ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರಲ್ಲಿ ಬಂಜೆತನದ ಕಾರಣಗಳು

ಅಂಕುರ, ಸರಣಿ–15
Last Updated 17 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಕಳೆದ ವಾರದಿಂದ ಸಹಜವಾಗಿ ಗರ್ಭಧಾರಣೆಯಾಗುವ ಪ್ರಮಾಣ ಕಡಿಮೆಯಾಗುತ್ತಿದೆಯೇ ಎಂಬ ವಿಷಯವನ್ನು ಚರ್ಚಿಸಲಾಗುತ್ತಿದೆ. ಗರ್ಭಾಧಾರಣೆ ವಿಫಲವಾಗಲು ಸ್ತ್ರೀಯರಲ್ಲೂ ಕೆಲವು ಪ್ರಮುಖ ಕಾರಣಗಳಿವೆ. ಈ ವಾರ ಆ ಕಾರಣಗಳ ಮೇಲೆ ಬೆಳಕು ಚೆಲ್ಲುವ.

ಎಂಡೊಮೆಟ್ರಿಯೊಸಿಸ್‌: ಈ ಸಂದರ್ಭದಲ್ಲಿ ಗರ್ಭಕೋಶದಲ್ಲಿರಬೇಕಾದ ಟಿಶ್ಯುಗಳು ಸಹಜ ಸ್ಥಾನ ಬಿಟ್ಟು ಡಿಂಭನಾಳಗಳತ್ತ ಚಲಿಸುತ್ತವೆ. ಈ ಸಂದರ್ಭದಲ್ಲಿ ಅಂಡಾಶಯದಿಂದ ಅಂಡಾಣುಗಳು ಗರ್ಭಕೋಶವನ್ನು ಸೇರಲು ಅಡೆತಡೆ ಉಂಟಾಗುತ್ತದೆ. ಇದರಿಂದಾಗಿಯೂ ಗರ್ಭಧಾರಣೆಗೆ ತಡವಾಗುತ್ತದೆ.

ಮಹಿಳೆಯರಲ್ಲಿ ಲುಟ್ಯಲ್‌ ಹಂತ ಬೆಳೆಯಂದತೆ ತಡೆ ಉಂಟಾದರೆ, ಅಂದರೆ ಗರ್ಭಾಶಯದಲ್ಲಿ ಅಂಡಾಣು ಉತ್ಪತ್ತಿಯಾಗುತ್ತದೆ. ಆದರೆ ಉತ್ಪತ್ತಿಯಾದ ಅಂಡಾಣುವು ಗರ್ಭಕಟ್ಟುವಂತೆ ಬೇಕಾಗುವ ಗ್ರಂಥಿಯ ಸ್ರವಿಸುವಿಕೆ ಸಾಕಷ್ಟು ಪ್ರಮಾಣದಲ್ಲಿ ಆಗದೇ ಇರುವ ಹಂತ. ಪ್ರೊಜೆಸ್ಟರಾನ್‌ ಹಾರ್ಮೋನು ಗರ್ಭಕೋಶವನ್ನು ಕಾಪಾಡುವ ಹಾರ್ಮೋನು ಆಗಿದೆ. ಈ ಸನ್ನಿವೇಶದಲ್ಲಿ ಪ್ರೊಜೆಸ್ಟರಾನ್‌ ಹಾರ್ಮೋನ್‌ ಉತ್ಪತ್ತಿ ಕಡಿಮೆ ಪ್ರಮಾಣದಲ್ಲಿ ಆಗುತ್ತದೆ. ಆಗ ಫಲಿತ ಅಂಡಾಣುವು ಗರ್ಭಕೋಶದ ಗೋಡೆಗೆ ಅಂಟಿಕೊಳ್ಳುವಲ್ಲಿ ವಿಫಲವಾಗುತ್ತದೆ.

ನಿರ್ಬಂಧಿತ ನಾಳ: ನಾನಾ ಕಾರಣಗಳಿಂದಾಗಿ ಡಿಂಭನಾಳಗಳಲ್ಲಿ ಅಡೆತಡೆ ಇದ್ದರೆ ಅಂಡಾಣುಗಳು ಗರ್ಭಾಶಯವನ್ನು ತಲುಪುವುದೇ ಇಲ್ಲ. ಸಾಮಾನ್ಯವಾಗಿ ಹಿಂದೆ ಯಾವಾಗಲಾದರೂ ಸೋಂಕಿನಿಂದ ಬಳಲಿದ್ದರೆ ಈ ಪರಿಸ್ಥಿತಿ ಕಾಣಿಸಿಕೊಳ್ಳಬಹುದು. ಡಿಂಭ ಸ್ನಾಯುಗಳಲ್ಲಿ ಉರಿಯೂತವಿದ್ದಲ್ಲಿ, ಸ್ಥಾನಪಲ್ಲಡವಾದ ಗರ್ಭಧಾರಣೆಯಾಗಿದ್ದಲ್ಲಿಯೂ ಡಿಂಭನಾಳದಲ್ಲಿ ಅಡೆತಡೆಗಳು ಕಂಡು ಬರುತ್ತವೆ.

ಅನಿಯಮಿತ ಋತುಚಕ್ರ: ಮಹಿಳೆಯರಲ್ಲಿ ಅನಿಯಮಿತ ಋತುಚಕ್ರವಾಗುವುದು ಅಥವಾ ಋತುಚಕ್ರವೇ ಆಗದೇ ಇರುವುದೂ ಗರ್ಭಧಾರಣೆಗೆ ತಡೆಯೊಡ್ಡುತ್ತದೆ. ಸಾಮಾನ್ಯವಾಗಿ ‘ಪಿಸಿಒಎಸ್‌’ ಈ ಸಮಸ್ಯೆಗೆ ಕಾರಣವಾಗಿರುತ್ತದೆ. ಆದರೆ ಈ ಸಮಸ್ಯೆಯನ್ನು ಎದುರಿಸುವ ಎಲ್ಲ ಮಹಿಳೆಯರಲ್ಲೂ ಗರ್ಭಧಾರಣೆಯಾಗದ  ಸಾಧ್ಯತೆಗಳೇನಿಲ್ಲ. ಕೆಲವರಲ್ಲಿ ಭ್ರೂಣ ಫಲಿತವಾಗುತ್ತದೆ ಎನ್ನುವುದನ್ನು ಗಮನಿಸಬೇಕು.

ಅಂಡಾಶಯದ ವೈಫಲ್ಯ: ಅಂಡಾಶಯದಲ್ಲಿ ಅಂಡಾಣುಗಳೇ ಇಲ್ಲದೇ ಇರುವುದು ಸಹ ಬಂಜೆತನಕ್ಕೆ ಕಾರಣವಾಗಿರುತ್ತದೆ. ಇದಲ್ಲದೇ ಹೆಣ್ಣುಮಕ್ಕಳಲ್ಲಿ ಲೈಂಗಿಕ ಹಾರ್ಮೋನುಗಳಾದ ಈಸ್ಟ್ರೋಜನ್‌ ಹಾಗೂ ಪ್ರೊಜೆಸ್ಟರೋನ್‌ಗಳೆರಡರ ಸಮರ್ಪಕ ಸ್ರವಿಸುವಿಕೆ ನಿಯಮಿತ ಋತುಸ್ರಾವಕ್ಕೆ ಕಾರಣವಾಗಿರುತ್ತದೆ. ಹಾಗೂ ಗರ್ಭಧಾರಣೆಯನ್ನೂ ನಿರ್ವಹಿಸುತ್ತವೆ. ಕೆಲವು ಮಹಿಳೆಯರಲ್ಲಿ ಈ ಹಾರ್ಮೋನುಗಳಲ್ಲಿ ಆಗುವ ಏರುಪೇರುಗಳಿಂದಾಗಿ 40 ವರ್ಷಕ್ಕೆ ಮುನ್ನವೇ ರಜೋನಿವೃತ್ತಿಯಂಥ ಸನ್ನಿವೇಶಗಳು ಎದುರಾಗುತ್ತವೆ. ಅಂಡಾಣು ಉತ್ಪತ್ತಿಯಾದರೂ ಫಲಿತಗೊಳ್ಳುವುದಿಲ್ಲ. ಇದಕ್ಕೆ ವಯೋಸಹಜವಲ್ಲದ ಅಥವಾ ಅಕಾಲಿಕ ಋತು ನಿರ್ಬಂಧವೆನ್ನಲಾಗುತ್ತದೆ.

ಅಂಡಾಣುವಿನ ಗುಣಮಟ್ಟ: ಮಹಿಳೆಗೆ ವಯಸ್ಸಾದಂತೆ ಅವಳಲ್ಲಿನ ಅಂಡಾಣುವಿನ ಗುಣಮಟ್ಟದಲ್ಲಿಯೂ ಇಳಿಕೆ ಕಂಡು ಬರುತ್ತದೆ. ವಯಸ್ಸಾದ ಮಹಿಳೆಯರ ಅಂಡಾಣುಗಳು, ಯುವ ಮಹಿಳೆಯ ಅಂಡಾಣುಗಳಷ್ಟೇ ಪರಿಣಾಮಕಾರಿಯಾಗಿ ಫಲಿತವಾಗದು. ಫಲಿತವಾದರೂ ಜೀವಿತಾವಧಿಯ ಬಗ್ಗೆ ಹೇಳಲಾಗದು. ಇನ್ನೊಂದು ಕಾರಣವೆಂದರೆ ಮಹಿಳೆಯರಲ್ಲಿ ಸುದೀರ್ಘ ಆಯಸ್ಸಿನ ಜೀವಕೋಶಗಳೆಂದರೆ ಅಂಡಾಣುಗಳು. ಹೆಣ್ಣುಮಗುವಿನ ಜನನದಿಂದ ಋತುನಿವೃತ್ತಿಯವರೆಗೂ ಜೀವಿತವಿರುತ್ತವೆ. ವಯಸ್ಸಾದಂತೆ ಅವುಗಳ ಗುಣಮಟ್ಟ ಅಥವಾ ಅಸಹಜ ಅಂಡಾಣುಗಳ ಬಿಡುಗಡೆಯೂ ಆಗಬಹುದು.

ಅಂಡಾಣು ಮತ್ತು ವೀರ್ಯಾಣುವಿನ ಸಂಯೋಗ:
ಸಾಮಾನ್ಯವಾಗಿ ಲೈಂಗಿಕ ಕ್ರಿಯೆಯ ಅಂತ್ಯದಲ್ಲಿ ವೀರ್ಯಾಣು ಅಂಡಾಣುವಿನೊಂದಿಗೆ ಸಂಯೋಗ ಹೊಂದದೇ ಇರುವುದೂ ಗರ್ಭಧಾರಣೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಇಂಥ ಸಂದರ್ಭಗಳಿಂದ ಅಂಡಾಣು ಫಲಿತವಾಗುವುದು ಕಷ್ಟವಾಗುತ್ತದೆ. ಒಂದು ಋತುಚಕ್ರದ ನಿಗದಿತ ದಿನಗಳಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗದಿದ್ದಲ್ಲಿ ಅಂಡಾಣು ಭ್ರೂಣ ಕಟ್ಟುವಲ್ಲಿ ವಿಫಲವಾಗುತ್ತದೆ. ವಿವಾಹಿತರ ನಡುವೆ ಈ ದಿನಗಳಲ್ಲಿ ಮಿಲನವಾಗದೇ ಇರುವಂಥ ಪರಿಸ್ಥಿತಿಗಳಲ್ಲಿ ಗರ್ಭಧಾರಣೆ ಕಷ್ಟವಾಗುತ್ತದೆ. ಇದಲ್ಲದೆ ಡಿಂಭನಾಳದಲ್ಲಿನ ಅಡೆತಡೆಗಳಿಂದಾಗಿ ವೀರ್ಯಾಣುವು ಅಂಡಾಣುವಿನೊಂದಿಗೆ ಸಂಯೋಗವಾಗುವುದು ತಡೆದಂತಾಗುತ್ತದೆ. ಒಂದು ವೇಳೆ ಸಂಯೋಗವಾದರೂ ಸಕಾಲದಲ್ಲಿ ಆಗದೇ ಗರ್ಭಾಶಯದ ಗೋಡೆಗೆ ಭ್ರೂಣ ಕಟ್ಟದಂತೆ ಆಗುತ್ತದೆ.

ವಯಸ್ಸು: ಗರ್ಭಧಾರಣೆಗೆ ವಯಸ್ಸು ಒಂದು ಅಡೆ ಅಲ್ಲವೇ ಅಲ್ಲ. ಆದರೆ ಗರ್ಭ ಫಲಿತವಾಗುವ ಶಕ್ತಿಯು ಮಹಿಳೆಯ ವಯಸ್ಸಾದಂತೆ ಕಡಿಮೆಯಾಗುತ್ತಲೇ ಹೋಗುತ್ತದೆ.  ಸಂತಾನೋತ್ಪತ್ತಿಗೆ ಬೇಕಿರುವ ಫಲಿತ ಅಂಡಾಣುಗಳ ಸಂಖ್ಯೆಯಲ್ಲಿ ಇಳಿಮುಖವಾಗುವುದೇ ಇದಕ್ಕೆ ಕಾರಣವಾಗಿರುತ್ತದೆ. ಮಹಿಳೆಯರ ಅಂಡಾಶಯದಲ್ಲಿ ಉಳಿದಿರುವ ಅಂಡಾಣುಗಳ ಸಂಖ್ಯೆ ಹಾಗೂ ಅಂಡಾಣುಗಳನ್ನು ಮರು ಉತ್ಪಾದಿಸುವ ಮಹಿಳೆಯ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಮಹಿಳೆಯ 15–24 ವರ್ಷದ ಅವಧಿಯಲ್ಲಿ ಗರಿಷ್ಠ ಫಲವಂತಿಕೆಯ ಕಾಲವಾಗಿದೆ.

ಬಹುತೇಕ ಮಹಿಳೆಯರು ತಮ್ಮ ಕುಟುಂಬವನ್ನು ಆರಂಭಿಸಲು ಯೋಚಿಸುವುದೇ 30ರ ನಂತರ. ಆದರೆ 30ರ ಅಂಚಿನಲ್ಲಿರುವ ಒಂದನೇ ಮೂರರಷ್ಟು ಮಹಿಳೆಯರು ತಮ್ಮ ಗರ್ಭಾವಸ್ಥೆಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ. 40ರ ಅಂಚಿನಲ್ಲಿರುವವರು ಗರ್ಭಧಾರಣೆಯಲ್ಲಿಯೇ ಸಮಸ್ಯೆಗಳನ್ನು ಎದುರಿಸುತ್ತಾರೆ. 30ರ ನಂತರ ಸಂತಾನೋತ್ಪತ್ತಿಯ ಸಾಮರ್ಥ್ಯ ಕಡಿಮೆಯಾಗುತ್ತ ಹೋಗುತ್ತದೆ. ಗರ್ಭಧಾರಣೆಯ ಸಾಧ್ಯತೆಯೂ ಇಳಿಕೆಯಾಗುತ್ತ ಹೋಗುತ್ತದೆ. 35 ವರ್ಷಗಳನ್ನು ದಾಟಿರುವ ಮಹಿಳೆಯರು 6 ತಿಂಗಳ ಸತತ ಯತ್ನದ ನಂತರವೂ ಗರ್ಭ ಧರಿಸದೇ ಇದ್ದಲ್ಲಿ ತಮ್ಮ ವೈದ್ಯರೊಂದಿಗೆ ಸಮಾಲೋಚಿಸುವುದು ಒಳಿತು.

ವಯಸ್ಸಿನ ವಿಷಯ ಬಂದಾಗ ಈ ಸಮಸ್ಯೆ ಕೇವಲ ಮಹಿಳೆಯರನ್ನು ಮಾತ್ರ ಅನ್ವಯವಾಗುವುದಿಲ್ಲ. ಪುರುಷರಿಗೂ ಅನ್ವಯವಾಗುತ್ತದೆ. ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವ ಶಕ್ತಿ, ಆಸಕ್ತಿ ಹಾಗೂ ವೀರ್ಯಾಣುಗಳ ಬಿಡುಗಡೆಯ ಅಂಶದ ಮೇಲೆಯೂ ಪ್ರಭಾವ ಬೀರುತ್ತದೆ.
ಕೆಲವು ಪುರುಷರಲ್ಲಿ ವಯಸ್ಸಾಗುವುದು ಎಂದರೆ ಅವರಲ್ಲಿನ ಟೆಸ್ಟರಾನ್‌ ಹಾರ್ಮೋನಿನ ಬಿಡುಗಡೆಯಲ್ಲಿ ಆಗುವ ವ್ಯತ್ಯಾಸವೇ ಆಗಿದೆ. ಇದರಿಂದ ಅವರ ಲೈಂಗಿಕ ಕ್ರಿಯೆ ಅಥವಾ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಪ್ರಣಯಾಸಕ್ತಿ ಹಾಗೂ ಮಿಲನದಲ್ಲಿ ಆಸಕ್ತಿ ಇಲ್ಲದೇ ಇರುವುದೂ ಗರ್ಭಧಾರಣೆಗೆ ತಡೆಯೊಡ್ಡುತ್ತದೆ. ವಯಸ್ಸಿನೊಂದಿಗೆ ವೀರ್ಯಾಣು ಉತ್ಪತ್ತಿ ಮತ್ತು ಆರೋಗ್ಯವಂತ ವೀರ್ಯಾಣು ಸಹ ಕಡಿಮೆ ಆಗುವುದರಿಂದ ಬಂಜೆತನಕ್ಕೆ ಕಾರಣವಾಗಬಹುದು.

ಮಾಹಿತಿಗೆ: info@manipalankur.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT