ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೃಭಾಷಾ ಶಿಕ್ಷಣದಿಂದ ಅಸಮಾನತೆ...

ವಾರದ ಸಂದರ್ಶನ
Last Updated 30 ಜನವರಿ 2016, 19:30 IST
ಅಕ್ಷರ ಗಾತ್ರ

ಮನೆಯಲ್ಲಿ ಸಿನಿಮಾ ಹಾಗೂ ರಾಜಕೀಯ ವಾತಾವರಣವಿದ್ದರೂ ನರ್ಗಿಸ್‌ ದತ್‌ ಪ್ರತಿಷ್ಠಾನದ ನಿರ್ದೇಶಕಿ ಹಾಗೂ ಮಾಜಿ ಸಂಸದೆ ಪ್ರಿಯಾ ದತ್ ಆಯ್ದುಕೊಂಡಿದ್ದು ಸಮಾಜ ಸೇವೆ. ನಂತರ ರಾಜಕೀಯಕ್ಕೆ ಧುಮುಕಿದ ಅವರು ಅಲ್ಲಿಯೂ ಸೈ ಎನಿಸಿಕೊಂಡವರು. ಮಹಿಳೆ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಸಾಕಷ್ಟು ಯೋಜನೆ ಹಾಕಿಕೊಂಡಿರುವ ಅವರು ಗ್ರಾಮಗಳ ಅಭಿವೃದ್ಧಿ ಮೂಲಕ ಅದನ್ನು ಸಾಧಿಸುವ ಕನಸು ಕಂಡಿದ್ದಾರೆ. ತಮ್ಮ ಸಮಾಜ ಸೇವೆಯ ಭಾಗವಾಗಿ ಇತ್ತೀಚೆಗೆ ಧಾರವಾಡಕ್ಕೆ ಬಂದಿದ್ದ ಅವರು ‘ಪ್ರಜಾವಾಣಿ’ಯೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

*ಶಿಕ್ಷಣ ಕ್ಷೇತ್ರದಲ್ಲಿ ನೀವು ಸಾಕಷ್ಟು ಕೆಲಸ ಮಾಡುತ್ತಿದ್ದೀರಿ. ಅದರ ಮೂಲಕ ಯಾವ ರೀತಿಯ ಬದಲಾವಣೆ ತರಲು ಬಯಸುತ್ತೀರಿ?
ಇಂಗ್ಲಿಷ್‌ ಶಿಕ್ಷಣವನ್ನು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕಾದ ಅಗತ್ಯವಿದೆ. ಭಾರತೀಯರು ಮಾತೃಶಿಕ್ಷಣದಿಂದ ಹೊರಬರುವ ಬಯಕೆ ಹೊಂದಿದ್ದಾರೆ. ಅವರಿಗೆ ಇಂಗ್ಲಿಷ್‌ನ ಅಗತ್ಯವಿದೆ. ಜಾಗತಿಕ ಭಾಷೆಯಾಗಿರುವ ಇಂಗ್ಲಿಷ್ ಕೆಲಸ ಕೊಡುವ ಭಾಷೆಯೂ ಹೌದು. ಇದನ್ನು ನಾವು ಅರ್ಥ ಮಾಡಿಕೊಳ್ಳುತ್ತಿಲ್ಲ. ಮಾತೃಭಾಷೆ ಶಿಕ್ಷಣ ಕಡ್ಡಾಯಗೊಳಿಸುವ ಮೂಲಕ ನಾವು ಮಕ್ಕಳನ್ನು ಹಿಂದಕ್ಕೆಳೆಯುತ್ತಿದ್ದೇವೆ.

ಜಾಗತೀಕರಣದ ಕುರಿತು ಮಾತನಾಡುತ್ತಿರುವ ನಾವು ಮುಂದಿನ ತಲೆಮಾರನ್ನು ಸಿದ್ಧಪಡಿಸದಿದ್ದರೆ, ಅವರನ್ನು ಈ ಜಗತ್ತಿಗೆ ತಯಾರು ಮಾಡುವುದಾದರೂ ಹೇಗೆ? ಮಾತೃಭಾಷೆಯಲ್ಲಿ ಕಲಿತ ವಿದ್ಯಾರ್ಥಿಗಳು ಇಂಗ್ಲಿಷ್ ಮಾಧ್ಯಮದಿಂದ ಬಂದ ವಿದ್ಯಾರ್ಥಿಗಳ ಎದುರು ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಹೀಗಾದರೆ ಎಲ್ಲರಿಗೂ ಸಮಾನ ಅವಕಾಶ ನೀಡಲು ಸಾಧ್ಯವಾಗುವುದಾದರೂ ಹೇಗೆ? ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಕಲಿಸುವುದು ಕಡ್ಡಾಯವೇ ಆದರೂ, ಎರಡನೇ ಭಾಷೆಯಾಗಿ ಇಂಗ್ಲಿಷ್‌ ಕಲಿಸುವುದನ್ನೂ ಕಡ್ಡಾಯಗೊಳಿಸಬೇಕು. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕೆಲವೊಮ್ಮೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಅದಕ್ಕೆ ಸ್ವಲ್ಪ ಧೈರ್ಯವೂ ಬೇಕು.

*ಅನೇಕ ಯೋಜನೆಗಳ ನಂತರವೂ ಮಹಿಳಾ ಸಬಲೀಕರಣ ಸಾಧ್ಯವಾಗಿಲ್ಲ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕವೇ ಅವರ ಸಬಲೀಕರಣ ಸಾಧ್ಯ. ಹಾಗೆಯೇ ಸಾಧಕ ಮಹಿಳೆಯರನ್ನು ಪರಿಚಯ ಮಾಡಿಕೊಡುವ ಮೂಲಕ ಅವರಲ್ಲಿ ಧೈರ್ಯ ಹಾಗೂ ಭರವಸೆ ಮೂಡಿಸಬಹುದು. ನಮ್ಮ ಹಳ್ಳಿಗಳು ತೀರಾ ಹಿಂದುಳಿದಿವೆ. ಗ್ರಾಮೀಣ ಪ್ರದೇಶದ ಮಹಿಳೆಯರು ತಮ್ಮ ಮಕ್ಕಳ ಭವಿಷ್ಯ ಕುರಿತು ಅಪಾರ ಕನಸು ಹೊತ್ತಿದ್ದಾರೆ. ಅಭಿವೃದ್ಧಿ ಅವರಿಗೆ ಬೇಕಿದೆ. ಆದರೆ ಅದನ್ನು ಪಡೆಯುವ ಮಾರ್ಗವನ್ನಷ್ಟೇ ನಾವು ತೋರಿಸಬೇಕಿದೆ. ಎಲ್ಲದಕ್ಕೂ ಸರ್ಕಾರದ ಕಡೆ ನೋಡುವ ಬದಲು ಒಂದಷ್ಟು ಸಮಾನ ಮನಸ್ಕರು ಜತೆಗೂಡಿ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ದುಡಿಯಬೇಕಿದೆ.

*ಮೀಸಲಾತಿ ಮತ್ತು ದೇವಾಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸಿದರೆ ಮಹಿಳೆಯರ ಸಬಲೀಕರಣವಾಯಿತೆಂದು ಅರ್ಥವೇ?
ಇವೆಲ್ಲವೂ ಆಕೆಗೆ ಸಲ್ಲಲೇಬೇಕಾದ ಹಕ್ಕುಗಳು. ಸಮಾನತೆ ಹಾಗೂ ಸಮಾನ ಅವಕಾಶದ ಕುರಿತು ಮಾತನಾಡುವ ನಾವು ಅದನ್ನು ನೀಡುವಲ್ಲೂ ಅಷ್ಟೇ ಉದಾರಿಗಳಾಗಬೇಕಾಗಿದೆ. ದೇವಾಲಯ ಪ್ರವೇಶಕ್ಕೆ ಸಂಬಂಧಿಸಿದಂತೆ ಒಂದೇ ದೇವರನ್ನು ಮನೆಯಲ್ಲಿ ಎಲ್ಲರೂ ಪೂಜಿಸಬಹುದಾದರೆ, ಅದೇ ದೇವರನ್ನು ಪ್ರಾರ್ಥನಾ ಮಂದಿರಕ್ಕೆ ಹೋಗಿ ಪೂಜಿಸಲು ಏಕೆ ಸಾಧ್ಯವಿಲ್ಲ? ಇಂಥ ಕಟ್ಟಳೆಗಳನ್ನು ಮಾಡಿದವರು ಮನುಷ್ಯರೇ. ಇದು ಬದಲಾಗಬೇಕು. ಕೆಲವೇ ದಶಕಗಳ ಹಿಂದಿನವರೆಗೂ ಋತುಸ್ರಾವದ ಸಂದರ್ಭದಲ್ಲಿ ಮಹಿಳೆಗೆ ಮನೆಯೊಳಗೆ ಪ್ರವೇಶ ಇರಲಿಲ್ಲ. ಮಾಡಿದ ಅಡುಗೆಯನ್ನು ಹಾಗೂ ಮನುಷ್ಯರನ್ನೂ ಮುಟ್ಟುವಂತಿರಲಿಲ್ಲ. ಅದು ನಿಧಾನಕ್ಕೆ ಬದಲಾಗಿದೆ. ವಿಧವೆಯರ ಸ್ಥಿತಿಯೂ ಇಂದು ಹಿಂದಿನಂತಿಲ್ಲ. ಹಾಗೆಯೇ ದೇವಾಲಯ ಪ್ರವೇಶ ನಿರ್ಬಂಧದ ವಿಷಯವೂ ನಿಧಾನವಾಗಿ ಬದಲಾಗುವ ವಿಶ್ವಾಸ ನನಗಿದೆ.

*ಮಹಿಳೆಯರ ಸಬಲೀಕರಣಕ್ಕೆ ಧರ್ಮನಿಷ್ಠೆ ಅಡ್ಡಿಯಾಗಿದೆಯೇ?
ಧರ್ಮ ಎನ್ನುವುದು ವೈಯಕ್ತಿಕ ವಿಷಯ. ಅದು ಸಾರ್ವಜನಿಕ ಬದುಕಿನಲ್ಲಿ ಚರ್ಚಿಸುವಂಥದ್ದಲ್ಲ ಹಾಗೂ ಪ್ರಶ್ನಿಸುವುದೂ ಸಲ್ಲದು. ಧರ್ಮ ನಾಲ್ಕು ಗೋಡೆಗಳ ನಡುವೆ ಇರಬೇಕು. ಜಪಾನ್‌ ದೇಶದಲ್ಲಿ ವಿವಿಧ ಧರ್ಮಗಳಿಗೆ ಸೇರಿದವರಿಗೆ ಪಾರ್ಥನಾ ಮಂದಿರ, ಹಬ್ಬಗಳ ಆಚರಣೆಗೆ ಅವಕಾಶವಿದೆ. ಆದರೆ ಅವರ ಧರ್ಮ ಬಹಿರಂಗವಾಗಿ ಮತ್ತೊಬ್ಬರ ಮೇಲೆ ಪ್ರಭಾವ ಬೀರುವಂತೆ ವರ್ತಿಸುವುದು ಇತ್ಯಾದಿಗಳಿಗೆ ನಿಷೇಧವಿದೆ. ನಮ್ಮಲ್ಲೂ ಅಂಥ ಕಾನೂನಿನ ಅಗತ್ಯವಿದೆ. ಹಿಂದೂ ಎನ್ನುವುದು ಧರ್ಮವಲ್ಲ. ಅದು ಒಂದು ತತ್ವ. ನಮಗೆ ಬದುಕುವುದು ಹೇಗೆ ಎಂಬುದನ್ನು ಅದು ಕಲಿಸಿದೆ. ಹಾಗೆಯೇ ಇಸ್ಲಾಂ ಕೂಡ ಒಂದು ಶಾಂತಿಯುತ ಧರ್ಮ. ಆದರೆ ಜನ ಅದನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ವ್ಯಾಖ್ಯಾನಿಸುತ್ತಿದ್ದಾರೆ. ಯಾವುದೇ ಧರ್ಮವನ್ನು ಪಾಲಿಸುವ ಮೊದಲು ಅದನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ.

*ನಿಮ್ಮ ಪ್ರತಿಷ್ಠಾನ ಯಾವ ರೀತಿಯ ಸಮಾಜ ಕಾರ್ಯ ಕೈಗೊಂಡಿದೆ?
ನಮ್ಮ ತಾಯಿ ನರ್ಗಿಸ್‌ ದತ್‌ ನಿಧನದ ನಂತರ ತಂದೆ ಸುನಿಲ್‌ ದತ್‌ (ಪ್ರತಿಷ್ಠಾನದ ಹೆಸರು) ಪ್ರತಿಷ್ಠಾನವನ್ನು ಆರಂಭಿಸಿದರು. 35 ವರ್ಷಗಳ ಹಿಂದೆ ಆರಂಭವಾದ ಈ ಪ್ರತಿಷ್ಠಾನ ಆರಂಭದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ಹಾಗೂ ಅವರ ಆರೈಕೆಯತ್ತ ಕೆಲಸ ಮಾಡಿತು. ಅಮೆರಿಕ, ಲಂಡನ್‌ ಮುಂತಾದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಂದ ದೇಣಿಗೆ ಸಂಗ್ರಹಿಸಿ ಅದನ್ನು ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ವಿನಿಯೋಗಿಸಲಾಯಿತು. ನಮ್ಮ ಸಂಸ್ಥೆಯು ಆರು ಸಂಚಾರಿ ಚಿಕಿತ್ಸಾಲಯಗಳನ್ನು ಹೊಂದಿದೆ. ಮಧ್ಯಪ್ರದೇಶ, ಕೇರಳ, ಗುಜರಾತ್‌, ಪಂಜಾಬ್‌, ಮಹಾರಾಷ್ಟ್ರಗಳಲ್ಲಿ ಇವು ಸಕ್ರಿಯವಾಗಿವೆ. ಟಾಟಾ ಕ್ಯಾನ್ಸರ್ ಸಂಸ್ಥೆಯೊಂದಿಗೂ ನಮ್ಮ ಸಹಯೋಗವಿದೆ.

ತಂದೆಯ ನಿಧನದ ನಂತರ ಇದನ್ನು ಸಂಪೂರ್ಣ ಆರೋಗ್ಯ ಕ್ಷೇತ್ರಕ್ಕೆ ವಿಸ್ತರಿಸಿದೆವು. ಹೆಚ್ಚಾಗಿ ಮುಂಬೈನಂಥ ಮಹಾನಗರಗಳ ಕೊಳೆಗೇರಿ ಹಾಗೂ ತೀರಾ ನಿರ್ಲಕ್ಷ್ಯಕ್ಕೊಳಗಾಗಿರುವ ಹಳ್ಳಿಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಪ್ಲೇಟ್‌ಲೆಟ್‌ ಸಂಗ್ರಹ ಹಾಗೂ ಅಸ್ತಿಮಜ್ಜೆ ಸಂಗ್ರಹದತ್ತಲೂ ಕೆಲಸ ಮಾಡುತ್ತಿದ್ದೇವೆ. ವಿದೇಶಗಳತ್ತಲೇ ಮುಖ ಮಾಡಬೇಕಿದ್ದ ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ದಾನಿಗಳ ಸಂಖ್ಯೆ ಹೆಚ್ಚಿಸುವತ್ತಲೂ ಕಾರ್ಯ ಕೈಗೊಂಡಿದ್ದೇವೆ. ಆಸಕ್ತ ಹಾಗೂ ಸೇವಾ ಮನೋಭಾವ ಹೊಂದಿರುವ ಸಂಘ ಸಂಸ್ಥೆಗಳ ಜತೆಗೂಡಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಮಿತ್ರ ಪ್ರತಿಷ್ಠಾನದೊಂದಿಗೆ ಕರ್ನಾಟಕದಲ್ಲಿ ಮೊದಲ ಹೆಜ್ಜೆಯನ್ನಿಡುತ್ತಿದ್ದೇವೆ.

* ನಗರದಲ್ಲಿನ ಅತಿಯಾದ ಆರೋಗ್ಯ ಕಾಳಜಿ ಹಾಗೂ ಗ್ರಾಮೀಣ ಪ್ರದೇಶದಲ್ಲಿನ ನಿಷ್ಕಾಳಜಿ ಸರಿದೂಗಿಸುವುದು ಹೇಗೆ?
ಇದು ಜಾಗೃತಿ ಮೂಲಕ ಸಾಧ್ಯ. ಅರಿವಿನ ಕಾರ್ಯಾಗಾರ ಹೆಚ್ಚಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಇ–ಕಲಿಕೆ, ಕಂಪ್ಯೂಟರ್‌ ಹಾಗೂ ಅಂತರ್ಜಾಲದ ಜ್ಞಾನ ಹೆಚ್ಚಿಸಬೇಕು. ಹಾಗೆಂದ ಮಾತ್ರಕ್ಕೆ ಒಮ್ಮೆಲೇ ಅಂತರ್ಜಾಲ ಜಗತ್ತಿಗೆ ಸಂಪೂರ್ಣ ತೆರೆದುಕೊಳ್ಳಲೂಬಾರದು.

*ನಿಮ್ಮ ಕುಟುಂಬದಲ್ಲಿ ಸಿನಿಮಾ, ರಾಜಕಾರಣ ಎರಡೂ ಇತ್ತು. ಆದರೆ, ನೀವು ಸಮಾಜ ಸೇವೆ ಆಯ್ದುಕೊಂಡಿದ್ದು ಹೇಗೆ?
ಮನೆಯಲ್ಲಿ ಒಬ್ಬೊಬ್ಬರು ಒಂದೊಂದು ಕ್ಷೇತ್ರವನ್ನು ಆಯ್ದುಕೊಂಡೆವು. ನಾನು ಮತ್ತು ನನ್ನ ಸೋದರಿಗೆ ಸಿನಿಮಾ ಕ್ಷೇತ್ರದತ್ತ ಆಸಕ್ತಿ ಇರಲಿಲ್ಲ. ಅಣ್ಣ ಅದೇ ಕ್ಷೇತ್ರವನ್ನೇ ಆಯ್ದುಕೊಂಡ. ನನ್ನ ತಾಯಿಯಂತೆಯೇ ನನಗೆ ಮೊದಲಿನಿಂದಲೂ ಸಮಾಜ ಸೇವೆಯಲ್ಲಿ ಆಸಕ್ತಿ ಇತ್ತು. ಆಕೆಗೆ ನಾನು ವೈದ್ಯೆಯಾಗಬೇಕು ಎಂಬ ಬಯಕೆ ಇತ್ತು. ಆದರೂ ರಾಜಕೀಯ ಕ್ಷೇತ್ರದಿಂದ ದೂರವೇ ಉಳಿದಿದ್ದೆ. ತಂದೆಯ ನಿಧನದ ನಂತರ ರಾಜಕೀಯ ಪ್ರವೇಶ ಮಾಡಿದೆ.

*ವಿವಾದಿತ ವಿಷಯಗಳಿಗೆ ಬಾಲಿವುಡ್‌ ಪ್ರತಿಕ್ರಿಯಿಸುವ ರೀತಿ ಬಗ್ಗೆ ಹೇಳಿ.
ಈಗ ಪ್ರತಿ ಮಾತೂ ಚರ್ಚೆಗೆ ಗ್ರಾಸವಾಗುತ್ತಿದೆ. ಇಂಥ ಭಯದಲ್ಲೇ ಕೆಲವರು ತಾವು ಮಾತನಾಡಬೇಕೆ ಬೇಡವೇ,  ಮಾತನಾಡಿದರೆ ಏನಾಗಬಹುದು, ಅನವಶ್ಯಕವಾಗಿ ನಾನು ಯಾರದೋ ಬಾಯಿಗೆ ಆಹಾರವಾಗುತ್ತೇನೆಯೇ ಎಂದು ಯೋಚಿಸುವಂತಾಗಿದೆ. ಒಂದರ್ಥದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಬಾಲಿವುಡ್‌ ಮಂದಿ ಅನ್ಯಗ್ರಹ ಜೀವಿಗಳಲ್ಲ. ಅವರೂ ಈ ದೇಶದ ಪ್ರಜೆಗಳೇ. ಅವರಿಗೂ ಎಲ್ಲಾ ವಿಷಯದ ಕುರಿತು ಮುಕ್ತವಾಗಿ ಚರ್ಚಿಸುವ ಹಕ್ಕಿದೆ. ಸಾಮಾನ್ಯ ಜನ ಏನನ್ನು ಅನುಭವಿಸುತ್ತಿದ್ದಾರೋ, ಬಾಲಿವುಡ್‌ನವರೂ ಅದನ್ನೇ ಅನುಭವಿಸುತ್ತಿದ್ದಾರೆ. ಪ್ರತಿಕ್ರಿಯಿಸುವವರ ಬಾಯಿ ಮುಚ್ಚಿಸುವ ಬದಲು ಅಸಹಿಷ್ಣುತೆಗೆ ಕಾರಣವಾಗಿರುವ ಅಂಶವನ್ನು ಕಿತ್ತೊಗೆಯಲು ಶ್ರಮಿಸಬೇಕು.

ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅನಿಸಿಕೆ ವ್ಯಕ್ತಪಡಿಸುವ ಹಕ್ಕು ಇದೆ. ಆಕ್ಷೇಪಗಳನ್ನೂ ಸಕಾರಾತ್ಮಕ ರೀತಿಯಲ್ಲಿ ಗ್ರಹಿಸುವ ಮನಸ್ಥಿತಿ ಆಳುವ ಸರ್ಕಾರಗಳಿಗೂ ಇರಬೇಕು. ಯಶಸ್ಸಿನ ಬೆನ್ನು ಹತ್ತಿದವರಿಗೆ ಉದ್ಧಟತನವಿರಬಾರದು ಅಥವಾ ತನಗೆ ಯಾರೂ ಹೇಳಬೇಕಾಗಿಲ್ಲ ಎಂಬ ಅತಿಯಾದ ಆತ್ಮವಿಶ್ವಾಸವೂ ಒಳ್ಳೆಯದಲ್ಲ. ವಿಭಿನ್ನ ಧರ್ಮ, ಜಾತಿ, ಭಾಷೆ, ಬಣ್ಣ, ಸಂಸ್ಕೃತಿ ಹೊಂದಿದ್ದರೂ ಹಲವಾರು ಶತಮಾನಗಳಿಂದ ಒಟ್ಟಿಗೆ ಬಾಳಿದ್ದೇವೆ. ಇದು ಈ ರಾಷ್ಟ್ರದ ಶಕ್ತಿ. ಆದರೆ ತಮ್ಮ ಲಾಭಕ್ಕಾಗಿ ಬ್ರಿಟಿಷರು ಧರ್ಮದ ಆಧಾರದಲ್ಲಿ ದೇಶವನ್ನು ಒಡೆದರು. ಆದರೆ ನಾವು ಇಂದಿಗೂ ಅದನ್ನೇ ಅನುಸರಿಸುತ್ತಿದ್ದೇವೆ.

*ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಭಯೋತ್ಪಾದನೆ ಹೆಸರಿನಲ್ಲಿ ಕೆಲವರನ್ನು ಬಂಧಿಸಿ ನಂತರ ಬಿಡುಗಡೆ ಮಾಡುವ ಕುರಿತ ವಿವಾದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?
ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಒಂದಷ್ಟು ಜನರನ್ನು ಬಂಧಿಸುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಿರಲಿ ಎನ್ನುವುದು ಇದರ ಹಿಂದಿನ ಉದ್ದೇಶ. ಆದರೆ ರಾಷ್ಟ್ರೀಯ ಭದ್ರತೆಯ ಹೊಣೆ ಹೊತ್ತಿರುವ ಸಂಸ್ಥೆಗಳು ಕೆಲವು ಮಾಹಿತಿ ಆಧರಿಸಿ ಕೆಲವರನ್ನು ಬಂಧಿಸುವುದರ ಹಿಂದಿನ ಕಾರಣ ನಮಗೆ ಗೊತ್ತಿಲ್ಲದ್ದರಿಂದ ಅದನ್ನು ನಾವು ಪ್ರಶ್ನಿಸುವಂತಿಲ್ಲ. ಆದರೆ, ಕೆಲ ಅಪರಾಧಗಳ ಸಂದರ್ಭಗಳಲ್ಲಿ  ಬಂಧಿಸಿ ನಂತರ ಸಾಕ್ಷಿ ಕೊರತೆ ನೆಪದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಬಿಡುಗಡೆಯ ನಂತರ ಆತನನ್ನು ಸಮಾಜ ನೋಡುವ ರೀತಿ ಕುರಿತು ಕಿಂಚಿತ್ತಾದರೂ ಯೋಚಿಸುವ ಅಗತ್ಯವಿದೆ.

*ತಂದೆ ನಂತರ ರಾಜಕೀಯಕ್ಕೆ ಧುಮುಕಿದ ನಿಮಗೆ ಆದ ಅನುಭವ ಏನು?
ಹತ್ತು ವರ್ಷಗಳ ರಾಜಕೀಯ ಜೀವನದಲ್ಲಿ ನಾನು ಸಾಕಷ್ಟು ಕಲಿತಿದ್ದೇನೆ. ನನ್ನ ಸಾಮರ್ಥ್ಯ ಏನು ಎಂಬುದು ಅರಿವಿಗೆ ಬಂದಿದೆ. ಮುಂದೆ ಏನು ಮಾಡಬೇಕು ಎಂಬುದೂ ತಿಳಿದಿದೆ. ಕಳೆದ ಬಾರಿ ಚುನಾವಣೆ ಸೋತೆ. ಹಾಗೆಂದ ಮಾತ್ರಕ್ಕೆ ಕೈಕಟ್ಟಿ ಕೂರಲಿಲ್ಲ. ನನಗಿಷ್ಟವಾದ ಸಮಾಜ ಸೇವೆಯನ್ನು ಮುಂದುವರಿಸಿದ್ದೇನೆ. ಮುಂದಿನ ಚುನಾವಣೆಗೆ ಸಾಕಷ್ಟು ಸಮಯ ಇದೆ. ಈಗ ಪಕ್ಷ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ಕಾಂಗ್ರೆಸ್‌ನ ಅಡಿಪಾಯ ಭದ್ರವಾಗಿದೆ. ಎಲ್ಲ ರಾಜ್ಯಗಳಲ್ಲೂ ಅದನ್ನು ಬಲಿಷ್ಠವಾಗಿ ಕಟ್ಟುವ ಅಗತ್ಯವಿದೆ.

* ಮುಂದಿನ ತಿಂಗಳು ನಿಮ್ಮ ಸೋದರ ಸಂಜಯ್‌ ದತ್‌ ಜೈಲಿನಿಂದ ಬಿಡುಗಡೆಯಾಗುತ್ತಿದ್ದಾರೆ. ಈಗ ನಿಮಗೆ ಹೇಗನ್ನಿಸುತ್ತಿದೆ?
ಆತ ತಪ್ಪು ಮಾಡಿರುವುದನ್ನು ನಾವೆಲ್ಲರೂ ಒಪ್ಪುತ್ತೇವೆ. ಅದಕ್ಕೆ ನಮ್ಮ ತಂದೆಯೂ ಸೇರಿದಂತೆ ಎಲ್ಲರೂ ಶಿಕ್ಷೆ ಅನುಭವಿಸಿದ್ದೇವೆ. ಕಳೆದ 20 ವರ್ಷಗಳಿಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದಲ್ಲಾ ಒಂದು ರೀತಿಯಲ್ಲಿ ಶಿಕ್ಷೆಗೆ ಒಳಗಾಗುತ್ತಿರುವ ಅಣ್ಣ ಒಂದು ದಿನವೂ ವಿಚಾರಣೆಗೆ ತಪ್ಪಿಸಿಕೊಂಡಿಲ್ಲ. ಎಲ್ಲಾ ರೀತಿಯ ತನಿಖೆಗೂ ಸಹಕರಿಸಿದ್ದಾನೆ. ಆತ ಮಾಡಿದ ತಪ್ಪಿಗೆ ಶಿಕ್ಷೆ ಹಾಗೂ ಪಶ್ಚಾತ್ತಾಪವನ್ನೂ ಅನುಭವಿಸಿದ್ದಾನೆ. ಈ 20 ವರ್ಷಗಳನ್ನು ಆತ ಪ್ರಾಮಾಣಿಕವಾಗಿ ಕಳೆದಿದ್ದಾನೆ. ಹೀಗಾಗಿ ಹಳೆಯದನ್ನು ಕೆದಕದೆ ಮುಂದಿನ ದಿನಗಳನ್ನು ಎದುರು ನೋಡುತ್ತಿದ್ದೇವೆ.
*
ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಕಲಿಸುವುದು ಕಡ್ಡಾಯವೇ ಆದರೂ, ಎರಡನೇ ಭಾಷೆಯಾಗಿ ಇಂಗ್ಲಿಷ್‌ ಕಲಿಸುವುದನ್ನೂ ಕಡ್ಡಾಯಗೊಳಿಸಬೇಕು. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕೆಲವೊಮ್ಮೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT