ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನದಂಡ ಬದಲಾಗಲಿ

ಬದನವಾಳು: ಸುಸ್ಥಿರ ಅಭಿವೃದ್ಧಿ ರಾಷ್ಟ್ರೀಯ ಸಮಾವೇಶ ಆಗ್ರಹ
Last Updated 19 ಏಪ್ರಿಲ್ 2015, 19:42 IST
ಅಕ್ಷರ ಗಾತ್ರ

ಮೈಸೂರು: ದನ ಕಾಯುವ ಹುಡುಗ, ನೂಲು ಸುತ್ತುವ ಹುಡುಗಿಯನ್ನೂ ಅಭಿವೃದ್ಧಿ ಹರಿಕಾರರಾಗಿ ಮಾನ್ಯ ಮಾಡಬೇಕು ಎಂದು ಬದನವಾಳು ಸಮಾವೇಶ ಆಗ್ರಹಪಡಿಸಿದೆ.

ಲಾಭದ ವೃದ್ಧಿ, ಕೈಗಾರಿಕಾ ಅಭಿವೃದ್ಧಿಯೇ ಜನರ ಪ್ರಗತಿಯ ಮಾನದಂಡವಲ್ಲ. ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಎಂಬ ಸೀಮಿತ ಲೆಕ್ಕಾಚಾರವಷ್ಟೇ ಅಭಿವೃದ್ಧಿಯ ಸಮಗ್ರ ಸೂಚ್ಯಂಕವಲ್ಲ. ಸಮಾನತೆ ಮತ್ತು ಸಹಕಾರ ತತ್ವಗಳನ್ನು ಪೋಷಿಸುವ ಆರ್ಥಿಕತೆಯೇ ಅಭಿವೃದ್ಧಿ. ಸಮಾಜದ ಸುಸ್ಥಿರತೆ, ಸಂಸ್ಕೃತಿಗಳ ಮುಂದುವರಿಕೆಯನ್ನೂ ಅಭಿವೃದ್ಧಿ ಮಾನದಂಡವಾಗಿ ಪರಿಗಣಿಸಬೇಕು’ ಎಂದೂ ಸಮಾವೇಶ ಪ್ರತಿಪಾದಿಸಿತು.

‘ಸುಸ್ಥಿರ ಬದುಕಿಗಾಗಿ ಶ್ರಮ ಸಹಿತವಾದ ಸರಳ ಬದುಕು ಅನಿವಾರ್ಯ ಅಗತ್ಯ’ ಎಂಬ ಕಾಯಕ ಪ್ರಜ್ಞೆಯನ್ನು ಜಾಗೃತಗೊಳಿಸಲು ಜಿಲ್ಲೆಯ ಬದನವಾಳು ಗ್ರಾಮದಲ್ಲಿ ಭಾನುವಾರ ನಡೆದ ‘ಸುಸ್ಥಿರ ಅಭಿವೃದ್ಧಿ ರಾಷ್ಟ್ರೀಯ ಸಮಾವೇಶ’ದಲ್ಲಿ ಭಾಗವಹಿಸಿದ್ದ ಅಸಂಖ್ಯ ಸಮಾನ ಮನಸ್ಕರು ಈ ಆಗ್ರಹಕ್ಕೆ ಸಾಕ್ಷಿಯಾದರು.

ಸುಸ್ಥಿರ ಮತ್ತು ಸರಳ ಬದುಕಿನ ಪ್ರತಿಪಾದನೆಗಾಗಿ ಹಿರಿಯ ರಂಗಕರ್ಮಿ ಪ್ರಸನ್ನ ಹಮ್ಮಿಕೊಂಡಿದ್ದ  ಸಮಾವೇಶದಲ್ಲಿ ಚಿಂತಕರು, ಸಾಹಿತಿಗಳು, ಪ್ರಗತಿಪರರು, ರಂಗಕರ್ಮಿಗಳು ಭಾಗವಹಿಸಿದ್ದರು. ಸರಳ ಆಚರಣೆಗಳನ್ನು ಒಳಗೊಂಡ  ವಿವಿಧ 19 ಪ್ರತಿಜ್ಞೆಗಳಿಗೆ ದನಿಗೂಡಿಸುವ ಮೂಲಕ ಬೆಂಬಲ ಸೂಚಿಸಿದರು.

‘ಪ್ರಸ್ತುತ ಅಭಿವೃದ್ಧಿಯ ಅರ್ಥವನ್ನು ಸೀಮಿತ ಮತ್ತು ವಿರೂಪಗೊಳಿಸಲಾಗಿದೆ. ಕೈಗಾರಿಕಾಭಿವೃದ್ಧಿ, ಮಾರುಕಟ್ಟೆಗಳ ಅಭಿವೃದ್ಧಿ ಅಥವಾ ಲಾಭದ ವೃದ್ಧಿಯೇ ಅಭಿವೃದ್ಧಿ ಎಂದು ಈ ಸರ್ಕಾರಗಳು, ರಾಜಕೀಯ ಪಕ್ಷಗಳು, ಅಧಿಕಾರಿಗಳ ಭಾವನೆಯಾಗಿದೆ’ ಎಂದು ಬದನವಾಳು ಘೋಷಣೆಯಲ್ಲಿ ತಿಳಿಸಲಾಗಿದೆ.

ಚಳವಳಿ ಎಂದರೆ ಆತ್ಮವಿಮರ್ಶೆ: ಪ್ರಸನ್ನ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ‘ಒಂದು ಚಳವಳಿ ಎಂದರೆ ಅದು ಕ್ರೋಧದ ನುಡಿಯಲ್ಲ. ಹಟ ಹಿಡಿಯವುದೂ ಅಲ್ಲ. ಸಂತೋಷದಿಂದಲೇ ಆತ್ಮವಿಮರ್ಶೆ ಮಾಡಿಕೊಳ್ಳುವುದು. ನನ್ನನ್ನು ಬದಲಿಸಿಕೊಳ್ಳುತ್ತಲೇ ಜಗತ್ತನ್ನು ಬದಲಿಸಬೇಕಾದ ಪ್ರಕ್ರಿಯೆ’ ಎಂದರು.

ಕೃಷಿ, ಸುಸ್ಥಿರ ಬದುಕು ಈ ಕ್ಷಣದ ಅನಿವಾರ್ಯತೆ. ಸರಳ ಬದುಕಿನ ಬಗೆಗೆ ಇಲ್ಲಿ ಪ್ರತಿಜ್ಞೆಯನ್ನು ಸ್ವೀಕರಿಸಿರುವ ಸಾವಿರಾರು ಜನರು, ಅದನ್ನು ಲಕ್ಷಾಂತರ ಜನರಿಗೆ ತಲುಪಿಸಬೇಕು’ ಎಂದು ಮನವಿ ಮಾಡಿದರು. ಪ್ರಸ್ತುತ ಪೇಟೆಯ ಮಂದಿ ಹಳ್ಳಿಯ ಶ್ರಮಸಹಿತ ಬದುಕಿನ ಮಹತ್ವವನ್ನು ಅರಿಯಬೇಕಿದೆ. ಗ್ರಾಮದ ಜನರು ಪೇಟೆಯವರ ವಿಚಾರಧಾರೆಯನ್ನು ತಿಳಿಯಬೇಕಾಗಿದೆ. ಪೇಟೆಯ ಜನರು ಹಳ್ಳಿಗಳ ಸಾಮಾಜಿಕ ವಿಷಮತೆಯನ್ನು  ಮೀರಿಸುವ ಜತೆಗೆ ಗ್ರಾಮೀಣ ಜನರಲ್ಲಿನ ಒಳ್ಳೆಯ ಅಂಶಗಳನ್ನೂ ರೂಢಿಸಿಕೊಳ್ಳಬೇಕಾಗಿದೆ ಎಂದರು.

1927ರಲ್ಲಿ ಮಹಾತ್ಮ ಗಾಂಧಿ ಭೇಟಿ ನೀಡಿದ್ದ ಬದನವಾಳು ಗ್ರಾಮವು ಈ ಸಮಾವೇಶದ ಮೂಲಕ ಈಗ ಸಮಾಜದಲ್ಲಿ ದೇಸಿಪ್ರಜ್ಞೆಯನ್ನು ಜಾಗೃತಗೊಳಿಸಿ ಗುಡಿ ಕೈಗಾರಿಕೆಗಳು, ಕೈಮಗ್ಗಗಳ ಉಳಿವಿನ ಜತೆಗೆ ಗ್ರಾಮೀಣ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT