ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಂತ್ರಿಕ ಜಾಮೀಯಾ

Last Updated 7 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಪಕ್ಕದಲ್ಲೇ ಹಂಪಿಯ ವಿಜಯನಗರ ಸಾಮ್ರಾಜ್ಯದ ವೈಭವ ಇದ್ದರೂ ಅದರ ಹಂಗು ತೊರೆದು ಭಾರತದಾದ್ಯಂತ ತನ್ನ ಬಲವನ್ನು ವಿಸ್ತರಿಸಿಕೊಳ್ಳುತ್ತ ತಮ್ಮದೇ ಆದ ಛಾಪು ಮೂಡಿಸಿ ಬೆರಗುಗೊಳಿಸುವಂಥ ಮಸೀದಿ ನಿರ್ಮಿಸಿರುವುದು ಗುಲ್ಬರ್ಗ ಬಹಮನಿ ಆಡಳಿತಗಾರರ ವಿಶೇಷತೆ. ಇದಕ್ಕೆ ಸಾಕ್ಷಿಯಾಗಿ ನಿಂತಿದೆ ಗುಲ್ಬರ್ಗದ ಕೋಟೆ ಒಳಗಿರುವ ಜಾಮೀಯಾ (ಜುಮ್ಮಾ) ಮಸೀದಿ.

ಈ ಕೋಟೆಯನ್ನು ವಾರಂಗಲ್‌ನ ಅರಸ ರಾಜಾ ಗುಲಚಂದ್ ನಿರ್ಮಿಸಿದನೆಂದೂ, ನಂತರ ಅದನ್ನು ಅಲ್ಲಾವುದ್ದೀನ್ ಬಹಮನಿ ಪರಿಷ್ಕರಿಸಿದನು ಎಂಬುದು ಐತಿಹ್ಯ. 3ಕಿ.ಮೀ. ಸುತ್ತಳತೆಯ ಈ ಕೋಟೆ ಸುಮಾರು 20 ಎಕರೆ ಪ್ರದೇಶವನ್ನು ಆಕ್ರಮಿಸಿಕೊಂಡಿದೆ. ಕೋಟೆ ನಿರ್ಮಾಣದಲ್ಲಿ ಪಶ್ಚಿಮ ಏಷ್ಯಾ ಮತ್ತು ಯೂರೋಪ್‌ನ ವಾಸ್ತು ಶಿಲ್ಪದ ಪ್ರಭಾವ ಕಾಣ ಸಿಗುತ್ತದೆ. ಈ ಕೋಟೆಯೊಳಕ್ಕೆ ಇರುವ ಜುಮ್ಮಾ ಮಸೀದಿ ಹಲವು ವಾಸ್ತು ವೈಶಿಷ್ಟ್ಯಗಳಿಂದ ಮಾಂತ್ರಿಕ ಮಸೀದಿ ಎನಿಸಿಕೊಂಡಿದೆ.

ಸ್ಪೇನಿನ ಕಾರ್ಡೋವಾ ಎಂಬಲ್ಲಿರುವ ಮಜೀದ್-ಕರತಬಾ ಎಂಬ ಮಸೀದಿಯ ಮಾದರಿಯಲ್ಲೇ ಗುಲ್ಬರ್ಗದ ಜಾಮೀಯಾ ಮಸೀದಿ ನಿರ್ಮಿಸಲಾಗಿದೆ. ಈ ಮಸೀದಿ ನಿರ್ಮಿಸಲೆಂದೇ ಇರಾನಿನ ರಫಿ ಹಾಗೂ ತುರ್ಕಿ ದೇಶದ ಶಿಲ್ಪಿಗಳನ್ನು 1367ರಲ್ಲಿ ಕರೆತರಲಾಗಿತ್ತು. ಪೂರ್ಣವಾಗಿ ಛಾವಣಿಯಿಂದ ಆವೃತವಾಗಿರುವ ದೇಶದ ಮೊದಲನೆಯ ಮಸೀದಿ ಎಂಬ ಹೆಗ್ಗಳಿಕೆ ಇದಕ್ಕಿದೆ.

ಮಸೀದಿ ವಿಶೇಷತೆ

ಒಳಭಾಗದಲ್ಲಿ 250 ವಿಶೇಷ ಕಮಾನುಗಳಿದ್ದು, ಯಾವ ಕೋನದಿಂದ ನೋಡಿದರೂ ಈ ಕಮಾನು ಒಂದೇ ರೀತಿಯಾಗಿ ಕಾಣಿಸುತ್ತದೆ! ಮೇಲ್ಭಾಗದಲ್ಲಿ 75 ಸಣ್ಣ ಗುಮ್ಮಟ (ಗುಮ್ಮಜ್) ಹಾಗೂ ಐದು ದೊಡ್ಡ ಗುಮ್ಮಟ, ಸುತ್ತಲೂ 27 ತ್ರಿಕೋನಾಕಾರದ ಗುಮ್ಮಟಗಳಿದ್ದು, ಒಟ್ಟೂ 107 ಗುಮ್ಮಟಗಳು ಕಣ್ಮನ ಸೆಳೆಯುತ್ತಿವೆ.

ಮಧ್ಯದ ಗುಮ್ಮಟವು 63 ಅಡಿ ವ್ಯಾಸವನ್ನು ಹೊಂದಿದ್ದು, ಯಾವುದೇ ಆಧಾರಸ್ತಂಭವಿಲ್ಲದೆ ನಿಂತಿದೆ! ಈ ಮಧ್ಯದ ಗುಮ್ಮಟಕ್ಕೆ ‘ಕಿಬಲಾ’ ಎನ್ನಲಾಗುತ್ತದೆ. ಈ ಕಿಬಲಾದಲ್ಲಿ ನಿಂತು ಟೇಶ್-ಇಮಾಮ್ (ಮುಲ್ಲಾಸಾಬ್) ಪ್ರಾರ್ಥನೆ ಸಲ್ಲಿಸುತ್ತಾರೆ. ಧ್ವನಿವರ್ಧಕ ಇಲ್ಲದಿದ್ದರೂ ಈ ಪ್ರಾರ್ಥನೆ ಮಾಡುವುದನ್ನು ಮಸೀದಿಯ ಮೂಲೆಮೂಲೆಗಳಲ್ಲೂ ಕೇಳಿಸುತ್ತದೆ!

ಒಂದು ಬಾರಿಗೆ 11 ಸಾವಿರ ಜನರು ಪ್ರಾರ್ಥನೆ ಮಾಡಬಹುದಾದಷ್ಟು ವಿಶಾಲ ಪ್ರಾಂಗಣವಿದೆ. ಇಲ್ಲಿ ಪ್ರಾರ್ಥನೆ ಮಾಡುವುದು ಮಸೀದಿ ಆಚೆಗೆ ಅಷ್ಟೇ ಸ್ಪಷ್ಟವಾಗಿ ಕೇಳಿಸಿಕೊಳ್ಳಬಹುದಾಗಿದೆ. ಕಿಬಲಾದ ಸುತ್ತ ಅಯಸ್ಕಾಂತೀಯ ಶಕ್ತಿ ಇರುವ ಕಲ್ಲುಗಳನ್ನು ಜೋಡಿಸಿರುವುದು ಇದಕ್ಕೆ ಕಾರಣ ಎನ್ನುವುದು ತಜ್ಞರ ಅಭಿಮತ.

ಮಹಿಳೆಯರಿಗೂ ಪ್ರವೇಶ
ಸಾಮಾನ್ಯವಾಗಿ ಯಾವುದೇ ಮಸೀದಿ ಅಥವಾ ದರ್ಗಾಗಳಲ್ಲಿ ಮಹಿಳೆಯರ ಪ್ರವೇಶ ನಿಷಿದ್ಧ. ಆದರೆ ಇಲ್ಲಿ ಮಹಿಳೆಯರಿಗೂ ಪ್ರವೇಶವಿದೆ ಅದಲ್ಲದೆ ಮಸೀದಿ ಸುತ್ತಲೂ ತಿರುಗಾಡಿ ಅದರ ಸೊಬಗನ್ನು ಸವಿಯಬಹುದು.1367ರಲ್ಲಿ ಬಹಮನಿ ಸಾಮ್ರಾಜ್ಯದ ಪಟ್ಟವನ್ನೇರಿದ ಸುಲ್ತಾನ ಫಿರೋಜ್ ಷಾ ಬಹಮನಿ ಈ ಮಸೀದಿಯನ್ನು ನಿರ್ಮಿಸಿದನೆಂದು, ಈ ಸುಲ್ತಾನ ಸ್ತ್ರೀಯರಿಗೆ ವಿಶೇಷ ಸ್ಥಾನಮಾನ ಗಳನ್ನು ನೀಡಿದ್ದನು ಎನ್ನುತ್ತದೆ ಇತಿಹಾಸ.

ಭಾರತೀಯ ಹಾಗೂ ಪರ್ಷಿಯನ್ (ಇಂಡೋ ಇಸ್ಲಾಮಿಕ್) ವಾಸ್ತು ಶೈಲಿ ಒಳಗೊಂಡಿರುವ ಈ ಮಸೀದಿ 216 ಅಡಿ ಉದ್ದ, 176 ಅಡಿ ಅಗಲ ಇದೆ. 38,016 ಚದರ ಅಡಿ ವಿಸ್ತಾರ ಹೊಂದಿರುವ ಭಾರತದ ಏಕೈಕ ಮಸೀದಿಯೆಂಬ ಹೆಗ್ಗಳಿಕೆ ಇದರದ್ದು.
‘ಭಾರತದಲ್ಲಿ ಈ ಶೈಲಿಯನ್ನು ಹೊಂದಿದ ಅದ್ವಿತೀಯ ಹಾಗೂ ಅನುಪಮ ನಿರ್ಮಾಣಗಳಲ್ಲಿ ಇದೂ ಒಂದು. ಭಾರತದ ಯಾವ ಸ್ಮಾರಕವೂ ಇದಕ್ಕೆ ಸರಿಸಾಟಿಯಿಲ್ಲ’ ಎಂದು ಅಭಿಪ್ರಾಯ ಪಟ್ಟಿದ್ದಾರೆ ಇತಿಹಾಸಕಾರ ಫರ್ಗುಸನ್.

ಮಾಂತ್ರಿಕ ಸ್ಪರ್ಶ ನೀಡಲಾದ ಈ ಮಸೀದಿ ಸ್ಪೇನ್ ಬಿಟ್ಟರೆ ಭಾರತದಲ್ಲಿ ಎಲ್ಲೂ ಇಲ್ಲ. ಅಷ್ಟು ಹಿಂದೆಯೇ ಮಸೀದಿ ಮತ್ತು ಕೋಟೆಯ ರಕ್ಷಣೆಗಾಗಿಯೇ ನೀರಿನ ಕಾಲುವೆ ನಿರ್ಮಿಸಲಾಗಿದೆ. ಇಡೀ ಕೋಟೆಗೆ ಕವಚ ಎನಿಸುವಂತೆ ಆರು ಗೋಪುರಗಳ ಜೊತೆ 40 ಚದರ ಅಡಿ ವಿಶಾಲ ಗೋಪುರ ಸ್ಮಾರಕದ ಸೊಬಗನ್ನು ಹೆಚ್ಚಿಸಿದೆ.

ಅದ್ವಿತೀಯ ಸ್ಮಾರಕವಾದ ಜುಮ್ಮಾ ಮಸೀದಿ, ಆಧುನಿಕ ನಾಗರಿಕತೆಗೆ ಸವಾಲಾಗಿ ನಿಲ್ಲುತ್ತದೆ. ಅಲ್ಲದೆ ದೇಶದ ಕೆಲವೇ ವಿಶಿಷ್ಟ ಸ್ಮಾರಕಗಳಲ್ಲಿ ಇದು ಕೂಡ ಒಂದು ಎಂಬುದರಲ್ಲಿ ಎರಡು ಮಾತಿಲ್ಲ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT