ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕುಸ್ತಿಯ ಐತಿಹಾಸಿಕ ಸಾಕ್ಷಿ

Last Updated 21 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ರಿಯಾಣದ ಹಿಸ್ಸಾರ್‌ನ ಒಲಿಂಪಿಯನ್ ಕುಸ್ತಿಪಟು ಚಾಂದಗಿ ರಾಮ್ ಅವರು ಕಂಡ ಕನಸು ನನಸಾಗಲು ನಾಲ್ಕು ದಶಕಗಳೇ ಬೇಕಾಯಿತು.

ಭಾರತದ ಮಹಿಳಾ ಕುಸ್ತಿಪಟುವೊಬ್ಬರು ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬೇಕು ಎಂಬ ಕನಸು ಅವರದ್ದಾಗಿತ್ತು. ಅದಕ್ಕಾಗಿಯೇ 1975ರಲ್ಲಿ ಚಾಂದಗಿರಾಮ್ ಅವರು ದೆಹಲಿಯಲ್ಲಿ ಅಖಾಡ ಆರಂಭಿಸಿದರು. ಬಾಲಕ ಮತ್ತು ಬಾಲಕಿಯರಿಬ್ಬರಿಗೂ ತರಬೇತಿ ಆರಂಭಿಸಿದರು. ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ವನಿತೆಯರಿಗೆ ಕುಸ್ತಿ ತರಬೇತಿ ನೀಡು ಸಾಹಸ ಕೈಗೆತ್ತಿಕೊಂಡವರು ಅವರು. 2010ರಲ್ಲಿ ಅವರು ನಿಧನರಾದರು.

2012ರಲ್ಲಿ ಭಾರತದ ಗೀತಾ ಪೋಗಟ್ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದರು. ವಿಶ್ವದ ಮಹಾಕ್ರೀಡಾಮೇಳದಲ್ಲಿ ಸ್ಪರ್ಧಿಸಿದ ಭಾರತದ ಮೊದಲ ಮಹಿಳಾ ಕುಸ್ತಿಪಟುವಾದರು.

ಕಳೆದ ಗುರುವಾರ ಬೆಳಗಿನ ಜಾವ ಸಾಕ್ಷಿ ಮಲಿಕ್ ರಿಯೊ ಕ್ರೀಡಾಂಗಣದಲ್ಲಿ  ಕಂಚಿನ ಪದಕಕ್ಕೆ ಗಳಿಸಿದ್ದು, ಚಾಂದಗಿ ರಾಮ್ ಅವರ ಪ್ರಯತ್ನ ಸಂದ  ಫಲವೇ ಅದಾಗಿತ್ತು.

ಕಟ್ಟುಪಾಡುಗಳ ಕಠಿಣ ಹಾದಿ
1975ರಲ್ಲಿಯೇ ವನಿತೆಯರಿಗೆ ಕುಸ್ತಿ ತರಬೇತಿ ಕೊಡುವ ಕೈಂಕರ್ಯ ಆರಂಭವಾದರೂ ಬೆಳವಣಿಗೆ ಮಾತ್ರ ಶರವೇಗದಲ್ಲಿ ಆಗಲಿಲ್ಲ.

ಕಾಪ್ ಪಂಚಾಯತ್ ಮತ್ತು ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಸ್ವಾತಂತ್ರ್ಯಕ್ಕೆ ಮೊದಲಿನಿಂದಲೂ ಅಂಕುಶ ಇದೆ. ಆದರೆ, ಆ ವ್ಯವಸ್ಥೆಯ ವಿರುದ್ಧ ಸಮರ ಸಾರುತ್ತಲೇ ಬೆಳೆದಿದ್ದು ಮಹಿಳಾ ಕುಸ್ತಿ.  

ಸಾಕ್ಷಿ ಮಲಿಕ್ ಅವರ ಉದಾಹರಣೆಯನ್ನೇ ತೆಗೆದುಕೊಳ್ಳಿ. ಅವರು ತಮ್ಮ 12ನೇ ವಯಸ್ಸಿನಲ್ಲಿ ಕುಸ್ತಿ ಕಲಿಕೆ ಆರಂಭಿಸಿದರು. ಅವರ ಸ್ವಗ್ರಾಮ  ಹರಿಯಾಣ ರಾಜ್ಯದ ಮೊಕ್ರಾದ ಸಂಪ್ರದಾಯಸ್ಥ ಹಿರಿಯರ ಕಣ್ಣುಗಳು ಕೆಂಪಾಗಿದ್ದವು.   

ಅವರೆಲ್ಲ ಸೇರಿ ಬಾಲಕಿಯ ತಂದೆಯನ್ನು ಕರೆದು, ‘ನಿನ್ನ ಮಗಳಿಗೆ ಬುದ್ಧಿ ಹೇಳು. ಕುಸ್ತಿ–ಗಿಸ್ತಿ ಹೆಣ್ಣುಮಕ್ಕಳಿಗೆ ಅಲ್ಲ. ಮರ್ಯಾದೆಯಿಂದ ಇರಲು ಹೇಳು ’ಎಂದು ಎಚ್ಚರಿಸಿದರು.

ಅಷ್ಟಕ್ಕೆ ಸುಮ್ಮನಾಗಲಿಲ್ಲ. ಸಾಕ್ಷಿ ತರಬೇತಿ ಪಡೆಯುತ್ತಿದ್ದ ರೋಹ್ಟಕ್‌ನ ಚೋಟುರಾಮ್ ಅಖಾಡದ ಕೋಚ್ ಈಶ್ವರ್‌ ದಹಿಯಾ ಅವರಿಗೂ ಎಚ್ಚರಿಕೆ ನೀಡಿದರು. ಆದರೆ ಸಾಕ್ಷಿಯ ಬೆಳವಣಿಗೆಗೆ ಪಾಲಕರು ಮತ್ತು ಕೋಚ್ ಒತ್ತು ಕೊಟ್ಟು ದಿಟ್ಟತನ ಮೆರೆದರು.

ಅದರ ಫಲವಾಗಿ ಇವತ್ತು ಮೊಕ್ರಾ ಮಾತ್ರವಲ್ಲ ಇಡೀ ದೇಶವೇ ಎದೆಯುಬ್ಬಿಸಿ ಸಾಕ್ಷಿಯ ಹೆಸರು ಪಠಿಸುತ್ತಿದೆ.  ಒಲಿಂಪಿಕ್ಸ್‌ನಲ್ಲಿ ಪದಕಗಳ ಬರ ಎದುರಿಸುತ್ತಿದ್ದ  ದೇಶಕ್ಕೆ ಸಮಾಧಾನದ ಸಿಂಚನ ಮಾಡಿದ ಸಾಕ್ಷಿ ರಾತ್ರಿ ಬೆಳಗಾಗುವುದರೊಳಗೆ ಮನೆ ಮಾತಾಗಿದ್ದಾರೆ. 
 
ಅಂದು ಅವರ ತಂದೆ ಸುಬೀರ್ ಸಿಂಗ್ ಮತ್ತು ಕೋಚ್ ಈಶ್ವರ್ ದಹಿಯಾ ಸಮಾಜದ ಸಂಪ್ರದಾಯಕ್ಕೆ ಶರಣಾಗಿದ್ದರೆ  ಇಂದು ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ನಮಗೆ ಸಿಗುತ್ತಿರಲಿಲ್ಲ.  

ಒಲಿಂಪಿಕ್ಸ್‌ ಕುಸ್ತಿಯಲ್ಲಿ ಪದಕ ಗೆದ್ದ  ಭಾರತದ ಪ್ರಥಮ ವನಿತೆ ಎಂಬ ಹೆಗ್ಗಳಿಕೆ ಗಳಿಸಲು ಸಾಕ್ಷಿ ಸವೆಸಿದ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ. 2014ರಲ್ಲಿ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಸಾಕ್ಷಿ ಪದಕ ಗಳಿಸುವವರೆಗೂ ಸಮಾಜದವರು, ಊರಿನವರ ಟೀಕೆಗಳು, ವ್ಯಂಗ್ಯಗಳನ್ನು ಅರಗಿಸಿಕೊಳ್ಳಲು ಸಾಕ್ಷಿ ಮತ್ತು ಅವರ ಕುಟುಂಬವು ಪಟ್ಟ ಕಷ್ಟಗಳು ಅಷ್ಟಿಷ್ಟಲ್ಲ.  

ಈ ಪದಕ ಕೇವಲ ಸಾಕ್ಷಿಯ ವಿಜಯವಲ್ಲ. ಭಾರತದ ಮಹಿಳಾಕುಲದ ಅದರಲ್ಲೂ ಹರಿಯಾಣದ ವನಿತಾ ಸಮೂಹದ ದಿಗ್ವಿಜಯ. 

ಗೀತಿಕಾ ಜಾಖಡ್‌ ಸಾಧನೆ
ಭಾರತದ ಮಹಿಳಾ ಕುಸ್ತಿಪಟುವೊಬ್ಬರು ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೆ ಎಂದು ತೋರಿಸಿಕೊಟ್ಟವರು ಗೀತಾ ಜಾಕಡ್. ಅವರೂ ಕೂಡ ಹರಿಯಾಣದವರೇ. ಆದರೆ, ಅವರ ತಂದೆ ಸತ್ಯವೀರ್ ಸಿಂಗ್ ಜಾಖಡ್ ಹಿಸಾರ್‌ನಲ್ಲಿ ಕ್ರೀಡಾಧಿಕಾರಿಯಾಗಿದ್ದವರು. 1999ರಲ್ಲಿ ಮಣಿಪುರದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಗೀತಿಕಾ ಹತ್ತಾರು ಬಾಲಕಿಯರ  ಸ್ಪೂರ್ತಿಯಾಗಿಬಿಟ್ಟರು.

2003ರಲ್ಲಿ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ, ಅದೇ ವರ್ಷ ಲಂಡನ್‌ನಲ್ಲಿ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಬೇಟೆಯಾಡಿದ ಗೀತಿಕಾ ಭಾರತೀಯ ಕುಸ್ತಿಯಲ್ಲಿ ಹೊಸ ಅಧ್ಯಾಯ ಬರೆದರು. ಅವರಿಗೆ ತಮ್ಮ ಕುಟುಂಬದ ಬೆಂಬಲ ಇದ್ದ ಕಾರಣ ಹೆಚ್ಚು ತೊಂದರೆಯಾಗಿರಲಿಲ್ಲ. 2014ರ ಗ್ಲಾಸ್ಗೊ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿಯೂ ಅವರು  ಬೆಳ್ಳಿ ಗೆದ್ದರು. ಈಗ ಹರಿಯಾಣದಲ್ಲಿ ಪೊಲೀಸ್ ಅಧಿಕಾರಿಯಾಗಿದ್ದಾರೆ.

ಪೊಗಟ್ ಕುಟುಂಬದ ಸಾಹಸಗಾಥೆ
ಹರಿಯಾಣದ ಪ್ರತಿ ಜಿಲ್ಲೆಯಲ್ಲೂ ಇಂತಹ ಹತ್ತಾರು ಕತೆಗಳು ಸಿಗುತ್ತವೆ. ಏಕೆಂದರೆ, ಅದರಲ್ಲೂ ಈ ಒಲಿಂಪಿಕ್ಸ್‌ನಲ್ಲಿ  ಗೀತಾ ಪೋಗಟ್ ಸ್ಪರ್ಧಿಸಿಲ್ಲ. ಆದರೆ, ಗೀತಾ ಮತ್ತು ಅವರ ತಂದೆಯ ಶ್ರಮವನ್ನು ಕಡೆಗಣಿಸುವಂತಿಲ್ಲ. ಭಾರತದ ವನಿತೆಯರ ಕುಸ್ತಿ ಕ್ರಾಂತಿಯ ಪ್ರಮುಖ ಅಧ್ಯಾಯ ಅದು.

ಗ್ರಾಮದ ಮುಖಂಡರ ಬೆದರಿಕೆ, ಕಟಕಿ, ನಿಷೇಧಗಳಿಗೆ ಜಗ್ಗದ ಮಹಾವೀರ್ ಸಿಂಗ್ ತನ್ನ ನಾಲ್ವರು ಪುತ್ರಿಯರು ಮತ್ತು ತಮ್ಮನ ಪುತ್ರಿಯನ್ನು ಕುಸ್ತಿಪಟುಗಳನ್ನಾಗಿ ರೂಪಿಸಿದ್ದಾರೆ. ಸ್ವತಃ ಕುಸ್ತಿಪಟುವಾಗಿದ್ದ ಅವರು ದೇಶಕ್ಕೆ ಒಲಿಂಪಿಯನ್‌ಗಳನ್ನು ಕೊಡುಗೆಯಾಗಿ ನೀಡಿದ್ದರೆ.

ಲಂಡನ್‌ ಒಲಿಂಪಿಕ್ಸ್‌ನಲ್ಲಿ ಗೀತಾ ಪೋಗಟ್, ರಿಯೊ ಒಲಿಂಪಿಕ್ಸ್‌ನಲ್ಲಿ ಕಿರಿಯ ಮಗಳು ಬಬಿತಾ ಕುಮಾರಿ, ಅವರ ತಮ್ಮನ ಮಗಳು ವಿನೇಶ ಪೋಗಟ್ ಸ್ಪರ್ಧಿಸಿದ್ದಾರೆ.  ಇನ್ನುಳಿದ ರಿತು, ಸಂಗೀತಾ ಮುಂದಿನ ಪೀಳಿಗೆಯ ಭರವಸೆಯ ಕುಸ್ತಿಪಟುಗಳಾಗಿದ್ದಾರೆ.

ಹರಿಯಾಣ ಸರ್ಕಾರವು ಸಾಧಕಿಯರಿಗೆ ನೌಕರಿ, ಉನ್ನತ ಹುದ್ದೆ ಮತ್ತು ಪ್ರೋತ್ಸಾಹಧನಗಳನ್ನು ನೀಡುವ ಮೂಲಕ ಬೆಳವಣಿಗೆಗೆ ಕಾರಣವಾಗಿದೆ. ಆದರೆ, ದೇಶದ ಉಳಿದ ರಾಜ್ಯಗಳಲ್ಲಿ ಇಂತಹ ವ್ಯಾಪಕ ಬೆಳವಣಿಗೆ ಕಂಡು ಬರುತ್ತಿಲ್ಲ. ಹರಿಯಾಣ ಪಕ್ಕದ ಪಂಜಾಬ್ ಕೂಡ ಪೈಲ್ವಾನರ ಕಣಜ.

ಅದರೆ ಅಲ್ಲಿಂದ ಕುಸ್ತಿ ಅಖಾಡಕ್ಕೆ ಧುಮುಕಿನ ಮಹಿಳೆಯರ ಸಂಖ್ಯೆ ಕಡಿಮೆ. ರಾಜಸ್ತಾನ, ಉತ್ತರ ಪ್ರದೇಶ, ಮಧ್ಯಪ್ರದೇಶಗಳೂ ಕೂಡ ಅಂತಹ ಗಮನಾರ್ಹ ಸಾಧನೆ ಮಾಡಿಲ್ಲ.

ಆದರೆ, ಮಹಾರಾಷ್ಟ್ರ ಇದಕ್ಕೆ ಅಪವಾದ. ಪಾರಂಪರಿಕ ಕ್ರೀಡೆಗಳ ಕಣವಾದ ಮರಾಠಿ ನಾಡಿನಲ್ಲಿ ಕುಸ್ತಿಪಟುಗಳು ಬೆಳೆಯುತ್ತಿದ್ದಾರೆ. ಪುಣೆ, ಸತಾರ, ರತ್ನಗಿರಿ, ಕೊಲ್ಹಾಪುರ, ಮುಂಬೈಗಳ ಅಖಾಡಗಳಲ್ಲಿ ಮಹಿಳೆಯರ ಅಭ್ಯಾಸ ನಡೆಯುತ್ತಿದೆ.

ಆದರೆ ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ವನಿತೆಯರ ಕುಸ್ತಿ ಇನ್ನೂ ಅಂಬೆಗಾಲಿಡುತ್ತಿದೆ. ಸಾಕ್ಷಿ ಮಲಿಕ್ ಅವರ ಸಾಧನೆಯು ಹೊಸ ಶಕ್ತಿಯಾಗಿ ಪ್ರವಹಿಸಿದರೆ ಬೆಳವಣಿಗೆಯ ಹೊಸ ಯುಗ ಆರಂಭವಾಗಬಹುದು.

ಚಾಂದಗಿ ರಾಮ್ ಬಗ್ಗೆ...
ವಿಭಜನಾ ಪೂರ್ವ ಪಂಜಾಬ್ (ಹರಿಯಾಣ ಸೇರಿತ್ತು) ರಾಜ್ಯದ ಹಿಸ್ಸಾರ್‌ನ ಸಿಸೈನಲ್ಲಿ  ಚಾಂದಗಿ ರಾಮ್ ಅವರು 1937ರಲ್ಲಿ  ಜನಿಸಿದರು. 1970ರಲ್ಲಿ ಅವರು ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. 1972ರ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅವರಿಗೆ ಅರ್ಜುನ ಮತ್ತು ಪದ್ಮಶ್ರೀ ಪುರಸ್ಕಾರಗಳನ್ನು ನೀಡಲಾಗಿತ್ತು.

ಅವರ ಪುತ್ರಿಯರಾದ ದೀಪಿಕಾ ಕಲಿರಾಮನ್ ಮತ್ತು ಸೋನಿಕಾ ಕಲಿರಾಮನ್ ಅವರು ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಿದ ಪ್ರಥಮ ಮಹಿಳಾ ಕುಸ್ತಿಪಟುಗಳಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT