ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧ್ಯಮ ಪ್ರತಿನಿಧಿಗಳೇ ಪರಾರಿ!

ಸಚಿವ ಮೊಯಿಲಿ ಪರ ಆಯೋಜಿಸಿದ ಔತಣಕೂಟ
Last Updated 24 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕೇಂದ್ರ ಸಚಿವ ಹಾಗೂ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂ.ವೀರಪ್ಪ ಮೊಯಿಲಿ ವತಿಯಿಂದ ಮಾಧ್ಯಮ ಪ್ರತಿನಿಧಿಗಳಿಗೆ ನಗರದ ಹೊರವಲಯದ ರೆಸ್ಟೊರೆಂಟ್‌ನಲ್ಲಿ ಆಯೋಜಿಸಿದ್ದ ಔತಣಕೂಟದ ಸ್ಥಳಕ್ಕೆ ಚುನಾವಣಾಧಿಕಾರಿ ಮತ್ತು ಪೊಲೀಸರು ದಿಢೀರ್‌ ದಾಳಿ ನಡೆಸಿದ ಪರಿಣಾಮ ಔತಣಕೂಟದ ಆಯೋಜಕರು ಮತ್ತು ಮಾಧ್ಯಮ ಪ್ರತಿನಿಧಿಗಳು ದಿಕ್ಕಾಪಾಲಾಗಿ ಓಡಿ ಹೋದ ಘಟನೆ ಭಾನುವಾರ ರಾತ್ರಿ ನಡೆದಿದೆ.

ಶಾಸಕರೊಬ್ಬರಿಗೆ ಸೇರಿದ್ದು ಎನ್ನಲಾದ ನಗರದ ಹೊರ­ವಲಯದ ರೆಸ್ಟೊರೆಂಟ್‌ನಲ್ಲಿ ಮದ್ಯಪಾನ ಸೇವನೆ ಮತ್ತು ಮಾರಾಟ ಮಾಡಲು ಅವಕಾಶ ಇರದಿದ್ದರೂ ಮಾಧ್ಯಮ ಪ್ರತಿ­ನಿಧಿ­ಗಳಿಗೆ ಮದ್ಯ ಪೂರೈಸಲಾಗಿತ್ತು. ರೆಸ್ಟೊರೆಂಟ್‌ ಪಕ್ಕದಲ್ಲೇ ಇರುವ ಮದ್ಯದಂಗಡಿಯಿಂದ ಮದ್ಯ ತರಿಸಲಾಗಿತ್ತು ಎಂದು ತಿಳಿದು ಬಂದಿದೆ.

‘ವೀರಪ್ಪ ಮೊಯಿಲಿ ಸಾಹೇಬ್ರು ಮಾಧ್ಯಮ ಪ್ರತಿನಿಧಿ­ಗಳಿಗೆಂದೇ ಭಾನುವಾರ ರಾತ್ರಿ ಔತಣಕೂಟ ಆಯೋಜಿಸಿದ್ದು, ತಾವೆಲ್ಲರೂ ಬರಬೇಕು. ಸಾಹೇಬ್ರು ಕೂಡ ಬರುವ ಸಾಧ್ಯತೆ­ಯಿದೆ’ ಎಂದು ಸುದರ್ಶನ್‌ ಎಂಬುವರು ದೂರವಾಣಿ ಕರೆ ಮಾಡಿ ಮಾಧ್ಯಮ ಪ್ರತಿನಿಧಿಗಳಿಗೆ ಆಹ್ವಾನಿಸಿದ್ದರು. ಅದ­ರಂತೆಯೇ ಬಹುತೇಕ ಮಾಧ್ಯಮ ಪ್ರತಿನಿಧಿಗಳು ಭಾನುವಾರ ರಾತ್ರಿ 7.30ರ ಸುಮಾರಿಗೆ ರೆಸ್ಟೊರೆಂಟ್‌ ತಲುಪಿದರು. ನಿರಾತಂಕವಾಗಿ ಔತಣಕೂಟ ಮುಂದುವರೆದಿತ್ತು.

ಕೆಲವೇ ನಿಮಿಷಗಳಲ್ಲಿ ಚುನಾವಣಾಧಿಕಾರಿ, ಪೊಲೀಸರು ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು 8ರಿಂದ 10 ವಾಹನ­ಗಳಲ್ಲಿ ಸ್ಥಳಕ್ಕೆ ಬರುತ್ತಿದ್ದಂತೆ ಎಲ್ಲರೂ ಆತಂಕಗೊಂಡು ಒಮ್ಮಿಂ­ದೊಮ್ಮೆಲೇ ಅಲ್ಲಿಂದ ಓಡಿ ಹೋದರು. ಊಟ ಮಾಡುತ್ತಿ­ದ್ದವರು ಕೂಡ ಅರ್ಧಕ್ಕೆ ಬಿಟ್ಟು, ಕೈಗಳನ್ನೂ ಸಹ ತೊಳೆದು­ಕೊಳ್ಳದೆ ಪರಾರಿಯಾದರು. ರೆಸ್ಟೊರೆಂಟ್‌ನವರಿಗೂ ಮಾಹಿತಿ ನೀಡದೆ ಔತಣಕೂಟದ ಆಯೋಜಕರು ಕೂಡ ಅಲ್ಲಿಂದ ಕಾಲ್ಕಿತ್ತರು.

‘ಔತಣಕೂಟ ಆಯೋಜಿಸಿದವರ ಮತ್ತು ಪಾಲ್ಗೊಂಡವರ ವಿಡಿಯೋ ದೃಶ್ಯಾವಳಿಗಳನ್ನು ವಶಪಡಿಸಿಕೊಂಡಿವೆ. ವಿಡಿಯೋ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಚುನಾವಣಾಧಿ­ಕಾರಿಗಳೊಂದಿಗೆ ಚರ್ಚಿಸಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸುವ ಕುರಿತು ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಉಪವಿಭಾಗಾಧಿಕಾರಿ ಕೆ.ಟಿ.ಶಾಂತಲಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಬಕಾರಿ ಇಲಾಖೆಯ 1965ರ ಕಾಯ್ದೆ 8ರ ನಿಯಮಾವಳಿ ಉಲ್ಲಂಘನೆ ಮಾಡಿದ ಹೋಟೆಲ್‌ ಮತ್ತು ಮದ್ಯದಂಗಡಿ ಮೇಲೆ ಕ್ರಮ ಕೈಗೊಂಡಿದ್ದೇವೆ. ನಿಯಮ ಉಲ್ಲಂಘನೆಯಡಿ ಇದು ದಂಡಾರ್ಹ ಅಪರಾಧವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಚುನಾವಣಾಧಿಕಾರಿಗೆ ವರದಿ ಕೂಡ ಸಲ್ಲಿಸಿದ್ದೇವೆ’ ಎಂದು ಚಿಕ್ಕಬಳ್ಳಾಪುರ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕಿ ಮಂಜುಳಾಕ್ಷಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT