ನವದೆಹಲಿ (ಪಿಟಿಐ): ‘ಸದ್ಯದ ವಿಶ್ವ ಅರ್ಥ ವ್ಯವಸ್ಥೆಯಲ್ಲಿ ದೇಶಗಳು ನಿಜವಾಗಿಯೂ ಸಾಧನೆ ಮಾಡಲು ಬಯಸಿದಲ್ಲಿ ಅವು ಮಹಿಳೆಯರ ಸಾಮರ್ಥ್ಯವನ್ನು ಕಡೆಗಣಿಸಲು ಸಾಧ್ಯವೇ ಇಲ್ಲ’ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ.
ಭಾರತ ಭೇಟಿಯ ಕೊನೆಯ ದಿನವಾದ ಮಂಗಳವಾರ ರಿಯಾದ್‌ಗೆ ತೆರಳುವ ಮುನ್ನ ಇಲ್ಲಿನ ಸಿರಿಫೋರ್ಟ್ ಸಭಾಂಗಣದಲ್ಲಿ ಮಾತನಾಡಿದ ಅವರು, ಮಹಿಳೆಯರು ಯಶ ಸಾಧಿಸಿದರೆ ಮಾತ್ರ ದೇಶಗಳು ಯಶಸ್ಸು ಕಾಣಲು ಸಾಧ್ಯ ಎಂದರು.
‘ಭಾರತದ ಸೇನಾಪಡೆಯಲ್ಲಿ ಅಸಾಧಾರಣ ಮಹಿಳೆಯರು ಇದ್ದಾರೆ. ರಾಷ್ಟ್ರಪತಿ ಭವನದಲ್ಲಿ ನನಗೆ ಮಹಿಳಾ ಕಮಾಂಡರ್ ಗೌರವ ವಂದನೆ ಸಲ್ಲಿಸಿದ್ದು ಮರೆಯಲಾಗದ ಕ್ಷಣ. ಇದು ಸಾಮರ್ಥ್ಯ, ಪ್ರಗತಿಯ ಮಹಾನ್ ದ್ಯೋತಕ’ ಎಂದು ಬಣ್ಣಿಸಿದರು.
‘ಹೆಣ್ಣುಮಕ್ಕಳಿಗೂ ಸಮಾನ ಅವಕಾಶ ಸಿಗಬೇಕು. ಪ್ರತಿ ಮಹಿಳೆಯೂ ರಸ್ತೆಯಲ್ಲಿ ಹಾಗೂ ಬಸ್‌ನಲ್ಲಿ ನಿರಾತಂಕವಾಗಿ ಓಡಾಡುವಂತೆ
‘ಅಮೆರಿಕ ಕುತಂತ್ರ’ |
---|
ಬೀಜಿಂಗ್ (ಪಿಟಿಐ): ಭಾರತವು ಚೀನಾ ಮತ್ತು ರಷ್ಯಾದೊಂದಿಗೆ ಹೊಂದಿರುವ ಸಂಬಂಧದಲ್ಲಿ ಒಡಕು ಮೂಡಿಸಲು ಅಮೆರಿಕ ಕುತಂತ್ರ ಮಾಡುತ್ತಿದೆ. ಅಮೆರಿಕದೊಂದಿಗೆ ಚೀನಾ ಸಂಬಂಧ ಉತ್ತಮವಾಗಿಲ್ಲ. ಭಾರತವನ್ನು ಗಾಳವಾಗಿ ಬಳಸಿಕೊಂಡು ಚೀನಾಗೆ ಕಿರುಕುಳ ನೀಡುವ ಉದ್ದೇಶವನ್ನು ಅಮೆರಿಕ ಹೊಂದಿದೆ.ಒಬಾಮ ಅವರ ಕಾರ್ಯತಂತ್ರ ಸ್ಪಷ್ಟವಾಗಿದೆ ಎಂದು ಪ್ರಾಧ್ಯಾಪಕ ಝೌ ಫಾಂಗ್ಯಿನ್ ತಿಳಿಸಿರುವುದಾಗಿ ಚೀನಾದ ಸರ್ಕಾರಿ ಮಾಧ್ಯಮವೊಂದು ಉಲ್ಲೇಖಿಸಿದೆ. |
ಆಗಬೇಕು. ಹೆಣ್ಣುಮಗುವಿನ ಬದುಕು ಅಮೂಲ್ಯವಾದುದು. ಪತಿ, ಸಹೋದರ ಅಥವಾ ತಂದೆಯೇ ಆಗಿರಲಿ, ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು’ ಎಂದರು.
‘ಹೆಣ್ಣು ಶಾಲೆಗೆ ಹೋದರೆ ಎಲ್ಲರಿಗೂ ಅನುಕೂಲ. ಮಹಿಳೆಯರು ಹೊರಗೆ ಕೆಲಸ ಮಾಡಲು ಸಾಧ್ಯವಾದಲ್ಲಿ ಕುಟುಂಬ ಸೌಖ್ಯವಾಗಿರುತ್ತದೆ. ಸಮುದಾಯ ಸಂಪದ್ಭರಿತವಾಗಿರುತ್ತದೆ’ ಎಂದು ಮಹಿಳಾ ಶಕ್ತಿಯ ಮಹತ್ವ ಮನವರಿಕೆ ಮಾಡಿಕೊಟ್ಟರು.
ಮಿಷೆಲ್ ಗಟ್ಟಿಗಿತ್ತಿ
‘ನನ್ನ ಪತ್ನಿ ಮಿಷೆಲ್ ಗಟ್ಟಿಗಿತ್ತಿ, ಪ್ರತಿಭಾವಂತೆಯೂ ಹೌದು. ನಾನು ಆಗಾಗ ತಪ್ಪು ಮಾಡಿದಾಗ ಅದನ್ನು ಹೇಳುವುದಕ್ಕೆ ಆಕೆ ಹಿಂಜರಿಯುವುದಿಲ್ಲ’ ಎಂದು ಅಮೆರಿಕದ ಅಧ್ಯಕ್ಷರು ಹಾಸ್ಯ ಚಟಾಕಿ ಹಾರಿಸುತ್ತಲೇ ಪತ್ನಿಯನ್ನು ಕೊಂಡಾಡಿದರು. ‘ನಾನು ಇಬ್ಬರು ಸುಂದರ ಹಾಗೂ ದಿಟ್ಟ ಹೆಣ್ಣುಮಕ್ಕಳ ತಂದೆಯಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ’ ಎಂದೂ ಹೇಳಿದರು.
‘ಅಮೆರಿಕದ ಪ್ರಥಮ ಮಹಿಳೆಯಾಗಿರುವ ಮಿಷೆಲ್ ಅವರು ಭಾರತ ಸೇರಿದಂತೆ ವಿಶ್ವದ ಎಲ್ಲೆಡೆಯ ಹೆಣ್ಣುಮಕ್ಕಳು ಹಾಗೂ ಮಹಿಳೆಯರನ್ನು ಭೇಟಿಯಾಗಿದ್ದಾರೆ. ಮಹಿಳೆಯರಿಗೆ ಎಲ್ಲ ಅವಕಾಶಗಳು ಸಿಗುವಂತೆ ಮಾಡುವ ನಿಟ್ಟಿನಲ್ಲಿ ಅಮೆರಿಕ ಯತ್ನಿಸುತ್ತಿದೆ’ ಎಂದೂ ಒಬಾಮ ನುಡಿದರು.
ನ್ಯಾನ್ಸಿ ಪೆಲೊಸಿ ಅವರು ಅಮೆರಿಕದ ಜನಪ್ರತಿನಿಧಿ ಸಭೆಯಲ್ಲಿ (ಹೌಸ್ ಆಫ್ ರೆಪ್ರೆಸೆಂಟೇಟಿವ್) ಮೊದಲ ಮಹಿಳಾ ಸ್ಪೀಕರ್ ಆಗಿದ್ದರು. ಭಾರತದಲ್ಲಿ ಕೂಡ ಪತ್ನಿಯರು ಹಾಗೂ ತಾಯಂದಿರು ಇಡೀ ಕುಟುಂಬ ಮತ್ತು ಸಮಯದಾಯವನ್ನು ಬೆಸೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.