ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಯುಗದ ಕನಸು ಕಾಣುತ್ತಾ...

ಮಹಿಳಾ ಮೀಸಲಿಗೆ ಮಿತಿ ಹೇರುವುದು ಸರಿಯೇ? ಸವಾಲು ಎದುರಿಸಲು ಶಕ್ತಿ ತುಂಬುವುದು ಬೇಡವೇ?
Last Updated 15 ಮೇ 2015, 19:30 IST
ಅಕ್ಷರ ಗಾತ್ರ

‘ನಾನು ಅನಕ್ಷರಸ್ಥೆ. ಆದರೆ ಕಳೆದ 20 ವರ್ಷಗಳಿಂದ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಗ್ರಾಮ ಪಂಚಾಯಿತಿ ಸದಸ್ಯಳಾಗಿ, ಅಧ್ಯಕ್ಷೆಯಾಗಿ ಕೆಲಸ ಮಾಡಿದ್ದೇನೆ. ಮಕ್ಕಳಿಗೆ ವಿದ್ಯಾರ್ಥಿ ನಿಲಯ ಸ್ಥಾಪಿಸಲು ₨ 1 ಕೋಟಿ ಅನುದಾನ ಮಂಜೂರು ಮಾಡಿಸಿಕೊಂಡು ಬಂದಿರುವೆ. ಚುನಾವಣೆ ಸಂದರ್ಭದಲ್ಲಿ ನಾನು ನನ್ನ ಕ್ಷೇತ್ರದ ಮನೆ ಮನೆಗೆ ತೆರಳಿ, ನನ್ನ ಕೆಲಸಗಳ ಬಗ್ಗೆ ಮತದಾರರಿಗೆ ಮಾಹಿತಿ ನೀಡಿದ್ದೇನೆ. ಅವರು ನನ್ನನ್ನು ಚುನಾಯಿಸಿದ್ದಾರೆ. ಒಳ್ಳೆಯ ಅಭ್ಯರ್ಥಿಯಾಗಲು ಬೇಕಿರುವುದು ಶಿಕ್ಷಣ ಅಲ್ಲ,  ಸಾಮಾನ್ಯ ಜ್ಞಾನ. ಜನರ ಅಗತ್ಯಗಳನ್ನು ಅರಿಯುವ ಸಾಮರ್ಥ್ಯ ಮತ್ತು ಅದಕ್ಕೆ ಸೂಕ್ತವಾಗಿ ಸ್ಪಂದಿಸುವ ಗುಣ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಇದ್ದ ಸಭೆಯೊಂದರಲ್ಲಿ ಜಾನಕಮ್ಮ ಹೇಳಿದರು.

ರಮೇಶ್ ಕುಮಾರ್ ಸಮಿತಿ 2014ರಲ್ಲಿ ನಡೆಸಿದ ಮೈಸೂರು ವಲಯ ಮಟ್ಟದ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡ ಕೆಲವರು, ಪಂಚಾಯಿತಿ ಚುನಾವಣೆಗಳಲ್ಲಿ ಸ್ಪರ್ಧಿಸಲು ಶಿಕ್ಷಣವನ್ನೂ ಒಂದು ಕನಿಷ್ಠ ಅರ್ಹತೆ ಎಂದು ಪರಿಗಣಿಸಲು ಮಾಡಿದ ಒತ್ತಾಯಕ್ಕೆ ಜಾನಕಮ್ಮ  ಪ್ರತಿಕ್ರಿಯಿ ಸಿದ ಪರಿ ಅದಾಗಿತ್ತು. ಜನರ ಸಮಸ್ಯೆಗಳನ್ನು ಅರಿಯಲು, ಅದಕ್ಕೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಲು ಶಾಲಾ ಶಿಕ್ಷಣ ಅನಿವಾರ್ಯವಲ್ಲ ಎಂಬುದು ಜಾನಕಮ್ಮ ಅವರನ್ನು ಅವರ ಕ್ಷೇತ್ರ ಜನ ಗುರುತಿಸಿರುವುದನ್ನು ನೋಡಿದರೆ ಸಾಬೀತಾಗುತ್ತದೆ.

ಜಾನಕಮ್ಮ ಕಾಲೇಜಿನಿಂದ ಪದವಿ ಪಡೆದ ವ್ಯಕ್ತಿಗಿಂತ ಹೆಚ್ಚು ಸ್ಪಷ್ಟವಾಗಿ ಅನ್ಯಾಯವನ್ನು ಕಾಣಬಲ್ಲರು. ಅವರ ಜೀವನ, ತಮ್ಮ ಕ್ಷೇತ್ರದ ನಿರ್ಲಕ್ಷ್ಯಕ್ಕೆ ಒಳಗಾದ ಹೆಣ್ಣು ಮಕ್ಕಳು ನಡೆಸುವ ಜೀವನದಂತೆಯೇ ಇದೆ. ಆ ಹೆಣ್ಣು ಮಕ್ಕಳು ನಡೆ ಸುವ ಹೋರಾಟದಲ್ಲಿ ತಾವೂ ಪಾಲ್ಗೊಳ್ಳುತ್ತಾರೆ. ಶಿಕ್ಷಣವು ವ್ಯಕ್ತಿಯನ್ನು ಹೆಚ್ಚು ದಕ್ಷ ಆಡಳಿತಗಾರನನ್ನಾಗಿ ಮಾಡುವು ದಿಲ್ಲ, ವ್ಯಕ್ತಿ ಭ್ರಷ್ಟನಾಗದಂತೆ ತಡೆಯುವುದೂ ಇಲ್ಲ ಎಂಬು ದನ್ನು ದೃಢಪಡಿಸುವ ಸಾವಿರಾರು ಹೆಣ್ಣುಮಕ್ಕಳನ್ನು ರಾಜ್ಯದ ಎಲ್ಲ ಕಡೆಗಳಲ್ಲಿಯೂ ನಾನು ಭೇಟಿ ಮಾಡಿದ್ದೇನೆ.

ಬಡವರು, ತುಳಿತಕ್ಕೆ ಒಳಗಾದವರು, ಅದರಲ್ಲೂ ವಿಶೇಷವಾಗಿ ಮಹಿಳೆಯರು ಚುನಾವಣಾ ರಾಜಕೀಯಕ್ಕೆ ಬಾರದಂತೆ ತಡೆಯಲು, ಅವರು ತಮ್ಮನ್ನು ತಾವು ಪ್ರತಿನಿಧಿಸದಂತೆ ಮಾಡಲು ‘ಶಿಕ್ಷಣ’ ಎಂಬ ಮಾನದಂಡವನ್ನು ಕಾಲಕಾಲಕ್ಕೆ ಬಳಸಿಕೊಳ್ಳಲಾಗಿದೆ. ‘ಸುಶಿಕ್ಷಿತರು’ ಮತ್ತು ‘ಉಳ್ಳವರು’ ದುರ್ಬಲರ ಸಮಸ್ಯೆಗಳನ್ನು ಸಾಕು ಎಂಬಷ್ಟರ ಮಟ್ಟಿಗೆ ಅರ್ಥ ಮಾಡಿಕೊಳ್ಳಬಲ್ಲರು, ಅದಕ್ಕೆ ಪರಿಹಾರ ಒದಗಿಸಬಲ್ಲರು ಎಂಬ ಒಣನಂಬಿಕೆಯೂ ಇಲ್ಲದಿಲ್ಲ. ‘ಮಹಿಳೆಯರನ್ನು ಪುರುಷರು ಪ್ರತಿನಿಧಿಸಬಲ್ಲರು’ ಎಂಬ ತರ್ಕ ಜನಿಸಿದ್ದು ಕೂಡ ಈ ನಂಬಿಕೆಯ ಮೂಲಕವೇ.

ನಿರ್ಧಾರಗಳನ್ನು ಕೈಗೊಳ್ಳುವ ಮುಖ್ಯ ವಾಹಿನಿಯಿಂದ ಮಹಿಳೆಯರನ್ನು ಹೊರಗಿಡಲು ಯತ್ನಿಸುವುದು ಹೊಸದೇನೂ ಅಲ್ಲ. ಇದನ್ನು ಹಲವು ರಾಜ್ಯಗಳಲ್ಲಿ, ಹಲವು ವಿಧಗಳಲ್ಲಿ ಮಾಡಲಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ದಿನಕ್ಕೆ ₨ 27ಕ್ಕಿಂತ ಕಡಿಮೆ ಸಂಪಾದಿಸುವವರು, ನಗರಗಳಲ್ಲಿ ದಿನಕ್ಕೆ ₨ 32ಕ್ಕಿಂತ ಕಡಿಮೆ ಸಂಪಾದಿಸುವವರು ಮಾತ್ರ ಬಡವರು ಎಂದು ಆರ್ಥಿಕ ತಜ್ಞ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ನೀಡಿದ ವ್ಯಾಖ್ಯಾನ ಒಪ್ಪಿಕೊಂಡರೂ, ದೇಶದ ಶೇಕಡ 30ರಷ್ಟು ಜನ ಬಡವರು ಎಂದು ಕರೆಸಿಕೊಳ್ಳುತ್ತಾರೆ. ಇದರಲ್ಲಿ ಶೇಕಡ 50ರಷ್ಟು ಜನ ಮಹಿಳೆಯರೇ ಆಗಿದ್ದಾರೆ.

ಇದನ್ನು ಗುರುತಿಸಿದ ಎಂ.ವೈ. ಘೋರ್ಪಡೆ ಅವರು 1993ರಲ್ಲೇ ಕರ್ನಾಟಕದಲ್ಲಿ ಶೇಕಡ 33ರಷ್ಟು ಮೀಸಲಾತಿಯನ್ನು ಮಹಿಳೆಯರಿಗೆ ನೀಡಿದರು. 2009ರಲ್ಲಿ ಯುಪಿಎ ಸರ್ಕಾರವು ಸಂವಿಧಾನದ 243(ಡಿ) ವಿಧಿಗೆ ತಿದ್ದುಪಡಿ ತಂದು ಮೂರು ಹಂತದ ಪಂಚಾಯಿತಿಗಳಲ್ಲಿ ಮಹಿಳಾ ಮೀಸಲಾತಿ ಪ್ರಮಾಣವನ್ನು ಶೇ 33ರಿಂದ ಶೇ 50ಕ್ಕೆ ಹೆಚ್ಚಿಸಿತು. ನಂತರ ಇದಕ್ಕೆ ಅನುಗುಣವಾಗಿ ಕರ್ನಾಟಕದಲ್ಲೂ ಕಾನೂನು ತಿದ್ದುಪಡಿ ಮಾಡಲಾಯಿತು. ಆದರೆ ರಾಜ್ಯದಲ್ಲಿ 2010ರಲ್ಲಿ ನಡೆದ ಪಂಚಾಯಿತಿ ಚುನಾವಣೆಗಳಲ್ಲಿ ಅನ್ವಯ ಆಗಲಿಲ್ಲ.

ಮೀಸಲಾತಿ ಅಡಿ ಒಂದು ಕ್ಷೇತ್ರ ಮಹಿಳೆಯರಿಗೆ ಒಮ್ಮೆ ದೊರೆತರೆ, ಮುಂದಿನ ಚುನಾವಣೆಯಲ್ಲಿ ಅದು ಪುರುಷರಿಗೆ ದೊರೆಯುವಂತೆ ಆಗಬೇಕು ಎಂದು ರಮೇಶ್ ಕುಮಾರ್ ಸಮಿತಿಯ ಪುರುಷ ಸದಸ್ಯರೆಲ್ಲ ಒತ್ತಾಯಿಸಿದರು. ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದ ವರ್ಗಗಳಿಗೆ ಒಂದೇ ಸ್ಥಾನ ಮೀಸಲಿದ್ದಾಗ ಅದನ್ನು ಮಹಿಳೆಯರಿಗೆ ಆದ್ಯತೆಯ ಮೇಲೆ ನೀಡುವುದರಿಂದ, ಕೆಲವು ಸ್ಥಾನಗಳು ಮಹಿಳೆಯರಿಗೆ ಶಾಶ್ವತವಾಗಿ ಮೀಸಲಾಗಿಬಿಡುತ್ತವೆ ಎಂಬುದು ಅವರ ವಾದವಾಗಿತ್ತು. ‘ವರ್ಷಗಳಿಂದ ನಡೆದುಕೊಂಡು ಬಂದಿರುವ ಶೋಷಣೆಯ ಕಾರಣ, ತಮ್ಮ ಸಮುದಾಯವನ್ನು ಪ್ರತಿನಿಧಿಸಿ, ತಮ್ಮ ಧ್ವನಿ ಇತರರಿಗೆ ಕೇಳುವಂತೆ ಮಾಡುವುದು ಪುರುಷರಿಗೂ ಕಷ್ಟದ ಕೆಲಸ. ಹೀಗಿರುವಾಗ, ಹೆಣ್ಣು ಏನು ಮಾಡಿಯಾಳು? ತಮ್ಮ ಸಮುದಾಯಗಳಿಗೆ ನಿಜ ಅರ್ಥದಲ್ಲಿ ಪ್ರಾತಿನಿಧ್ಯವೇ ಇಲ್ಲದಂತೆ ಆಗುತ್ತದೆ’ ಎಂಬುದು ಕೆಲವು ದುರ್ಬಲ ವರ್ಗಗಳ ಕಳಕಳಿ.

ಅಷ್ಟೇ ಅಲ್ಲ, ಸ್ಥಳೀಯ ಸರ್ಕಾರದಲ್ಲಿ ಪಾಲ್ಗೊಳ್ಳುವ ತಮ್ಮ ಹಕ್ಕು ಮೊಟಕುಗೊಳ್ಳುತ್ತಿದೆ ಎಂದು ಅಂಥ ಮೀಸಲು ಕ್ಷೇತ್ರಗಳ ಪುರುಷರು ಭಾವಿಸಿದ್ದಾರೆ. ಮಹಿಳಾ ಮೀಸಲಾತಿ ಪ್ರಮಾಣ ಶೇ 50ಕ್ಕಿಂತ ಹೆಚ್ಚಾಗಬಾರದು ಎಂಬ ನಿಲುವು ಅವರದ್ದು.

ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ಕಲ್ಪಿಸುವ ಪಂಚಾಯತ್ ರಾಜ್ ತಿದ್ದುಪಡಿ ಮಸೂದೆಯನ್ನು ಮಂಡಿಸುವಾಗ, ‘ಶೇಕಡ 33ಕ್ಕಿಂತ ಕಡಿಮೆಯಿಲ್ಲದಂತೆ’ ಎಂಬಲ್ಲಿ ‘ಶೇ 50’ ಎಂದು ಸೇರಿಸಲಾಯಿತು. ಅಂದರೆ ಮೀಸಲಾತಿ ಶೇ 50ಕ್ಕಿಂತ ಹೆಚ್ಚಾಗಬಹುದು ಅಂದಂತಾಯಿತು. ಆದರೆ ಕರ್ನಾಟಕದ ಪೌರ ಸಂಸ್ಥೆಗಳ ಕಾಯ್ದೆ, ‘ಅರ್ಧದಷ್ಟು ಸೀಟುಗಳು’ ಮಾತ್ರ ಮಹಿಳೆಯರಿಗೆ ಮೀಸಲು ಎನ್ನುತ್ತದೆ. ಅಂದರೆ ಅದು ಶೇ 50ನ್ನು ಮಿರುವಂತಿಲ್ಲ. ರಾಜ್ಯದಲ್ಲಿ ಶೇಕಡ 33ರಷ್ಟು ಸೀಟುಗಳು ಮಾತ್ರ ಮಹಿಳೆಯರಿಗೆ ಮೀಸಲಾಗಿ ದ್ದರೂ, ಚುನಾಯಿತ 95,307 ಪ್ರತಿನಿಧಿಗಳಲ್ಲಿ ಶೇಕಡ 43.6ರಷ್ಟು ಮಂದಿ ಮಹಿಳೆಯರು. 2005–2010ರ ಅವಧಿಗೆ ಹೋಲಿಸಿದರೆ ಇದು ಶೇ 0.6ರಷ್ಟು ಹೆಚ್ಚು. ಮಹಿಳೆಯರ ಪ್ರಾತಿನಿಧ್ಯದ ಪ್ರಮಾಣ ಈಗಾಗಲೇ ಶೇ 50ನ್ನು ತಲುಪುವ ಶುಭ ಸೂಚನೆ ಇಲ್ಲಿದೆ. ಹಾಗಾಗಿ, ‘ಶೇ 50ಕ್ಕಿಂತ ಕಡಿಮೆ ಇಲ್ಲದಂತೆ ಮೀಸಲಾತಿ ಕೊಡಬೇಕು’ ಎಂದಾದಲ್ಲಿ ಮಹಿಳೆಯರ ಪ್ರಾತಿನಿಧ್ಯ ಶೇ 75 ಅಥವಾ ಅದಕ್ಕಿಂತ ಹೆಚ್ಚಾಗುವ ಸಾಧ್ಯತೆ ಇತ್ತು.

ಈ ಅಂಶವನ್ನು ಸಮಿತಿಯು ಗಂಭೀರವಾಗಿ ಪರಿಗಣಿಸಿತು. ಮೀಸಲಾತಿ ಪ್ರಮಾಣವನ್ನು ಬದಲಾಯಿಸದೆ ಸೀಟುಗಳನ್ನು ಮಹಿಳೆಯರು ಮತ್ತು ಪುರುಷರಿಗೆ ಸರದಿ ಪ್ರಕಾರ ನೀಡಬೇಕು ಎಂಬುದನ್ನು ಸಮಿತಿ ಒಪ್ಪಿತು. ಆದರೆ, ಇದು ತೃಪ್ತಿಕರವಾಗಿಲ್ಲ ಎಂಬ ಕಾರಣ ನೀಡಿ, ಮಹಿಳೆಯರ ಮೀಸಲಾತಿ ಪ್ರಮಾಣವನ್ನು ಮಿತಿಗೊಳಿಸಲು ಒತ್ತಾಯಿಸಲಾಯಿತು. ಮಹಿಳಾ ಮೀಸಲಾತಿಗೆ ಮಿತಿ ಹೇರುವ ಮೂಲಕ, ಪುರುಷರಿಗೆ ಮೀಸಲಾತಿ ಕಲ್ಪಿಸುವ ಉದ್ದೇಶ ಇದರ ಹಿಂದಿತ್ತು! ಈ ವಿಚಾರವಾಗಿ ಸಾಕಷ್ಟು ಒತ್ತಡ ಬಂದ ಕಾರಣ, ಮಹಿಳಾ ಮೀಸಲಾತಿಗೆ ಮಿತಿ ಹೇರುವ ಅಂಶವನ್ನು ತಿದ್ದುಪಡಿಯಲ್ಲಿ ಸೇರಿಸಲು ಸಮಿತಿ ಸಮ್ಮತಿಸಿತು.

ನಮ್ಮ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಈ ಅಂಶದ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಿದರು. ನಮ್ಮ ಜೊತೆಗಿನ ಮಾತುಕತೆ ವೇಳೆ, ಈ ಅಂಶ ಅರ್ಥೈಸಿಕೊ ಳ್ಳಲು ಹೆಚ್ಚಿನ ಆದ್ಯತೆ ನೀಡಿದರು. ನಾವು ತಂದ ಪ್ರಗತಿ ಪರವಾದ ಅನೇಕ ತಿದ್ದುಪಡಿಗಳನ್ನು ಅವರು ಗಮನಿಸಲಿಲ್ಲ.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೂಡ ಮಹಿಳೆಯರ ಪಾತ್ರ ಪುರುಷರಿಗೆ ಸರಿಸಮವಾಗಿ ಇತ್ತು. ಗಾಂಧೀಜಿ ಕರೆ ನೀಡಿದ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಚಳವಳಿ, ಸುಭಾಷ್‌ಚಂದ್ರ ಬೋಸ್‌ ಆರಂಭಿಸಿದ ಸಶಸ್ತ್ರ ಹೋರಾಟದಲ್ಲಿ ಅವರ ಪಾತ್ರ ಕಡಿಮೆಯಿಲ್ಲ. ಆದರೆ ಸ್ವಾತಂತ್ರ್ಯ ಬಂದ ನಂತರ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಕಡಿಮೆಯಾಗಿದೆ, ಪುರುಷರ ಪಾತ್ರ ಹೆಚ್ಚಾಗಿದೆ.

ಮಹಿಳಾ ಪ್ರಾತಿನಿಧ್ಯದ ಕೊರತೆಯ ಕಾರಣ ಪರಿಸ್ಥಿತಿ ಯಾವ ಹಂತಕ್ಕೆ ತಲುಪಿತು ಎಂದರೆ, ಶೇಕಡ 33ರಷ್ಟು ಮೀಸಲಾತಿಯನ್ನು ಅವರಿಗೆ ನೀಡಲು ಕಾನೂನು ಜಾರಿಗೊಳಿಸಲು ಯುಪಿಎ ಸರ್ಕಾರ 2010ರಲ್ಲಿ ಮುಂದಾಯಿತು. ಆದರೆ ಇದಕ್ಕೆ ಸಂಬಂಧಿಸಿದ ಮಸೂದೆಗೆ ಅಂದಿನ ಯುಪಿಎ ಮಿತ್ರಪಕ್ಷಗಳ ಬೆಂಬಲ ದೊರೆಯಲಿಲ್ಲ. ಆ ಮಸೂದೆ ಇಂದಿಗೂ ಸಂಸತ್ತಿನ ಅನುಮೋದನೆ ಪಡೆದುಕೊಂಡಿಲ್ಲ.

ದೇಶದ ಮೊದಲ ಲೋಕಸಭೆಯಲ್ಲಿ ಮಹಿಳೆಯರ ಪ್ರಮಾಣ ಶೇ 4.4 ಮಾತ್ರ. 16ನೇ ಲೋಕಸಭೆಯಲ್ಲಿ ಈ ಪ್ರಮಾಣ ಶೇ 11.2ಕ್ಕೆ ತಲುಪಿದೆ. ಆದರೆ ಮಹಿಳೆಯರ ಪ್ರಾತಿನಿಧ್ಯದ ಪ್ರಮಾಣ ಹೆಚ್ಚಾಗುತ್ತಿರುವ ವೇಗ ಸಾಕಾಗದು. ಹಾಗಾಗಿ ಮೀಸಲಾತಿ ಅನಿವಾರ್ಯ. ಆದರೆ ಈವರೆಗೆ ಬಂದಿರುವ ಕಾಯ್ದೆಗಳು, ಸ್ಥಳೀಯ ಸಂಸ್ಥೆಗಳಲ್ಲಿ ಮಾತ್ರ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ಕಲ್ಪಿಸುತ್ತವೆ.

ಸಾರ್ವಜನಿಕ ಜೀವನ ಪ್ರವೇಶಿಸಲು ಮಹಿಳೆಯರು ಮೂರು ತಡೆಗೋಡೆಗಳನ್ನು ದಾಟಬೇಕು. ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಡೆತಡೆಗಳನ್ನು ಒಡ್ಡುವ ಕೌಟುಂಬಿಕ ತಡೆಗೋಡೆ ಮೊದಲನೆಯದು. ಆಡಳಿತಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ಜ್ಞಾನವನ್ನು ಪಡೆದುಕೊಳ್ಳಲು ಬೇಕಿರುವ ತಡೆಗೋಡೆ ದಾಟುವುದು ಎರಡನೆಯದು. ಮಾಹಿತಿ ತಂತ್ರಜ್ಞಾನ ಮತ್ತು ಇ–ಆಡಳಿತದ ಪರಿಭಾಷೆಯನ್ನು ಅರ್ಥೈಸಿಕೊಂಡು ವ್ಯವಹರಿಸುವುದನ್ನು ಕಲಿಯುವುದು ಮೂರನೆಯ ತಡೆಗೋಡೆ.

ಮಹಿಳೆಯರ ನೇತೃತ್ವದಲ್ಲಿರುವ ಪಂಚಾಯಿತಿಗಳು ಪುರುಷರ ಮುಖಂಡತ್ವ ಹೊಂದಿರುವ ಪಂಚಾಯಿತಿಗಳಿಗಿಂತ ಯಾವ ವಿಚಾರದಲ್ಲೂ ಕಡಿಮೆಯಲ್ಲ. ಮಹಿಳೆಯರು ಅಧ್ಯಕ್ಷರು, ಉಪಾಧ್ಯಕ್ಷರಾಗಿರುವ ಕೆಲವು ಪಂಚಾಯಿತಿಗಳು ಪುರುಷರ ನೇತೃತ್ವದಲ್ಲಿರುವ ಪಂಚಾಯಿತಿಗಳಿಗಿಂತ ಚೆನ್ನಾಗಿ ಕೆಲಸ ಮಾಡಿವೆ ಎಂಬುದನ್ನು ಅಧ್ಯಯನಗಳು ಬಹಿರಂಗ ಪಡಿಸಿವೆ. ಆದರೆ ಮಹಿಳೆಯರಿಗೆ ಮೀಸಲಾತಿ ಎಂಬುದು ಪುರುಷರು ನೀಡುವ ‘ಜನರಲ್ ಪವರ್ ಆಫ್‌ ಅಟಾರ್ನಿ’ ಎಂಬ ಮನೋಭಾವ ಇಂದಿಗೂ ಉಳಿದುಕೊಂಡಿದೆ.

ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿದರಷ್ಟೇ ಸಾಲದು ಎಂಬುದು ಸ್ಪಷ್ಟ. ಸವಾಲುಗಳನ್ನು ಎದುರಿಸಲು ಮಹಿಳೆಯರಿಗೆ ಶಕ್ತಿ ತುಂಬಬೇಕು, ಮಹಿಳೆಯರ ಪ್ರಾತಿನಿಧ್ಯ, ಪಾಲ್ಗೊ ಳ್ಳುವಿಕೆ ಹೆಚ್ಚಿಸಲು ಪುರುಷರಿಗೂ ಮಾಹಿತಿ ನೀಡಬೇಕು ಎಂಬುದನ್ನು ರಮೇಶ್ ಕುಮಾರ್ ಸಮಿತಿ ಹೇಳಿದೆ.

ಮಹಿಳೆಯರಿಗೆ ತಮ್ಮನ್ನು ಗುರುತಿಸಿಕೊಳ್ಳಲು ಅನುವಾಗುವಂತೆ ‘ಏಕ ವ್ಯಕ್ತಿ ಕ್ಷೇತ್ರ’ಗಳನ್ನು ರಚಿಸಬೇಕು, ಮಹಿಳೆಯರು ಮತ್ತು ದುರ್ಬಲ ವರ್ಗದವರಿಗೆ ಚುನಾವಣೆ ವೇಳೆ ದೊಡ್ಡ ಮೊತ್ತದ ಹಣ ಒಗ್ಗೂಡಿಸುವ ಹೊರೆಯನ್ನು ತಪ್ಪಿಸಲು ಚುನಾವಣಾ ವೆಚ್ಚವನ್ನು ನಿಗದಿಪಡಿಸುವುದು, ಪುರುಷರು ಮಹಿಳಾ ಪ್ರತಿನಿಧಿಗಳ ಮೇಲೆ ಸವಾರಿ ಮಾಡುವುದನ್ನು ತಪ್ಪಿಸಲು, ಮಹಿಳಾ ಪ್ರತಿನಿಧಿಗಳಿಗೆ ಆಪ್ತ ಕಾರ್ಯದರ್ಶಿ ನೇಮಿಸಿಕೊಳ್ಳಲು ಅವಕಾಶ ಕಲ್ಪಿಸುವುದು, ಮಹಿಳಾ ಜನಪ್ರತಿನಿಧಿಗೆ ಒತ್ತಾಸೆಯಾಗಿ ನಿಲ್ಲುವಂತೆ ಆಕೆಯ ಕುಟುಂಬ ಮತ್ತು ಪತಿಗೆ ತರಬೇತಿ ನೀಡುವ ಶಿಫಾರಸುಗಳನ್ನು ಸಮಿತಿ ಮಾಡಿದೆ.

ಎಲ್ಲ ಪಂಚಾಯಿತಿ ಕಚೇರಿಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸುವುದು, ಪುಟ್ಟ ಮಕ್ಕಳ ತಾಯಂದಿರು ಜನಪ್ರತಿನಿಧಿಯಾಗಿ ಆಯ್ಕೆಯಾದ ಸಂದರ್ಭದಲ್ಲಿ ಅವರಿಗೆ ಪಂಚಾಯಿತಿ ಕಚೇರಿಗಳಲ್ಲಿ ಪ್ರತ್ಯೇಕ ಕೊಠಡಿ ಒದಗಿಸುವ ಶಿಫಾರಸುಗಳೂ ಇದ್ದವು. ಮಹಿಳಾ ಜನಪ್ರತಿನಿಧಿಗಳ ಜೊತೆ ಪುರುಷರು ಗೌರವ, ಸೌಜನ್ಯದಿಂದ ನಡೆದುಕೊಳ್ಳುವಂತಾಗಲು ನೀತಿಸಂಹಿತೆ ರೂಪಿಸಬೇಕು ಎಂದೂ ಸಮಿತಿ ಹೇಳಿದೆ. ನಾನು ಮಹಿಳಾ ಮೀಸಲಾತಿಗೆ ಮಿತಿ ಹೇರುವುದರ ಪರ ಇರಲಿಲ್ಲ. ಪುರುಷಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರು ಶತಮಾನಗಳಿಂದಲೂ ಕೆಳಕ್ಕೆ ತಳ್ಳಲ್ಪಟ್ಟಿದ್ದಾರೆ. ಹಾಗಾಗಿ ಅಧಿಕಾರವನ್ನು ಈಗ ಮಹಿಳೆಯರಿಗೆ ನೀಡುವುದ ರಿಂದ ಸಮಾಜಕ್ಕೇನೂ ಕೆಡುಕಾಗದು.

ಅಂತಿಮವಾಗಿ ನಾವು ಮೀಸಲಾತಿಯ ಅಗತ್ಯವೇ ಇರದ ಸ್ಥಿತಿ ತಲುಪಬೇಕು. ಅಭ್ಯರ್ಥಿಗಳು ತಮ್ಮ ಸಾಮರ್ಥ್ಯದ ಆಧಾರದಲ್ಲಿ ಗೆಲುವು ಸಾಧಿಸುವ ಸ್ಥಿತಿಗೆ ಸಮಾಜ ತಲುಪಬೇಕು. ತಮ್ಮ ಕ್ಷೇತ್ರದ ಜನತೆಗೆ ಅವರು ಉತ್ತರದಾಯಿ ಆಗಬೇಕು. ಯಾರಿಗೆ ಗೊತ್ತು, ಈ ಮಾದರಿಯ ವ್ಯವಸ್ಥೆ ಬಂದಾಗ ಮಹಿಳೆಯರೇ ಅಧಿಕಾರದ ಕೇಂದ್ರ ಬಿಂದುವಾಗಬಹುದು!

ಆದರೆ ಅದು ಸಾಧ್ಯವಾಗಬೇಕಾದರೆ ಊಳಿಗಮಾನ್ಯ ವ್ಯವಸ್ಥೆಯ ಅಂಶ ನಮ್ಮ ರಕ್ತದಿಂದ ಹೊರಹೋಗಬೇಕು. ಪುರುಷ ಪ್ರಧಾನ ವ್ಯವಸ್ಥೆ ಹೋಗಿ ಸಮಾನತೆಯ, ಸಾಮಾಜಿಕ ನ್ಯಾಯದ ವ್ಯವಸ್ಥೆ ರೂಪುಗೊಳ್ಳಬೇಕು. 
ಲೇಖಕಿ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ಸಂಚಾಲಕಿ. ರಮೇಶ್ ಕುಮಾರ್ ಸಮಿತಿ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT