ ದಶಲಕ್ಷಣ ಪರ್ವ ಮುಗಿದ ನಂತರದ ದಿನ ಸಕಲ ಜೀವಿಗಳಲ್ಲಿ ಕ್ಷಮೆಯಾಚಿಸಲು ‘ಸಾಮೂಹಿಕ ಕ್ಷಮಾವಳಿ’ ಕಾರ್ಯಕ್ರಮ ನಡೆಯುತ್ತದೆ. ಆ ದಿನ  ಮಾಂಸ ಮಾರಾಟ ನಿಷೇಧಿಸಬೇಕು. ಈ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು
-ಎಸ್‌.ಜಿತೇಂದ್ರಕುಮಾರ್‌,
ಅಧ್ಯಕ್ಷ, ಕರ್ನಾಟಕ ಜೈನ್‌ ಅಸೋಸಿಯೇಷನ್

ಅನ್ಯಾಯದ ಮಾರ್ಗಕ್ಕೆ ಅವಕಾಶ
ಸರಿ– ತಪ್ಪುಗಳನ್ನು ವಿಮರ್ಶೆ ಮಾಡದೆ ಮಾಂಸ ಮಾರಾಟವನ್ನು ನಿಷೇಧಿಸುವ ನಿರ್ಧಾರ ಕೈಗೊಳ್ಳುವುದು ಸಮಂಜಸವಲ್ಲ.

ಹಿಂದೂಗಳಲ್ಲಿ ಸಹ ಬಹುಸಂಖ್ಯಾತ ಜನರ ಆಹಾರ ಪದ್ಧತಿ ಮಾಂಸಾಹಾರವಾಗಿದೆ. ಗಾಂಧಿ ಜಯಂತಿಯಂತಹ ಸಂದರ್ಭದಲ್ಲಿ ಒಂದು ದಿನ ಮಾಂಸ ಮಾರಾಟ ನಿಷೇಧಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ವಾರಗಟ್ಟಲೆ ನಿಷೇಧ ಹೇರುವುದರಿಂದ ಮಾಂಸಾಹಾರವನ್ನೇ ಪ್ರಧಾನ ಆಹಾರ ಮಾಡಿಕೊಂಡವರಿಗೆ ತೊಂದರೆ ಆಗುತ್ತದೆ. ಆಹಾರ ಪದ್ಧತಿಯ ಮೇಲೆ ನೇರವಾಗಿ ಆಕ್ರಮಣ ಮಾಡಲು ಸರ್ಕಾರಕ್ಕೆ ಹಕ್ಕಿಲ್ಲ. ಈ ರೀತಿ ನಿಷೇಧ ಅನ್ಯಾಯದ ಮಾರ್ಗಕ್ಕೂ ಅವಕಾಶ ಮಾಡಿಕೊಡುತ್ತದೆ.
-ಬಿ.ಗೋಪಾಲಾಚಾರ್ಯ, ನಿರ್ದೇಶಕ, ಶ್ರೀ ವಾದಿರಾಜ
ಸಂಶೋಧನಾ ಪ್ರತಿಷ್ಠಾನ, ಉಡುಪಿ

ಕೊಕ್ಕೆ ಹಾಕುವ ಅಗತ್ಯವಿಲ್ಲ
ಭಾರತದಲ್ಲಿ  ಹಿಂದೂ ಹಬ್ಬಗಳ ಸಂದರ್ಭದಲ್ಲೂ ಕಸಾಯಿಖಾನೆಗಳನ್ನು ಮುಚ್ಚುವ, ಪ್ರಾಣಿಹತ್ಯೆ ತಡೆಯುವ ಹಾಗೂ ಮಾಂಸ ಮಾರಾಟ ನಿಷೇಧಿಸುವ ಪರಿಪಾಠ ಇದೆ. ಮುಂಬೈನಲ್ಲಿ ಪರ್ಯೂಷಣದ ಸಂದರ್ಭದಲ್ಲಿ ಮಾಂಸ ಮಾರಾಟ ನಿಷೇಧಿಸುವ ನಿರ್ಧಾರಕ್ಕೆ ರಾಜಕೀಯ ಬಣ್ಣ ತಗುಲಿದ್ದರಿಂದ ವಿವಾದ ಉಂಟಾಗಿದೆ.

ಪರ್ಯೂಷಣ ಅಥವಾ ದಶಲಕ್ಷಣ ಪರ್ವವನ್ನು ಜೈನ ಧರ್ಮದ ‘ಹಬ್ಬಗಳ ರಾಜ’ ಎಂದು ಕರೆಯಲಾಗುತ್ತದೆ. ಅಹಿಂಸೆ ಮತ್ತು ಸತ್ಯವೇ ಇಲ್ಲಿ ಮುಖ್ಯ. ಇಸ್ಲಾಂ ದೊರೆಗಳ ಆಡಳಿತ ಅವಧಿಯಲ್ಲಿ ಈ ಹಬ್ಬದ ಮಹತ್ವವನ್ನು ಅರಿತು ಪರ್ಯೂಷಣದ ಕಾಲದುದ್ದಕ್ಕೂ ಪ್ರಾಣಿ ಹತ್ಯೆ ಮತ್ತು ಮಾಂಸ ಮಾರಾಟ ನಿಷೇಧ ಮಾಡಿದ ಉಲ್ಲೇಖಗಳು ಇತಿಹಾಸದ ಪುಟಗಳಿಂದ ಲಭಿಸುತ್ತವೆ. ಉತ್ತರ ಪ್ರದೇಶದ ಬಾಗಪತ್‌ ಜಿಲ್ಲೆಯಲ್ಲಿ ಜೈನರ ಜೊತೆ ಸಭೆ ನಡೆಸಿದ ಮುಸ್ಲಿಂ ಸಮಾಜದವರು ಪರ್ಯೂಷಣದ ಅವಧಿಯಲ್ಲಿ ಎರಡು ದಿನ ಪ್ರಾಣಿಹತ್ಯೆ, ಮಾಂಸ ಮಾರಾಟ ಮಾಡದಿರುವ ನಿರ್ಧಾರಕ್ಕೆ ಬಂದಿದ್ದಾರೆ.

ಎಲ್ಲ ಧರ್ಮಗಳವರೂ ಇಂದು ಹಬ್ಬಗಳ ಸಂದರ್ಭದಲ್ಲಿ ತಮಗೆ ಬೇಕಾದ ಪೂರಕ ವಾತಾವರಣ ಸೃಷ್ಟಿಸುತ್ತಾರೆ. ಸರ್ಕಾರ ಮತ್ತು ಅನ್ಯ ಧರ್ಮಗಳ ಸಹಕಾರವನ್ನೂ ಪಡೆಯುತ್ತಾರೆ. ಜೈನರು ಇಂಥ ತಂತ್ರಗಳಿಗೆ ಮೊರೆ ಹೋಗುವುದಿಲ್ಲ. ಅಹಿಂಸೆಯ ವಾತಾವರಣವನ್ನು ಮಾತ್ರ ಬಯಸುತ್ತಾರೆ. ಉನ್ನತ ಆಶಯವೊಂದನ್ನು ಮುಂದಿಟ್ಟುಕೊಂಡು ಹಬ್ಬವನ್ನು ಸುಲಲಿತವಾಗಿ ಆಚರಿಸಲು ಸರ್ಕಾರ ಅನುಕೂಲ ಮಾಡಿಕೊಟ್ಟರೆ ಅದಕ್ಕೆ ಕೊಕ್ಕೆ ಹಾಕುವ ಅಗತ್ಯವಾದರೂ ಏನಿದೆ?
-ಶಾಂತಿನಾಥ ಕೆ.ಹೋತಪೇಟಿ,
ಉಪಾಧ್ಯಕ್ಷ, ದಿಗಂಬರ ಜೈನ ಸಮಾಜ, ಹುಬ್ಬಳ್ಳಿ

ಜನವಿರೋಧಿ ಕ್ರಮ
ನಾಲ್ಕಾರು ದಿನ ‘ಮಾಂಸಾಹಾರ’ ನಿಷೇಧಿಸುವ ಮಹಾರಾಷ್ಟ್ರ ಸರ್ಕಾರದ ಕ್ರಮ ದೇಶದ ಬಹು ಸಂಸ್ಕೃತಿಯನ್ನು ನಾಶ ಮಾಡಿ, ಮೂಲಭೂತವಾದದ ತಾಯಿಬೇರಾದ ಏಕಸಂಸ್ಕೃತಿಯನ್ನು ಹೇರುವ ಹುನ್ನಾರವಷ್ಟೇ. ಈ ಮೂಲಭೂತವಾದಿ ಧೋರಣೆ ಎಲ್ಲ ಸ್ತರದ ಜನರ ಇಚ್ಛೆಗೆ ವಿರುದ್ಧ ಹಾಗೂ ದೇಶದ ಭವಿಷ್ಯಕ್ಕೆ ಮಾರಕ. ಬಹುಜನರ ಆಹಾರ ಪದ್ಧತಿಯ ಮೇಲೆ ದಬ್ಬಾಳಿಕೆ ನಡೆಸಿ, ಅವರ ಆಹಾರದ ಹಕ್ಕನ್ನು ಕಸಿಯುವ ಹುನ್ನಾರ ಅತ್ಯಂತ ಖಂಡನೀಯ.

ಮಾಂಸಾಹಾರ ಮನುಷ್ಯನ ದೈಹಿಕ ಬೆಳವಣಿಗೆ ಹಾಗೂ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಹೊಂದಿದೆ ಎಂಬುದು ಅನೇಕ ವೈಜ್ಞಾನಿಕ ಸಂಶೋಧನೆಗಳಿಂದ ಸಾಬೀತಾಗಿದೆ. ಯಾವುದೇ ಸರ್ಕಾರ ಮಾಂಸಾಹಾರ ನಿಷೇಧದಂತಹ ಜನವಿರೋಧಿ ಕ್ರಮಕ್ಕೆ ಮುಂದಾಗುವ ಮೊದಲು ಜಗತ್ತಿನ ಮುಂದುವರಿದ ರಾಷ್ಟ್ರಗಳ ಆಹಾರ ಸಂಸ್ಕೃತಿ ಬಗ್ಗೆ ಅಧ್ಯಯನ ಮಾಡಬೇಕು. ಆಗ ವಾಸ್ತವಾಂಶ ತಿಳಿಯುತ್ತದೆ. 
-ರೇಣುಕಾ ಕಹಾರ,
ಅಖಿಲ ಭಾರತ ಕೇಂದ್ರ ಕಾರ್ಯಕಾರಿ ಮಂಡಳಿ ಸದಸ್ಯೆ,  ಎಸ್.ಎಫ್.ಐ., ಹಾವೇರಿ

ವೈಚಾರಿಕ ಬೆಂಬಲ ಸಿಗದು
ಮಾರುಕಟ್ಟೆಯ ಸಾಂಸ್ಕೃತಿಕ ಪರಂಪರೆ ಬೆಳೆಯುತ್ತಿರುವ ಕಾಲದಲ್ಲಿ ಆಹಾರ ಪದ್ಧತಿ ಮೇಲೆ ನಿರ್ಬಂಧ ಹೇರುವುದು ಸರಿಯಲ್ಲ. ಅದನ್ನು ಆಡಳಿತಾತ್ಮಕವಾಗಿ ಅನುಷ್ಠಾನಗೊಳಿಸುವುದು ಸಹ ಕಷ್ಟ. ಇಂತಹ ನಿಷೇಧಕ್ಕೆ ವೈಚಾರಿಕವಾದ ಬೆಂಬಲವೂ ಸಿಗುವುದಿಲ್ಲ.

ಮಾಂಸಾಹಾರ ಬಹಳ ಪ್ರಾಚೀನ ಕಾಲದಿಂದಲೂ ಬಹುಸಂಖ್ಯಾತರ ಆಹಾರ ಪದ್ಧತಿಯಾಗಿದೆ. ಪ್ರತಿ ನಿತ್ಯ ಕೋಟ್ಯಂತರ ರೂಪಾಯಿ ವಾಣಿಜ್ಯ ವಹಿವಾಟು ನಡೆಯುತ್ತದೆ. ಲಕ್ಷಾಂತರ ಜನರ ಉದ್ಯೋಗ, ಮಾರುಕಟ್ಟೆ ವ್ಯವಹಾರ ಇದರ ಮೇಲೆ ನಿಂತಿದೆ. ಈ ಉದ್ಯಮ ಅವಲಂಬಿಸಿ ದಿನನಿತ್ಯ ಜೀವನ ನಡೆಸುವವರೂ ಇದ್ದಾರೆ. ಯಾವುದೇ ನಿಷೇಧಗಳು ಬದುಕಿಗೆ ಧಕ್ಕೆಯುಂಟು ಮಾಡಬಾರದು.
-ಎಚ್‌.ಎಂ.ರುದ್ರಸ್ವಾಮಿ,
ಪ್ರಗತಿಪರ ಚಿಂತಕ, ಚಿಕ್ಕಮಗಳೂರು

ವೈಜ್ಞಾನಿಕ ಕ್ರಮ ಅಲ್ಲ
ವೈಜ್ಞಾನಿಕವಾಗಿ ನೋಡಿದರೆ ಮಾನವ ಶರೀರ ಮಾಂಸಾಹಾರಕ್ಕಾಗಿ ರೂಪುಗೊಂಡಿದ್ದೇ ಅಲ್ಲ. ಮಾನವ ಮೂಲತಃ ಸಸ್ಯಾಹಾರಿ. ಪ್ರಾಣಿಗಳನ್ನು ಹುಲಿ– ಸಿಂಹದಂಥ ಪ್ರಾಣಿಗಳು ತಿನ್ನಬೇಕು, ಅದುವೇ ವೈಜ್ಞಾನಿಕ ಜೀವನ ಚಕ್ರ.

-ಹರಿಹರಪುರ ಶ್ರೀಧರ್,
ಸಂಚಾಲಕ, ವೇದಭಾರತಿ, ಹಾಸನ ಘಟಕ

ಆಹಾರ ಪದ್ಧತಿ ರಾಜಕೀಯಗೊಂಡಿದೆ
ಮಾಂಸಾಹಾರ ಸೇವನೆಯು ವೈಯಕ್ತಿಕ ವಿಚಾರ. ಅದಕ್ಕೆ ಧರ್ಮ, ಜಾತಿ ಎನ್ನುವ ಸೀಮೆಯಿಲ್ಲ. ಗೌತಮ ಬುದ್ಧ ಈ ಬಗ್ಗೆ ತುಂಬಾ ಸ್ಪಷ್ಟವಾಗಿ ಹೇಳಿದ್ದಾನೆ. ಅದನ್ನು ಇಡೀ ಮನುಕುಲ ಗೌರವಿಸಬೇಕು. ‘ಎಲ್ಲ ಜನರ ಆಹಾರ ಪದ್ಧತಿಯನ್ನು ಎಲ್ಲರೂ ಗೌರವಿಸಬೇಕು. ಮಾಂಸಾಹಾರ ಸೇವನೆ ಕೆಟ್ಟದ್ದಲ್ಲ’ ಎಂಬುದನ್ನು ವೈಜ್ಞಾನಿಕ ತಳಹದಿ ಮೇಲೆ ಹೇಳಿದ್ದಲ್ಲದೆ, ಸ್ವತಃ ಬುದ್ಧ ಮಾಂಸಾಹಾರ ಸೇವಿಸಿದ್ದ. ಇನ್ನೊಬ್ಬರ ಧರ್ಮಾಚರಣೆ ಹಾಗೂ ವಿಚಾರಗಳಿಗೆ ಅಡ್ಡಿಯನ್ನುಂಟು ಮಾಡಬೇಕು ಎನ್ನುವ ಬಗ್ಗೆ ಯಾವ ಧರ್ಮದಲ್ಲೂ ಉಲ್ಲೇಖವಿಲ್ಲ. ಮಾಂಸಾಹಾರ ಸೇವಿಸುವುದರಿಂದ ಮನಸ್ಸು, ಹೃದಯ ಶುದ್ಧ ಅಥವಾ ಅಶುದ್ಧವಾಗುತ್ತದೆ ಎನ್ನಲಾಗದು. ಇದು ಅವರವರ ಭಾವಕ್ಕೆ ಬಿಟ್ಟಿರುವ ಸಂಗತಿ.

ಇತ್ತೀಚಿನ ದಿನಗಳಲ್ಲಿ ಮಾಂಸಾಹಾರದ ಸಂಗತಿ ಕೂಡಾ ರಾಜಕೀಯಗೊಂಡಿರುವುದು ವಿಷಾದದ ಸಂಗತಿ. ಕೆಲವು ಸಮುದಾಯಗಳನ್ನು  ಓಲೈಸಲು ಕೆಲವು ಸಂದರ್ಭಗಳಲ್ಲಿ ಮಾಂಸಾಹಾರ ನಿಷೇಧಿಸಬೇಕು ಎನ್ನುವುದನ್ನು ರಾಜಕಾರಣಿಗಳೇ ಪುಷ್ಟಿಕೊಟ್ಟು ಬೆಳೆಸಿದ್ದಾರೆ. ಅದೇ ರಾಜಕಾರಣಿಗಳು ಇನ್ನೊಂದು ವೇದಿಕೆಯಲ್ಲಿ ಮಾಂಸಾಹಾರವನ್ನು ಬೆಂಬಲಿಸಿ ಮಾತನಾಡುತ್ತಾರೆ. ಈ ರಾಜಕೀಯ ನಾಯಕರ ದ್ವಂದ್ವ ನಿಲುವಿನಿಂದಾಗಿಯೇ ಮಾಂಸಾಹಾರ ಸೇವನೆಯು ಚರ್ಚೆಗೀಡಾಗುತ್ತಿದೆ. ಇದನ್ನು ಭಾವನಾತ್ಮಕ ಸಂಗತಿ ಮಾಡಿದ್ದಾರೆ.
-ಡಾ. ಚೆನ್ನಣ್ಣ ವಾಲೀಕಾರ,
ಸಾಹಿತಿ, ಕಲಬುರ್ಗಿ

ಆಹಾರದಂತೆ ಭಾವನೆಯನ್ನೂ ಗೌರವಿಸಿ
ನಾನು ಅಹಿಂಸಾವಾದಿ, ಆದ್ದರಿಂದ ಯಾವತ್ತೂ ಮಾಂಸ ಮಾರಾಟವನ್ನು ಪ್ರೋತ್ಸಾಹಿಸಲಾರೆ. ಎಲ್ಲವನ್ನೂ ಜಾತಿ, ಧರ್ಮಗಳ ಹಿನ್ನೆಲೆ ಇಟ್ಟುಕೊಂಡೇ ನೋಡಬಾರದು. ಹಬ್ಬ, ನಂಬಿಕೆಗಳು ಭಾವನೆಗೆ ಸಂಬಂಧಿಸಿದ ವಿಚಾರಗಳು. ಒಬ್ಬರ ಭಾವನೆಗಳನ್ನು ಇನ್ನೊಬ್ಬರು ಗೌರವಿಸುವ ಮೂಲಕ ಮಾತ್ರ ಒಳ್ಳೆಯ ಸಮಾಜ ನಿರ್ಮಿಸಲು ಸಾಧ್ಯ.

ಎಲ್ಲರ ಆಹಾರ ಪದ್ಧತಿಯನ್ನು ಗೌರವಿಸುವಂತೆ ಎಲ್ಲರ ಭಾವನೆಗಳನ್ನೂ ಗೌರವಿಸಬೇಕಲ್ಲವೇ? ವರ್ಷದಲ್ಲಿ ನಾಲ್ಕಾರು ದಿನ ಮಾಂಸ ಮಾರಾಟ ನಿಷೇಧಿಸಿದರೆ  ತೊಂದರೆ ಆಗುತ್ತದೆ ಎಂದು ನನಗೆ ಅನ್ನಿಸುವುದಿಲ್ಲ. ಭಾರತೀಯರು ಹಿಂದಿನಿಂದಲೂ ಆಧ್ಯಾತ್ಮಿಕ ಚಿಂತನೆಗಳಿಗೆ ಒತ್ತು ಕೊಟ್ಟಿದ್ದಾರೆ.

ಆಹಾರ ಸಂಸ್ಕೃತಿಯಲ್ಲೂ ಅಧ್ಯಾತ್ಮವಿದೆ. ಮಾಂಸಾಹಾರಿಗಳಾದವರೂ ಹಬ್ಬ ಹರಿದಿನಗಳಂದು ಮಾಂಸಾಹಾರ ಸೇವಿಸುವುದು ವಿರಳ. ಆದ್ದರಿಂದ ಮಾಂಸ ಮಾರಾಟ ನಿಷೇಧವನ್ನು ಜಾತಿ–ಧರ್ಮದ ಆಧಾರದಲ್ಲಿ ನೋಡದೆ ಭಾವನಾತ್ಮಕ ಹಿನ್ನೆಲೆಯಲ್ಲಿ ನೋಡಬೇಕು. ಇನ್ನೊಬ್ಬರನ್ನು ಗೌರವಿಸುವ ಸಲುವಾಗಿ ಸಣ್ಣ ತ್ಯಾಗ ಮಾಡುವುದರಲ್ಲೂ ಸಂತೋಷವಿದೆ, ಅಷ್ಟೇ ಅಲ್ಲದೆ ತ್ಯಾಗ ಮಾಡಿದವರು ದೊಡ್ಡವರೆನಿಸುತ್ತಾರೆ.
-ಎಚ್‌.ಬಿ.ರಮೇಶ್‌,
ಯೋಗ ಶಿಕ್ಷಕ, ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT