ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿ ಬಳಗದ ಗೆಲುವಿನ ಓಟ

ಮಿಂಚಿದ ದೋನಿ, ಮೊಹಮ್ಮದ್‌ ಶಮಿ; ವಿಂಡೀಸ್‌ಗೆ ಮತ್ತೊಂದು ಸೋಲು
Last Updated 6 ಮಾರ್ಚ್ 2015, 20:04 IST
ಅಕ್ಷರ ಗಾತ್ರ

ಪರ್ತ್‌: ವಿಶ್ವಕಪ್‌ ಟೂರ್ನಿಯಲ್ಲಿ ಮೊದಲ ಬಾರಿಗೆ ನಿಜವಾದ ಅಗ್ನಿಪರೀಕ್ಷೆ ಎದುರಿಸಿದ ಭಾರತ ತಂಡಕ್ಕೆ ನಾಯಕ ಮಹೇಂದ್ರ ಸಿಂಗ್‌ ದೋನಿ ಆಸರೆಯಾದರು. ಕೊನೆಯಲ್ಲಿ ಎದುರಾದ ಒತ್ತಡವನ್ನು ಮೆಟ್ಟಿನಿಂತ ದೋನಿ (ಅಜೇಯ 45) ಛಲದ ಆಟದ ಮೂಲಕ ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದರು.

ವಾಕಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ವೆಸ್ಟ್‌ ಇಂಡೀಸ್‌ 44.2 ಓವರ್‌ಗಳಲ್ಲಿ 182 ರನ್‌ ಗಳಿಸಿತು. ಭಾರತ ಇನ್ನೂ 10.5 ಓವರ್‌ಗಳು ಇರುವಂತೆಯೇ  ಆರು ವಿಕೆಟ್‌ಗೆ 185 ರನ್‌ ಗಳಿಸಿ ಜಯ ಸಾಧಿಸಿತು. ‘ಬಿ’ ಗುಂಪಿನಲ್ಲಿ ಸತತ ನಾಲ್ಕನೇ ಗೆಲುವು ಪಡೆದ ‘ಮಹಿ’ ಬಳಗ ಎಂಟು ಪಾಯಿಂಟ್‌ಗಳೊಂದಿಗೆ ಎಂಟರಘಟ್ಟ ಪ್ರವೇಶಿಸಿತು.

ಸಿಡಿಯದ ಗೇಲ್‌: ಟಾಸ್‌ ಗೆದ್ದ ವಿಂಡೀಸ್‌ ತಂಡದ ನಾಯಕ ಜಾಸನ್‌ ಹೋಲ್ಡರ್ ಬ್ಯಾಟಿಂಗ್‌ ಆಯ್ದುಕೊಂಡರು. ಅವರ ನಿರ್ಧಾರ ತಲೆಕೆಳಗಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಐದನೇ ಓವರ್‌ನಲ್ಲಿ ಡ್ವೇನ್‌ ಸ್ಮಿತ್‌ (6) ವಿಕೆಟ್‌ ಪಡೆದ ಮೊಹಮ್ಮದ್‌ ಶಮಿ ವಿಂಡೀಸ್‌ಗೆ ಮೊದಲ ಆಘಾತ ನೀಡಿದರು.

ಅಲ್ಪ ಸಮಯದ ಬಳಿಕ ಮರ್ಲಾನ್‌ ಸ್ಯಾಮುಯೆಲ್ಸ್‌ (2) ರನೌಟಾಗಿ ಪೆವಿಲಿಯನ್‌ಗೆ ಮರಳಿದರು. ಒಂದು ರನ್‌ಗೆ ಓಡಲು ಗೇಲ್‌ ನಿರಾಕರಿಸಿದ್ದು ಸ್ಯಾಮುಯೆಲ್ಸ್‌ ಔಟಾಗಲು ಕಾರಣ. ಗೇಲ್‌ ವಿಕೆಟ್‌ ನಡುವಿನ ಓಟಕ್ಕೆ ಗಮನ ನೀಡಲಿಲ್ಲ. ಕೇವಲ ಭರ್ಜರಿ ಹೊಡೆತಗಳಿಗೆ ಮಾತ್ರ ಪ್ರಯತ್ನಿಸುತ್ತಿದ್ದರು. ಮೊಹಮ್ಮದ್‌ ಶಮಿ (35ಕ್ಕೆ 3) ಮತ್ತು ಉಮೇಶ್‌ ಯಾದವ್‌ (42ಕ್ಕೆ 2) ಶಿಸ್ತಿನ ಬೌಲಿಂಗ್‌ ನಡೆಸಿದ ಕಾರಣ ಗೇಲ್‌ಗೆ ರಟ್ಟೆಯರಳಿಸಲು ಆಗಲಿಲ್ಲ.

ಎರಡು ಜೀವದಾನಗಳ ನೆರವು ದೊರೆತರೂ ಅದನ್ನು ಸದುಪಯೋಗಪಡಿಸಿಕೊಳ್ಳಲು ಗೇಲ್‌ (21, 27 ಎಸೆತ, 2 ಬೌಂ, 1 ಸಿ.) ವಿಫಲರಾದರು. ಶಮಿ ಎಸೆದ 9ನೇ ಓವರ್‌ನಲ್ಲಿ ಭರ್ಜರಿ ಹೊಡೆತಕ್ಕೆ ಪ್ರಯತ್ನಿಸಿ ಮೋಹಿತ್‌ಗೆ ಶರ್ಮಗೆ ಕ್ಯಾಚ್‌ ನೀಡಿ ಔಟಾದರು.
ಆ ಬಳಿಕ ವಿಂಡೀಸ್‌ ಬ್ಯಾಟ್ಸ್‌ಮನ್‌ಗಳ ‘ಪೆವಿಲಿಯನ್‌ ಪೆರೇಡ್‌’ ನಡೆಯಿತು. ದಿನೇಶ್‌ ರಾಮ್ದಿನ್‌ ಮೊದಲ ಎಸೆತದಲ್ಲೇ ಉಮೇಶ್ ಯಾದವ್‌ಗೆ ಕ್ಲೀನ್‌ಬೌಲ್ಡ್‌ ಆದರು. ಲೆಂಡ್ಲ್‌ ಸಿಮನ್ಸ್‌ 22 ಎಸೆತಗಳನ್ನು ಎದುರಿಸಿ ಗಳಿಸಿದ್ದು ಕೇವಲ 9 ರನ್‌.

124 ರನ್‌ ಗಳಿಸುವಷ್ಟರಲ್ಲಿ ಈ ತಂಡದ ಎಂಟು ವಿಕೆಟ್‌ಗಳು ಬಿದ್ದವು. ನಾಯಕ ಹೋಲ್ಡರ್‌ (57, 64 ಎಸೆತ, 4 ಬೌಂ, 3 ಸಿ.) ಕೊನೆಯಲ್ಲಿ ಅಲ್ಪ ಹೋರಾಡಿದ್ದರಿಂದ ವಿಂಡೀಸ್‌ ಮೊತ್ತ 175ರ ಗಡಿ ದಾಟಿತು. ಹೋಲ್ಡರ್‌ ಮತ್ತು ಜೆರೋಮ್‌ ಟೇಲರ್‌ (11) 9ನೇ ವಿಕೆಟ್‌ಗೆ 51 ರನ್‌ ಸೇರಿಸಿದರು.

ಗೆಲುವಿಗೆ ಪರದಾಟ: ಸಣ್ಣ ಗುರಿ ಮುಂದಿದ್ದರೂ ಭಾರತಕ್ಕೆ ಗೆಲುವು ಸುಲಭವಾಗಿ ದೊರೆಯಲಿಲ್ಲ. ಬ್ಯಾಟ್ಸ್‌ಮನ್‌ಗಳು ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಕಠಿಣ ಪರೀಕ್ಷೆ ಎದುರಿಸಿದರು. ವಿಂಡೀಸ್‌ ನೀಡಿದ ಗುರಿ ಭಾರತದ ಬ್ಯಾಟಿಂಗ್‌ ಶಕ್ತಿಯ ಮುಂದೆ ಏನೂ ಅಲ್ಲ ಎಂದು ಭಾವಿಸಲಾಗಿತ್ತು. ಆದರೆ ವಿಂಡೀಸ್‌ ಶಿಸ್ತಿನ ದಾಳಿ ನಡೆಸಿದ ಕಾರಣ ಈ ಮೊತ್ತ ದೊಡ್ಡ ಪರ್ವತದಂತೆ ಕಂಡಿತು.

ಒಂದು ಹಂತದಲ್ಲಿ 78 ರನ್‌ ಗಳಿಸುವಷ್ಟರಲ್ಲಿ ನಾಲ್ಕು ಹಾಗೂ ಆ ಬಳಿಕ 134 ರನ್‌ ಗಳಿಸುವಷ್ಟರಲ್ಲಿ ಆರು ವಿಕೆಟ್‌ ಕಳೆದುಕೊಂಡ ಭಾರತ ಸೋಲಿನ ಆತಂಕ ಎದುರಿಸಿತ್ತು. ಆದರೆ ದೋನಿ (ಅಜೇಯ 45, 56 ಎಸೆತ, 3 ಬೌಂ, 1 ಸಿ.) ಸೂಕ್ತ ಸಮಯದಲ್ಲಿ ತಂಡದ ನೆರವಿಗೆ ನಿಂತರು. ರೋಹಿತ್‌ ಶರ್ಮ (7) ಮತ್ತು ಶಿಖರ್‌ ಧವನ್‌ (9) ಔಟಾದಾಗ ಭಾರತದ ಮೊತ್ತ 20. ಇವರಿಬ್ಬರ ವಿಕೆಟ್‌ ಪಡೆದದ್ದು ಜೆರೋಮ್‌ ಟೇಲರ್‌.

ವಿರಾಟ್‌ ಕೊಹ್ಲಿ (33, 36 ಎಸೆತ, 5 ಬೌಂ) ಮತ್ತು ಅಜಿಂಕ್ಯ ರಹಾನೆ (14, 34 ಎಸೆತ, 2 ಬೌಂ) ಮೂರನೇ ವಿಕೆಟ್‌ಗೆ 43 ರನ್‌ ಸೇರಿಸಿದರು. 15 ರನ್‌ಗಳ ಅಂತರದಲ್ಲಿ ಇವರಿಬ್ಬರು ಔಟಾದ ಕಾರಣ ಭಾರತ ಒತ್ತಡಕ್ಕೆ ಒಳಗಾಯಿತು. ಸುರೇಶ್‌ ರೈನಾ (22, 25 ಎಸೆತ) ಉತ್ತಮ ಆರಂಭ ಪಡೆದರೂ ಅದರ ಪ್ರಯೋಜನ ಪಡೆಯಲಿಲ್ಲ. ರವೀಂದ್ರ ಜಡೇಜ (13, 23 ಎಸೆತ) ಬೇಜವಾಬ್ದಾರಿ ಹೊಡೆತಕ್ಕೆ ಮುಂದಾಗಿ ವಿಕೆಟ್‌ ಒಪ್ಪಿಸಿದರು. ಆ್ಯಂಡ್ರೆ ರಸೆಲ್‌ ಎಸೆತದಲ್ಲಿ ಭುಜದ ಎತ್ತರಕ್ಕೆ ಬಂದ ಚೆಂಡನ್ನು ಜಡೇಜ ಪುಲ್‌ ಮಾಡಿದರು. ಚೆಂಡು ನೇರವಾಗಿ ಸ್ಯಾಮುಯೆಲ್ಸ್‌ ಕೈಸೇರಿತು. 

30ನೇ ಓವರ್‌ನಲ್ಲಿ ಆರನೇ ವಿಕೆಟ್‌ ರೂಪದಲ್ಲಿ ಜಡೇಜ ಔಟಾಗುವಾಗ ಭಾರತದ ಮೊತ್ತ 134. ಈ ಹಂತದಲ್ಲಿ ಇನ್ನೊಂದು ವಿಕೆಟ್‌ ಬಿದ್ದಿದ್ದರೆ ಭಾರತ ಸೋಲಿನ ಹಾದಿ ಹಿಡಿಯುವ ಸಾಧ್ಯತೆಯಿತ್ತು. ಆದರೆ ದೋನಿ ತಂಡಕ್ಕೆ ಆಸೆರೆಯಾದರು. ಹಿಂದಿನ ಪಂದ್ಯಗಳಲ್ಲಿ ರಾಂಚಿಯ ಬ್ಯಾಟ್ಸ್‌ಮನ್‌ ವಿಫಲರಾಗಿದ್ದರು. ಈ ಬಾರಿ ಅವರು ನಿರಾಸೆ ಉಂಟುಮಾಡಲಿಲ್ಲ. ಆರ್‌. ಅಶ್ವಿನ್‌ (16) ಅವರನ್ನು ಕೂಡಿಕೊಂಡು ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಆದರೆ ಭಾರತದ ಮೊದಲ ಮೂರು ಪಂದ್ಯಗಳಿಗೆ ಹೋಲಿಸಿದರೆ ಈ ಗೆಲುವು ಅಷ್ಟೊಂದು ಹೊಳಪಿನಿಂದ ಕೂಡಿರಲಿಲ್ಲ. ಬ್ಯಾಟಿಂಗ್‌ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಫೀಲ್ಡಿಂಗ್‌ ಕೆಟ್ಟದಾಗಿತ್ತು. ಫೀಲ್ಡರ್‌ಗಳು ನಾಲ್ಕು ಕ್ಯಾಚ್‌ಗಳನ್ನು ಕೈಚೆಲ್ಲಿದರು. ಬೌಲಿಂಗ್‌ನಲ್ಲಿ ಶಿಸ್ತು ಕಂಡುಬರಲಿಲ್ಲ. 16 ವೈಡ್‌ಗಳನ್ನು ಎಸೆದರು. ಕೊನೆಯಲ್ಲಿ ಗೆಲುವು ದೊರೆತ ಕಾರಣ ಈ ಎಲ್ಲ ಲೋಪಗಳು ಎದ್ದು ಕಾಣಲಿಲ್ಲ.
ವಿಶ್ವಕಪ್‌ ಟೂರ್ನಿಯಲ್ಲಿ ವಿಂಡೀಸ್‌ ವಿರುದ್ಧ ಭಾರತಕ್ಕೆ ಲಭಿಸಿದ ಸತತ ಮೂರನೇ ಜಯ ಇದು. ಈ ಹಿಂದೆ 1996 ಮತ್ತು 2011ರ ಟೂರ್ನಿಗಳಲ್ಲಿ ಭಾರತ ಗೆಲುವು ಒಲಿಸಿಕೊಂಡಿತ್ತು.

ಗಂಗೂಲಿ ಹಿಂದಿಕ್ಕಿದ ದೋನಿ
ವಿದೇಶಿ ನೆಲದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಭಾರತಕ್ಕೆ ಅತಿಹೆಚ್ಚು ಗೆಲುವುಗಳನ್ನು ತಂದುಕೊಟ್ಟ ನಾಯಕ ಎಂಬ ಗೌರವ ಮಹೇಂದ್ರ ಸಿಂಗ್‌ ದೋನಿ ಅವರಿಗೆ ಒಲಿದಿದೆ.

ವಿಂಡೀಸ್‌ ವಿರುದ್ಧದ ಗೆಲುವು ವಿದೇಶಿ ನೆಲದಲ್ಲಿ ದೋನಿ ನಾಯಕತ್ವದಲ್ಲಿ ಭಾರತಕ್ಕೆ ಲಭಿಸಿದ 59ನೇ ಜಯ ಎನಿಸಿದೆ. ಭಾರತಕ್ಕೆ ಅತಿಹೆಚ್ಚು ಗೆಲುವುಗಳನ್ನು ತಂದುಕೊಟ್ಟ ಗೌರವ ಸೌರವ್‌ ಗಂಗೂಲಿ ಹೆಸರಿನಲ್ಲಿತ್ತು. ಅವರು 58 ಪಂದ್ಯಗಳಲ್ಲಿ ತಂಡವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಿದ್ದರು.

ಸತತ ಎಂಟನೇ ಗೆಲುವು
ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಭಾರತಕ್ಕೆ ಒಲಿದ ಸತತ ಎಂಟನೇ ಗೆಲುವು ಇದು. 2011ರ ವಿಶ್ವಕಪ್‌ನ ಕೊನೆಯ ನಾಲ್ಕು ಪಂದ್ಯಗಳಲ್ಲಿ ಭಾರತ ಜಯ ಸಾಧಿಸಿತ್ತು. ಈ ವಿಶ್ವಕಪ್‌ನ ಮೊದಲ ನಾಲ್ಕೂ ಪಂದ್ಯಗಳಲ್ಲಿ ಗೆಲುವು ಪಡೆದಿದೆ.

2003 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಟೂರ್ನಿಯಲ್ಲಿ ಸೌರವ್‌ ಗಂಗೂಲಿ ನೇತೃತ್ವದಲ್ಲಿ ಭಾರತ ಸತತ ಎಂಟು ಪಂದ್ಯಗಳಲ್ಲಿ ಜಯ ಸಾಧಿಸಿತ್ತು. ಆ ದಾಖಲೆಯನ್ನು ದೋನಿ ಬಳಗ ಸರಿಗಟ್ಟಿದೆ.

ಪ್ಯಾಡ್‌ ಇಲ್ಲದೆ ಆಡಿದ ದೋನಿ
ಪರ್ತ್‌ (ಪಿಟಿಐ): ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ ಅವರ ಬೌಲಿಂಗ್‌ನಲ್ಲಿ ಸಿಲ್ಲಿ ಮಿಡ್‌–ಆಫ್‌ ಬಳಿ  ಬಳಿ ನಿಂತಿದ್ದ ಅಜಿಂಕ್ಯ ರಹಾನೆ ಅವರಿಗೆ ನಾಯಕ ಮಹೇಂದ್ರ ಸಿಂಗ್‌ ದೋನಿ ತಮ್ಮ ಕಾಲಿಗೆ ಕಟ್ಟಿದ್ದ ಪ್ಯಾಡ್‌ ನೀಡಿದ ಅಪರೂಪದ ಘಟನೆ ಶುಕ್ರವಾರ ವೆಸ್ಟ್‌ಇಂಡೀಸ್‌ ಎದುರಿನ ಪಂದ್ಯದಲ್ಲಿ ನಡೆದಿದೆ.

ಓವರ್‌ ಮಧ್ಯದಲ್ಲಿ ಪ್ಯಾಡ್‌ ಪಡೆಯಲು ಅವಕಾಶ ಇಲ್ಲ. ಮಿಡ್‌–ಆಫ್‌ ಬಳಿ ನಿಂತಿದ್ದ ರಹಾನೆ ಅವರಿಗೆ ಚೆಂಡು ಬಡಿಯುವ ಸಾಧ್ಯತೆ ಇತ್ತು. ಆದ್ದರಿಂದ ವಿಕೆಟ್‌ ಕೀಪರ್ ದೋನಿ ಕೆಲವು ಎಸೆತಗಳಿಗಾಗಿ ತಮ್ಮ ಪ್ಯಾಡ್‌ ಅನ್ನು ತೆಗೆದು ರಹಾನೆ ಅವರಿಗೆ ನೀಡಿದರು. ಅಶ್ವಿನ್‌ ಅವರ ಓವರ್‌ ಮುಗಿದ ಬಳಿಕ ಅಂಪೈರ್‌ ರಹಾನೆಗೆ ಪ್ಯಾಡ್‌ ಪಡೆಯಲು ಅನುಮತಿ ನೀಡಿದರು. ಬಳಿಕ ದೋನಿ ತಮ್ಮ ಪ್ಯಾಡ್‌ ಕಟ್ಟಿಕೊಂಡು ಆಟ ಮುಂದುವರಿಸಿದರು.14ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ.

ಭಾರತ ತಂಡಕ್ಕೆ ಮೋದಿ ಅಭಿನಂದನೆ
ನವದೆಹಲಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ವಿಶ್ವಕಪ್‌ ಪಂದ್ಯದಲ್ಲಿ ವೆಸ್ಟ್‌ಇಂಡೀಸ್‌ ಎದುರು ಗೆಲುವು ದಾಖಲಿಸಿದ ಭಾರತ ಕ್ರಿಕೆಟ್‌ ತಂಡವನ್ನು ಅಭಿನಂದಿಸಿದ್ದಾರೆ. ಮುಂದಿನ ಪಂದ್ಯಗಳಲ್ಲೂ ಉತ್ತಮವಾಗಿ ಆಡುವಂತೆ ಮೋದಿ ತಂಡದ ಆಟಗಾರರಿಗೆ ಶುಭ ಹಾರೈಸಿದ್ದಾರೆ. ‘ವೆಸ್ಟ್ಇಂಡೀಸ್ ಎದುರು ಗೆದ್ದ ಭಾರತ ತಂಡದ ಆಟಗಾರರಿಗೆ ನನ್ನ ಅಭಿನಂದನೆಗಳು. ಮುಂದಿನ ಪಂದ್ಯಗಳಲ್ಲೂ ಉತ್ತಮವಾಗಿ ಆಡಿ’ ಎಂದು ಪ್ರಣವ್‌ ಮುಖರ್ಜಿ ಟ್ವೀಟ್‌ ಮಾಡಿದ್ದಾರೆ.

ಬೌಲರ್‌ಗಳ ಆಟ ಮೆಚ್ಚಿದ ದೋನಿ
ಪರ್ತ್‌ (ಪಿಟಿಐ): ಭಾರತ ಕ್ರಿಕೆಟ್‌ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಅವರು ತಂಡದ ಬೌಲರ್‌ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಬೌಲರ್‌ಗಳು ಅತ್ಯುತ್ತಮವಾಗಿ ದಾಳಿ ನಡೆಸಿದರು. ಲೈನ್‌ ಮತ್ತು ಲೆನ್ತ್ ಕಾಪಾಡಿಕೊಳ್ಳುವ ಮೂಲಕ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೇರಿದರು. ವೆಸ್ಟ್‌ಇಂಡೀಸ್‌ ಎದುರಿನ ಆಟ ಸಂತೋಷ ನೀಡಿದೆ’ ಎಂದು ದೋನಿ ಹೇಳಿದ್ದಾರೆ.

‘ವೆಸ್ಟ್‌ಇಂಡೀಸ್‌ ತಂಡಕ್ಕೆ ಬಹುಬೇಗನೆ ಕೆಲವು ವಿಕೆಟ್‌ಗಳನ್ನು ಪಡೆದುಕೊಳ್ಳಲು ಸಾಧ್ಯವಾಯಿತು. ಇದರಿಂದ ನಮ್ಮ ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಗೆ ಟೂರ್ನಿಯಲ್ಲಿ ಮೊದಲ ಬಾರಿ ಪರೀಕ್ಷೆ ಎದುರಾಯಿತು’ ಎಂದು ದೋನಿ ಅಭಿಪ್ರಾಯಪಟ್ಟಿದ್ದಾರೆ.

ಜಡೇಜ ವಿರುದ್ಧ ಅಸಮಾಧಾನ: ಜಡೇಜ ಬ್ಯಾಟಿಂಗ್ ಬಗ್ಗೆ ಅಸಮಾಧಾನಗೊಂಡಿರುವ ದೋನಿ  ‘ಬ್ಯಾಟಿಂಗ್‌ನಲ್ಲಿ ಅವರು ಸುಧಾರಣೆ ಕಂಡುಕೊಳ್ಳಬೇಕು’ ಎಂದು ಹೇಳಿದ್ದಾರೆ. ಆಲ್‌ರೌಂಡರ್‌ ಜಡೇಜ ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್‌ಇಂಡೀಸ್ ಎದುರಿನ ಪಂದ್ಯಗಳಲ್ಲಿ ಕ್ರಮವಾಗಿ 3, 2 ಮತ್ತು 13 ರನ್‌ ಗಳಿಸಿದ್ದಾರೆ. ‘ಜಡೇಜ ಪ್ರತಿಭಾನ್ವಿತ ಆಟಗಾರ. ಮುಂದಿನ ಪಂದ್ಯಗಳಲ್ಲಿ ಅವರು ಖಂಡಿತಾಗಿಯೂ ಸುಧಾರಿತ ಆಟ ಆಡಲಿದ್ದಾರೆ’ ಎಂದು ದೋನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT