ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಮೇಯರ್‌ ವಿರುದ್ಧ ನಿವೇಶನ ಕಬಳಿಕೆ ಆರೋಪ

ಬಿಎಂಟಿಎಫ್‌ನಿಂದ ಪ್ರಕರಣದ ತನಿಖೆ ಶುರು
Last Updated 7 ಜುಲೈ 2015, 19:51 IST
ಅಕ್ಷರ ಗಾತ್ರ

ಬೆಂಗಳೂರು: ಪದ್ಮನಾಭನಗರದಲ್ಲಿ ಸಾರ್ವಜನಿಕರ ಬಳಕೆಗೆ ಮೀಸಲಿರಿಸಿದ್ದ (ಸಿ.ಎ) ನಿವೇಶನವನ್ನು ಅತಿಕ್ರಮಿಸಿದ ಆರೋಪದ ಮೇಲೆ ಬಿಜೆಪಿ ಮುಖಂಡರೂ ಆದ ಮಾಜಿ ಮೇಯರ್‌ ಡಿ. ವೆಂಕಟೇಶಮೂರ್ತಿ ಅವರ ವಿರುದ್ಧ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್‌) ಪ್ರಕರಣವನ್ನು ದಾಖಲಿಸಿಕೊಂಡಿದೆ.

ಪದ್ಮನಾಭನಗರದ ಏಳನೇ ಕ್ರಾಸ್‌ನಲ್ಲಿದ್ದ ಸುಮಾರು 12 ಸಾವಿರ ಚದರ ಅಡಿ ವಿಸ್ತೀರ್ಣದ ಸಿ.ಎ ನಿವೇಶನವನ್ನು ಅತಿಕ್ರಮಿಸಿದ ಆರೋಪ ವೆಂಕಟೇಶಮೂರ್ತಿ ಅವರ ಮೇಲಿದೆ. ಈ ನಿವೇಶನದ ಮಾರುಕಟ್ಟೆ ಮೌಲ್ಯ ₨ 12 ಕೋಟಿ ಎಂದು ಹೇಳಲಾಗಿದೆ.
‘ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಎಚ್‌.ಮುನಿಕೃಷ್ಣ ಎಂಬುವವರು 2013ರಲ್ಲಿ ದೂರು ನೀಡಿದ್ದರು. ಅದರ ಸತ್ಯಾಸತ್ಯತೆ ಪರಿಶೀಲನೆ ನಡೆಸಲಾಗಿದ್ದು, ವೆಂಕಟೇಶಮೂರ್ತಿ ಅವರು ನಿವೇಶನ ಅತಿಕ್ರಮಿಸಿರುವುದು ದೃಢಪಟ್ಟಿದೆ’ ಎಂದು ಬಿಎಂಟಿಎಫ್‌ನ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಟಿ.ಸುನೀಲ್‌ಕುಮಾರ್‌ ತಿಳಿಸಿದರು.

‘ಜಯನಗರ ಹೌಸಿಂಗ್‌ ಸೊಸೈಟಿ ಬಡಾವಣೆ ನಿರ್ಮಾಣ ಮಾಡುವಾಗ ಈ ನಿವೇಶನವನ್ನು ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟಿತ್ತು. ಅದರ ಮಾಲೀಕತ್ವದ ಸಂಬಂಧ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದಿಂದ ಮಾಹಿತಿ ಪಡೆಯಲಾಗಿದ್ದು, ವೆಂಕಟೇಶಮೂರ್ತಿ ಅವರಿಂದಲೂ ವಿವರಣೆ ಕೇಳಲಾಗಿದೆ’ ಎಂದು ಮಾಹಿತಿ ನೀಡಿದರು.

‘ಸಾರ್ವಜನಿಕ ಭೂಮಿಯನ್ನು ಅತಿಕ್ರಮಿಸಿರುವುದು ದೃಢಪಟ್ಟಿದ್ದರಿಂದ ಬಿಡಿಎ ಕಾಯ್ದೆ 32ಎ, 72 ಹಾಗೂ ಐಪಿಸಿ ಸೆಕ್ಷನ್‌ 217 (ಆಸ್ತಿ ಮುಟ್ಟುಗೋಲು ತಡೆಗೆ ಯತ್ನ) ಮತ್ತು 448 (ಅತಿಕ್ರಮ ಪ್ರವೇಶ)ರ ಅಡಿಯಲ್ಲಿ ವೆಂಕಟೇಶಮೂರ್ತಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ವಿವರಿಸಿದರು.

ವೆಂಕಟೇಶಮೂರ್ತಿ ಅವರ ವಿರುದ್ಧ ಪ್ರಕರಣ ದಾಖಲಾಗುತ್ತಿರುವುದು ಇದು ಎರಡನೇ ಸಲ. ಈ ಹಿಂದೆ ತಪ್ಪು ಮಾಹಿತಿ ಕೊಟ್ಟು ಬಗರ್‌ಹುಕುಂ ಭೂಮಿಯನ್ನು ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ವೆಂಕಟೇಶಮೂರ್ತಿ ಮತ್ತು ಅವರ ಪತ್ನಿ ವಿರುದ್ಧ ಪ್ರಕರಣ ದಾಖಲಾಗಿತ್ತು.

ಮದುವೆಯಾಗಿ 12 ವರ್ಷಗಳ ಬಳಿಕವೂ ವೆಂಕಟೇಶಮೂರ್ತಿ ಅವರ ಪತ್ನಿ ಆ ಮಾಹಿತಿ ಮುಚ್ಚಿಟ್ಟು, ಕೆಂಪಣ್ಣ ಅವರ ಪುತ್ರಿ ಎಂಬ ವಿವರವನ್ನಷ್ಟೇ ನೀಡಿ, ಬಗರ್‌ ಹುಕುಂ ಯೋಜನೆ ಮೂಲಕ 4 ಎಕರೆ ಭೂಮಿ ಮಂಜೂರು ಮಾಡಿಸಿಕೊಂಡಿದ್ದ ಆರೋಪ ಎದುರಿಸಿದ್ದರು. ವೆಂಕಟೇಶಮೂರ್ತಿ ಸಹ ಈ ಯೋಜನೆಯ ಫಲಾನುಭವಿಯಾಗಿದ್ದರು. ಒಂದು ಕುಟುಂಬಕ್ಕೆ ಗರಿಷ್ಠ 4 ಎಕರೆ ಭೂಮಿ ಮಂಜೂರು ಮಾಡಲಷ್ಟೇ ಕಾನೂನಿನಲ್ಲಿ ಅವಕಾಶ ಇರುವುದರಿಂದ ಅವರು ಸುಳ್ಳು ಮಾಹಿತಿ ನೀಡಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT