ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಂಸ ಸೇವನೆ ಮತ್ತು ಕರ್ಮಠತನ

Last Updated 5 ಮೇ 2016, 19:30 IST
ಅಕ್ಷರ ಗಾತ್ರ

ಧರ್ಮದ ಹೆಸರಿನಲ್ಲಿ ನಡೆದ ಪ್ರಾಣಿ ವಧೆ ಖಂಡನೆಗೆ ಒಳಗಾಗದೆ, ಬ್ರಾಹ್ಮಣರು ಮಾಂಸ ಸೇವಿಸಿದರು ಎನ್ನುವುದೇ ಆಘಾತಕಾರಿ ಸುದ್ದಿಯಾಯಿತು

ಸಂಕೇತಿ ಬ್ರಾಹ್ಮಣರು ಮತ್ತೂರಿನಲ್ಲಿ ಧರ್ಮದ ಹೆಸರಿನಲ್ಲಿ ಯಜ್ಞ ನಡೆಸಿ ಸೋಮರಸ ಕುಡಿದು, ಆಡನ್ನು ಬಲಿ ಕೊಟ್ಟು ಅದರ ಮಾಂಸ ಸೇವಿಸಿದ್ದು ವರದಿಯಾಗಿದೆ (ಪ್ರ.ವಾ., ಮೇ 4).

ಇಲ್ಲಿ ಧರ್ಮದ ಹೆಸರಿನಲ್ಲಿ ನಡೆದ ಪ್ರಾಣಿ ವಧೆಯು ಖಂಡನೆಗೆ ಒಳಗಾಗಬೇಕಿತ್ತು ಮತ್ತು ನ್ಯಾಯಸಮ್ಮತವಾದ ಈ ಬ್ರಾಹ್ಮಣರ ಮಾಂಸ ಸೇವನೆಯನ್ನು ಸಹಜವಾಗಿಯೇ ಪರಿಗಣಿಸಬೇಕಾಗಿತ್ತು. ಆದರೆ ಗ್ರಾಮ ಹಬ್ಬಗಳಲ್ಲಿ ಶೂದ್ರರು ನಡೆಸುವ ಕುರಿ, ಕೋಳಿಗಳ ಬಲಿಯನ್ನು ಸದಾ ಖಂಡಿಸುವ ಮೇಲ್ಜಾತಿ, ಮೇಲ್ವರ್ಗಗಳು ಮತ್ತು ಮಾಧ್ಯಮಗಳು ಧರ್ಮದ ಹೆಸರಿನಲ್ಲಿ, ದೇವರ ಹೆಸರಿನಲ್ಲಿ ಈ ಬ್ರಾಹ್ಮಣರು ನಡೆಸಿದ ಪ್ರಾಣಿ ವಧೆಯನ್ನು ಖಂಡಿಸಲಿಲ್ಲ.

ಬದಲಾಗಿ ತಮಾಷೆಯೆಂದರೆ, ಬ್ರಾಹ್ಮಣರು ಮಾಂಸ ಸೇವಿಸಿದರು ಎನ್ನುವುದೇ ಒಂದು ಆಘಾತಕಾರಿ ಸುದ್ದಿಯಾಗಿ ಚರ್ಚೆಗೊಳಪಟ್ಟಿತು. ಇದು ದೇಶದ ಮನಸ್ಥಿತಿ ಇನ್ನೂ ವರ್ಣಾಶ್ರಮದಲ್ಲೇ ಸ್ಥಗಿತಗೊಂಡಿರುವುದನ್ನು ಸಾಬೀತುಪಡಿಸುತ್ತದೆ.

18ನೇ ಶತಮಾನದಿಂದೀಚೆಗೆ ಮಾಂಸಾಹಾರ ಮತ್ತು ಗೋಮಾಂಸ ಸೇವನೆ ಬ್ರಾಹ್ಮಣರ ಆಹಾರದ ಮೆನುವಿನಿಂದ ಜಾರಿ ಅಸ್ಪೃಶ್ಯರ ಮೆನುವಾಗಿ ಬದಲಾಗುವ ಕಥನವನ್ನು ಬಹಳ ಚಾಣಾಕ್ಷತನದಿಂದ ಕಟ್ಟಿ ಬೆಳೆಸಿರುವ ಬ್ರಾಹ್ಮಣ ಸಮುದಾಯ ಇಂದು ತಮ್ಮನ್ನು ‘ಅಪ್ಪಟ ಸಸ್ಯಾಹಾರಿಗಳು’ ಎಂದು ಬಿಂಬಿಸಿಕೊಂಡು, ಅದನ್ನೊಂದು ಪಾವಿತ್ರ್ಯದ ಸಂಕೇತವಾಗಿ ಎಲ್ಲೆಡೆ ಹಬ್ಬಿಸುತ್ತಿದೆ. ಇದು ಅವರ ಜಾತೀಯತೆಯನ್ನು ಮತ್ತು ಸನಾತನವಾದ ಬ್ರಾಹ್ಮಣ್ಯದ ಕರ್ಮಠತನವನ್ನು ತೋರಿಸುತ್ತದೆ.

ಬ್ರಾಹ್ಮಣರ ಈ ಪಾವಿತ್ರ್ಯದ ಪುರೋಹಿತಶಾಹಿ ಧೋರಣೆಯನ್ನು ವ್ಯವಸ್ಥೆಯ ಭಾಗವಾಗಿ ಬಿಂಬಿಸಲು ತಳ ಸಮುದಾಯಗಳು ಮತ್ತು ಮುಸ್ಲಿಮರನ್ನು ಬಲಿಪಶುಗಳಾಗಿ ಬಳಸಿಕೊಳ್ಳಲಾಯಿತು.

ಇದರ ಅಪಾಯಕಾರಿ ಧೋರಣೆಗಳನ್ನು ಅರಿಯದ ಗಾಂಧೀಜಿ ‘ನಾನು ಸನಾತನವಾದಿ ಹಿಂದೂ, ನಾನು ಸಸ್ಯಾಹಾರಿ’ ಎಂದು ಪ್ರಚಾರ ಮಾಡುತ್ತಿದ್ದಾಗ, ಅಂಬೇಡ್ಕರ್ ಅವರು ಗಾಂಧಿ ಚಿಂತನೆಗಳನ್ನು ಕಟುವಾಗಿ ಟೀಕಿಸುತ್ತಿದ್ದರು. ತಮ್ಮ ಸೈದ್ಧಾಂತಿಕ ನಂಬಿಕೆಯಾದ ‘ಅಹಿಂಸೆ’ಯನ್ನು ಆಹಾರ ಪದ್ಧತಿಯೊಂದಿಗೆ ತಳಕು ಹಾಕಿದ್ದು ಗಾಂಧಿ ಅವರ ಚಿಂತನೆಗಳ ಮಿತಿಯನ್ನು ಸಾಬೀತುಪಡಿಸುತ್ತದೆ.

ವ್ಯಕ್ತಿಗತವಾಗಿ ಹಿಂಸಾತ್ಮಕವಾಗಿ ಬದುಕುವುದು ಅಪರಾಧ, ಆಹಾರಕ್ಕಾಗಿ ನೈಸರ್ಗಿಕ ನಿಯಮವನ್ನು ಪಾಲಿಸುವ ಮಾಂಸಾಹಾರವು ಹಿಂಸೆಯಲ್ಲ ಎನ್ನುವ ತಾತ್ವಿಕತೆಯು ಗಾಂಧಿ ಅವರಿಗೆ ಕಡೆಯವರೆಗೂ ಹೊಳೆಯಲಿಲ್ಲ. ಅಹಿಂಸೆಯೆಂದರೆ ಗಾಯ ಮಾಡುವುದು, ಗಾಸಿಗೊಳಿಸುವುದು ಎನ್ನುವ ನೆಲೆಯಿಂದ ಪ್ರಾರಂಭವಾಗುವ ಗಾಂಧಿ ಅವರ ಈ ಸಿದ್ಧಾಂತಕ್ಕೆ ಕೇವಲ ರಾಜಕೀಯವಾಗಿ ಮಾತ್ರವಲ್ಲ ಸಾಮಾಜಿಕವಾಗಿಯೂ ಹಾದಿ ತಪ್ಪಿಸುವ ಗುಣವಿದೆ.

ಬುದ್ಧ ವಿವರಿಸುವ ದಯೆಯ ಮೂಲಾರ್ಥಗಳಿಗೂ ಗಾಂಧಿ ಅವರ ಅಹಿಂಸೆಯ ಚಿಂತನೆಗಳಿಗೂ ವ್ಯತ್ಯಾಸಗಳಿವೆ. ಆದರೆ, ಭಾರತದ ಜಾತಿ ಪದ್ಧತಿ  ಹಾಗೂ ಇಲ್ಲಿನ ವರ್ಣಾಶ್ರಮದ ಶ್ರೇಣೀಕೃತ ವ್ಯವಸ್ಥೆಯ ಕುರಿತು ಆಳವಾಗಿ ಅಧ್ಯಯನ ಮಾಡಿದ್ದ ಅಂಬೇಡ್ಕರ್ ಅವರಿಗೆ ಅದರ ಕರಾಳತೆಯ ಕುರಿತಾಗಿ ಆತಂಕವಿತ್ತು.

ಈ ಕರಾಳತೆಯ ಕ್ರೌರ್ಯದ ಕೊಡಲಿಯೇಟಿಗೆ ತಳಸಮುದಾಯಗಳು ಬಲಿಯಾಗುತ್ತಿದ್ದುದನ್ನು ಮನಗಂಡ ಅಂಬೇಡ್ಕರ್
ದಶಕಗಳ ಕಾಲ ಈ ಕುರಿತಾಗಿ ಬರೆದರು, ಚಿಂತಿಸಿದರು, ಹೋರಾಟಗಳನ್ನು ನಡೆಸಿದರು.

ಕಡೆಗೆ ಸಂಕೇತಿ ಬ್ರಾಹ್ಮಣರ ಮಾಂಸಾಹಾರ ಸೇವನೆಯ ವಿವಾದಕ್ಕೆ ಬಂದಾಗ, ಇಂದು ಬ್ರಾಹ್ಮಣೀಕರಣಗೊಂಡ ಭಾರತೀಯ ಸಮಾಜವು ‘ಓಹ್ ಇದೇನಿದು ಬ್ರಾಹ್ಮಣರೂ ಮಾಂಸ ತಿಂದರಲ್ಲ’ ಎಂದು ಆಶ್ಚರ್ಯಚಕಿತವಾಗಿ, ಆತಂಕದಿಂದ ಪ್ರತಿಕ್ರಿಯಿಸುತ್ತಿದೆ. 

ಬ್ರಾಹ್ಮಣರು ಧರ್ಮದ ಹೆಸರಿನಲ್ಲಿ ಯಜ್ಞ ನಡೆಸುವುದನ್ನು, ಪ್ರಾಣಿ ವಧೆಯನ್ನು ವಿರೋಧಿಸಿ, ಅವರ ಮಾಂಸಾಹಾರ ಸೇವನೆಯನ್ನು ಸಹಜವಾಗಿಯೇ ಸಮರ್ಥಿಸಬೇಕಾಗಿದ್ದ ಇಲ್ಲಿನ ಸಮಾಜ ವ್ಯತಿರಿಕ್ತವಾಗಿ ವರ್ತಿಸುತ್ತಾ ಬ್ರಾಹ್ಮಣರ ಶ್ರೇಷ್ಠತೆಯನ್ನು ಪುರಸ್ಕರಿಸುತ್ತಿದೆ.

ಮಾಧ್ಯಮಗಳೂ ಅನಗತ್ಯವಾಗಿ ಬ್ರಾಹ್ಮಣ್ಯದ ಪಾವಿತ್ರ್ಯದ ನೆಲೆ ಯಲ್ಲಿಯೇ ಗಿರಕಿ ಹೊಡೆಯುತ್ತಿವೆ. ಇಂತಹ ಶ್ರೇಷ್ಠತೆ, ಪಾವಿತ್ರ್ಯದ ಅಹಂಕಾರ ಮತ್ತು  ಜಾತೀಯತೆಯನ್ನು ವಿರೋಧಿಸಲೇಬೇಕು.
- ಬಿ.ಶ್ರೀಪಾದ ಭಟ್

*

ಇಬ್ಬಗೆ ನೀತಿ ತರವೇ?
ಯಜ್ಞ ಯಾಗಾದಿಗಳನ್ನು ನೋಡಿ ತಿಳಿದವರಿಗೆ ಮತ್ತೂರಿನ ಯಾಗದಲ್ಲಿ ಪಾಲ್ಗೊಂಡಿದ್ದ ಪುರೋಹಿತರ ಕೈಯಲ್ಲಿದ್ದುದು ಯಜ್ಞಕ್ಕೆ ಬಳಸುವ ಸಾಮಗ್ರಿ ಎನ್ನುವುದು ತಿಳಿಯುತ್ತದೆ. ಆದರೆ ಯಜ್ಞ ಯಾಗಾದಿಗಳ ಬಗ್ಗೆ ಅರಿವಿರದವರಿಗೆ ಅದು ಮೇಕೆ ಮಾ೦ಸವೋ ಅಲ್ಲವೋ ಎ೦ದು ಯೋಚಿಸಲು ಸಮಯ ಇರುವುದಿಲ್ಲ. ಅಂತಹವರಿಗೆ ಕಡೆಗೂ ಅದು ಮೇಕೆ ಮಾ೦ಸದ೦ತೆ ಕಾಣುತ್ತದೆ.

ಸೋಮಯಾಗದ ಆಯೋಜಕರ ಪ್ರಕಾರ, ‘ಲೋಕಕಲ್ಯಾಣಾರ್ಥವಾಗಿ ನಡೆಸಿದ ಯಾಗದಲ್ಲಿ ಮೇಕೆ ಬಲಿ ಕೊಟ್ಟಿಲ್ಲ.  ಮಾಧ್ಯಮಗಳು ಈ ವಿಷಯದ ಬಗ್ಗೆ ಅಪಪ್ರಚಾರ ನಡೆಸಿವೆ.

ಇದು ಕೌಟುಂಬಿಕ ಕಾರ್ಯಕ್ರಮ, ಯಾವುದೇ ಪಕ್ಷದ್ದಲ್ಲ. ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ, ಭಯೋತ್ಪಾದನೆ, ಬರಗಾಲದಿಂದ ಮುಕ್ತಿ ಸಿಗಲೆಂದು ಯಾಗ ನಡೆಸಲಾಗಿದೆ’ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ. ಮೇಕೆ ಬಲಿ ನಡೆಯದೆ ಇದ್ದರೂ ಮಾನವೀಯತೆ ತೋರಿಸುವವರಿಗೆ, ದೇಶದಾದ್ಯಂತ ನಡೆಯುವ ಪ್ರಾಣಿಹತ್ಯೆ, ಗೋಹತ್ಯೆಗಳ ಬಗ್ಗೆ ಮಾನವೀಯತೆ ಮೂಡುವುದಿಲ್ಲ. ಇದು ಇಬ್ಬಗೆಯ ನೀತಿ.
- ಮಂಜುನಾಥ್‌ ಕೆ.ಆರ್‌.

*
ಯಾರ ಕಲ್ಯಾಣಕ್ಕಾಗಿ?
ಲೋಕಕಲ್ಯಾಣದ ಹೆಸರಿನಲ್ಲಿ ಸಂಕೇತಿಗಳು ಪಶುಮೇಧ ಯಾಗ ಮಾಡಿದ್ದು ಅಮಾನವೀಯ. ಯಾವ ದೇವರೂ ಹಿಂಸೆ, ಪ್ರಾಣಿ ಬಲಿಯನ್ನು ಅಪೇಕ್ಷಿಸುವುದಿಲ್ಲ. ಇಂಥ ಯಾಗ, ಪೂಜೆ, ಪುನಸ್ಕಾರಗಳಿಂದ ದೇವರನ್ನು ಒಲಿಸಿಕೊಳ್ಳಲಾಗಲಿ  ಲೋಕೋದ್ಧಾರವಾಗಲಿ ಸಾಧ್ಯವಿಲ್ಲ. ಇಂದಿನ ದಿನಗಳಲ್ಲಿಯೂ ಇಂತಹ ಮೌಢ್ಯಾಚರಣೆಗಳು ಎಗ್ಗಿಲ್ಲದೆ ನಡೆಯುತ್ತಿರುವುದು ವಿಷಾದನೀಯ.

ಯಾಗದ ಆಯೋಜಕ ಡಾ.ಸನತ್‌ ಕುಮಾರ್ ಅವರು ‘ಈ ಕುರಿತು ಚರ್ಚೆ ಅನಗತ್ಯ’ ಎನ್ನುವ ಮೂಲಕ ಯಾಗವನ್ನು ಸಮರ್ಥಿಸಿಕೊಂಡಿದ್ದಾರೆ. ಉನ್ನತ ಶಿಕ್ಷಣ ಹೊಂದಿದ ಪ್ರಜ್ಞಾವಂತರೇ ಇಂಥ ಉಡಾಫೆಯ ಹೇಳಿಕೆಗಳನ್ನು ನೀಡಿದರೆ ಅದು ಅವರಲ್ಲಿ ಮನೆ ಮಾಡಿರುವ ಮೌಢ್ಯವನ್ನು ಎತ್ತಿ ತೋರಿಸುತ್ತದೆ.

‘ನಾನು ಒಳ್ಳೆಯವನಾದರೆ ನಾಡೇ ಒಳ್ಳೆಯದು’ ಎಂಬ ಮಾತಿನ ಮರ್ಮವನ್ನು ಅರಿಯದವರು, ಲೋಕಕಲ್ಯಾಣದ ಹೆಸರಿನಲ್ಲಿ ಯಾರ ಕಲ್ಯಾಣಕ್ಕಾಗಿ ಈ ಯಾಗವನ್ನು ಕೈಗೊಂಡಿದ್ದರೋ ಅವರೇ ಬಲ್ಲರು. ಜಾತ್ರೆ, ಉತ್ಸವ, ಯಾಗ, ಕಲ್ಯಾಣಗಳ ಹೆಸರಲ್ಲಿ ಮುಗ್ಧ ಪ್ರಾಣಿಗಳನ್ನು ಬಲಿ ಕೊಡುವ ಪದ್ಧತಿಗೆ ಕೊನೆ ಇಲ್ಲವೇ?
-ಗೌರಿ ಚಂದ್ರಕೇಸರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT