ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರಿಗೆ ಚಳಿ ಹೆಚ್ಚಂತೆ!

Last Updated 8 ಜನವರಿ 2016, 19:30 IST
ಅಕ್ಷರ ಗಾತ್ರ

ಚಳಿಗಾಲ ಮುಗಿಯುತ್ತ ಬಂದರೂ ಚಳಿ ಹೆಚ್ಚುತ್ತಲೇ ಇದೆ. ತಾಪಮಾನ ಇನ್ನು ಹೆಚ್ಚುತ್ತಲೇ ಹೋಗಬೇಕು. ಆದರೆ ಹಾಗಾಗುತ್ತಿಲ್ಲ. ಆದರೆ ಚಳಿಯಿಂದಾಗಿ ವಿಪರೀತ ಬಳಲುವವರು ವಿಶೇಷವಾಗಿ ಮಹಿಳೆಯರು. ಚಳಿಯಲ್ಲಿ ಹೆಚ್ಚು ರಕ್ಷಣೆ ಅವಶ್ಯ. ಸ್ತ್ರೀಗೆ ಮೈಯಲ್ಲಿ ಕೊಬ್ಬು ಜಾಸ್ತಿ, ಅವರಿಗೆ ಚಳಿ ಹತ್ತಲ್ಲ ಎಂದು ನೀವು ತಿಳದಿದ್ದರೆ  ತಪ್ಪು. ಪುರುಷರಿಗಿಂತ ಮಹಿಳೆಗೆ ಚಳಿ ಮತ್ತು ಈ ಅವಧಿಯಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚು. ಇದು ಹಿಗೇಕೆ?. 

ಪರಿಸರದ ತಾಪಮಾನದ ಇಳಿತದಿಂದ ದೇಹದ ಉಷ್ಣತೆ 35 ಡಿಗ್ರಿ ಸೆಂಟಿಗ್ರೆಡ್‌ಗಿಂತ ಕಡಿಮೆಯಾದಾಗ ದೇಹದ ಒಳ ಅಂಗಾಂಗಗಳ ಉಷ್ಣತೆ ಕಾಪಾಡುವ ಪ್ರಕ್ರಿಯೆ ಆರಂಭವಾಗುತ್ತದೆ. ಇದರ ಮೊದಲ ಹಂತವಾಗಿ ಚರ್ಮದಲ್ಲಿನ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ಇದರಿಂದಾಗಿ ಕೈ, ಕಾಲು, ತ್ವಚೆಗೆ ರಕ್ತ ಸಂಚಲನೆ ಕಡಿಮೆಯಾಗಿ, ಒಳ ಅಂಗಾಂಗಕ್ಕೆ ರಕ್ತ ಸರಬರಾಜು ಹೆಚ್ಚುತ್ತದೆ. ಮಹಿಳೆಯರ ಚರ್ಮದಲ್ಲಿನ ರಕ್ತನಾಳಗಳು ಹೆಚ್ಚು ಸಮಯ ಸಂಕುಚಿತಗೊಳ್ಳುವುದರಿಂದ, ಇವರ ತ್ವಚೆ ಶೀಘ್ರ ಹಾಗೂ ಹೆಚ್ಚು ಹೊತ್ತು ತಂಪಾಗಿರುತ್ತದೆ. ಈ ಕಾರಣದಿಂದಾಗಿ ಸ್ತ್ರೀಗೆ ಚಳಿಯ ಸಂವೇದನೆ ಹೆಚ್ಚು. ಇದರಿಂದಾಗಿ ಹೆಚ್ಚು ಬಟ್ಟೆ, ಹೊದಿಕೆ ಬಳಸುತ್ತಾರೆ.

ತೊಂದರೆಗಳು
‘ಡಿ’ ಅನ್ನಾಂಗ ಕೊರತೆ... ದೇಹದಲ್ಲಿ ಈ ಅನ್ನಾಂಗದ ಉತ್ಪತ್ತಿಗೆ ಬಿಸಿಲು ಅವಶ್ಯ. ಚಳಿಯಲ್ಲಿ ಮಹಿಳೆಗೆ ಬಿಸಿಲಿಗೆ ಹೆಚ್ಚು ಮೈಯೊಡ್ಡದಿರುವದರಿಂದ  ’ಡಿ’ ಅನ್ನಾಂಗದ ಉತ್ಪತ್ತಿ ಕ್ಷೀಣಗೊಳ್ಳುತ್ತದೆ. ಮೂಲತ: ಪುರುಷರಿಗಿಂತ ಮಹಿಳೆಯಲ್ಲಿ ಈ ಅನ್ನಾಂಗ ಪ್ರಮಾಣ ಕಡಿಮೆ. ಅಜ್ಞಾನ, ಅಲಭ್ಯತೆ, ಬಡತನದಿಂದಾಗಿ ಈ ಅನ್ನಾಂಗವಿರುವ ಆಹಾರ(ಹಾಲು, ಹಣ್ಣು) ಸೇವನೆ ಮಹಿಳೆಯರಲ್ಲಿ ಕಡಿಮೆ. ಇವೆಲ್ಲವುಗಳ ಒಟ್ಟು ಪರಿಣಾಮ ‘ಡಿ’ ಅನ್ನಾಂಗದ ಕೊರತೆ. ಇದರಿಂದಾಗಿ ರೋಗ ನಿರೋಧಕ ಶಕ್ತಿಯ ದುರ್ಬಲ, ಮೂಳೆ ಮತ್ತು ಹೃದಯ ತೊಂದರೆಗಳು ಹೆಚ್ಚು.

ಹೃದಯಾಫಾತ....
ವಿಶೇಷವಾಗಿ ಇಳಿ ವಯಸ್ಸಿನಲ್ಲಿ ಪತಿಯ ಮರಣದಿಂದಾಗುವ ಅಗಲುವಿಕೆಯನ್ನು ತಡೆಯಲಾರದೆ ಕೆಲವು ಮಹಿಳೆಯರು ತಮ್ಮ ಸಂಗಾತಿಯ ಸಾವಿನ ದಿನವೇ ಅಥವಾ ವರ್ಷದೊಳಗೆ ಹೃದಯಾಘಾತಕ್ಕೆ ಈಡಾಗುವುದನ್ನು ನೋಡಿದ್ದೇವೆ. ಲವ್ ಬರ್ಡ್ ಡೆಥ್, ಬ್ರೋಕನ್ ಹಾರ್ಟ್ ಸಿಂಡ್ರೋಮ್, ಅಗಲುವಿಕೆಯ ಹೃದಯಾಘಾತ ಎಂಬ ಹೆಸರಿನ ಇಂಥಹ ಒಂದು ವಿಧದ ಹೃದಯವೇದನೆ ಚಳಿಗಾಲದಲ್ಲಿ ಮಹಿಳೆಯರಿಗೆ ಏಳು ಪಟ್ಟು ಜಾಸ್ತಿ. ಆದಾಗ್ಯೂ ಹೆದರದಿರಿ. ಇಂಥಹ ಅಪಾಯ ಶೇ. ಒಂದು ಮಾತ್ರ.

* ಚಳಿಯಿಂದ ಮನಸ್ಸಿನ ಮೇಲೂ ಹಲವಾರು ಪರಿಣಾಮಗಳಿವೆ. ಇವು 30 ವರ್ಷದೊಳಗೆ ಶೇ. 80 ಮಹಿಳೆಯರಲ್ಲಿ ಸಾಮಾನ್ಯ. ಈ ಬದಲಾವಣೆಗಳಿಗೆ ವಿಂಟರ್ ಬ್ಲೂ, ಎಸ್.ಎ.ಡಿ ಅಥವಾ ಚಳಿಗಾಲದ ಖಿನ್ನತೆ ಎನ್ನುತ್ತೇವೆ. ಹೆಚ್ಚು ನಿದ್ರೆ ಮಾಡಿದರೂ ಲವಲವಿಕೆಯ ಕೊರತೆ, ಹಾಸಿಗೆಯಿಂದ ಎದ್ದೇಳಲು ನಿರಾಸಕ್ತಿ, ರಾತ್ರಿ ಮಧ್ಯೆ ಮಧ್ಯೆ ಎಚ್ಚರ, ಖಿನ್ನತೆ, ಆತಂಕ, ಹತಾಶೆ, ತಪ್ಪು ಮಾಡಿದೆ ಎಂಬ ಭಾವನೆ, ಕುಗ್ಗಿದ ಲೈಂಗಿಕಾಸಕ್ತಿ, ಋತುಸ್ರಾವದ ಒಂದೆರಡು ದಿನ ಮೊದಲು ಹೊಟ್ಟೆನೋವು, ಹೆಚ್ಚಿದ ಕೀಲು ನೋವು- ಇವು ಮುಖ್ಯ ಲಕ್ಷಣಗಳು. ಬಿಸಿಲನ್ನು ನೋಡದಿರುವುದು ಮತ್ತು ಮೆದುಳಿನಲ್ಲಿ ಮೆಲಾಟೊನಿನ್ ಮತ್ತು ಸೆರಾಟೊನಿನ್ ಎಂಬ ರಸಾಯನಿಕಗಳ ಉತ್ಪತ್ತಿಯ ಅಸಮತೋಲನೆ ಈ ಲಕ್ಷಣಗಳಿಗೆ ಕಾರಣ.

ಮುಂಜಾಗ್ರತೆ
ಸಾಧ್ಯವಾದಷ್ಟು ಬಿಸಿಲಿನಲ್ಲಿ ಹೆಚ್ಚು ತಿರುಗಾಡಿರಿ. ಮಧ್ಯಾಹ್ನದ 30 ನಿಮಿಷದ ಪರಿಸರದ ಪ್ರಖರ ಬೆಳಕು ಹೆಚ್ಚು ಸೂಕ್ತ. ತಂಪು ಕನ್ನಡಕ ಬಳಸದಿರಿ. ಇದರಿಂದ ಸೂರ್ಯಕಿರಣ ವೀಕ್ಷಣೆಗೆ ಅಡ್ಡಿಯಾಗುತ್ತದೆ. ತರಕಾರಿ, ಹಣ್ಣು, ದ್ವಿದಳ ಧಾನ್ಯ, ಹಸಿರು ಸೊಪ್ಪು, ಹಾಲು ಮೊಸರು, ಮೀನು ಹೆಚ್ಚು ಸೇವಿಸಿರಿ.

ಸಕ್ಕರೆ ಸಿಹಿ ತಿಂಡಿ ಕಡಿಮೆ ಇರಲಿ. ಆಹಾರ ರುಚಿ ಮತ್ತು ಬಿಸಿಯಾಗಿರಲಿ. ಚಳಿಗಾಲದಲ್ಲಿ ಹೆಚ್ಚು ರಿಲ್ಯಾಕ್ಸ್ ಆಗಿರಿ. ಯಾವುದೇ ಆಕಸ್ಮಿಕ ಅಥವಾ ಬಹಳ ದಿನದ ಒತ್ತಡಕ್ಕೆ ಹೆಚ್ಚು ಭಾವನಾತ್ಮ ಪ್ರತಿಕ್ರಿಯೆ ಬೇಡ. ಕಿವಿಯ ಮೇಲ್ಭಾಗ, ಕೈಕಾಲು ಬೆರಳುಗಳ ತುದಿ, ಮುಂಗೈ, ಮುಂಗಾಲುಗಳು ಕೆಂಪಗಾಗಿ ತುರಿಕೆ, ನೋವು, ಊತ ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸಿರಿ. ಏಕೆಂದರೆ ಇವು ಚಳಿಗುಳ್ಳೆಯ (ಚಿಲ್ಲ್ ಬೆನ್ಸ್) ಆರಂಭಿಕ ಲಕ್ಷ್ಷಣಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT