ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತಾಡಿ ಮಕ್ಕಳೇ... ಮಾತನಾಡಿ

Last Updated 27 ಜೂನ್ 2015, 4:14 IST
ಅಕ್ಷರ ಗಾತ್ರ

ಮತ್ತೊಂದು ಶೈಕ್ಷಣಿಕ ಪರ್ವ ಆರಂಭಗೊಂಡಿದೆ. ಹೆಣ್ಣು ಮಕ್ಕಳ ಪೋಷಕರ ಎದೆ ಬಡಿತವೂ ಹೆಚ್ಚಾದರೆ ಅಚ್ಚರಿಯಿಲ್ಲ.  ಕಳೆದ ವರ್ಷ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಹತ್ತು ವರ್ಷದೊಳಗಿನ ಹೆಣ್ಣು ಮಕ್ಕಳ  ಮೇಲೆ ಶಾಲಾ ಸಿಬ್ಬಂದಿಯಿಂದಲೇ ನಡೆದ ಲೈಂಗಿಕ ಕಿರುಕುಳ ಪ್ರಕರಣಗಳು ಹೆತ್ತವರಲ್ಲಿ ಆತಂಕ ಹುಟ್ಟುಹಾಕಿದ್ದಂತು ನಿಜ. ಮಾಧ್ಯಮಗಳ ಮೂಲಕ ಬಹಿರಂಗಗೊಂಡಿದ್ದು  ಕೆಲವು ಪ್ರಕರಣಗಳಷ್ಟೇ.

ಪೋಷಕರು, ಶಿಕ್ಷಕರು, ಶೋಷಣೆಗೊಳಗಾದ ಮಕ್ಕಳು ಮುಚ್ಚಿಟ್ಟ ಪ್ರಕರಣಗಳು ಇನ್ನೆಷ್ಟಿವೆಯೋ ಗೊತ್ತಿಲ್ಲ. ಮಕ್ಕಳು ತಮಗಾದ ನೋವನ್ನು ಮೊದಲು ಯಾರೊಂದಿಗೆ ಹೇಳಿಕೊಳ್ಳಬೇಕು, ಹೆತ್ತವರು ಸ್ವೀಕರಿಸುವ ರೀತಿ ಹೇಗಿರಬೇಕು, ಶಿಕ್ಷಣದಲ್ಲಿ  ಏನಾದರೂ ಬದಲಾವಣೆ ಸಾಧ್ಯವೇ ಎಂಬ ಬಗ್ಗೆ  ಕಾನೂನು ತಜ್ಞರು, ಮಕ್ಕಳ ಹಕ್ಕುಗಳಿಗಾಗಿ ದುಡಿಯುತ್ತಿರುವವರು ಸಲಹೆ ನೀಡಿದ್ದಾರೆ. ಸಂತ್ರಸ್ತ ಮಗುವಿನ ಪೋಷಕರೊಬ್ಬರು ತಮ್ಮ  ಕಾನೂನು ಹೋರಾಟದ ಅನುಭವವನ್ನು ಹಂಚಿಕೊಂಡಿದ್ದಾರೆ.

ನಮ್ಮನ್ನು ಸಂಪರ್ಕಿಸಿ


ಪೋಕ್ಸೋ ಕಾಯ್ದೆಯಡಿ ರಚನೆಯಾಗಿರುವ  ಮಕ್ಕಳ ಕಲ್ಯಾಣ ಸಮಿತಿ ಶೋಷಣೆ ಗೊಳಗಾದ ಮಗುವಿಗೆ, ಮತ್ತು ಪೋಷಕರಿಗೆ ಎಲ್ಲ ರೀತಿಯ ಸಹಕಾರ ನೀಡುತ್ತದೆ.  ಸರ್ಕಾರದಿಂದಲೇ ನೇಮಕ ಗೊಂಡಿರುವ ಈ ಸಮಿತಿಗೆ  ಮಕ್ಕಳ ಕ್ಷೇತ್ರದಲ್ಲಿ ದುಡಿಯುತ್ತಿರುವ ನಾಲ್ವರು ಸದಸ್ಯರು ಮತ್ತು ಒಬ್ಬ ಅಧ್ಯಕ್ಷರಿರುತ್ತಾರೆ. ಮಗುವಿಗೆ ಕಿರುಕುಳ ಆಗಿರುವುದನ್ನು ಪೋಷಕರಾಗಲಿ, ಅಥವಾ ಪೊಲೀಸರಾಗಲಿ ವಿಷಯ ತಿಳಿದ ಇಪ್ಪತ್ತನಾಲ್ಕು ಗಂಟೆಯೊಳಗೆ ಮಕ್ಕಳ ಕಲ್ಯಾಣ ಸಮಿತಿಗೆ ತಿಳಿಸಬೇಕಾಗುತ್ತದೆ.  ಹೀಗೆ ಪ್ರಕರಣ ದಾಖಲಾದ ನಂತರ ವೈದ್ಯಕೀಯ ತಪಾಸಣೆ, ಪೊಲೀಸು, ಕೋರ್ಟು, ಆಪ್ತ ಸಮಾಲೋಚನೆ ಮುಂತಾದ ಪ್ರಕ್ರಿಯೆ ನಡೆಯುವಾಗ ಬೆಂಬಲ ನೀಡಬಲ್ಲ ಚೈಲ್ಡ್‌ ಸಪೋರ್ಟರ್‌ ಒಬ್ಬರನ್ನು ಸಮಿತಿ ಕಳುಹಿಸಿಕೊಡುತ್ತದೆ.

ಚೈಲ್ಡ್‌ ಸಪೋರ್ಟರ್‌ಗಳ ವಿವರಗಳನ್ನು ಸರ್ಕಾರ, ಪೊಲೀಸ್‌ ಠಾಣೆಗಳಿಗೆ ನೀಡಲಾಗಿರುತ್ತದೆ. ತನಿಖೆಯ ಎಲ್ಲ ಪ್ರಕ್ರಿಯೆ, ಸಾಕ್ಷಿ ಸಂಗ್ರಹ,  ದೈಹಿಕ ಪರೀಕ್ಷೆಯ ಸಂದರ್ಭಗಳಲ್ಲಿ ಮಗುವಿನ ಜೊತೆ  ಇರಬೇಕಾಗಿರುವುದುರಿಂದ ಚೈಲ್ಡ್‌ ಸಪೋರ್ಟರ್‌ಗೆ ಎಲ್ಲ ಕಡೆಯೂ  ಪ್ರವೇಶಕ್ಕೆ ಅವಕಾಶವಿರುತ್ತದೆ.

ಸಾಮಾನ್ಯವಾಗಿ ಎಂಎಸ್‌ಡಬ್ಲ್ಯು ಪದವೀಧರರನ್ನೇ ಚೈಲ್ಡ್‌ ಸಪೋರ್ಟರ್‌ ಆಗಿ ನೇಮಿಸಲಾಗುತ್ತದೆ. ಅವರು ಆಪ್ತ ಸಮಾಲೋಚಕರಾಗಿಯೂ ಕಾರ್ಯನಿರ್ವಹಿಸಲು  ಅರ್ಹರಾಗಿರುತ್ತಾರೆ.

ಆದರೆ, ಚೈಲ್ಡ್‌ ಸಪೋರ್ಟರ್‌ಗೆ ಒಂದು ಪ್ರಕರಣಕ್ಕೆ ಒಂದು ಸಾವಿರ ಗೌರವಧನ ನಿಗದಿಪಡಿಸಲಾಗಿದೆ. ಕೆಲ ಪ್ರಕರಣಗಳು  ಒಂದು ವರ್ಷವಾದರೂ ಇತ್ಯರ್ಥವಾಗುವುದಿಲ್ಲ. ಹಾಗಾಗಿ  ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಕೊಂಡಿರುವವರೇ  ಚೈಲ್ಡ್‌ ಸಪೋರ್ಟರ್‌ ಆಗಿರುತ್ತಾರೆ.

ಪ್ರತಿ ಜಿಲ್ಲೆಗೊಂದರಂತೆ ಮಕ್ಕಳ ಕಲ್ಯಾಣ ಸಮಿತಿಗಳಿವೆ. ಬೆಂಗಳೂರಿನಲ್ಲಿ ಮೂರು ಸಮಿತಿಗಳಿವೆ. ಅನೇಕ ಸಂದರ್ಭಗಳಲ್ಲಿ ಪೊಲೀಸರಾಗಲಿ, ಮಕ್ಕಳ ಪೋಷಕರಾಗಲಿ ನಮ್ಮನ್ನು ಸಂಪರ್ಕಿಸುವುದಿಲ್ಲ.  ಅಂಥ ಸಂದರ್ಭದಲ್ಲಿ ನಾವೇ ಅವರ ಬಳಿ ಹೋಗುವುದೂ ಇದೆ. ಮಕ್ಕಳ ಕಲ್ಯಾಣ ಸಮಿತಿಗೆ ಮಕ್ಕಳ ದೌರ್ಜನ್ಯ ಪ್ರಕರಣಗಳ ಇತ್ಯರ್ಥಕ್ಕೆ ಸಂಪೂರ್ಣ ಅಧಿಕಾರ ಇದೆ. ಅನೇಕರಿಗೆ ಪರಿಹಾರ ಸಿಗುತ್ತದೆ ಎಂಬ ಅರಿವೂ ಕೆಲವರಿಗೆ ಇಲ್ಲ.
–ಅನುಪಮಾ ಹೆಗ್ಡೆ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ

(ಮಕ್ಕಳ ಸಹಾಯವಾಣಿ ಸಂಖ್ಯೆ 1098 ಗೆ ಕರೆ ಮಾಡಿ ತಿಳಿಸಿದರೆ ಆಯಾ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿ ಸಹಾಯಕ್ಕೆ ಬರುತ್ತದೆ.)

ಗಂಡುಮಕ್ಕಳಿಗೆ ಶಿಕ್ಷಣ ಅಗತ್ಯ


ಮನೆಗಳಲ್ಲಿ ಗಂಡುಮಕ್ಕಳಿಗೆ ಶಿಕ್ಷಣ ನೀಡುವ ಅಗತ್ಯವಿದೆ. ಹೆಣ್ಣುಮಕ್ಕಳ ದೇಹದಲ್ಲಿ ವಿಶೇಷವೇನೂ ಇಲ್ಲ ಎಂಬ ಭಾವ ಬರುವಂತೆ ಮನವರಿಕೆ ಮಾಡಬೇಕಾಗಿದೆ. ಹೆಣ್ಣಿನ ದೇಹ ಗಂಡಸರು ಬಳಸಿಕೊಳ್ಳಬಹುದಾದ ವಸ್ತು ಎಂಬ ಮನೋಭಾವ ಬದಲಾಗಬೇಕು. ಮಕ್ಕಳು ತಮಗಾದ ಕಿರುಕುಳವನ್ನು ಮುಕ್ತವಾಗಿ ಹೇಳಿಕೊಳ್ಳುವ ವಾತಾವರಣ ಮನೆ ಮತ್ತು ಶಾಲೆಗಳಲ್ಲಿ  ನಿರ್ಮಾಣವಾಗಬೇಕು.

ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ ಈಗ ಶುರುವಾಗಿದ್ದಲ್ಲ. ಹಿಂದೆಯೂ ಇತ್ತು. ಆದರೆ, ಈಗ ಸಮಾಜ ಸಂತ್ರಸ್ತ ಸ್ನೇಹಿಯಾಗಿದೆ. ಇದರಿಂದಾಗಿ ಹೆಚ್ಚು ಪ್ರಕರಣಗಳು ಸುದ್ದಿಯಾಗುತ್ತಿದೆ.

ಮಗುವಿನ ಧೈರ್ಯದ ಮುಂದೆ ಯಾರ ಧೈರ್ಯವೂ ಹೆಚ್ಚಲ್ಲ. ಮಗು ತನ್ನ ಜೊತೆಗಿರುವ ಮಕ್ಕಳ ಜೊತೆ ಮುಕ್ತವಾಗಿ ಹಂಚಿಕೊಳ್ಳುವ ಧೈರ್ಯ ಬೆಳೆಸಿಕೊಳ್ಳುವಂತೆ ಮಾಡಬೇಕು.  ಎಲ್ಲವನ್ನೂ ಕಾನೂನಿನಿಂದ ಪರಿಹರಿಸಲು ಸಾಧ್ಯವಿಲ್ಲ. ನೈತಿಕತೆಗೆ ಯಾವುದೇ ಕಾನೂನಿಲ್ಲ.
–ಸುಶೀಲಾ, ಹಿರಿಯ ವಕೀಲೆ

ಆಪ್ತ ಸಮಾಲೋಚಕರು ಬೇಕು

ಶಿಕ್ಷಣ ಸಂಸ್ಥೆಗಳಲ್ಲಿ ಆಪ್ತ ಸಮಾಲೋಚಕರು ಇರಬೇಕು ಎಂಬ ಬಗ್ಗೆ ಯಾರೂ ಯೋಚಿಸುತ್ತಿಲ್ಲ. ಬೆಳೆಯುವ ಮಕ್ಕಳಿಗೆ ಓದಿಗೆ ಪೂರಕವಾಗಿ ವ್ಯಕ್ತಿತ್ವ ವಿಕಸನ, ಕಲಿಕೆಯ ಸಮಸ್ಯೆ, ವೈಯಕ್ತಿಕ ಸಮಸ್ಯೆಗಳ ಬಗ್ಗೆ ಮಕ್ಕಳ ಮಾತುಗಳನ್ನು ಶಾಲೆಗಳಲ್ಲಿ ಆಲಿಸುವವರು ಬೇಕು. ಮುಖ್ಯವಾಗಿ ಪ್ರೌಢಶಾಲೆಗಳಲ್ಲಿ ಆಪ್ತಸಮಾಲೋಚಕರ ನೇಮಕ ಅನಿವಾರ್ಯ.  ಕುಶಾಲನಗರದ ಬೈಲಕುಪ್ಪೆ, ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ಮುಂತಾದ ಕಡೆ ಇರುವ ಟಿಬೆಟಿಯನ್ ಶಾಲೆಗಳಲ್ಲಿ ಆಪ್ತ ಸಮಾಲೋಚಕರನ್ನು ನೇಮಿಸಿಕೊಂಡಿದ್ದಾರೆ. ಎಲ್ಲ ಶಾಲೆಗಳಲ್ಲಿಯೂ ಇಂಥ ಸಮಾಲೋಚಕರನ್ನು ನೇಮಿಸುವಂತೆ ಸರ್ಕಾರದ ಮಾರ್ಗಸೂಚಿಯಲ್ಲಿ ಅಳವಡಿಸಬೇಕು.

ಶಾಲೆ, ಮನೆ ಅಥವಾ ಹೊರಗೆ ದೌರ್ಜನ್ಯಕ್ಕೊಳಗಾದರೆ ಮಕ್ಕಳು ಅದನ್ನು ಕೂಡಲೇ ಪೋಷಕರಿಗೆ ಹೇಳಿಕೊಳ್ಳುವಂಥ ವಾತಾವರಣ ಮನೆಗಳಲ್ಲಿ ನಿರ್ಮಾಣವಾಗಬೇಕು.  ಪೋಷಕರು ಈ ವಿಚಾರವನ್ನು ಘಟನೆ ನಡೆದ ಸಂಸ್ಥೆ, ವ್ಯಕ್ತಿಗಳ ಜೊತೆ ನೇರವಾಗಿ ಚರ್ಚಿಸುವ ಬದಲು ಪೊಲೀಸ್ ಠಾಣೆಗೆ ದೂರು ನೀಡಬಹುದು. ಜೊತೆಗೆ ಜಿಲ್ಲೆಯ ಬಾಲನ್ಯಾಯ ಮಂಡಳಿ ಅಥವಾ ಮಕ್ಕಳ ಕಲ್ಯಾಣ ಸಮಿತಿ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ನೀಡುವುದು ಉತ್ತಮ.
–ಪಿ.ಪಿ. ಬಾಬುರಾಜ್, ಮಕ್ಕಳ ಹಕ್ಕುಗಳ ಹೋರಾಟಗಾರ

ದಾಖಲೆ ಪಡೆಯಿರಿ


ನಿಮ್ಮ ಮಗುವನ್ನು ನಂಬಿ. ಮಗು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂದರ್ಭದಲ್ಲಿ  ಸರಿಯಾದ ದಾಖಲೆ ನೀಡಬಲ್ಲ ಸರ್ಕಾರಿ ವೈದ್ಯರ ಬಳಿಗೆ ಕರೆದೊಯ್ದು ದಾಖಲೆಯನ್ನು ಪಡೆದುಕೊಳ್ಳಿ. ನಂತರ ಪೋಲಿಸರಿಂದ ಎಫ್ಐಆರ್ ದಾಖಲಿಸಲೇಬೇಕು.  ಪೋಕ್ಸೋ ಕಾಯ್ದೆ ಪ್ರಕಾರ ಘಟನೆ ನಡೆದ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಮುಖ್ಯಸ್ಥರ ಬಂಧನ ಆಗಬೇಕು.  ಇದರ ಬಗ್ಗೆ ಮಾನವೀಯತೆ ತೋರಬಾರದು.  ನಿಮ್ಮ ಮಗುವಿಗೆ ನ್ಯಾಯಬೇಕೆಂಬ ನಿಶ್ಚಯ ಮಾಡಿಕೊಳ್ಳಬೇಕು. 

ವೈದ್ಯಕೀಯ ಪರೀಕ್ಷೆ ಆದಷ್ಟು ಬೇಗ ನಡೆಯಬೇಕು. ಇಲ್ಲದಿದ್ದರೆ ಸೂಕ್ಷ್ಮ ಅಂಗಗಳಲ್ಲಿನ ಗುರುತು ಮಾಯವಾಗುವ ಸಾಧ್ಯತೆ ಇರುತ್ತದೆ.  ನಂತರ  ಮಗು  ಮತ್ತು ಕುಟುಂಬದವರೊಡನೆ ಪ್ರತಿ ಹಂತದಲ್ಲಿ ಇದ್ದು ಪಾರದರ್ಶಕ ವರದಿ ಮಾಡುವುದು ಮಕ್ಕಳ ಕಲ್ಯಾಣ ಸಮಿತಿಯ  ಕರ್ತವ್ಯ.  ಈ ಸಂಸ್ಥೆಯನ್ನು  ನಂಬಬಹುದು. ಆದರೆ ಇವರಿಂದ ನಿಯೋಜಿಸಲಾಗುವ ಚೈಲ್ಡ್‌ ಸಪೋರ್ಟರ್ ಕಾರ್ಯ ಗಮನಾರ್ಹ.  ಮಗುವಿನ ಹೇಳಿಕೆ ದಾಖಲಿಸಿಕೊಳ್ಳುವಾಗ, ವೈದ್ಯಕೀಯ ಪರೀಕ್ಷೆ ನಡೆಸುವಾಗ, ಕೋರ್ಟ್‌ಗೆ ಹಾಜರುಪಡಿಸುವ ಪ್ರತಿಯೊಂದು ಹಂತದಲ್ಲೂ ಚೈಲ್ಡ್  ಸಪೋರ್ಟರ್  ಜೊತೆಯಲ್ಲಿದ್ದು ಮಗುವಿಗೆ ಬೆಂಬಲ ನೀಡಬೇಕು.

ಮನೆಯಲ್ಲಿ ವಾತಾವರಣ ತಿಳಿಯಾಗಿಸಿ, ಮಗುವನ್ನು ಹೊಸ ವಿಚಾರಗಳಿಗೆ ಒಗ್ಗಿಸಿಕೊಳ್ಳಬೇಕು.  ಮಗುವಿಗೆ ಪ್ರಿಯರಾದ ಅಜ್ಜಿ ತಾತ, ಬಂಧುಗಳು, ಸ್ನೇಹಿತರು ಇತರರೊಂದಿಗೆ ಬೆರೆಯುವಂತೆ ಮಾಡಬೇಕು. ಶಾಲೆಯಲ್ಲಾದ ಆಘಾತದಿಂದ ಹೊರ ತರಲು ಪ್ರಯತ್ನಿಸಬೇಕು.  ಘಟನೆ ನಡೆದ ನಂತರ ಮಗುವನ್ನು ಉತ್ತಮ ವಾತಾವರಣದ ಶಾಲೆಗೆ ಸೇರಿಸುವುದು ಒಳಿತು. ಇಂಥ ಸಮಸ್ಯೆಗಳನ್ನು ಎದುರಿಸಿದ ಪೋಷಕರ ಸಲಹೆ ಪಡೆಯುವುದು ಬಹಳ ಮುಖ್ಯ.

ಪೋಷಕರು ಮಾನಸಿಕವಾಗಿ ಕುಗ್ಗದೆ, ಯಾವುದಕ್ಕೂ ಮಣಿಯದೇ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವುದು ಸರಿಯಾದ ಮಾರ್ಗ. ಮಗುವನ್ನು ಒಂಟಿಯಾಗಿ ಶಾಲೆಯ ಸಿಬ್ಬಂದಿಯೊಂದಿಗೆ ವ್ಯವಹರಿಸಲು ಬಿಡಬಾರದು.

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ  ಮಕ್ಕಳ ಪ್ರಕರಣವನ್ನು ತ್ವರಿತ ಇತ್ಯರ್ಥಪಡಿಸುವ ಉದ್ದೇಶದಿಂದ ಪೋಕ್ಸೋ ಕಾಯ್ದೆ ಜಾರಿಯಾಗಿದ್ದರೂ ಮತ್ತದೇ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ನನ್ನ ಮಗುವಿಗೆ ಶಿಕ್ಷಕಿ ಲೈಂಗಿಕ ದೌರ್ಜನ್ಯ ಎಸಗಿ ಆರು ತಿಂಗಳಾದರೂ ಕೋರ್ಟ್‌ನಲ್ಲಿ ವಿಚಾರಣೆ ಆರಂಭವಾಗಿಲ್ಲ. ಇದರ ನಡುವೆ ನ್ಯಾಯಕ್ಕಾಗಿ ಓಡಾಡುವ ಪೋಷಕರ ಮೇಲೆ ‘ಹಣಕ್ಕಾಗಿ ಹೀಗೆಲ್ಲ ಮಾಡುತ್ತಿದ್ದಾರೆ’ ಎಂಬ ಆರೋಪ  ಶಾಲಾ ಮುಖ್ಯಸ್ಥರಿಂದ. ಮಗುವನ್ನು ಜೋಪಾನ ಮಾಡುವುದರ ಜೊತೆಗೆ ಇಂಥ ಹತ್ತಾರು ಮಾತುಗಳನ್ನು ಕೇಳಲು ತಯಾರಾಗಬೇಕಾದ ಸ್ಥಿತಿ ಪೋಷಕರದು.
– ನಳಿನಾ, ಸಂತ್ರಸ್ತ ಮಗುವಿನ ತಾಯಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT