ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯ ಮುಖಕ್ಕೆ ಉಗಿದ ಚಾಲಕನ ಬಂಧನ

ಆಟೊ ಪ್ರಯಾಣ ದರಕ್ಕೆ ಜಗಳ
Last Updated 21 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕೇಳಿದಷ್ಟು ಪ್ರಯಾಣ ದರ ನೀಡದ ಕಾರಣಕ್ಕೆ ಆಟೊ ಚಾಲಕನೊಬ್ಬ ನನ್ನ ಮುಖಕ್ಕೆ ಉಗಿದು ಅನುಚಿತವಾಗಿ ವರ್ತಿಸಿದ್ದಾನೆ’ ಎಂದು ಆರೋ­ಪಿಸಿ ಸಾಫ್ಟ್‌ವೇರ್‌ ಕಂಪೆನಿ ಉದ್ಯೋಗಿ ರೀನಿ ಬಿಸ್ವಾಸ್ ಎಂಬುವರು ಮಡಿವಾಳ ಠಾಣೆಗೆ ದೂರು ಕೊಟ್ಟಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಅವರು ಪತಿ ಚೌಧರಿ ಜತೆ ಮಡಿವಾಳ ಸಮೀಪದ ಕ್ಯಾಷಿಯರ್‌ ಲೇಔಟ್‌ನಲ್ಲಿ ವಾಸವಾಗಿದ್ದಾರೆ. ಮಾರುತಿ ನಗರದ ಸಾಫ್ಟ್‌ವೇರ್‌ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ ರೀನಿ ಅವರು ಸೆ.18ರ ರಾತ್ರಿ ಕೆಲಸ ಮುಗಿಸಿಕೊಂಡು ಆಟೊದಲ್ಲಿ ಮನೆಗೆ ಹೋಗುವಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಟೊ ಚಾಲಕ ಮಹಮ್ಮದ್‌ ಅಲಿ, ಮಾರುತಿ ನಗರದಿಂದ ಕ್ಯಾಷಿಯರ್‌ ಲೇಔಟ್‌ಗೆ ಕರೆದೊಯ್ಯಲು ₨ 80 ಕೇಳಿದ್ದಾನೆ. ಆಗ ರೀನಿ ಅವರು, ‘ಮೀಟರ್‌ ಚಾಲನೆ ಮಾಡಿ. ಅದಕ್ಕೆ ಅನುಗುಣವಾಗಿ ಪ್ರಯಾಣ ದರ ಕೊಡುತ್ತೇನೆ’ ಎಂದು ಹೇಳಿದ್ದಾರೆ. ನಂತರ ಮೀಟರ್‌ ಚಾಲನೆ ಮಾಡಿ ಅವರನ್ನು ಆಟೊಗೆ ಹತ್ತಿಸಿಕೊಂಡ ಅಲಿ, ಕ್ಯಾಷಿಯರ್‌ ಲೇಔಟ್‌ನ ಬದಲಿಗೆ ಮಾರುತಿ ಲೇಔಟ್‌ನಲ್ಲಿ ಇಳಿಸಿದ್ದಾನೆ. ಇದರಿಂದ ಕೋಪಗೊಂಡ ರೀನಿ ಅವರು ‘ಮೊದಲು ತಿಳಿಸಿದಂತೆ ಕ್ಯಾಷಿಯರ್ ಲೇಔಟ್‌ಗೆ ಕರೆದುಕೊಂಡು ಹೋಗಿ. ಇಲ್ಲದಿದ್ದರೆ, ₨ 20 ಕಡಿಮೆ ಕೊಡುತ್ತೇನೆ’ ಎಂದು ಹೇಳಿದ್ದಾರೆ.

ಈ ವಿಷಯವಾಗಿ ಪರಸ್ಪರರ ನಡುವೆ ವಾಗ್ವಾದ ನಡೆದು ಜಗಳವಾಗಿದೆ. ಆಗ ಅಲಿ, ರೀನಿ ಅವರ ಮುಖಕ್ಕೆ ಉಗಿದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದರಿಂದ ಕೋಪಗೊಂಡ ರೀನಿ ಅವರು ಆತನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಸ್ಥಳೀಯರು, ಜಗಳ ಬಿಡಿಸಿ ಇಬ್ಬರನ್ನೂ ಸಮಾಧಾನ ಪಡಿಸಲು ಯತ್ನಿಸಿದ್ದಾರೆ. ಈ ಹಂತದಲ್ಲಿ ಆತ ಆಟೊದೊಂದಿಗೆ ಪರಾರಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿ ಬಂಧನ: ‘ರೀನಿ ಬಿಸ್ವಾಸ್ ಅವರು ಸೆ.18ರ ರಾತ್ರಿಯೇ ಮಡಿವಾಳ ಠಾಣೆಗೆ ದೂರು ಕೊಟ್ಟಿದ್ದರು. ಅಲ್ಲದೇ, ಆರೋಪಿಯ ಆಟೊ ಮತ್ತು ವಾಹನದ ನೋಂದಣಿ ಸಂಖ್ಯೆಯ (ಕೆಎ–05, ಡಿ–6747) ಛಾಯಾಚಿತ್ರಗಳನ್ನು ತೆಗೆದು ಸಿಬ್ಬಂದಿಗೆ ಒಪ್ಪಿಸಿದ್ದರು. ಆ ನೋಂದಣಿ ಸಂಖ್ಯೆಯನ್ನು ಆಧರಿಸಿ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳ ನೆರವು ಪಡೆದು ಆರೋಪಿ ಮಹಮ್ಮದ್‌ ಅಲಿಯನ್ನು ಪತ್ತೆ ಮಾಡಿ ಬಂಧಿಸಲಾಗಿದೆ’ ಎಂದು ಮಡಿವಾಳ ಉಪ ವಿಭಾಗದ ಎಸಿಪಿ ಡಾ.ಬಿ.ಎಸ್‌.ಶಾಂತಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಅಲಿ, ಟ್ಯಾನರಿ ರಸ್ತೆ ನಿವಾಸಿ. ಆತನ ವಿರುದ್ಧ ಹಲ್ಲೆ ನಡೆಸಿ ಮಹಿಳೆಯ ಗೌರವಕ್ಕೆ ಧಕ್ಕೆ ತಂದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ’ ಎಂದು ಹೇಳಿದ್ದಾರೆ.

ಟ್ವಿಟರ್‌ನಲ್ಲೂ ದೂರು
ಘಟನೆ ಸಂಬಂಧ ರೀನಿ ಅವರು ನಗರ ಪೊಲೀಸ್ ಕಮಿಷನರ್‌ ಎಂ.ಎನ್‌.ರೆಡ್ಡಿ ಅವರಿಗೂ ಟ್ವಿಟರ್‌ ಮೂಲಕ ದೂರು ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT