ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತಂಗ ಪ್ರಶಸ್ತಿಗೆ ಕದ್ರಿ ಗೋಪಾಲನಾಥ್

Last Updated 29 ಜನವರಿ 2015, 19:30 IST
ಅಕ್ಷರ ಗಾತ್ರ

ತಮ್ಮ ವಿಶಿಷ್ಟ ಸಂಗೀತ ಸೇವೆಗೆ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದುಕೊಂಡಿರುವ ಕದ್ರಿ ಗೋಪಾಲನಾಥ್ ಅವರ ಮುಡಿಗೆ ಇದೀಗ ಮತ್ತೊಂದು ಪ್ರಶಸ್ತಿಯ ಗರಿ. ಇದೇ ಭಾನುವಾರ ನಗರದ ಚೌಡಯ್ಯ ಸಭಾಂಗಣದಲ್ಲಿ ‘ಸಾಮಗಾನ ಮಾತಂಗ’ ಪ್ರಶಸ್ತಿಯನ್ನು ಸ್ವೀಕರಿಸಲಿರುವ ಡಾ. ಕದ್ರಿ ಗೋಪಾಲನಾಥ್ ಅವರ ಕಲಾ ಸೇವೆ ಅನನ್ಯವಾದುದು.

ಮಂಗಳೂರಿನ ಮೂಲದವರಾದ ಗೋಪಾಲನಾಥ್, ನಾಗಸ್ವರ ವಾದನದಿಂದ ಸಂಗೀತ ಪಾಠವನ್ನು ಪ್ರಾರಂಭಿಸಿದರು. ಒಮ್ಮೆ ಮೈಸೂರು ಅರಮನೆಯಲ್ಲಿ ಸ್ಯಾಕ್ಸೋಫೋನ್ ವಾದನವನ್ನು ಕೇಳಿ ಆಕರ್ಷಿತರಾದರು. ನಂತರ ಆ ವಾದ್ಯವನ್ನು ಕೊಂಡು, ಅಭ್ಯಾಸ ಮಾಡತೊಡಗಿದರು. ತಮ್ಮ ತಂದೆಯಿಂದ ಅಭ್ಯಾಸ ಆರಂಭಿಸಿ, ಗೋಪಾಲಕೃಷ್ಣ ಅಯ್ಯರ್, ಟಿ.ವಿ. ಗೋಪಾಲಕೃಷ್ಣನ್, ಬಾಲಕೃಷ್ಣ ಪಿಳ್ಳೆ ಮುಂತಾದವರಲ್ಲಿ ದಕ್ಷ ಶಿಕ್ಷಣ ಹೊಂದಿ, ಶ್ರದ್ಧೆಯ ಸಾಧನೆಯಿಂದ ದೀರ್ಘ ಸಂಗೀತ ಪಯಣಕ್ಕೆ ಭದ್ರ ಬುನಾದಿ ಹಾಕಿಕೊಂಡರು.

ಫೆ.1, ಭಾನುವಾರ ಚೌಡಯ್ಯ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಡಾ. ಕದ್ರಿ ಗೋಪಾಲನಾಥ್ ಅವರು ಸಾಮಗಾನ ಮಾತಂಗ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಪ್ರಶಸ್ತಿ
ರೂ ಒಂದು ಲಕ್ಷ ನಗದು ಹಾಗೂ ಬೆಳ್ಳಿಯ ಆನೆಗಳನ್ನು ಒಳಗೊಂಡಿದೆ.

1980ರಲ್ಲಿ ಮುಂಬಯಿಯಲ್ಲಿ ನಡೆದ ಜಾಸ್ ಸಂಗೀತೋತ್ಸವದಲ್ಲಿ ಕ್ಯಾಲಿಫೋರ್ನಿಯಾದ ಜಾನ್ ಹ್ಯಾಂಟಿ ಅವರ ಜೊತೆ ಪಾಲ್ಗೊಂಡರು. ಕದ್ರಿ ಅವರಿಗೆ ಅಲ್ಲಿಂದ ಒಂದು ಹೊಸ ಲೋಕ ತೆರೆದಂತಾಯಿತು. ಮುಂದೆ ಪ್ರಪಂಚದ ಪ್ರಖ್ಯಾತ ಕಲಾವಿದರುಗಳೊಡನೆ - ಭಿನ್ನ ವಾದ್ಯಗಳೊಂದಿಗೆ ಜಾಸ್ ಮತ್ತು ಫ್ಯುಶನ್ ಕಾರ್ಯಕ್ರಮ ನೀಡಿದರು. ಪ್ರಾಗ್ ಜಾಸ್ ಫೆಸ್ಟಿವಲ್, ಪ್ಯಾರಿಸ್‌ನ ಮ್ಯೂಸಿಕ್ ಹಾಲೆ ಫೆಸ್ಟಿವಲ್, ಲಂಡನ್‌ನ ಪ್ರೊಂನಾಡೆ ಫೆಸ್ಟಿವಲ್, ಮೆಕ್ಸಿಕೋದ ಸೆರ್‌ವಾನ್ ಟಿನೊ ಫೆಸ್ಟಿವಲ್, ಲ್ಯಾಟ್‌ವಿಯದ ಅಂತರರಾಷ್ಟ್ರೀಯ ಸ್ಯಾಕ್ಸೋಫೋನ್ ಫೆಸ್ಟಿವಲ್ - ಹೀಗೆ ಕದ್ರಿ ಗೋಪಾಲನಾಥ್ ವಾದ್ಯಗಳ ಲೋಕ ದೊಡ್ಡದು.

ನಿರಂತರ ಸುನಾದ
ಡಾ. ಕದ್ರಿ ಗೋಪಾಲನಾಥರ ವಿನಿಕೆಯ ಪ್ರಮುಖ ಲಕ್ಷಣವೆಂದರೆ ಸುನಾದ. ನಿರಂತರ ವಿನಿಕೆ. ಸ್ವಲ್ಪವೂ ಸಪ್ಪೆ ಆಗದ, ಕೊನೆಯವರೆಗೂ ಕಾವಿನಿಂದ ಕೂಡಿದ ಭೋರ್ಗರೆತ. ನಿರೂಪಣೆಯಲ್ಲಿ ಆಹ್ಲಾದಕರ ಹುರುಪು. ಲಯಕಾರಿ ಸ್ವರ ಪ್ರಸ್ತಾರದ ಕಡೆ ಸ್ವಲ್ಪ ಹೆಚ್ಚು ಒಲವು, ರಂಜನೆ. ಸ್ಯಾಕ್ಸೋಫೋನ್ ಒಂದು ವಿದೇಶೀ ವಾದ್ಯ ಎಂಬ ನೆನಪೂ ಬರುವುದಿಲ್ಲ. ನಮ್ಮಲ್ಲೇ ಹಿಂದಿನಿಂದಲೂ ಬಂದ ವಾದ್ಯವೇನೊ  ಎಂದು ಭಾಸವಾಗುವಂತೆ ನುಡಿಸುತ್ತಾರೆ. ವಾದ್ಯದ ಮೇಲೆ ಅವರಿಗೆ ಇರುವ ಪ್ರಭುತ್ವದಿಂದ ಕೈ ಚಳಕ ಸುಲಲಿತವಾಗಿ ಮಿಂಚುತ್ತದೆ. ತಾವೇ ಅನುಭವಿಸಿ ನುಡಿಸುವುದರಿಂದ ಸಾಹಿತ್ಯ ಮೇಲ್ಮೆಗೆ ಬಂದು, ವಾದ್ಯ ಹಾಡುತ್ತಿದೆಯೇನೊ ಎಂದು ಭಾಸವಾಗುತ್ತದೆ.

ಚಿತ್ರರಂಗದಲ್ಲೂ ಪಾದಾರ್ಪಣೆ
ಕೆ. ಬಾಲಚಂದರ್, ಎ.ಆರ್. ರೆಹಮಾನ್ ಮುಂತಾದವರೊಂದಿಗೆ ಸಿನಿಮಾದಲ್ಲೂ ವಾದನ. ಅವರ ಸಿ.ಡಿ.-ಆಲ್ಬಂಗಳು ಅನೇಕ ರಾಷ್ಟ್ರಗಳಲ್ಲಿ ಲಭ್ಯ.

ಮೂರು ಮಕ್ಕಳ ತಂದೆ ಗೋಪಾಲನಾಥ್‌ಗೆ ಹೆಂಡತಿ, ಮಕ್ಕಳು, ಮೊಮ್ಮಕ್ಕಳೊಂದಿಗೆ ಕಾಲ ಕಳೆಯುವುದು ಬಲು ಪ್ರಿಯ. ನಡೆನುಡಿಯಲ್ಲಿ ಬಹು ಸರಳ. ಪದ್ಮಶ್ರೀ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕನಕ ಪುರಂದರ ಪ್ರಶಸ್ತಿ, ಗಾನಕಲಾ ಪರಿಷತ್ತಿನಿಂದ ಗಾನಕಲಾಭೂಷಣ ಹಾಗೂ ವೀಣೆ ಶೇಷಣ್ಣ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಅವರನ್ನು ಅಲಂಕರಿಸಿರುವ ಪ್ರಶಸ್ತಿ-ಪುರಸ್ಕಾರಗಳಲ್ಲಿ ಕೆಲವು. -ಪ್ರೊ. ಮೈಸೂರು ವಿ. ಸುಬ್ರಹ್ಮಣ್ಯ

ಪುರಂದರ ಪ್ರಶಸ್ತಿ
ಇಂದಿ­ರಾನಗರ ಸಂಗೀತ ಸಭೆ ಕೊಡಮಾಡುವ ಪುರಂದರ ಪ್ರಶಸ್ತಿಗೆ ಈ ಬಾರಿ ಎಂ.ಎಸ್. ಶೀಲಾ ಆಯ್ಕೆ ಆಗಿದ್ದಾರೆ. ತಾಯಿ ಎಂ.ಎನ್. ರತ್ನಾ ಅವರ ಪ್ರೋತ್ಸಾಹದೊಂದಿಗೆ ಡಾ. ಆರ್.ಕೆ. ಶ್ರೀಕಂಠನ್ ಅವರ ಮಾರ್ಗದರ್ಶನದಲ್ಲಿ ಸಂಗೀತ ಪಾಠ ಆರಂಭಿಸಿದ ಶೀಲಾ, ಸಂಗೀತ ಸ್ನಾತಕೋತ್ತರ ಪದವಿಯಲ್ಲಿ ಬಂಗಾರದ ಪದಕ ಗಳಿಸಿದ್ದಾರೆ.  ತಮ್ಮ ಮಧುರ ಕಂಠ, ಉತ್ತಮ ಪಾಠಾಂತರ, ಸ್ಪಷ್ಟ ಉಚ್ಚಾರಣೆ ಹಾಗೂ ಭಾವಪೂರ್ಣ ನಿರೂಪಣೆಗಳಿಂದ ಸಹೃದಯರ ಮನ ಗೆದ್ದವರು ಶೀಲಾ.

ಆಕಾಶವಾಣಿಯ ಅತ್ಯುತ್ತಮ ಗಾಯಕಿಯಾದ ಶೀಲಾ ನೃತ್ಯ, ನಾಟಕ, ಟಿ.ವಿ. ಧಾರಾವಾಹಿ­ಗಳಲ್ಲಿಯೂ ಮಿಂಚಿದವರು. ಈವರೆಗೆ ರಾಜ್ಯೋತ್ಸವ ಪ್ರಶಸ್ತಿ, ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ಗಾನಕಲಾ ಪರಿಷತ್ತಿನ ಗಾನಕಲಾಶ್ರೀ ಮತ್ತು ಚೌಡಯ್ಯ ಪ್ರಶಸ್ತಿಗಳು ಸೇರಿದಂತೆ ಅನೇಕ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ. ಇದೀಗ ಪ್ರಸಕ್ತ ಸಾಲಿನ ಪುರಂದರ ಪ್ರಶಸ್ತಿಯು ರೂ. 50 ಸಾವಿರ ನಗದು ಬಹುಮಾನ, ಹಮ್ಮಿಣಿ, ದಾಸರ ಪುತ್ಥಳಿ ಹಾಗೂ ಅಭಿನಂದನಾ ಪತ್ರಿಕೆಗಳನ್ನು ಒಳಗೊಂಡಿದೆ.

ಯುವ ಪುರಸ್ಕಾರ
ಈ ವರ್ಷದಿಂದ ಇಂದಿರಾನಗರದ ಸಂಗೀತ ಸಭೆ ಯುವ ಪುರಸ್ಕಾರವನ್ನು ಆರಂಭಿಸಿದ್ದು, ಪಟ್ಟಾಭಿರಾಮ ಪಂಡಿತ್ ಹಾಗೂ  ಕೆ. ಗಾಯತ್ರಿ ಅವರನ್ನು ಈ ಬಾರಿಯ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಪಟ್ಟಾಭಿರಾಮ ಪಂಡಿತ್ ಅವರು ವಲ್ಲಭಂ ಕಲ್ಯಾಣಸುಂದರಂ ಅವರಲ್ಲಿ ಪಾಠ ಪ್ರಾರಂಭಿಸಿ, ಡಾ. ಎಸ್. ರಾಮನಾಥನ್ ಅವರಲ್ಲಿ ಕೆಲ ಕಾಲ ಅಭ್ಯಾಸ ಮುಂದುವರೆಸಿ, ಪಾಲ್ ಘಾಟ್ ಕೆ.ವಿ. ನಾರಾಯಣಸ್ವಾಮಿ ಅವರಲ್ಲಿ ಪ್ರೌಢ ಶಿಕ್ಷಣ ಪಡೆದಿದ್ದಾರೆ.

ಯುವ ಪ್ರಶಸ್ತಿ ವಿಜೇತೆ ಕೆ. ಗಾಯತ್ರಿ ಅವರು ಸುಗುಣ ಪುರುಶೋತಮನ್ ಅವರಲ್ಲಿ ಸಂಗೀತ ಕಲಿತು, ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT