ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೃಭಾಷೆ ಶಿಕ್ಷಣ: ತೀರ್ಪು ಧಿಕ್ಕರಿಸಿ

‘ಬೆಂಗಳೂರಿನ ಜನಪರ ಚಳವಳಿ’ ಗೋಷ್ಠಿಯಲ್ಲಿ ಪ್ರೊ. ಚಂದ್ರಶೇಖರ ಪಾಟೀಲ
Last Updated 6 ಮೇ 2015, 20:10 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಮಾತೃಭಾಷೆ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಕೊಟ್ಟಿರುವ ತೀರ್ಪು ಸರಿಯಲ್ಲ’ ಎಂದು ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ) ಅಭಿಪ್ರಾಯಪಟ್ಟರು.

ಬುಧವಾರ ನಡೆದ ‘ಬೆಂಗಳೂರಿನ ಜನಪರ ಚಳವಳಿ’ ಗೋಷ್ಠಿಯಲ್ಲಿ ‘ಕನ್ನಡ ಚಳವಳಿ’ ವಿಷಯದ ಕುರಿತು ಅವರು ಮಾತನಾಡಿದರು.

‘ಕನ್ನಡಕ್ಕೆ ಸಂಬಂಧಿಸಿದ ವಿಚಾರದಲ್ಲಿ ಸುಪ್ರೀಂಕೋರ್ಟ್‌ ನ್ಯಾಯ ಒದಗಿಸಿದೆ ಎಂದು ನನಗೆ ಅನಿಸುವುದಿಲ್ಲ. ಯಾವುದೋ ಒತ್ತಡಕ್ಕೆ ಮಣಿದು ತೀರ್ಪು ನೀಡಿದಂತಿದೆ’ ಎಂದರು.

‘ಮನೆಯ ಯಜಮಾನನಾದವನು ಎಲ್ಲರಿಗೂ ಒಪ್ಪಿತವಾಗುವ ನ್ಯಾಯ ಕೊಡಬೇಕು. ಒಂದು ವೇಳೆ ಆತನಿಂದಲೇ ಅನ್ಯಾಯವಾದರೆ ಸೆಟೆದು ನಿಲ್ಲಬೇಕಾಗುತ್ತದೆ. ಮಾತೃಭಾಷೆ ವಿಚಾರದಲ್ಲಿ ಸುಪ್ರೀಂಕೋರ್ಟ್‌ನಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ. ಅದನ್ನು ಧಿಕ್ಕರಿಸುವುದು ನಮ್ಮ ಕರ್ತವ್ಯ’ ಎಂದು ಹೇಳಿದರು.

‘ಸುಪ್ರೀಂಕೋರ್ಟ್‌ ಘನತೆಗೆ ಯೋಗ್ಯವಾದ ಮಾತು ಇದಲ್ಲ ಎಂಬುದು ನನಗೆ ಗೊತ್ತು. ಈ ವಿಷಯಕ್ಕೆ ಸಂಬಂಧಿಸಿ ದಂತೆ ನನ್ನನ್ನು ಜೈಲಿಗೆ ಬೇಕಾದರೂ ಹಾಕಲಿ’ ಎಂದು ಸವಾಲು ಹಾಕಿದರು.

‘ದೇಶದಲ್ಲಿ ಸುಪ್ರೀಂ ಕೋರ್ಟ್‌ಗಿಂತಲೂ ಸಂವಿಧಾನ ಉನ್ನತ ಸ್ಥಾನದಲ್ಲಿದೆ. ಅದಕ್ಕಾಗಿ ಕೇಂದ್ರ ಸರ್ಕಾರ ಆಯಾ ರಾಜ್ಯಗಳ ಮಾತೃಭಾಷೆಗೆ ಸಂಬಂಧಿಸಿದಂತೆ ಸಂವಿಧಾನಕ್ಕೆ ತಿದ್ದುಪಡಿ ಮಾಡಬೇಕು’ ಎಂದು ಆಗ್ರಹಿಸಿದರು.

‘ಸ್ವಾತಂತ್ರ್ಯ ಚಳವಳಿಯಲ್ಲಿ ಬೆಂಗಳೂರಿನ ಕಾರ್ಮಿಕ ವರ್ಗದ ದೊಡ್ಡ ಪಾತ್ರ ಇದೆ’ ಎಂದು ಸಾಮಾಜಿಕ ಕಾರ್ಯಕರ್ತ ಸಿದ್ದನಗೌಡ ಪಾಟೀಲ ಹೇಳಿದರು.

‘ದುಡಿಯುವ ಜನರ ಚಳವಳಿ’ ವಿಷಯದ ಕುರಿತು ಮಾತನಾಡಿದ ಅವರು, ‘ ಸಾಮಾಜಿಕ ಹೋರಾಟಗಳಲ್ಲಿ ದುಡಿಯುವ ವರ್ಗ ಸಕ್ರಿಯವಾಗಿ ಪಾಲ್ಗೊಳ್ಳುತ್ತ ಬಂದಿದೆ. ಅದು ಅದರ ಸಾಮಾಜಿಕ ಜವಾಬ್ದಾರಿ ಮರೆತಿಲ್ಲ’ ಎಂದರು.

‘ಅಸಂಘಟಿತ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಅವರಲ್ಲಿ ಸಾಂಸ್ಕೃತಿಕ ಎಚ್ಚರ ತರಬೇಕಾಗಿದೆ’ ಎಂದು ಹೇಳಿದರು.
‘ಮಹಿಳಾ ಮತ್ತು ಸಾಮಾಜಿಕ ಚಳವಳಿ’ ಕುರಿತು ಮಾತನಾಡಿದ ಸಾಮಾಜಿಕ ಕಾರ್ಯಕರ್ತೆ ಮಲ್ಲಿಗೆ ಅವರು, ‘ಬಕಾಸುರನಂತೆ ಬೆಳೆಯುತ್ತಿರುವ ಬೆಂಗಳೂರಿನ ಬೇಡಿಕೆಗಳನ್ನು ಈಡೇರಿಸಲು ನಗರದಲ್ಲಿ ಇಷ್ಟೊಂದು ಕೊಳೆಗೇರಿಗಳು ಬೆಳೆದಿವೆಯೇ ಹೊರತು ಯಾವುದೋ ದುರುದ್ದೇಶದಿಂದ ತಲೆ ಎತ್ತಿಲ್ಲ’ ಎಂದರು.

‘ನಗರದಲ್ಲಿ ಸಾವಿರಕ್ಕೂ ಹೆಚ್ಚು ಕೊಳೆಗೇರಿಗಳಿವೆ. ಅವುಗಳನ್ನು ಕೊಳಚೆ ಪ್ರದೇಶ ಎಂದು ಕರೆಯದೇ ಶ್ರಮಿಕ ನಗರ ಎಂಬುದಾಗಿ ಕರೆಯಬೇಕು’ ಎಂದು ಹೇಳಿದರು.

ಫ್ಯಾಸಿಸಂನಿಂದ ಚಿದಾನಂದಮೂರ್ತಿ ನಾಯಕತ್ವ ಮಂಕು
‘ಕನ್ನಡ ಚಳವಳಿಗೆ ಸಂಬಂಧಿಸಿದಂತೆ  ಹಿರಿಯ ಸಾಹಿತಿ ಎಂ. ಚಿದಾನಂದಮೂರ್ತಿ ಅವರ ನಾಯಕತ್ವ ಮಂಕಾಗಲು ಅವರೇ ನೇರ ಹೊಣೆಗಾರರು’ ಎಂದು ಚಂಪಾ ಹೇಳಿದರು.

‘ಹಿಂದೂಗಳು ಬಹು ಸಂಖ್ಯಾತರಾಗಿರುವ ಕಾರಣ ಭಾರತ ಹಿಂದೂ ರಾಷ್ಟ್ರವಾಗಬೇಕು. ಅವರು ಪೂಜಿಸುವ ಪ್ರಾಣಿ ರಾಷ್ಟ್ರೀಯ ಪ್ರಾಣಿಯಾಗಬೇಕು. ಅವರ ಭಾಷೆ ರಾಷ್ಟ್ರೀಯ ಭಾಷೆಯಾಗಬೇಕು ಎಂದು ಚಿದಾನಂದಮೂರ್ತಿ ಅವರು ಹೇಳುತ್ತಾರೆ. ಇದು ಫ್ಯಾಸಿಸಂನ ಇನ್ನೊಂದು ರೂಪ. ಇದು ಸಂಘ ಪರಿವಾರದ ಕಾರ್ಯಸೂಚಿ ಕೂಡ. ಇದಕ್ಕೆ ಯಾರೂ ಬಲಿಯಾಗಬಾರದು. ಆದರೆ, ಚಿದಾನಂದಮೂರ್ತಿ ಅವರು ಇದಕ್ಕೆ ಬಲಿಯಾಗಿದ್ದರಿಂದಲೇ ನಿಜವಾದ ಕನ್ನಡಿಗನಾಗಿ ಬೆಳೆಯಲು ಆಗಿಲ್ಲ’ ಎಂದರು.

‘ನಾಡು ಕಂಡ ಶ್ರೇಷ್ಠ ವಿದ್ವಾಂಸರಲ್ಲಿ ಚಿದಾನಂದಮೂರ್ತಿ ಅವರೂ ಒಬ್ಬರು. ಮೇಲಿಂದ ಬೌದ್ಧಿಕ ವಲಯದಿಂದ ಬಂದವರು. ಆದರೆ, ಅವರ ಫ್ಯಾಸಿಸಂ ವಿಚಾರಗಳು ಜನರಿಗೆ ಸರಿ ಎನಿಸಲಿಲ್ಲ. ಇದರಿಂದಾಗಿ ಅವರನ್ನು ಜನ ದೂರವಿಟ್ಟರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT