ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಂಸಕ್ಕೊಂದು; ಮೊಟ್ಟೆಗೊಂದು ಕೋಳಿ!

Last Updated 19 ನವೆಂಬರ್ 2014, 19:40 IST
ಅಕ್ಷರ ಗಾತ್ರ

ಬೆಂಗಳೂರು:  ‘ಅದು ಛಾಬ್ರೊ, ಮಾಂಸದ ಕೋಳಿ. ಇಲ್ಲಿದೆ ನೋಡಿ ಕಾವೇರಿ, ಹೆಚ್ಚಿನ ಮೊಟ್ಟೆ ಕೊಡುತ್ತೆ. ಮಾಂಸವೂ ಬೇಕು, ಮೊಟ್ಟೆಯೂ ಬೇಕು ಅನ್ನುವವರಿಗೆ ಅದೋ ಅಲ್ಲಿದೆ ಅಸೀಲ್‌’ –ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಏರ್ಪಡಿಸಿರುವ ಕೃಷಿ ಮೇಳದ ಪ್ರದರ್ಶನದಲ್ಲಿ ಬುಧವಾರ ಹೆಸರುಘಟ್ಟದ ಕೇಂದ್ರೀಯ ಕುಕ್ಕುಟ ಅಭಿವೃದ್ಧಿ ಸಂಸ್ಥೆ ಸಿಬ್ಬಂದಿ ವಿವರಿಸುತ್ತಿದ್ದರು. ದೇಶಿ ತಳಿಯ (ನಾಟಿ) ಕೋಳಿಗಳ ಅಭಿವೃದ್ಧಿಯಲ್ಲಿ ತೊಡಗಿರುವ ಈ ಸಂಸ್ಥೆಯು ಮೂರೂ ತಳಿಗಳ ಮರಿಗಳನ್ನು ಅಭಿವೃದ್ಧಿಪಡಿಸಿ ಮಾರಾಟ ಮಾಡುತ್ತಿದೆ.

‘ಛಾಬ್ರೊ ಕೋಳಿಯ ರುಚಿಯನ್ನು ತಿಂದವರೇ ಬಲ್ಲರು ಸರ್‌. 60 ದಿನದ ಕೋಳಿ ಸರಾಸರಿ 1.7 ಕೆ.ಜಿ. ತೂಗುತ್ತದೆ. ಹಿತ್ತಲಲ್ಲೂ ಈ ಕೋಳಿಗಳನ್ನು ಸಾಕಬಹುದು. ಒಂದು ದಿನದ ಪ್ರತಿ ಮರಿಗೆ ₨ 15 ನಿಗದಿ ಮಾಡಲಾಗಿದೆ. ಬೆಳೆದ ಕೋಳಿ ಸದ್ಯ ಪ್ರತಿ ಕೆ.ಜಿ.ಗೆ ₨ 80ರಂತೆ ಮಾರಾಟ ಆಗುತ್ತಿದೆ’ ಎಂದು ಹೇಳಿದರು.

‘ಕಾವೇರಿ ಕೋಳಿಯನ್ನು ಮೊಟ್ಟೆಗಾಗಿ ಅಭಿವೃದ್ಧಿಪಡಿಸಲಾಗಿದೆ. ಸಾಮಾನ್ಯ ಕೋಳಿ ವರ್ಷಕ್ಕೆ 120 ಮೊಟ್ಟೆ ಇಟ್ಟರೆ ಈ ಕೋಳಿ 180 ಮೊಟ್ಟೆ ಕೊಡುತ್ತದೆ. ರೋಗ ನಿರೋಧಕ ಶಕ್ತಿ­ಯನ್ನೂ ಹೊಂದಿದೆ’ ಎಂದರು.

ಬಾಯಲ್ಲಿ ನೀರೂರಿಸುವ ಬಾತು: ಕೋಳಿಯಂ­ತೆಯೇ ಬಾತುಕೋಳಿಯಲ್ಲೂ ಮಾಂಸ­ಕ್ಕೊಂದು ಹಾಗೂ ಮೊಟ್ಟೆಗೊಂದು ತಳಿಯನ್ನು ಆಮದು ಮಾಡಿಕೊಳ್ಳಲಾಗಿದೆ. ಅಧಿಕ ಮಾಂಸ ನೀಡುವ ‘ವೈಟ್‌ ಪೆಕಿನ್‌’ ತಳಿಯ ಬಾತು ವಿಯಟ್ನಾಂ ದೇಶದಿಂದ ಬಂದಿದೆ. ಮೂಲತಃ ಚೀನಾದ ತಳಿ ಇದಾಗಿದ್ದು, ಹೆಸರಘಟ್ಟ ಕೇಂದ್ರದಲ್ಲಿ ಈ ತಳಿಯ ಮರಿಗಳನ್ನು ಅಭಿವೃದ್ಧಿ ಮಾಡಲಾಗಿದೆ.

‘ಖಾಕಿ ಕ್ಯಾಂಪೆಲ್‌್’ ಎಂಬ ಮತ್ತೊಂದು ತಳಿಯ ಬಾತು ಇಂಗ್ಲೆಂಡ್‌ನಿಂದ ಬಂದಿದೆ. ಇದು ವಾರ್ಷಿಕ 270ರಿಂದ 290 ಮೊಟ್ಟೆಗ­ಳನ್ನು ಕೊಡುತ್ತದೆ. ಒಂದುದಿನದ ಪ್ರತಿ ಮರಿಗೆ ₨ 20 ದರ ನಿಗದಿ ಮಾಡ­ಲಾಗಿದೆ. ಎಲ್ಲ ತಳಿಗಳ ಕೋಳಿ ಹಾಗೂ ಬಾತು­ಗಳನ್ನೂ ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.
ಏಕಕಾಲಕ್ಕೆ 55 ಸಾವಿರ ಮೊಟ್ಟೆಗಳಿಗೆ ಕಾವು ಕೊಟ್ಟು ಮರಿಗಳನ್ನು ಮಾಡುವ ಸ್ವಯಂಚಾಲಿತ ಇನ್‌ಕ್ಯುಬೇಟರ್ ಸೌಲಭ್ಯ ಹೆಸರುಘಟ್ಟ ಕೇಂದ್ರದಲ್ಲಿದೆ. ದೊಡ್ಡ ಪ್ರಮಾಣದಲ್ಲಿ ನಾಟಿ ಕೋಳಿಗಳ ಉತ್ಪಾದನೆಗೆ ಈ ಕೇಂದ್ರ ಶ್ರಮಿಸುತ್ತಿದೆ.

ಕೋಳಿ ಇಲ್ಲವೆ ಬಾತು ಸಾಕಾಣಿಕೆಗೆ ಆಸಕ್ತರು ಸಂಪರ್ಕಿಸಬೇಕಾದ ಸಂಖ್ಯೆ: 080 28466262
ಕೃಷಿ ಮೇಳವಲ್ಲ; ಕೊಳ್ಳುವವರ ಮೇಳ: ಹೆಚ್ಚಾಗಿ ಪಾಲ್ಗೊಳ್ಳಬೇಕು ಎನ್ನುವ ಉದ್ದೇಶದಿಂದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಈ ಸಲ ವಾರದ ದಿನಗಳಲ್ಲಿ ಕೃಷಿ ಮೇಳವನ್ನು ಆಯೋಜಿಸಿದೆ. ಹೀಗಿದ್ದೂ ಮೇಳದ ಮೊದಲ ದಿನ ರೈತರಿಗಿಂತ ನಗರವಾಸಿಗಳೇ ಹೆಚ್ಚಾಗಿ ಕಂಡರು.

ಹಿರಿಯರು ಸಾವಯವ ಬೀಜಗಳ ಪ್ರದ­ರ್ಶನ ಹಾಗೂ ಫಾರ್ಮ್‌ಗಳನ್ನು ನೋಡಲು ಆಸಕ್ತಿ ತಾಳಿದರೆ, ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದ ಕಿರಿಯರು ಪ್ರದರ್ಶನಕ್ಕಿಟ್ಟಿದ್ದ ಮೊಲ, ಕೋಳಿ ಹಾಗೂ ಮೀನುಗಳ ಹೊಸ ತಳಿಗಳನ್ನು ವೀಕ್ಷಿಸಿ ಸಂಭ್ರಮಿಸಿದರು.

ಕೃಷಿ ಸಾಮಗ್ರಿ ಹಾಗೂ ಉಪಕರಣಗ­ಳಿ­ಗಿಂತ ಹೆಚ್ಚಾಗಿ ಆಹಾರ ತಿನಿಸುಗಳ ಮಳಿಗೆಗಳ ಮುಂದೆ ಹೆಚ್ಚಿನ ಜನಸಂದಣಿ ಕಂಡುಬಂತು. ಆಹಾರ ತಿನಿಸು, ಬಟ್ಟೆ, ಬ್ಯಾಗ್‌, ಚಪ್ಪಲಿ ಮತ್ತಿತರ ಮಳಿಗೆಗಳೇ ಹೆಚ್ಚಾಗಿದ್ದವು. ಮೇಳಕ್ಕೆ ಬಂದ ಹಸಿದವರಿಗೆ ರಾಗಿ ಮುದ್ದೆ, ಜೋಳದ ರೊಟ್ಟಿ, ಕರಾವಳಿ ಮೀನಿನ ಖಾದ್ಯದ ಆತಿಥ್ಯ ಕಾದಿತ್ತು. ಕೃಷಿಮೇಳದ ಬದಲು ಅದೊಂದು ಕೊಳ್ಳುವವರ ಮೇಳದಂತೆ ಗೋಚರಿಸಿತು. ಕಳೆದ ಮೇಳಗಳಿಗೆ ಹೋಲಿಸಿದರೆ ಜನರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು.

ರೇಷ್ಮೆಗೂಡಿನಲ್ಲಿ ಅರಳಿದ ಕಲೆ: ಚಿಂತಾಮಣಿ ರೇಷ್ಮೆಕೃಷಿ ಕಾಲೇಜಿನ ಮಳಿಗೆ ಕೂಡ ಮೇಳಕ್ಕೆ ಬಂದವರನ್ನು ಸೆಳೆಯುತ್ತಿತ್ತು. ಖಾಲಿ ರೇಷ್ಮೆಗೂಡಿನಿಂದ ಮಾಡಿದ್ದ ಹೂವಿನಹಾರ, ಅಲಂಕಾರಿಕ ಸಾಮಗ್ರಿಗಳು ಅಲ್ಲಿದ್ದವು.

‘ರೇಷ್ಮೆ ತೆಗೆದ ಮೇಲೆ ಸಿಗುವ ಗೂಡಿನ ಶೇ 2ರಷ್ಟು ಪ್ರಮಾಣ ಮಾತ್ರ ಇಂತಹ ಅಲಂಕಾರಿಕ ಸಾಮಗ್ರಿಗಳನ್ನು ತಯಾರು ಮಾಡಲಾಗುತ್ತಿದೆ. ಮಿಕ್ಕದ್ದನ್ನು ಕಂಬಳಿ ತಯಾರಿಕೆಯಲ್ಲಿ ಬಳಸಲಾಗುತ್ತದೆ’ ಎಂದು ಮಳಿಗೆಯಲ್ಲಿದ್ದ ಕಾಲೇಜಿನ ಪ್ರೊ. ಎಂ ವಿಜಯೇಂದ್ರ ಹೇಳಿದರು.

‘ತಮಿಳರೂ ನಮ್ಮ ಸಹೋದರರೇ; ನೀರಿಗಾಗಿ ಜಗಳ ಸಲ್ಲ’
ಬೆಂಗಳೂರು: ‘ನದಿಗಳ ನೀರು ವ್ಯರ್ಥವಾಗಿ ಸಮುದ್ರದ ಪಾಲಾಗುವುದನ್ನು ತಪ್ಪಿಸಿ ರೈತರ ಹೊಲಗಳಿಗೆ ಹರಿಸಬೇಕಿದೆ. ಕೃಷಿಗೆ ವರ್ಷವಿಡೀ ನೀರು ಸಿಗುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ಯೋಜನೆ ರೂಪಿಸಬೇಕಿದೆ’ ಎಂದು ರಾಜ್ಯಪಾಲ ವಜುಭಾಯ್‌ ವಾಲಾ ಅಭಿಪ್ರಾಯಪಟ್ಟರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಏರ್ಪಡಿಸಿರುವ ಕೃಷಿ ಮೇಳವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ದೇಶದ ಎಲ್ಲ ನದಿಗಳ ಅಣೆಕಟ್ಟೆ­ಗಳಲ್ಲಿ ಸಂಗ್ರಹವಾದ ಪ್ರಮಾಣಕ್ಕಿಂತ ಅಧಿಕ ನೀರು ವ್ಯರ್ಥವಾಗಿ ಸಮುದ್ರದ ಪಾಲಾಗುತ್ತಿದೆ. ಹೀಗಿದ್ದೂ ರಾಜ್ಯಗಳ ನಡುವೆ ನೀರಿಗಾಗಿ ಜಗಳ ನಡೆಯುತ್ತಿದೆ. ಕಾವೇರಿ ನದಿಗೆ ಚೆಕ್‌ಡ್ಯಾಂ ನಿರ್ಮಿಸಲು ತಮಿಳುನಾಡು ತಗಾದೆ ತೆಗೆಯುತ್ತದೆ. ಅಸಹಕಾರದ ಈ ಮನೋವೃತ್ತಿ ಸಲ್ಲ.

ಚೆಕ್‌ಡ್ಯಾಂಗಳು, ಸಮಾನಾಂತರ ಅಣೆಕಟ್ಟೆಗಳನ್ನು ನಿರ್ಮಾಣ ಮಾಡುವ ಮೂಲಕ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ’ ಎಂದು ಹೇಳಿದರು.
‘ತಮಿಳುನಾಡಿನ ಜನರೂ ನಮ್ಮ ಸಹೋದರರೇ. ನೀರಿಗಾಗಿ ಪರಸ್ಪರ ಜಗಳಕ್ಕೆ ಇಳಿಯುವ ಅಗತ್ಯವಿಲ್ಲ. ಅವರಿಗೂ ನೀರು ಕೊಡಬೇಕು. ಜತೆಗೆ ನಮ್ಮ ಪಾಲನ್ನೂ ಉಪಯೋಗಿಸಬೇಕು’ ಎಂದು ಸಲಹೆ ನೀಡಿದರು. ‘ದೇಶದಲ್ಲಿ ವಿದ್ಯುತ್‌ ಪೂರೈಕೆ ಜಾಲ ಇರುವಂತೆ ನೀರಿನ ಸಂಪರ್ಕ ಜಾಲವನ್ನೂ ಅಭಿವೃದ್ಧಿಪಡಿಸಿ ಕೊರತೆ ಇರುವಲ್ಲಿ ಪೂರೈಕೆ ಮಾಡುವ ವ್ಯವಸ್ಥೆ ಆಗಬೇಕು’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT