ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರೇ ಮುನ್ನುಗ್ಗಿ

ಪಂಚಾಯಿತಿ ಚುನಾವಣೆ
Last Updated 22 ಮೇ 2015, 19:30 IST
ಅಕ್ಷರ ಗಾತ್ರ

ಗ್ರಾಮ ಪಂಚಾಯಿತಿ ಚುನಾವಣೆಯ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ, ಗ್ರಾಮೀಣ ಪ್ರದೇಶಗಳಲ್ಲಿ ಸ್ಪರ್ಧಾತ್ಮಕ ವಾತಾವರಣ ಕಂಡುಬರುತ್ತಿದೆ.

ರಾಜ್ಯ ಸರ್ಕಾರ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ನಿಗದಿಪಡಿಸಿರುವುದು ಸಂತೋಷದ ಸಂಗತಿ. ಬೇರುಮಟ್ಟದ ಆಡಳಿತ ವ್ಯವಸ್ಥೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಗೆ ಹಾಗೂ ನಿರ್ದಿಷ್ಟ ಬದಲಾವಣೆಗಳಿಗೆ ಸದವಕಾಶ ಸಿಕ್ಕಂತಾಗಿದೆ. ಆದರೆ ವಾಸ್ತವದಲ್ಲಿ ಪರಿಸ್ಥಿತಿ ಬಹಳ ಭಿನ್ನವಾಗಿದೆ. ಶೇ 50ರಷ್ಷು ಮಹಿಳೆಯರು ಸ್ವತಂತ್ರವಾಗಿ ತಮ್ಮಿಚ್ಛೆಯಂತೆ ಚುನಾವಣೆಯಲ್ಲಿ ಸ್ಪರ್ಧಿಸಿ  ಗೆದ್ದು ಪಂಚಾಯಿತಿಗಳಲ್ಲಿ ಮಹಿಳಾ ಪರವಾದ ನಿಲುವು ಮಂಡಿಸುವ ಹಾಗೂ ಭ್ರಷ್ಟಾಚಾರದ ವಿರುದ್ಧ ಕೆಲಸ ಮಾಡುವಂತಹ ವಾತಾವರಣ ಕಷ್ಟ ಎಂಬಂತಹ ಸ್ಥಿತಿ ಇದೆ.

ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಚುನಾವಣೆಗೆ ಸ್ಪರ್ಧಿಸಬೇಕಾದರೆ ಪತಿ,  ಕುಟುಂಬದ ಇತರ ಪುರುಷರು ಇಲ್ಲವೇ ಸಮುದಾಯದ ಯಾವುದೋ ಪ್ರಭಾವಿ ವ್ಯಕ್ತಿಗಳು/ರಾಜಕಾರಣಿಗಳು  ನೇಮಕ ಮಾಡಬೇಕಾಗಿದೆ. ಇಲ್ಲಿ ಗಮನಾರ್ಹವಾದ ಸಂಗತಿಯೆಂದರೆ, ಸಾಮಾನ್ಯವಾಗಿ ಮಾಜಿ ಸದಸ್ಯರ ಕುಟುಂಬದವರೇ ತಮ್ಮ ತಾಯಿ ಅಥವಾ ಹೆಂಡತಿಯನ್ನು ಸ್ಪರ್ಧೆಗಿಳಿಸಲು ಇನ್ನೊಂದು ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ.

ಮಹಿಳೆಯರ ಅಭಿಪ್ರಾಯ ಅಥವಾ ಇಚ್ಛೆಯನ್ನು ಅರಿತು ಅವರನ್ನು ಚುನಾವಣೆಗೆ ನಿಲ್ಲಿಸುವುದು ಬಹಳ ವಿರಳ. ಹೆಚ್ಚಿನ ಸಂದರ್ಭಗಳಲ್ಲಿ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಅವಕಾಶವೇ ಇಲ್ಲದೆ ಯಾರದೋ  ಹೆಂಡತಿಯಾಗಿ, ಯಾರದೋ ಒತ್ತಡದ ಪ್ರತಿನಿಧಿಯಾಗಿ ಮಹಿಳೆಯರು ಸ್ಪರ್ಧೆಗಿಳಿಯುತ್ತಾರೆ. ಪುರುಷ ಪ್ರಧಾನ ಸಮಾಜದಲ್ಲಿ ಸ್ವ ಅಸ್ತಿತ್ವ ಮಹಿಳೆಯರಿಗೆ ಇನ್ನೂ ದೂರದ ಮಾತು. ಈಗ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಹುತೇಕ ಮಹಿಳೆಯರನ್ನು ಗುರುತಿಸುವುದು ಆಂಜಪ್ಪನ ಹೆಂಡತಿ, ವೆಂಕಟೇಶಪ್ಪನ ಹೆಂಡತಿ ಅಥವಾ ಮಾದಪ್ಪನವರ ಅಮ್ಮ... ಎಂದೇ ಹೊರತು ಮಹಿಳೆಯ ಹೆಸರಿನಿಂದಲ್ಲ.

ಮಹಿಳಾ ಮೀಸಲಾತಿ ಕ್ಷೇತ್ರದಲ್ಲಿ ಸ್ಪರ್ಧಾ ಕಣದಲ್ಲಿರುವ ಮಹಿಳೆಯರ ಸೀಟಿಗೆ ಅವರ ಗಂಡಂದಿರ ಹೆಸರುಗಳು ಚಲಾವಣೆಯಲ್ಲಿರುವುದಕ್ಕೆ ಕಾರಣಗಳು ಬಹಳಷ್ಟಿರಬಹುದು. ಆದಿಕಾಲದಿಂದಲೂ ಪುರುಷರು ಅಧಿಕಾರದ ಅವಕಾಶಗಳನ್ನು ಬಳಸಿಕೊಂಡಿರುವುದು, ವಿಧಾನಸಭೆ ಮತ್ತು ಸಂಸತ್ತುಗಳಲ್ಲಿ ಮಹಿಳೆಯರನ್ನು ಕಡೆಗಣಿಸಿರುವುದು ಮತ್ತು ಈಗಲೂ ಮಹಿಳೆಯನ್ನು ಎರಡನೇ ದರ್ಜೆ  ಪ್ರಜೆಯನ್ನಾಗಿ ನೋಡುವುದು ಮುಂದುವರಿದಿದೆ.

ಇದಕ್ಕೆ ಪೂರಕವೆಂಬಂತೆ ಮಹಿಳೆಯರಿಗೆ ಶಿಕ್ಷಣದ ಕೊರತೆ, ರಾಜಕೀಯ ಅನುಭವದ ಅಭಾವ, ಆಡಳಿತ ವ್ಯವಸ್ಥೆಯ ಬಗ್ಗೆ ಅಜ್ಞಾನ, 

ಹೆಚ್ಚಿನ ಶಿಕ್ಷಣ ಮತ್ತು ತಿಳಿವಳಿಕೆ ಇರುವ ಮಹಿಳೆಯರು ಚುನಾವಣೆಗೆ ಸ್ಪರ್ಧಿಸದಿರುವುದು ಮುಂತಾದ ಕಾರಣಗಳು  ಅಡ್ಡಿಯಾಗಿವೆ. ಪುರುಷರು ಮಾತ್ರ ಈ ಪರಿಸ್ಥಿತಿಯನ್ನು ತಮಗೆ ಉತ್ತಮ ಅವಕಾಶವಾಗಿ ಬಳಸಿಕೊಂಡು ಬಂದಿದ್ದಾರೆ. ವಿಪರ್ಯಾಸವೆಂದರೆ, ಇಂತಹುದೇ ಸ್ಥಿತಿಯಲ್ಲಿರುವ (ಶಿಕ್ಷಣ ಇಲ್ಲದಿರುವುದು, ರಾಜಕೀಯ ಅನುಭವದ ಅಭಾವ, ಆಡಳಿತ ವ್ಯವಸ್ಥೆ ಬಗ್ಗೆ  ಅಜ್ಞಾನ ಇತ್ಯಾದಿ) ಪುರುಷರು ಚುನಾವಣೆಯಲ್ಲಿ ಸ್ಪರ್ಧಿಸಿದಾಗ, ಗೆದ್ದು ಬಂದಾಗ ಅವರ ಬದಲು ಅವರಿಗೆ ನೆರಳಾಗಿ ನಿಂತ ಮಹಿಳೆಯರ ಹೆಸರು ಬಳಸುತ್ತಾರೆಯೇ ಅಥವಾ ಮಹಿಳೆಯರ ಮಧ್ಯಪ್ರವೇಶವನ್ನು ಪುರುಷರು ಒಪ್ಪಿಕೊಳ್ಳುವರೇ? ಇಲ್ಲ.

ಚುನಾವಣೆ ಸ್ಪರ್ಧೆಯ ಹಂತದಲ್ಲೇ ಈ ರೀತಿ ಇದ್ದರೆ, ಇನ್ನು ಗೆದ್ದ ನಂತರದ ಪರಿಸ್ಥಿತಿ ಇನ್ನೊಂದು ಬಗೆಯದು. ಗೆದ್ದ ಮಹಿಳಾ ಅಭ್ಯರ್ಥಿಯನ್ನು ಸ್ವತಂತ್ರವಾಗಿ ಕೆಲಸ ನಿರ್ವಹಿಸಲು ಬಿಡದಿರುವುದು, ಸಭೆಗಳಿಗೆ ಹಿಂಬಾಲಿಸುವುದು, ಮಹಿಳೆಯನ್ನು ಬದಿಗೊತ್ತಿ ತಾನೇ ಸದಸ್ಯನಂತೆ ವ್ಯವಹರಿಸುವುದು, ಹಾಗೇ ಸಮುದಾಯ ಸಹ ಗಂಡಸರನ್ನೇ ಸದಸ್ಯರೆಂಬಂತೆ ಪರಿಗಣಿಸಿ ಎಲ್ಲ ಕಾರ್ಯಕ್ಕೂ ಅವರನ್ನೇ ಸಂಪರ್ಕಿಸುವಂತಹ ಕಾರಣಗಳಿಂದಾಗಿ ಮಹಿಳೆಯರು ಸಮರ್ಥ ನಾಯಕರಾಗಿ ಅಧಿಕಾರ ನಡೆಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ, ಮಹಿಳೆಯರ ಸಾಮರ್ಥ್ಯದ  ಮೇಲೆ ನಂಬಿಕೆ ಹೊಂದದೆ, ಅವರು ಸಂಪೂರ್ಣ ಸ್ವಾತಂತ್ರ್ಯ ಹಾಗೂ ಅಧಿಕಾರವನ್ನು ಅನುಭವಿಸಲು ಬಿಡದಿರುವುದು ವಿಷಾದಕರ.

ಇನ್ನು, ವಾರ್ಡ್‌ ಸಭೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಕಡ್ಡಾಯ  ಮಾಡಬೇಕೆಂದರೆ, ಅವರನ್ನು ಯೋಜನಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿ ಅವರ ಅಭಿಪ್ರಾಯಗಳಿಗೂ ಮನ್ನಣೆ ಸಿಗಬೇಕೆಂದರೆ ಉತ್ತಮ ಸದಸ್ಯರು ಆಯ್ಕೆಯಾಗಬೇಕು. ಅವರು ವಾರ್ಡ್‌ ಸಭೆಗಳ ಗುರುತರ ಮಹತ್ವವನ್ನು ಅರಿತಿರಬೇಕು. ಕಳೆದ 5 ವರ್ಷಗಳ ಅವಧಿಯಲ್ಲಿ ಗ್ರಾಮೀಣ ಪ್ರದೇಶಗಳ ವಾರ್ಡ್‌ ಸಭೆಗಳನ್ನು ಕಡ್ಡಾಯ ಎಂಬ ಕಾರಣಕ್ಕೆ ಆಯೋಜಿಸಿದ್ದರೂ ಅವು ಕಾಟಾಚಾರಕ್ಕೆ ನಡೆದದ್ದೇ ಹೆಚ್ಚು. ಒಂದೇ ದಿನದಲ್ಲಿ 4-5 ಗ್ರಾಮಗಳಲ್ಲಿ ವಾರ್ಡ್‌ ಸಭೆಗಳನ್ನು ಆಯೋಜಿಸುವುದು, ಕಾಲಾವಕಾಶ ಮೊಟಕುಗೊಳಿಸಿ ಕಡಿಮೆ ಅವಧಿಗೆ ಸಭೆ ನಿಗದಿಪಡಿಸುವುದು, ಜನರಿಗೆ ಅನನುಕೂಲವಾಗುವಂತಹ ಸಮಯದಲ್ಲಿ ಸಭೆ ನಿಗದಿಪಡಿಸುವುದು, ಸಂಬಂಧಪಟ್ಟ ಅಧಿಕಾರಿಗಳು ಸಭೆಗೆ ಹಾಜರಾಗದಿರುವುದು... ಹೀಗೆ ಹಲವು ಸಮಸ್ಯೆಗಳಿಂದ ವಾರ್ಡ್‌ ಸಭೆಗಳು ಪ್ರಾಮುಖ್ಯ ಕಳೆದುಕೊಂಡು ಯೋಜನೆಗಳ ಅನುಷ್ಠಾನ ಕುಂಠಿತಗೊಂಡಿದೆ,  ಗ್ರಾಮಗಳ ಅಭಿವೃದ್ಧಿಯಲ್ಲಿ ಸಮುದಾಯದ ಭಾಗವಹಿಸುವಿಕೆ ಕಡಿಮೆಯಾಗಿದೆ.

ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದರೆ ಸದಸ್ಯರಲ್ಲಿ ನಿರಂತರ ಅರಿವು, ತಮ್ಮ ಜವಾಬ್ದಾರಿಯ ಮನವರಿಕೆ, ಮಹಿಳೆಯರಿಗೆ ಚುನಾವಣಾ ಪೂರ್ವ ತರಬೇತಿ, ಮುಖ್ಯವಾಗಿ ಲಿಂಗ ತಾರತಮ್ಯ, ಅಸಮಾನತೆ, ಆಡಳಿತ ವ್ಯವಸ್ಥೆ, ಚುನಾವಣಾ ಪ್ರಕ್ರಿಯೆ ಬಗ್ಗೆ ಆಂದೋಲನದ ರೀತಿಯಲ್ಲಿ ಪ್ರಯತ್ನಗಳು ಸರ್ಕಾರದಿಂದಲೇ ಆಗಬೇಕು.

18 ವರ್ಷ ಮೇಲ್ಪಟ್ಟ ಯುವಜನರನ್ನು ಆಯ್ಕೆ ಮಾಡಿ ಅವರಿಗೆ  ಅಭಿವೃದ್ಧಿ ಹಾಗೂ ಲಿಂಗ ಸಮಾನತೆಯ ಅರಿವು ಮೂಡಿಸಬೇಕು. ಸಮುದಾಯ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ನಾಯಕತ್ವ ಗುಣ ಬೆಳೆಸಬೇಕು. ಆಗ ಭವಿಷ್ಯದಲ್ಲಿ ಉತ್ತಮ ಸದಸ್ಯರು ಆಯ್ಕೆಯಾಗಲು, ಅದರಲ್ಲೂ ಮಹಿಳಾ ಸದಸ್ಯರು ಹೆಚ್ಚು ಬದ್ಧತೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ.

ಚುನಾವಣೆ ಸಮಯದ ಆಯ್ಕೆ ಪ್ರಕ್ರಿಯೆಯಲ್ಲಿ, ಈಗಾಗಲೇ ಮಹಿಳಾ ಸಶಕ್ತತೆಯ ಚೌಕಟ್ಟಿನಲ್ಲಿ ಸಂಘಟಿತರಾದ ಹಾಗೂ ಸ್ವ ಸಹಾಯ ಸಂಘಗಳಲ್ಲಿ ಸದಸ್ಯರಾಗಿರುವ ಮಹಿಳೆಯರ ಬಗ್ಗೆ ಗಮನಹರಿಸಬೇಕಾದುದು ಮತ್ತೊಂದು ಸಕಾರಾತ್ಮಕವಾದ ಅಂಶ. ಈ ಮಹಿಳೆಯರು ಸಮುದಾಯಕ್ಕಾಗಿ ಸಕ್ರಿಯವಾಗಿ ಕೆಲಸ ಮಾಡಿದ ಅನುಭವವುಳ್ಳವರು.

ಈಗಾಗಲೇ ಒಂದು ಸಾಂಸ್ಥಿಕ ವ್ಯವಸ್ಥೆಯ ಒಳಹೊಕ್ಕು ಅರಿವಿರುವವರು. ಇಂತಹ ಹಿನ್ನೆಲೆಯ ಜೊತೆಗೆ ಸಾಮಾಜಿಕ ಕಳಕಳಿಯೂ ಇರುವ ಮಹಿಳೆಯರು ಗೆದ್ದು ಬಂದರೆ ಉತ್ತಮ ಆಡಳಿತ ಕೊಡಲು ಸಮರ್ಥರಾಗುತ್ತಾರೆ.

ವಾಸ್ತವದಲ್ಲಿ ಸಮರ್ಥ ಸ್ವಸಹಾಯ ಸಂಘದ ಮಹಿಳೆಯರ ಆಯ್ಕೆಗೆ ಬಹಳಷ್ಟು ಅಡ್ಡಿಗಳಿವೆ. ತಿಳಿವಳಿಕೆಯಿರುವ, ಪ್ರಶ್ನಿಸುವ ಮನೋಭಾವದ, ಅವಲಂಬನೆಯಿಲ್ಲದೆ ಕೆಲಸ ಮಾಡುವವರಿಗೆ ಈಗ ಪ್ರೋತ್ಸಾಹ ಸಿಗುತ್ತಿಲ್ಲ ಮತ್ತು ಮುಖಂಡರು ಅವರ ಆಯ್ಕೆಯನ್ನು ಬಯಸುತ್ತಿಲ್ಲ. ಕಾರಣ ತಮ್ಮ ಅಧಿಕಾರ ಹಾಗೂ ಅವ್ಯವಹಾರಗಳನ್ನು ಅವರು ಪ್ರಶ್ನಿಸಬಹುದು ಎಂಬ ಭಯ ಜೊತೆಗೆ ಅಭದ್ರತೆ. ಹೀಗಾಗಿ ಸಮರ್ಥ ಮಹಿಳೆಯರು ಆರಿಸಿ ಬಾರದಂತೆ ತಡೆಯಲು ಮತದಾರರಿಗೆ ಎಲ್ಲ ಆಮಿಷಗಳನ್ನೂ ಒಡ್ಡುವ ಪ್ರಯತ್ನ ಬಲವಾಗಿ ನಡೆಯತ್ತಿದೆ.

ಬಹುತೇಕ ನಾಯಕರು ಅಪಮೌಲ್ಯಗಳನ್ನು ಉತ್ತೇಜಿಸಿ ವೈಭವೀಕರಿಸುವುದರಿಂದ ಸಾಮಾನ್ಯ ಜನರಿಗೆ ಒಳಿತು-ಕೆಡುಕುಗಳ ವ್ಯತ್ಯಾಸ ತಿಳಿಯದಂತಾಗಿದೆ. ಈ ಪರಿಸ್ಥಿತಿ ಪ್ರಜಾ ಸಾರ್ವಭೌಮತ್ವದ ಬುನಾದಿಗೆ ಧಕ್ಕೆ ತರುವಂತಿದೆ. ಹೆಚ್ಚಿನ ಮತದಾರರು ಅಲ್ಪಕಾಲಿಕ ಆಸೆಗಳಿಗೆ ಆಕರ್ಷಿತರಾಗಿ ದೀರ್ಘಕಾಲದ ಅಭಿವೃದ್ಧಿಯ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳುತ್ತಿರುವುದು ಅಭಿವೃದ್ಧಿಗೆ ಮಾರಕ.

ಮುಖ್ಯವಾಗಿ ಇಂದಿನ ಯುವಜನ ಎಚ್ಚೆತ್ತು ಒಳಿತು-ಕೆಡಕುಗಳ ಬಗ್ಗೆ ಚಿಂತಿಸಬೇಕಾಗಿದೆ. ಅವರು ಜಾಗೃತರಾದರೆ ವ್ಯವಸ್ಥೆಯಲ್ಲಿ ಸಕಾರಾತ್ಮಕ ಬದಲಾವಣೆ ಕಾಣಬಹುದು. ಈ ನಿಟ್ಟಿನಲ್ಲಿ ಯುವಪೀಳಿಗೆಗೆ ಸಾಕಷ್ಟು ಮಾರ್ಗದರ್ಶನ, ಚಿಂತನಾ ಶಿಬಿರಗಳು, ಮೌಲ್ಯಗಳನ್ನು ಒಳಗೊಂಡ ರಾಜಕೀಯ ತಂತ್ರಗಳು, ಮಾದರಿ ನಾಯಕತ್ವ (ಗಾಂಧೀಜಿಯವರ ತತ್ವಾದರ್ಶ) ದೊರೆತಲ್ಲಿ, ನಾವು ಕನಸು ಕಾಣುವ ಉತ್ತಮ ಆಡಳಿತ ವ್ಯವಸ್ಥೆಯನ್ನು ತಳಮಟ್ಟದ ಪ್ರಜಾಪ್ರಭುತ್ವ ವ್ಯವಸ್ಥೆಯಿಂದಲೇ ಕಾಣಬಹುದಾಗಿದೆ.

ಚುನಾವಣಾ ಪ್ರಕ್ರಿಯೆಗಳು  ಅವ್ಯವಹಾರ ಹಾಗೂ ಹಣ ಚೆಲ್ಲುವಿಕೆಯಿಂದ ಹೊರತಾಗಿ, ಆಮಿಷಗಳಿಗೆ ಮಾರು ಹೋಗದೆ, ಸ್ವಚ್ಛವಾಗಿ ನಡೆದಲ್ಲಿ ಉತ್ತಮ ಸದಸ್ಯರು ಆಯ್ಕೆಯಾಗುತ್ತಾರೆ. ಇದರಿಂದ ಉತ್ತಮ ಆಡಳಿತ ಸಾಧ್ಯವಾಗಿ, ಒಳ್ಳೆಯ ಕೆಲಸ-ಕಾರ್ಯಗಳು ನಡೆದು ಗ್ರಾಮಾಭಿವೃದ್ಧಿ ಸಾಕಾರಗೊಳ್ಳುತ್ತದೆ. ಮಾದರಿ ಗ್ರಾಮ ಪಂಚಾಯಿತಿಗಳು ರೂಪುಗೊಂಡು, ಗ್ರಾಮ ಸ್ವರಾಜ್ ಆದರ್ಶಗಳನ್ನು ಎತ್ತಿ ಹಿಡಿಯಬಹುದಾಗಿದೆ. 
(ಲೇಖಕಿ ಗ್ರಾಮೀಣ ಮಹಿಳಾ ಒಕ್ಕೂಟದ ಸದಸ್ಯೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT