ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಿ ಕಾಲದ ಪ್ರವಾಸಿ ತಾಣಗಳು

Last Updated 8 ಜನವರಿ 2015, 19:30 IST
ಅಕ್ಷರ ಗಾತ್ರ

ಚುಮು ಚುಮು ಚಳಿಯಲ್ಲಿ ಹಬೆಯಾಡುವ ಟೀ ಹೀರುವುದೇ ಸುಖ. ಬೆಳಿಗ್ಗೆ ಬೇಗ ಏಳುವುದಕ್ಕೆ ಸೋಮಾರಿತನ. ಚಳಿಗಾಲದ ಇನ್ನೂ ಒಂದು ವಿಶೇಷವೆಂದರೆ ತುಂಬ ಜನ  ಸುತ್ತಾಡುವುದಕ್ಕೆ ಬೇರೆ ತಾಣಗಳಿಗೆ ಹೋಗುತ್ತಾರೆ. ತಂಪಾದ ಹವಾಮಾನ ಇರುವುದರಿಂದ ಸುತ್ತಾಡಲು ಇದು ಹೇಳಿ ಮಾಡಿಸಿದ ಕಾಲ. ಚಳಿಗಾಲದ ಪ್ರವಾಸ ಎಲ್ಲರ ಮನಸ್ಸಿನಲ್ಲೂ ಹಿಗ್ಗು ಮೂಡಿಸುತ್ತದೆ. ಗೋವಾದ ಕಡಲ ಕಿನಾರೆಯಲ್ಲೋ, ಕೇರಳದ ನದಿ ತಟದ ಮರಳ ರಾಶಿಯಲ್ಲೋ ಮಲಗಿ ಬಿಸಿಲು ಕಾಯಿಸಿಕೊಳ್ಳುವ ಸುಖ ನೆನೆದರೆ ಕೆಲವರಿಗೆ ಪ್ರವಾಸಕ್ಕೆ ಹೋಗಬೇಕೆನ್ನುವ ತುಡಿತ ಹೆಚ್ಚುತ್ತದೆ.

ಇನ್ನೂ ಹೊಸ ವರ್ಷದ ಗುಂಗಿನಲ್ಲಿರುವಾಗಲೇ ಸಂಕ್ರಾಂತಿ ಎದುರಿಗೆ ಬಂದು ನಿಂತಿದೆ. ವರ್ಷದ ಆರಂಭವಾಗಿರುವುದರಿಂದ ಕುಟುಂಬದೊಟ್ಟಿಗೆ ತಮ್ಮಿಷ್ಟದ ಸ್ಥಳಕ್ಕೆ ತೆರಳಿ ಸಂತೋಷದಿಂದ ಕಾಲ ಕಳೆಯುವ ಸಮಯವೂ ಹೌದು. ಒಟ್ಟಾರೆಯಾಗಿ ಚಳಿಗಾಲವೆಂದರೆ ಪ್ರವಾಸ ಪರ್ವಕಾಲ. ಚಳಿಗಾಲದಲ್ಲಿ ತಿರುಗಾಡಬಹುದಾದ ಒಂದಷ್ಟು ಸ್ಥಳಗಳು ಕುರಿತ ಮಾಹಿತಿ ಇಲ್ಲಿವೆ.

ರಾಜಸ್ತಾನ: ಬೇಸಿಗೆ ಕಾಲಕ್ಕಿಂತ ಚಳಿಗಾಲದಲ್ಲಿ ರಾಜಸ್ತಾನಕ್ಕೆ ಭೇಟಿ ನೀಡುವುದು ಸೂಕ್ತ. ಈ ಸಮಯದಲ್ಲಿ ಇಲ್ಲಿ ಹವಾಮಾನ ಮನಸ್ಸಿಗೆ ಆಹ್ಲಾದಕರ ಅನುಭವ ನೀಡುತ್ತದೆ. ರಾಜಸ್ತಾನದ ಪಾರಂಪರಿಕ ಕಟ್ಟಡಗಳ ಸೊಬಗನ್ನು ನೋಡಲು ಚಳಿಗಾಲ ಸೂಕ್ತ. ಒಂಟೆ ಸವಾರಿ ಕೂಡ ಮಾಡಬಹುದು.

ಕೇರಳ: ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ ಕೇರಳ. ಚಳಿಗಾಲದಲ್ಲಿ ಕೇರಳದ ಸೊಬಗು ಇನ್ನಷ್ಟು ಕಣ್ಣಿಗೆ ತಂಪು ನೀಡುತ್ತದೆ. ‘ದೇವರ ಸ್ವಂತ ನಾಡು’ ಎನ್ನುವುದು ಕೇರಳದ ವಿಶೇಷಣ. ಇಲ್ಲಿ ಸಮುದ್ರದ ಕಡಲ ಕಿನಾರೆಗಳ ಸೊಬಗಿನಂತೆ, ಮೋಹಕ ಬೆಟ್ಟಸಾಲುಗಳೂ ಇವೆ. ಹಿನ್ನೀರಿನ ತಾಣಗಳೂ ಚುಂಬಕದಂಥ ಜಲಪಾತಗಳೂ ಇಲ್ಲಿವೆ. ವಿಹಾರಕ್ಕೆ ಹೇಳಿ ಮಾಡಿಸಿದಂತೆ ಕಾಣುವ ಹಿನ್ನೀರು ತಾಣಗಳಂತೂ ಪ್ರವಾಸಿಗರಿಗೆ ಅತ್ಯಂತ ಪ್ರಿಯ.

ಶಿಮ್ಲಾ: ಚಳಿಗಾಲದಲ್ಲಿ ಒಂದಷ್ಟು ರಜೆ ಸಿಕ್ಕರೆ ಶಿಮ್ಲಾಕ್ಕೂ ಭೇಟಿ ನೀಡಬಹುದು. ಇದೊಂದು ಸುಂದರ ಗಿರಿಧಾಮವಾಗಿದ್ದು, ಗಿರಿಧಾಮಗಳ ರಾಣಿ ಎಂದೆ ಖ್ಯಾತಿ ಪಡೆದಿದೆ. ಈ ನಯನ ಮನೋಹರ ಗಿರಿಧಾಮವು ಪ್ರವಾಸಿಗರಿಗೆ ಅತ್ಯಾಕರ್ಷಕ ಸ್ಥಳಗಳನ್ನು ವೀಕ್ಷಿಸುವ ಅವಕಾಶವನ್ನು ಒದಗಿಸುತ್ತದೆ. ಪ್ರವಾಸಿಗರು ಇಲ್ಲಿ ವಿಶಾಲವಾದ ಲಕ್ಕರ್ ಬಜಾರ್ ಮತ್ತು ಸ್ಕ್ಯಾಂಡಲ್ ಪಾಯಿಂಟ್ ಎಂಬ ಸ್ಥಳದಿಂದ ಸುಂದರವಾದ ಪರ್ವತ ಶ್ರೇಣಿ ಮತ್ತು ಕಣಿವೆಗಳ ದೃಶ್ಯವನ್ನು ನೋಡಬಹುದು. ನವಜೋಡಿಗಳಿಗೆ ಮಧುಚಂದ್ರಕ್ಕೂ ಶಿಮ್ಲಾ ಹೇಳಿ ಮಾಡಿಸಿದ ತಾಣ.

ಗೋವಾ: ಕಾಸ್ಮೋಪಾಲಿಟನ್ ಸಂಸ್ಕೃತಿಯ ನಗರ ಎನಿಸಿರುವ ಗೋವಾ ಸುಂದರ ಕಡಲ ತೀರಗಳಿಂದ, ಸಾಹಸಮಯ ಜಲಕ್ರೀಡೆಗಳಿಂದ ಪ್ರವಾಸಿಗರಿಗೂ ಆಪ್ತ; ಸಿನಿಮಾ ಮಂದಿಗಂತೂ ಪರಮಾಪ್ತ. ಅಗ್ಗದ ಮದ್ಯದಿಂದ ಮೋಜು-ಮಸ್ತಿ ಬಯಸುವ ಮಂದಿಗೂ ಇಷ್ಟ. ಚಳಿಗಾಲದ ರಜೆಯಲ್ಲಿ ಮೋಜು ಮಸ್ತಿ ಮಾಡುವವರಿಗೆ ಗೋವಾ ಉತ್ತಮ ತಾಣ. z

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT