ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಮೀಸಲು ಜಾರಿಗೆ ಒತ್ತಡ: ಸೋನಿಯಾ ಗಾಂಧಿ

Last Updated 20 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಶಾಸನ ಸಭೆ­ಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಮಸೂದೆಗೆ ಆದಷ್ಟು ಬೇಗ ಅನುಮೋದನೆ ನೀಡುವಂತೆ ಎನ್‌ಡಿಎ ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ತಿಳಿಸಿದರು.

ಮಹಿಳಾ ಕಾಂಗ್ರೆಸ್‌ ಸಮಾವೇಶ ಉದ್ದೇಶಿಸಿ ಬುಧವಾರ ಇಲ್ಲಿ ಮಾತನಾ­ಡಿದ ಅವರು, ‘ನಾವು ಈಗ ವಿರೋಧ ಪಕ್ಷದಲ್ಲಿ ಇದ್ದರೂ ಮಹಿಳಾ ಮೀಸ­ಲಾತಿ ಜಾರಿ ಆಗಬೇಕು ಎಂಬ ನಿರ್ಣ­ಯಕ್ಕೆ ಬದ್ಧರಾಗಿದ್ದೇವೆ. ಸರ್ಕಾರದ ಮೇಲೆ ಒತ್ತಡ ತರುವ ಕಾರ್ಯವನ್ನು ಮುಂದುವರಿಸುತ್ತೇವೆ’ ಎಂದರು.

ಸಂಸತ್ತು ಮತ್ತು ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸ­ಲಾತಿ ನೀಡುವ ಮಸೂದೆ 18 ವರ್ಷ­ಗಳಿಂದ ನನೆಗುದಿಯಲ್ಲಿದೆ. 2004 ರಲ್ಲಿ ಯುಪಿಎ ಅಧಿಕಾರಕ್ಕೆ ಬಂದ ನಂತರ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಕಾಂಗ್ರೆಸ್‌ ಮುಂದಾ ಯಿತು. 2010ರಲ್ಲಿ ರಾಜ್ಯಸಭೆಯಲ್ಲಿ ಇದಕ್ಕೆ ಒಪ್ಪಿಗೆ ದೊರೆತರೂ, ಕೆಲವು ರಾಜ­ಕೀಯ ಪಕ್ಷಗಳ ಅಸಹಕಾರ ದಿಂದಾಗಿ ಲೋಕ­ಸಭೆಯಲ್ಲಿ ಇದಕ್ಕೆ ಒಪ್ಪಿಗೆ ಪಡೆ­ಯಲು ಸಾಧ್ಯವಾಗಲಿಲ್ಲ ಎಂದು ವಿಷಾದಿಸಿದರು.

ನಕಲು: ಯುಪಿಎ ಸರ್ಕಾರದ ಕಾರ್ಯ­ಕ್ರಮಗಳನ್ನು ಪ್ರಧಾನಿ ನರೇಂದ್ರ ಮೋದಿ ನಕಲು ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಯುಪಿಎ ಸರ್ಕಾರ ಒಳ್ಳೆಯ ಕೆಲಸ ಮಾಡಿದೆ. ಆದರೆ, ಬಿಜೆಪಿಯ ಸುಳ್ಳು ಆಶ್ವಾಸನೆಗಳಿಗೆ ಮರುಳಾಗಿ ಜನರು ಲೋಕ­ಸಭಾ ಚುನಾವಣೆಯಲ್ಲಿ ಬಿಜೆ­ಪಿಗೆ ಮತ ನೀಡಿದರು. ಆ ಆಶ್ವಾಸನೆ­ಗಳು ಕಾರ್ಯರೂಪಕ್ಕೆ ಬರುವುದಿಲ್ಲ ಎಂಬುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ ಎಂದರು.

ಮಹಿಳಾ ಸಬಲೀಕರಣಕ್ಕೆ ರಾಜೀವ್‌ ಗಾಂಧಿ ಆದ್ಯತೆ ನೀಡಿದ್ದರು. ದೇಶದ ಜನಸಂಖ್ಯೆಯಲ್ಲಿ ಅರ್ಧದಷ್ಟು ಇರುವ ಮಹಿಳೆಯರನ್ನು ನಿರ್ಲಕ್ಷ್ಯ ಮಾಡು­ವಂತಿಲ್ಲ ಎಂಬುದನ್ನು ಮನಗಂಡು ಪಂಚಾಯಿತಿಗಳಲ್ಲಿ ಮೀಸಲಾತಿ ಜಾರಿ­ಗೊಳಿಸಿದರು. ರಾಷ್ಟ್ರೀಯ ಮಹಿಳಾ ಆಯೋಗ ರಚನೆ ಮಾಡಿದರು ಎಂದು ಅವರು ವಿವರಿಸಿದರು.

ಶಾಸನಸಭೆಗಳಲ್ಲೂ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಲು  ರಾಜೀವ್‌ ಗಾಂಧಿ  ಪ್ರಯತ್ನಿಸಿದರು.  ಆದರೆ, ಅವರ ನಿಧನದ ನಂತರ ಯಾರೊಬ್ಬರೂ ಈ ವಿಷಯಕ್ಕೆ ಒತ್ತು ನೀಡಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ‘ಸೋಲು – ಗೆಲುವು ಜೀವನದ ಭಾಗ. ಅಧಿಕಾರ ಇಲ್ಲದಿದ್ದರೂ ಸಿದ್ಧಾಂ­ತ­ಗಳಿಗೆ ಬದ್ಧರಾಗಿದ್ದೇವೆ. ಈ ವಿಷಯ­ದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಮಹಿಳೆಯರ ಮೇಲೆ ನಡೆ­ಯುತ್ತಿರುವ ದೌರ್ಜನ್ಯ ಪ್ರಕರಣ ಗಳನ್ನು ಪ್ರಸ್ತಾಪಿಸಿದ ಅವರು, ಇವುಗಳ ವಿರುದ್ಧ ಧ್ವನಿ ಎತ್ತಬೇಕು. ನ್ಯಾಯಕ್ಕಾಗಿ ಹೋರಾಟ ಮಾಡಬೇಕು ಎಂದು ಹೇಳಿದರು. ದಿವಂಗತ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ 70ನೇ ಜನ್ಮದಿನ­ವಾದ ಬುಧವಾರ ಕಾಂಗ್ರೆಸ್‌ ಪಕ್ಷವು ದೊಡ್ಡಮಟ್ಟದ ಸಭೆಯನ್ನು ಆಯೋಜಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT