ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಂಗೂರು ಸಹಕಾರಿ ಸಂಘ ಸಾಧನೆ

Last Updated 25 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಗಡಿಯಾಚೆ  ಬೆಳೆದು ನಿಂತಿರುವ ‘ಮಹಾ’ ಉದ್ಯಮಗಳು. ಗಡಿಯ ಈಚೆಗೆ ಅಭಿವೃದ್ಧಿ ವಂಚಿತ ಗ್ರಾಮಗಳಲ್ಲಿ ನಿತ್ಯವೂ ದಿನದ ಅಂಬಲಿಗಾಗಿ ಹರಸಾಹಸ ಪಡುವ ಬಡ ಕೂಲಿಕಾರನ ದಯನೀಯ ಸ್ಥಿತಿ. ಉಪಜೀವನಕ್ಕಾಗಿ ಮಹಾರಾಷ್ಟ್ರದತ್ತ ಮುಖ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ.

ಇಂತಹ ಸನ್ನಿವೇಶದಲ್ಲಿ ರಾಜ್ಯದ ಉತ್ತರದ ಭಾಗದಲ್ಲಿ ಹುಟ್ಟಿಕೊಂಡಿರುವ ಸಹಕಾರ ರಂಗದ ಸಂಸ್ಥೆಯೊಂದು ಹಣಕಾಸು ವ್ಯವಹಾರಗಳಲ್ಲಿಯಷ್ಟೇ ತೊಡಗಿಸಿಕೊಂಡು ಲಾಭ ಗಳಿಸುವತ್ತ ಲಕ್ಷ್ಯ ಹರಿಸದೇ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಸುವ ಮೂಲಕ ಜನರನ್ನು ಆರ್ಥಿಕವಾಗಿ ಸಬಲಗೊಳಿಸಲು ಯತ್ನಿಸುತ್ತಿದೆ. ಜೊತೆಗೆ ಸವಿಯಾದ ತಿಂಡಿ ತಿನಿಸುಗಳ ಘಮವನ್ನೂ ನೆರೆಯ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೂ ಪಸರಿಸುತ್ತಿದೆ.

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಗಡಿ ಗ್ರಾಮ ಮಾಂಗೂರದಲ್ಲಿ ಮೂರು ದಶಕಗಳ ಆಚೆ ಯಶವಂತರಾವ್ ಜಾಧವ ಅವರ ನೇತೃತ್ವದಲ್ಲಿ 21 ಸದಸ್ಯರನ್ನು ಒಳಗೊಂಡ ಸಹಕಾರಿ ತತ್ವದ ಶ್ರೀ ಸಾಯಿನಾಥ ಸಹಕಾರ ದೂಧ (ಹಾಲು) ಉತ್ಪಾದಕರ ಸಂಘ ರೂ. 2,100 ಷೇರು ಬಂಡವಾಳದೊಂದಿಗೆ ಹುಟ್ಟಿಕೊಂಡಿತು. ಇಂದು ರೂ. 6.39 ಲಕ್ಷಕ್ಕೂ ಅಧಿಕ ಷೇರು ಬಂಡವಾಳ ದೊಂದಿಗೆ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಉದ್ಯೋಗ ಸೃಷ್ಟಿಸಿದೆ.

3 ರಾಜ್ಯಗಳಲ್ಲಿ ಮಾರುಕಟ್ಟೆ
ಘಟಕದಲ್ಲಿ ನಿತ್ಯವೂ ಪೋಗೊ ಮಿಲ್ಕ್‌ ಬ್ರೆಡ್‌, ಬಟರ್ ಪಾವ್, ಖಾರಾ ಬಟರ್, ಕೇಕ್, ಮಿಲ್ಕ್ ಟೋಸ್ಟ್‌, ಬೇಬಿ ಟೋಸ್ಟ್‌, ಲೋನಿ ಬಟರ್, ಖಾರಿ ಮೊದಲಾದ 30 ನಮೂನೆಯ ಬೇಕರಿ ಪದಾರ್ಥಗಳನ್ನು ತಯಾರಿಸಲಾಗುತ್ತಿದೆ. ತಯಾರಾದ ದಿನವೇ 11 ವಾಹನಗಳ ಮೂಲಕ ಮಾರುಕಟ್ಟೆಗೆ ಸರಬರಾಜು ಮಾಡಲಾಗುತ್ತದೆ. ಸಂಸ್ಥೆ ವಿಧಿಸಿರುವ ‘ನೋ ರಿಪ್ಲೇಸ್‌ಮೆಂಟ್‌–ನೋ ಕ್ರೆಡಿಟ್’ ನಿಯಮವು ಉತ್ಪನ್ನಗಳ ಗುಣಮಟ್ಟಕ್ಕೆ ಖಾತರಿ ನೀಡುವಂತಿದೆ.

ರಾಜ್ಯದ ಬೆಳಗಾವಿ, ವಿಜಾಪುರ ಜಿಲ್ಲೆಗಳು, ಮಹಾರಾಷ್ಟ್ರದ ಕೊಲ್ಹಾಪುರ, ಸಾಂಗಲಿ, ಸೊಲ್ಲಾಪುರ, ಸಾತಾರ, ಪುಣೆ, ರತ್ನಗಿರಿ, ಮತ್ತು

ಸಿಂಧ್‌ ದುರ್ಗ ಜಿಲ್ಲೆಗಳು ಹಾಗೂ ನೆರೆಯ ಗೋವಾ ರಾಜ್ಯಕ್ಕೂ ಸಾಯಿ ಸಹಕಾರ ಬ್ರಾಂಡ್‌ ಉತ್ಪನ್ನಗಳು ಸರಬರಾಜು ಆಗುತ್ತವೆ.

ಮಾದರಿ ಸಹಕಾರಿ ಸಂಘ
‘ಮಹಾರಾಷ್ಟ್ರ ಮಾದರಿಯಲ್ಲಿ ಮಾಂಗೂರದಲ್ಲೂ ಒಂದು ಡೇರಿ (ಹಾಲು ಸಂಗ್ರಹಣಾ ಘಟಕ) ಸ್ಥಾಪಿಸಿ ಹಾಲಿಗೆ ಸೂಕ್ತ ಬೆಲೆ ನೀಡುವ ಮೂಲಕ ಕೃಷಿಕರಲ್ಲಿ ಹೈನುಗಾರಿಕೆ ಉತ್ತೇಜಿಸುತ್ತಿದೆ. ಅದರ ಮೂಲಕವೇ ಗ್ರಾಮೀಣ ಭಾಗದಲ್ಲಿನ ನಿರುದ್ಯೋಗ ಸಮಸ್ಯೆಯನ್ನು ತಕ್ಕಮಟ್ಟಿಗೆ ನಿವಾರಿಸಿ ರೈತ ಸಮೂಹದಲ್ಲಿ ಆರ್ಥಿಕ ಚೈತನ್ಯ ಉಂಟು ಮಾಡುತ್ತಿದೆ.

ಸಮಾನ ಮನಸ್ಕರಾದ ದೇವಗೌಡ ಪಾಟೀಲ(ದಿವಂಗತ), ಅಪ್ಪಾ ಮಲಗೊಂಡಾ ಪಾಟೀಲ, ರಾಮು ಕುರಾಡೆ, ಸದಾಶಿವ ಬೋಧಲೆ ಜತೆಗೂಡಿ ಹುಟ್ಟು ಹಾಕಿದ ಸಾಯಿನಾಥ ಸಹಕಾರ ದೂಧ ಉತ್ಪಾದಕರ ಸಂಘ ಇಂದು ಹಾಲಿನ ಮೌಲ್ಯವರ್ಧಿತ ಉತ್ಪನ್ನಗಳೊಂದಿಗೆ ನಾನಾ ಬಗೆಯ ಬೇಕರಿ ಖಾದ್ಯಗಳನ್ನು ತಯಾರಿಸಿ, ಮಾರಾಟ ಮಾಡುವ ಮೂಲಕ ದಿನದಿಂದ ದಿನಕ್ಕೆ ಪ್ರಗತಿಯತ್ತ ದಾಪುಗಾಲು ಹಾಕುತ್ತಿದೆ. ಪ್ರತ್ಯಕ್ಷ, ಪರೋಕ್ಷವಾಗಿ ನೂರಾರು ಕೈಗಳಿಗೆ ಕೆಲಸ ನೀಡಿದೆ ಎಂದು ಸಂಸ್ಥಾಪಕ ಯಶವಂತರಾವ ಜಾಧವ ಹೆಮ್ಮೆಯಿಂದ ಹೇಳುತ್ತಾರೆ.

ಪ್ರಗತಿಯತ್ತ ದಾಪುಗಾಲು
1979ರಲ್ಲಿ ಆರಂಭಗೊಂಡ ಸಂಘವು ಹಾಲು ಸಂಗ್ರಹಣೆ, ಸಣ್ಣ ಪ್ರಮಾಣದ ಬೇಕರಿ ಘಟಕ ಸ್ಥಾಪನೆ ಹೀಗೆ ಹಂತಹಂತವಾಗಿ ಬೆಳೆದು ಬಂದು 1997ರಲ್ಲಿ ರೂ. 1 ಲಕ್ಷ ಬಂಡವಾಳ ತೊಡಗಿಸಿ ಸಣ್ಣ ಪ್ರಮಾಣದಲ್ಲಿ ಬೇಕರಿ ಪದಾರ್ಥಗಳ ಉತ್ಪಾದನಾ ಘಟಕ ಆರಂಭಿಸಿತು. ಆಗ ದಿನಕ್ಕೆ ರೂ. 2,500 ಮೌಲ್ಯದ ಬೇಕರಿ ಪದಾರ್ಥಗಳು ಇಲ್ಲಿ ಮಾರಾಟವಾಗುತ್ತಿದ್ದವು. ಆ ಸಮಯದಲ್ಲಿ ಕೇವಲ 8ರಿಂದ 10 ಕಾರ್ಮಿಕರಷ್ಟೇ ಇದ್ದರು. ಸಂಸ್ಥೆಯ ಸಂಚಾಲಕರೇ ಊರೂರು ಸುತ್ತಾಡಿ ಸಂಘದ ಬೇಕರಿ ಉತ್ಪನ್ನಗಳ ಮಾರಾಟದ ಪ್ರಚಾರ ನಡೆಸುತ್ತಿದ್ದರು. 1998ರಲ್ಲಿ ರೂ. 11 ಲಕ್ಷ ಬಂಡವಾಳ ತೊಡಗಿಸಿ ಓವನ್, ಮಿಕ್ಸರ್‌ ಖರೀದಿ ಮಾಡಿ ಘಟಕವನ್ನು ಆಧುನೀಕರಣಗೊಳಿಸಲಾಯಿತು ಎಂದು  ಸಂಘವು ಪ್ರಗತಿಯ ಹಾದಿಯಲ್ಲಿ ಸಾಗಿ ಬಂದ ಸಂದರ್ಭವನ್ನು ನೆನಪಿಸಿಕೊಳ್ಳುತ್ತಾರೆ ಸಂಸ್ಥೆಯ ರೂವಾರಿ ಪ್ರದೀಪ ಜಾಧವ.

ಸಂಸ್ಥೆಯು ತಯಾರಿಸುವ ಗುಣಮಟ್ಟದ ಬೇಕರಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿದ್ದಂತೆಯೇ ಸಂಸ್ಥೆಯೂ ವರ್ಷದಿಂದ ವರ್ಷಕ್ಕೆ ಪ್ರಗತಿಯತ್ತ ದಾಪುಗಾಲು ಹಾಕಿತು. 2012–13ನೇ ಸಾಲಿನಲ್ಲಿ ನ್ಯಾಷನಲ್ ಕೋ–ಆಪರೇಟಿವ್ ಡೆವಲಪ್‌ಮೆಂಟ್‌ ಕಾರ್ಪೂರೇಶನ್‌ನಿಂದ ರೂ. 89 ಲಕ್ಷ ಆರ್ಥಿಕ ನೆರವಿನೊಂದಿಗೆ ಘಟಕದಲ್ಲಿ ಅತ್ಯಾಧುನಿಕ ತಾಂತ್ರಿಕತೆಯನ್ನು ಅಳವಡಿಸಲಾಗಿದೆ. ವಿಸ್ತರಿತ ಘಟಕದ ಕಟ್ಟಡ ಪೂರ್ಣಗೊಳಿಸಲಾಗಿದೆ. ಘಟಕದಲ್ಲಿ ಸದ್ಯ ಒಟ್ಟು 170 ಕಾರ್ಮಿಕರು ದುಡಿಯುತ್ತಿದ್ದಾರೆ. ಅಲ್ಲದೇ ಪರೋಕ್ಷವಾಗಿ ನೂರಾರು ಕುಟುಂಬಗಳ ಉಪಜೀವನಕ್ಕೆ ಸಂಸ್ಥೆ ಅವಕಾಶ ಮಾಡಿಕೊಟ್ಟಿದೆ.

ಸಂಘವು ಮಾಂಗೂರ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರಿಂದ ಪ್ರತಿದಿನ ಹಾಲು ಸಂಗ್ರಹಿಸಿ, ಅದರಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ, ಮಾರಾಟ ಮಾಡಿ ಹಾಲಿಗೆ ಸೂಕ್ತ ದರ ದೊರಕಿಸಿಕೊಡುತ್ತಿದೆ.

‘ಜೀವನಕ್ಕೆ ಆಸರೆಯಾದ ಬೇಕರಿ’
ತಂದೆ ತೀರಿಕೊಂಡ ನಂತರ ದಿಕ್ಕು ತೋಚದಂತಾಗಿದ್ದ ನನಗೆ ಬೇಕರಿಯಲ್ಲೇ ತರಬೇತಿ ನೀಡಿ ಕೆಲಸಕ್ಕೆ ತೆಗೆದುಕೊಂಡರು. ಈಗ ನನ್ನ ಕುಟುಂಬ ಸ್ವಾವಲಂಬಿಯಾಗಿದೆ. ಜೀವನಮಟ್ಟದ ಸುಧಾರಿಸಿದೆ. ನನ್ನಂತಹ ನೂರಾರು ಜನ ಕೂಲಿಕಾರರಿಗೆ, ಮಹಿಳೆಯರಿಗೆ ಸಂಸ್ಥೆ ಉದ್ಯೋಗ ನೀಡಿದೆ. ಕಷ್ಟದಲ್ಲಿದ್ದಾಗ ಬೈರವನಾಥ ಕೋ–ಆಫ್‌ ಕ್ರೆಡಿಟ್‌ ಸೊಸೈಟಿಯಿಂದ ಹಣಕಾಸಿನ ನೆರವು ನೀಡಲಾಗುತ್ತದೆ. ಸಂಸ್ಥೆ ಮಾಂಗೂರ ಗ್ರಾಮದ ಹೆಮ್ಮೆಯಾಗಿದೆ.
ರಾಜೇಂದ್ರ ಅನ್ನಪ್ಪ ಕುಂಬಾರ, ಬೇಕರಿ ಕಾರ್ಮಿಕ


‘ರಾಜ್ಯ ಸರ್ಕಾರದ ಉತ್ತೇಜನ ಅಗತ್ಯ’
ಸರ್ಕಾರ ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಸಹಕಾರ ರಂಗದ ಇಂತಹ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ಉತ್ತೇಜನ ನೀಡಬೇಕು. ಕಚ್ಚಾ ಪದಾರ್ಥಗಳನ್ನು ರಿಯಾಯಿತಿ ದರದಲ್ಲಿ ಪೂರೈಸಬೇಕು. ಮಾರಾಟ ತೆರಿಗೆಯಲ್ಲಿ ವಿನಾಯಿತಿ ನೀಡಬೇಕು.

ಪ್ರದೀಪ ಯಶವಂತರಾವ ಜಾಧವ, ಸಂಘದ ಪದಾಧಿಕಾರಿ
(ಮೊ: 9448863747)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT