ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ರಕ್ಷಣೆ ಘೋಷವಾಕ್ಯ ಬಾನಂಗಳಕ್ಕೆ

Last Updated 1 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಮೈಸೂರು: ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜ­ನ್ಯಗಳನ್ನು ತಡೆಗಟ್ಟಬೇಕು. ಮಹಿ­ಳೆ­­ಯರನ್ನು ಪ್ರತಿಯೊಬ್ಬರೂ ಗೌರವ­ದಿಂದ ಕಾಣಬೇಕು ಎಂಬ ಸಂದೇಶ­ಗಳು ಬಾನಂ­ಗಳದಲ್ಲಿ ತೇಲಾಡಿದವು. ಮಕ್ಕಳು ಬೃಹತ್ ಗಾಳಿಪಟಗಳನ್ನು ನೋಡಿ ಖುಷಿ­ಪಟ್ಟು ಕುಣಿದು ಖುಷಿಪಟ್ಟರೆ, ಗಾಳಿ­ಪಟದ ಮೇಲೆ ಬರೆದಿದ್ದ ಘೋಷ­ವಾಕ್ಯ­­ಗಳು ಹಿರಿಯರನ್ನು ಚಿಂತೆಗೆ ಹಚ್ಚಿದವು.

–ನಾಡಹಬ್ಬ ದಸರಾ ಮಹೋ­ತ್ಸ­ವದ ಪ್ರಯುಕ್ತ ದಸರಾ ಪ್ರಚಾರ ಉಪ­ಸಮಿತಿ ನಗರದ ಲಲಿತಮಹಲ್‌ ಹೆಲಿ­ಪ್ಯಾಡ್‌ ಮೈದಾನದಲ್ಲಿ ಬುಧವಾರ ಹಮ್ಮಿ­ಕೊಂಡಿದ್ದ ಗಾಳಿಪಟ ಉತ್ಸವದಲ್ಲಿ ಕಂಡು ಬಂದ ದೃಶ್ಯಗಳಿವು.

ಗುಜರಾತಿನ ಪವನ್‌ ಸೋಲಂಕಿ ತಯಾರಿಸಿದ್ದ ಸುಮಾರು ೫೦ ಅಡಿ ಉದ್ದದ ಗಾಳಿಪಟದಲ್ಲಿ ‘ಮಹಿಳೆ­ಯ­ರನ್ನು ಆದರಿಸಿ’, ‘ನಾರಿಯನ್ನು ಪೂಜಿಸಿ’ ಎಂಬ ಸಂದೇಶಗಳನ್ನು ಹಾಕಲಾಗಿತ್ತು. ಬೃಹತ್‌ ಗಾಳಿಪಟವನ್ನು ಹಾರಿಸಲು ಸುಮಾರು ೨೦ಕ್ಕೂ ಹೆಚ್ಚು ಮಂದಿ ಶ್ರಮ­ಪಟ್ಟರು. ಕೊನೆಗೂ ಮೇಲೇರಿದ ಗಾಳಿ­ಪಟ ಕೆಲ ಹೊತ್ತು ಬಾನಂಗಳದಲ್ಲಿ ಹಾರಾಡಿ, ಗಾಳಿ ಕಡಿಮೆ ಆಗುತ್ತಿದ್ದಂತೆ ಗೋತಾ ಹೊಡೆಯುತ್ತಾ ನೆಲಕಚ್ಚಿತು. ಇದರಿಂದ ನೆರೆದಿದ್ದವರಿಗೆ ನಿರಾಶೆ­ಯಾ­ಯಿತು. ಮತ್ತೆ ಅದೇ ಪಟವನ್ನು ಮೇಲೇ­ರಿ­ಸುವ ಪ್ರಯತ್ನ ನಡೆಯಿತು.

ರಾಷ್ಟ್ರೀಯ–ಅಂತರರಾಷ್ಟ್ರೀಯ ಗಾಳಿಪಟ ಉತ್ಸವಗಳಲ್ಲಿ ಭಾಗವಹಿಸಿ ಹಲ­ವಾರು ಪ್ರಶಸ್ತಿಗಳನ್ನು ಬಾಚಿ ತಮ್ಮದೇ ಶಿಷ್ಯವೃಂದವನ್ನು ಹೊಂದಿ­ರುವ ಬೆಂಗಳೂರಿನ ಆರ್‌.ಟಿ. ನಗರದ ವಿ.ಕೆ. ರಾವ್ ತಯಾರಿಸಿದ ‘ಸಾಕು ನಿನ್ನ ಕ್ರೌರ್ಯ’ ಮತ್ತು ‘ಜನನಿಗೆ ನಮನ’ ಸಂದೇಶ ಮತ್ತು ಮಹಿಳೆಯರ ಚಿತ್ರ­ಗಳಿದ್ದ ಗಾಳಿಪಟಗಳು ನೀಲಾಕಾಶದಲ್ಲಿ ತೇಲಾ­ಡಿದವು.

ಗಾಳಿಪಟವನ್ನು ಮುಗಿ­ಲಿಗೆ ಹಾರಿಬಿಡುವ ಮೂಲಕ ನೆರೆ­ದಿದ್ದ­ವರಿಗೆ ಮನರಂಜನೆ ನೀಡುವ ಜತೆಗೆ ಮಹಿ­ಳೆಯರ ರಕ್ಷಣೆ ಕುರಿತಾದ ಸಂದೇಶ­ಗ­ಳನ್ನು ರವಾನಿಸುವ ಪ್ರಯತ್ನ ಯಶಸ್ವಿ­ಯಾ­ಯಿತು. ಗಾಳಿಪಟ ಉತ್ಸವದ ಆರಂಭದ ದಿನ ಡ್ರ್ಯಾಗನ್‌ ಗಾಳಿ­ಪಟ­ವನ್ನು ಬಿಟ್ಟು ಬೆರಗಾಗುವಂತೆ ಮಾಡಿದ್ದ ರಾವ್‌ ಅವರು ಎರಡನೇ ದಿನಕ್ಕೆ ಭಿನ್ನ­ವಾದ ಗಾಳಿಪಟವನ್ನು ಹಾರಿಬಿಟ್ಟಿದ್ದರು. ಒಂದೇ ದಾರದಲ್ಲಿ ಮುತ್ತುಗಳಂತೆ ಪೋಣಿ­ಸಿದ್ದ ೫೦೦ ಗಾಳಿಪಟಗಳು ಆಕಾಶ­ದಲ್ಲಿ ಅಲೆ ಅಲೆಯಾಗಿ ತೇಲಿ­ದ್ದನ್ನು ನೆರೆದಿದ್ದವರು ಕಣ್ತುಂಬಿ­ಕೊಂಡರು.

ಮಹಾರಾಷ್ಟ್ರದ ಅಶೋಕ್‌ ಡಿಸೈ­ನಿಂಗ್‌ ಕೈಟ್ಸ್‌ ಸಂಸ್ಥೆಯ ಮಾಲೀಕ ಅಶೋಕ್‌ ಚೋಟಾ ಭೀಮ್‌ (ಏರ್‌ ಬಲೂನ್‌ ಮಾದರಿ)ನನ್ನು ಬಾನಂಗಳಕ್ಕೆ ಬಿಟ್ಟು ಎಲ್ಲರನ್ನು ಚಕಿತಗೊಳಿಸಿದರು. ಆಗಸ­­ದಲ್ಲಿ ಭುವಿಗೆ ಮುಖ ಮಾಡಿ­ಕೊಂಡು ಎತ್ತರಕ್ಕೆ ಹೋಗುತ್ತಿದ್ದ ಚೋಟಾ ಭೀಮ್‌ನನ್ನು ಕಂಡ ಮಕ್ಕಳ ಸಂತಸಕ್ಕೆ ಪಾರವೇ ಇರಲಿಲ್ಲ. ಮಕ್ಕಳ ಗುಂಪಿ­­ನಿಂದ ‘ಚೋಟಾ ಭೀಮ್‌ ...’ ಎಂಬ ಕೂಗು ಮುಗಿಲು ಮುಟ್ಟಿತು.

ಬೇಸ್ತು ಬೀಳಿಸಿದ ಗಾಳಿಪಟ: ಆಕಾ­ಶ­ದಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಿದ್ದ ಹದ್ದನ್ನು ಕಂಡು ಕೆಲವರು ಅವಕ್ಕಾದರು. ಗಾಳಿಗೆ ಅತ್ತಿತ್ತ ಅಲುಗಾಡುತ್ತಿದ್ದುದು ಬಿಟ್ಟರೆ, ಹದ್ದು ಸುತ್ತು ಹಾಕದಿ­ರು­ವು­ದನ್ನು ಕಂಡು ನೆರೆದಿದ್ದವರಲ್ಲಿ ಸಂಶಯ ಮೂಡಿತು. ಅಶೋಕ್‌ ದಾರದಿಂದ ಹದ್ದನ್ನು ನಿಯಂತ್ರಿಸುತ್ತಿದ್ದುದ್ದನ್ನು ಕಂಡ ಸಾರ್ವಜನಿಕರು ಅದು ನಿಜವಾದ ಹದ್ದಲ್ಲ, ಗಾಳಿಪಟ ಎಂದು ತಿಳಿದಾಗ ಬೇಸ್ತು ಬಿದ್ದರು.

ದುರ್ಗಾ ಮಾತೆ, ಹಾವಿನಾಕಾರದ ಗಾಳಿಪಟ ಆಗಸದಲ್ಲಿ ಹಾರಾಡಿ ಎಲ್ಲ­ರಿಗೂ ಮುದ ನೀಡಿದವು. ಗಾಳಿಪಟ ಉತ್ಸವದಲ್ಲಿ ನಡೆದ ಕಾರ್ಯಾಗಾರ­ದಲ್ಲಿ ಸ್ವತಃ ಗಾಳಿಪಟ ತಯಾರಿಸುವು­ದನ್ನು ಕಲಿತು, ಆಕಾಶಕ್ಕೆ ಹಾರಿಬಿಟ್ಟು ಖುಷಿ­ಪಡುತ್ತಿದ್ದ ಮಕ್ಕಳ ಜತೆಗೆ ಪೋಷ­ಕರು, ಹಿರಿಯರು ಭಾಗಿಯಾಗಿ ಅವರೂ ಮಕ್ಕಳಾದರು! ಗಾಳಿಪಟ ಉತ್ಸವದ ಮೊದಲ ದಿನ ಮುಖ್ಯ­ಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿ­ವಾಸ ಪ್ರಸಾದ್‌ ಭಾವಚಿತ್ರದ ದೊಡ್ಡ ಗಾಳಿ­ಪಟಗಳು ಬಾನೆತ್ತರಕ್ಕೆ ಹಾರಿ ನೋಡು­ಗರ ಗಮನ ಸೆಳೆದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT