ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಕ ವಸ್ತು ಮೋಹಕ್ಕೆ ಸಿಲುಕದಿರಿ

Last Updated 27 ಜೂನ್ 2016, 11:00 IST
ಅಕ್ಷರ ಗಾತ್ರ

ಮೈಸೂರು: ಅಪರಾಧ ಪ್ರಕರಣಗಳ ನಿಯಂತ್ರಣ ಮಾಡಲು ಮಾದಕ ವಸ್ತು ಕಳ್ಳಸಾಗಣೆಗೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಸಿ.ಶಿಖಾ ಅಭಿಪ್ರಾಯಪಟ್ಟರು.

ನಗರದ ಕೋಟೆ ಆಂಜನೇಯಸ್ವಾಮಿ ದೇಗುಲದ ಮುಂಭಾಗದಲ್ಲಿ ಪೊಲೀಸ್‌ ಕಮಿಷನರೇಟ್‌ ವತಿಯಿಂದ ಭಾನುವಾರ ಏರ್ಪಡಿಸಿದ್ದ ‘ಮಾದಕ ವಸ್ತು ವಿರೋಧಿ ದಿನಾಚಾರಣೆ’ಯಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಮಾದಕ ವಸ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೂ, ಕಳ್ಳ ಸಾಗಣೆ ಮೂಲಕ ಇದು ಸಮಾಜವನ್ನು ಕಾಡುತ್ತಿದೆ. ಕೊಳಚೆ ಪ್ರದೇಶದ ಜನತೆ ಹಾಗೂ ಅನಕ್ಷರಸ್ಥರು ಅರಿವಿಲ್ಲದೆ ವಿಷವರ್ತುಲದಲ್ಲಿ ಸಿಲುಕುತ್ತಿದ್ದಾರೆ. ಇದು ಅಪರಾಧ ಕೃತ್ಯಗಳಿಗೂ ಕಾರಣವಾಗಿದ್ದು, ಜಾಗೃತಿಯ ಮೂಲಕ ಮಾದಕ ವಸ್ತುವನ್ನು ತೊಲಗಿಸಲು ಶ್ರಮಿಸಬೇಕಿದೆ ಎಂದರು.

ದೇಶದ ಜನಸಂಖ್ಯೆಯಲ್ಲಿ ಯುವ ಸಮೂಹ ಶೇ 30ರಷ್ಟಿದೆ. ಮಾನವಸಂಪನ್ಮೂಲದಲ್ಲಿ ವಿಶ್ವದಲ್ಲಿಯೇ ಭಾರತ ಶ್ರೀಮಂತವಾಗಿದೆ. ಆದರೆ, ವಿದ್ಯಾರ್ಥಿಗಳೂ ಸೇರಿದಂತೆ ಯುವ ಸಮೂಹ ದುಶ್ಚಟಗಳಿಗೆ ಬಲಿಯಾಗುತ್ತಿದೆ. ಜೀವನದ ಅಮೂಲ್ಯ ಕ್ಷಣಗಳನ್ನು ಹಾಳು ಮಾಡಿಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಡಾ.ಎಚ್‌.ಟಿ.ಶೇಖರ್ ಮಾತನಾಡಿ, ಮಾದಕ ವಸ್ತು ಸೇವನೆ ಮಾಡಿದ ವ್ಯಕ್ತಿ ಮಾನಸಿಕ ಸ್ಥಿಮಿತತೆ ಕಳೆದುಕೊಳ್ಳುತ್ತಾನೆ.ಗಲಾಟೆ ಸೇರಿದಂತೆ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಹೆಚ್ಚು. ಮಾದಕ ವಸ್ತು ಸೇವನೆ, ಸಾಗಣೆ, ಮಾರಾಟ ಗಮನಕ್ಕೆ ಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಕೋರಿದರು.

ಮಕ್ಕಳು ಮತ್ತು ಯುವ ಸಮೂಹದ ಆರೋಗ್ಯ ಉತ್ತಮವಾಗಿದ್ದರೆ ದೇಶವೂ ಸದೃಢವಾಗಿರುತ್ತದೆ. ಮದ್ಯಪಾನ ಮತ್ತು ಮಾದಕವಸ್ತು ಸೇವನೆ ದೇಶದ ಅಭಿವೃದ್ಧಿಗೆ ಮಾರಕವಾಗುತ್ತದೆ. ಇವುಗಳಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಬೇಕಿದೆ ಎಂದು ಹೇಳಿದರು.

ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಎನ್‌.ರುದ್ರಮುನಿ, ಅಶ್ವರೋಹಿಪಡೆಯ ಕಮಾಂಡೆಂಟ್‌ ಸಿದ್ದರಾಜು, ಎಸಿಪಿಗಳಾದ ಉಮೇಶ್‌ ಜಿ.ಸೇಟ್‌, ಸಿ.ಮಲ್ಲಿಕ್‌, ರಾಜಶೇಖರ್‌ ಪಾಲ್ಗೊಂಡಿದ್ದರು.

ಜಾಗೃತಿ ಜಾಥಾ:  ಮಾದಕ ವಸ್ತು ಸೇವನೆ ಯಿಂದ ಉಂಟಾಗುವ ದುಷ್ಪರಿಣಾಮ ಗಳ ಕುರಿತು ವಿದ್ಯಾರ್ಥಿಗಳು ಜಾಗೃತಿ ಜಾಥಾ ನಡೆಸಿದರು.
ಕೋಟೆ ಆಂಜನೇಯಸ್ವಾಮಿ ದೇಗುಲದಿಂದ ಹೊರಟ ಜಾಥಾ ದೊಡ್ಡಗಡಿಯಾರ, ಗಾಂಧಿಚೌಕ, ಅಶೋಕ ರಸ್ತೆ, ಹರ್ಷ ರಸ್ತೆಯ ಮೂಲಕ ವಿಷ್ಣುವರ್ಧನ್‌ ಉದ್ಯಾನ ತಲುಪಿತು. ‘ಮಾದಕವಸ್ತು ಆರೋಗ್ಯಕ್ಕೆ ಹಾನಿಕಾರಕ’, ‘ಕುಡಿತ ಬಿಡಿಸಿ– ಕುಟುಂಬ ಉಳಿಸಿ’ ಎಂಬ ಪ್ಲೇಕಾರ್ಡ್‌ಗಳನ್ನು ಹಿಡಿದು ಜಾಥಾದಲ್ಲಿ ಹೆಜ್ಜೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT