ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವೀಯ ಚೇತನ ಕಲಾಂಗೆ ಸಹಸ್ರ ನಮನ

Last Updated 28 ಜುಲೈ 2015, 10:51 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸೋಮವಾರ ಸಂಜೆ ಇಹಲೋಕ ತ್ಯಜಿಸಿದ ಮಿಸೈಲ್ ಮ್ಯಾನ್, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರನ್ನು ಭಾರತದ ‘ನೈಜ ಪುತ್ರ’, ‘ಅನರ್ಘ್ಯ ರತ್ನ’ ಎಂದು ಕೊಂಡಾಡುವ ಮೂಲಕ ಸಂಸತ್ತು  ಗೌರವಯುತ ಸಂತಾಪ ಸೂಚಿಸಿತು.

ಕಲಾಂ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಉಭಯ ಲೋಕಸಭೆ ಹಾಗೂ ರಾಜ್ಯಸಭೆಯ ಕಲಾಪಗಳನ್ನು ದಿನದ ಮಟ್ಟಿಗೆ ಮುಂದೂಡಲಾಯಿತು. ಅಲ್ಲದೇ, ಕಲಾಂ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಂಸದರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಬುಧವಾರ ಹಾಗೂ ಗುರುವಾರವೂ ಕಲಾಪ ನಡೆಯುವುದು ಅನುಮಾನ. ಕಲಾಂ ಅವರ ಅಂತಿಮ ಸಂಸ್ಕಾರವು ತಮಿಳುನಾಡಿನ ರಾಮೇಶ್ವರಂದಲ್ಲಿ ಗುರುವಾರ ನಡೆಯಲಿದೆ ಎನ್ನಲಾಗಿದೆ.

‘ಕಲಾಂ ಅವರ ಸಾವಿನ ಮೂಲಕ ದೇಶವು ಒಬ್ಬ ಸೂಕ್ಷ್ಮಮತಿಯ ರಾಜನೀತಿಜ್ಞ, ಮಹಾನ್ ವಿಜ್ಞಾನಿ, ಶೋಷಿತರ ಸ್ನೇಹಿತ ಹಾಗೂ ಮಾನವತಾವಾದಿಯನ್ನು ಕಳೆದುಕೊಂಡಿದೆ’ ಎಂದು ಸಂತಾಪ ಸೂಚಕ ನಿಲುವಳಿಯಲ್ಲಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ನುಡಿದರು.

‘ಕಲಾಂ ಅವರು 83 ವರ್ಷದ ಆದರ್ಶ ವ್ಯಕ್ತಿ. 38 ವರ್ಷದ ಉತ್ಸಾಹ, ಶಕ್ತಿ ಅವರಲ್ಲಿತ್ತು. 8 ವರ್ಷದ ಮಗುವಿನ ಮುಗ್ಧ ಮಂದಹಾಸದ ಉದಾತ್ತ ವ್ಯಕ್ತಿ’ ಎಂದು ಮಾಜಿ ರಾಷ್ಟ್ರಪತಿ ಅವರನ್ನು ಸ್ಪೀಕರ್‌ ಕೊಂಡಾಡಿದರು.

ರಾಜ್ಯಸಭೆ ಉದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಕಲಾಂ ಅವರ ನಿರ್ಗಮನ ‘ದೇಶಕ್ಕೆ ತುಂಬಲಾರದ ನಷ್ಟ’ ಎಂದರು.

ಅಲ್ಲದೇ, ‘ಅವರು ಭಾರತದ ನಿಜವಾದ ಸುಪುತ್ರ. ವಿಜ್ಞಾನಿಯಾಗಿ, ಶಿಕ್ಷಕರಾಗಿ ಹಾಗೂ ನಾಯಕರಾಗಿ ಅವರು ದೇಶಕ್ಕೆ ನೀಡಿದ ಕೊಡುಗೆಯನ್ನು ರಾಷ್ಟ್ರವು ಸ್ಮರಿಸಲಿದೆ’ ಎಂದು ನುಡಿದರು.

ಸದನಗಳ ಕಲಾಪ ಮುಂದೂಡುವ ಮುನ್ನ ಉಭಯ ಸದನಗಳಲ್ಲಿ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕೃಷಿ ಕಾಲೇಜಿಗೆ ಕಲಾಂ ಹೆಸರು: ಇನ್ನು, ಕಲಾಂ ಅವರಿಗೆ ಭಾವಪೂರ್ಣ ಶ್ರದ್ಧಾಜಂಲಿ ಸಲ್ಲಿಸಿದ ಬಿಹಾರ್‌, ಕಿಸಾನ್‌ಗಂಜ್ ಕೃಷಿ ಕಾಲೇಜಿಗೆ ಕಲಾಂ ಅವರ ಹೆಸರನ್ನಿಟ್ಟಿದೆ.

‘ಕೃಷಿ ಕಾಲೇಜನ್ನು ಇನ್ಮುಂದೆ ಡಾ.ಕಲಾಂ ಕೃಷಿ ಕಾಲೇಜ್ ಕಿಸಾನ್‌ಗಂಜ್‌’ ಎಂದು ಕರೆಯಲಾಗುವುದು ಎಂದು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶೈಕ್ಷಣಿಕ ಸಾಲ ಯೋಜನೆಗೆ ಕಲಾಂ ಹೆಸರು: ಸರ್ಕಾರದ ವತಿಯಿಂದ ನೀಡಲಾಗುವ 10 ಲಕ್ಷ ರೂಪಾಯಿ ಶೈಕ್ಷಣಿಕ ಸಾಲ ಯೋಜನೆಗೆ ಡಾ.ಕಲಾಂ ಅವರ ಹೆಸರನ್ನು ಇಡುವುದಾಗಿ ದೆಹಲಿ ಸರ್ಕಾರ ಮಂಗಳವಾರ ಸ್ಪಷ್ಟಪಡಿಸಿದೆ.

ವಿದೇಶದಲ್ಲಿ ಕಲಾಂ ಸ್ಮರಣೆ: ಕಲಾಂ ನಿರ್ಗಮನಕ್ಕೆ ಸಂತಾಪ ವ್ಯಕ್ತಪಡಿಸಿರುವ ಸಿಂಗಪುರ ಪ್ರಧಾನಿ ಲೀ ಸಿಯೆನ್‌, ಎಪಿಜೆ ಅವರನ್ನು ‘ಜನತೆಯ ರಾಷ್ಟ್ರಪತಿ’ ಎಂದು ಕೊಂಡಾಡಿದ್ದಾರೆ.

ನೆರೆ ರಾಷ್ಟ್ರ ನೇಪಾಳದಲ್ಲಿ ಕಲಾಂ ಅವರ ಸಾವಿಗೆ ಸಾಮಾಜಿಕ ಜಾಲತಾಣಗಳ ಮೂಲಕ ‍ರಾಜಕೀಯ ಪಕ್ಷಗಳು ನಾಯಕರು, ನಾಗರಿಕರೆಂಬ ಭೇದವಿಲ್ಲದೇ ಸಂತಾಸ ಸೂಚಿಸಿದ್ದಾರೆ.

ಕ್ರಿಕೆಟಿಗರನ್ನೂ ಬಿಡದ ‘ಕಲಾಂ’ ಮಾಯೆ
ನವದೆಹಲಿ/ ಚೆನ್ನೈ (ಐಎಎನ್ಎಸ್/ಪಿಟಿಐ)
: ‘ನಾನು ಹಲವು ಬಾರಿ ಕಲಾಂ ಅವರನ್ನು ಭೇಟಿಯಾಗಿದ್ದೆ. ವೈಯಕ್ತಿಕ ಪರಿಚಯವಿತ್ತು. ನಾನೂ ಮಾತ್ರವಲ್ಲ ಅವರನ್ನು ಭೇಟಿಯಾಗಿದ್ದ ಎಲ್ಲರೂ ಅವರ ಸರಳತೆ ಅನುಭವ ಆಗಿದೆ ಎಂದು ಒಪ್ಪುತ್ತಾರೆ. ಅವರ ಸರಳತೆಯಿಂದಾಗಿಯೇ ಜನರು ಆಕರ್ಷಿತರಾಗುತ್ತಿದ್ದರು’ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ತಿಳಿಸಿದ್ದಾರೆ.

ವಿಷನ್‌2020 ಕೃತಿ ಸ್ಫೂರ್ತಿದಾಯಕ: ಇನ್ನು, ಕಲಾಂ ಅವರಿಗೆ ಚೆನ್ನೈನಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಕ್ರಿಕೆಟಿಗ ಚೇತೇಶ್ವರ್ ಪೂಜಾರ, ‘ಅವರ ಹಲವು ಕೃತಿಗಳನ್ನು ನಾನು ಓದಿರುವೆ. ಅದರಲ್ಲಿ ವಿಷನ್ 2020 ತುಂಬ ಸ್ಫೂರ್ತಿದಾಯಕ’ ಎಂದು ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT