ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಪ್ರೀತಿಯ ಪರಿಮಳದ ಹೂವು

ವಿಮರ್ಶೆ
Last Updated 3 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಅದ್ದ್ಯಾ
ಲೇ:
ಪುಷ್ಪಮಾಲಾ ದೇಸಾಯಿ
ಪು: 112
ರೂ. 100
ಪ್ರ: ಮನೋಹರ ಗ್ರಂಥ ಮಾಲಾ, ಲಕ್ಷ್ಮೀ ಭವನ, ಸುಭಾಷ ರಸ್ತೆ, ಧಾರವಾಡ– 580 001.

ಸತ್ಯವೆನ್ನುವುದು ಸರಳವೆಂದರೆ ಸರಳವಿರುತ್ತದೆ. ಆದರೆ, ಅದನ್ನು ಅತ್ಯಂತ ಸಂಕೀರ್ಣಗೊಳಿಸಿಕೊಳ್ಳುವುದು ಮನುಷ್ಯನ ಹಣೆಬರಹ ಎಂದು ತತ್ವಜ್ಞಾನಿಯೊಬ್ಬ ಹೇಳುತ್ತಾನೆ. ಆದರೆ ಹೆಣ್ಣಿನ ಮಟ್ಟಿಗೆ ಇದನ್ನು ಬೇರೆ ರೀತಿಯಲ್ಲಿಯೇ ವ್ಯಾಖ್ಯಾನಿಸಿಕೊಳ್ಳಬೇಕಾಗುತ್ತದೆ. ಹೆಣ್ಣನ್ನು ಕುರಿತ ಸರಳವಾದ ಸತ್ಯವನ್ನು , ಕಣ್ಣಿಗೆ ಹೊಡೆಯುವಂತೆ ಕಾಣಿಸುತ್ತಿರುವ ಸತ್ಯವನ್ನು ತನ್ನ ಅಧಿಕಾರ ಕೇಂದ್ರದ ಶಕ್ತಿ ಸಂವರ್ಧನೆಗಾಗಿಯೇ ಬಳಸಿಕೊಳ್ಳಲಾಗುತ್ತಾ ಹೋಗುತ್ತದೆ. ಈ ಪ್ರಕ್ರಿಯೆಯಲ್ಲಿ ಹೆಣ್ಣಿನ ವ್ಯಕ್ತಿತ್ವವೇ ಅಳ್ಳಕವಾಗುತ್ತಾ, ಅವಳ ಅಧೀನತೆಯ ನೆಲೆಯೇ ಆಳವಾಗಿ ಸ್ಥಾಪಿತವಾಗುತ್ತಾ ಹೋಗುತ್ತದೆ.

ಇದೆಲ್ಲದರ ಮೂಲದಲ್ಲಿ ಹೆಣ್ಣಿನ ಅಸಾಧಾರಣವೆನ್ನಬಹುದಾದ ಧಾರಣ ಸಾಮರ್ಥ್ಯವನ್ನು ಕುರಿತ ಭಯವೇ ಇರುತ್ತದೆ ಎನ್ನುವ ಸತ್ಯ ನಿತ್ಯ ನಿರಂತರವೆನ್ನುವಂತೆ ನಮ್ಮ ಕಣ್ಣ ಮುಂದೆ ಹಾಯುತ್ತಲೇ ಇದ್ದರೂ ಅದನ್ನು ಒಪ್ಪಲಾಗದ ವಿಪರ್ಯಾಸದ ಮೌಲ್ಯವ್ಯವಸ್ಥೆ ನಮ್ಮನ್ನು ಆಳುತ್ತಿರುತ್ತದೆ. ನಮ್ಮ ಬುದ್ಧಿ ಭಾವಗಳನ್ನು ಹೀಗೆ ಮೂರ್ತವಾಗಿ ಅಮೂರ್ತವಾಗಿ ಹಬ್ಬಿ ಆವರಿಸಿರುವ ಹಾವಸೆಯಿಂದ ಹೆಣ್ಣು ಪಾರಾದರೆ ಮಾತ್ರ, ಅಲ್ಲಿ ಹೊಸ ಹೆಣ್ಣು ಕಾಣಿಸುತ್ತಾಳೆ.

ಇತ್ತೀಚೆಗೆ  ಪ್ರಕಟವಾಗಿರುವ ಪುಷ್ಪಮಾಲಾ ದೇಸಾಯಿಯವರ ‘ಅದ್ದ್ಯಾ’ ಕೃತಿ ಇಂಥ ಹಲವು ಸಂಗತಿಗಳನ್ನು ನಮ್ಮೆದುರಿಗೆ ಪ್ರಸ್ತುತ ಪಡಿಸುತ್ತದೆ. ಹೆಣ್ಣುಮಕ್ಕಳ ಅಪೂರ್ವ ವ್ಯಕ್ತಿತ್ವಗಳನ್ನು ಯಾವಾಗಲೂ ಅಪವಾದ ಎನ್ನುವ ನೆಲೆಯಲ್ಲಿಯೇ ಗ್ರಹಿಸುವ ದೃಷ್ಟಿಕೋನವನ್ನೂ ಬಹಳ ಶಕ್ತವಾಗಿ, ಎಚ್ಚರಿಕೆಯಿಂದ ರೂಪಿಸಲಾಗಿದೆ. ಆದ್ದರಿಂದಲೇ ‘ಬೋಲ್ಡ್’, ‘ಗಟ್ಟಿಗಿತ್ತಿ’ ಎನ್ನುವ ವಿಶೇಷಣಗಳನ್ನು ವಿಶೇಷಣಗಳಂತೆಯೂ ಹೀಯಾಳಿಕೆಯಂತೆಯೂ ಎರಡು ಮಜಲಿನ ಅರ್ಥ ಪರಂಪರೆಗಳಲ್ಲಿಯೇ ಸಾಮಾನ್ಯವಾಗಿ ಬಳಸಲಾಗುತ್ತದೆ. ಎಂಥ ಪರಿಸ್ಥಿತಿಯನ್ನೂ ಲೀಲಾಜಾಲವಾಗಿ ಎಂಬಂತೆ ಎದುರಿಸಿ ಹರಿಯುವ ನೀರಿನಂತೆ ಜೀವಂತಿಕೆಯಲ್ಲಿ ತನ್ನ ಬದುಕನ್ನು ನಿಭಾಯಿಸುವ ಕೋಟ್ಯಂತರ ಹೆಣ್ಣುಮಕ್ಕಳ ಬದುಕನ್ನು ಇದು ಅವರ ವಿಧಿಯೋ ಎಂಬಂತೆ ಗುಣವಿಶೇಷಣಗಳಿಲ್ಲದ ಬರಡು ವ್ಯಕ್ತಿತ್ವದಂತೆ ನೋಡುವುದರಲ್ಲಿಯೇ ನಮ್ಮ ಮೌಲ್ಯ ವ್ಯವಸ್ಥೆಯ ಕ್ರೌರ್ಯವಿರುತ್ತದೆ.

ಭಾರತೀಯ ಸಮುದಾಯದಲ್ಲಿ ಇತ್ತೀಚೆಗೆ ಬದಲಾಗುತ್ತಿರುವ ವಿಧವೆಯರ ಗತಿಸ್ಥಿತಿಗಳು ಆಶಾದಾಯಕ ಎನ್ನುವುದು ನಿಜ. ಆದರೆ, ಈ ವಿಧವೆಯರು ಎದುರಿಸಿದ ಹಾಡುಪಾಡುಗಳು ತೆರೆದಿಡುವ ದುರಂತ ಅಧ್ಯಾಯಗಳು ಒಂದು ಕಡೆಯಾದರೆ, ತಮ್ಮ ಆತ್ಮಬಲದಿಂದಲೇ ಇದನ್ನೆಲ್ಲ ಎದುರಿಸಿ ನಿಂತ ಹೆಣ್ಣು ಮಕ್ಕಳ ಕಥನಗಳು ಅನಾವರಣಗೊಳಿಸುವ ವ್ಯಕ್ತಿತ್ವವು ದುರಂತ ನಾಯಕಿಯರ ವ್ಯಾಖ್ಯಾನವನ್ನೇ ಬದಲಿಸುವಷ್ಟು ಶಕ್ತವಾಗಿರುತ್ತವೆ. ಮೌಲ್ಯವ್ಯವಸ್ಥೆಯ ಆತ್ಮಸಾಕ್ಷಿಯನ್ನೇ ಕಲಕುವಷ್ಟು ಇವು ಮಾನವೀಯವಾಗಿಯೂ, ದೃಢವಾಗಿಯೂ ಇರುತ್ತವೆ.

‘ಅದ್ದ್ಯಾ’ಅಂಥ ಒಂದು ವ್ಯಕ್ತಿತ್ವ. ಆರಂಭದಲ್ಲಿ ಈ ವ್ಯಕ್ತಿಚಿತ್ರಣದ ಹಿನ್ನೆಲೆಯನ್ನು ಲೇಖಕಿ ತನಗೆ ತಾನೇ ಎಂಬಂತೆ ಹೇಳಿಕೊಳ್ಳುವ ಕೆಲವು ಮಾತುಗಳಿವೆ. ನಿಜವೆಂದರೆ, ಸತತವಾಗಿ ಕಾಡಿದ, ಕಾಡುತ್ತಲೆ ಇರುವ ಅದ್ದ್ಯಾನ ವ್ಯಕ್ತಿತ್ವವು, ಹೆಣ್ಣು ತನ್ನ ನಿದ್ದೆ ಎಚ್ಚರಗಳಲ್ಲಿ ಹಂಬಲಿಸುತ್ತಿರುವ, ಪ್ರಯತ್ನಿಸುತ್ತಿರುವ ಹೆಣ್ಣಿನ ವ್ಯಕ್ತಿತ್ವವೇ ಆಗಿದೆ. ಸವಾಲುಗಳೇ ಹೆಣ್ಣನ್ನು ಕಟ್ಟುತ್ತಾ ಹೋಗುತ್ತವೆ ಎನ್ನುವುದು ಕ್ಲೀಷೆಯಾದರೂ ಪರಮ ಸತ್ಯ ಎನ್ನುವುದನ್ನು ನೂರು ಸನ್ನಿವೇಶಗಳಲ್ಲಿ ಗಮನಿಸಿಯೂ, ಸ್ವತಃ ತಾನೇ ಎದುರಿಸಿಯೂ ಕೆಲವು ನಿರ್ಣಾಯಕ ಗಳಿಗೆಗಳಲ್ಲಿ ಹೆಣ್ಣು ಅಧೀರಳಾಗಿ ತತ್ತರಿಸಿ ಮತ್ತೆ ತನ್ನನ್ನು ತಾನೇ ಸಂಭಾಳಿಸಿಕೊಂಡು ಮುಂದುವರಿಯುವುದು, ತನ್ನಲ್ಲಿ ಬೇರೂರಿರುವ ಮನೋವಿನ್ಯಾಸದ ಕಾರಣಕ್ಕಾಗಿ. ಈ ಹೋಗುತ್ತ ಕೊಯ್ಯುವ ಬರುತ್ತ ಕೊಯ್ಯುವ ಮನಸ್ಥಿತಿಯಿಂದ ತನ್ನನ್ನು ಪಾರು ಮಾಡಿಕೊಳ್ಳಲು ಅವಳಿಗೆ ಹೊರಗಿನ ಸಹಾಯ ಸಿಕ್ಕುವುದು ಕಡಿಮೆ. ‘ಸ್ವಸಹಾಯ ಪದ್ಧತಿ’ ಎನ್ನುವುದು ಹೆಣ್ಣುಮಕ್ಕಳ ಪಾಲಿನ ಇನ್ನೊಂದು ಸತ್ಯ.

ಈ ಕೃತಿಯ ಅದ್ದ್ಯಾ ಹಾಗೆ ಸ್ವಸಹಾಯ ಪದ್ದತಿಯನ್ನು ತನ್ನ ಕುರುಡುತನದಲ್ಲಿಯೂ ಉದ್ದಕ್ಕೂ ಪಾಲಿಸುತ್ತಾಳೆ ಎನ್ನುವುದು ಅವಳ ವ್ಯಕ್ತಿತ್ವದ ಘನತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಈ ನಿಲುವು ಅವಳಿಗೆ ಕೊಟ್ಟ ಬಹು ದೊಡ್ಡ ಬಲ ಯಾವುದು ಎನ್ನುವುದನ್ನು ಲೇಖಕಿಯ ಮಾತುಗಳಿಂದಲೇ ನಾವು ಗ್ರಹಿಸಬಹುದು. ಅದ್ದ್ಯಾಳಿಗೆ ತಾನು ಬೇರೆಯವರ ಮನೆಯಲ್ಲಿದ್ದೇನೆ ಅಥವಾ ಅವರ ಹಂಗಿನಲ್ಲಿ ತಾನು ಇದ್ದೇನೆ ಎನ್ನುವ ಭಾವನೆ ಇರಲಿಲ್ಲ ಎನ್ನುವುದಾದರೆ, ಅದಕ್ಕೆ ಅವಳಿಗಿದ್ದ ಆತ್ಮಘನತೆ ಮತ್ತು ತಾನು ಮಾಡುತ್ತಿದ್ದ  ಶ್ರಮದ ಅರಿವು ಇದ್ದದ್ದೇ ಕಾರಣ.

ಅದ್ದ್ಯಾಳ ವ್ಯಕ್ತಿತ್ವದ ಒಂದು ಮುಖ್ಯ ಕೇಂದ್ರವೆಂದರೆ, ವಿಧವೆಯರು ಎಂದರೆ, ಅವರು ಸಂಬಳವಿಲ್ಲದ ಕೆಲಸಗಾರರು ಎನ್ನುವ, ಅಥವಾ ಅವರೊಂದು ‘ಸೇವಾ ಕ್ಷೇತ್ರ’ ಎನ್ನುವ ತಮ್ಮಷ್ಟಕ್ಕೆ ತಾವೇ ತೀರ್ಮಾನಿಸಿಬಿಡುವ ನಿಲುವನ್ನು ಬುಡ ಸಮೇತ ಕಿತ್ತು ಹಾಕಲು ನಡೆಸುವ ಪ್ರಯತ್ನ. ತನ್ನ ಅಕ್ಕನ ಮಗನ ಮನೆಯ ಮಕ್ಕಳನ್ನು ತನ್ನ ಕರುಳ ಕುಡಿಗಳೋ ಎನ್ನುವಷ್ಟು ವಾತ್ಸಲ್ಯದಲ್ಲಿ, ಕಾಳಜಿಯಲ್ಲಿ ಬೆಳಸುತ್ತಲೇ ಅದ್ದ್ಯಾ ಆ ಮನೆಯ ಆಗುಹೋಗುಗಳಲ್ಲಿ, ತೆಗೆದುಕೊಳ್ಳಬೇಕಾದ ತೀರ್ಮಾನಗಳಲ್ಲಿ ತನ್ನ ಪಾತ್ರವನ್ನು ಯಾವ ಸಂಕೋಚವೂ ಇಲ್ಲದೆ ಸ್ಥಾಪಿಸುತ್ತಾ ಹೋಗುತ್ತಾಳೆ. ಅಕ್ಕನ ಮಗ, ‘ನೀ ಎಲ್ಲಾದರಾಗೂ ನಿನ್ನ ಹಲ್ಲು ಮುಂದ ಮಾಡಿಕೊಂಡು ಬರಬೇಡ’ ಎಂದು ತಮಾಷೆಯಲ್ಲಿ, ವ್ಯಂಗ್ಯದಲ್ಲಿ, ಹೇಳಿದಾಗಲೂ ಆಕೆ ಹಿಂಜರಿಯುವುದಿಲ್ಲ ಎನ್ನುವುದು ಅದ್ದ್ಯಾನ ವಿಶೇಷ. (ಕೃತಿಯ ಮುಖಪುಟದಲ್ಲಿ ಹಾಕಿರುವ ಆಕೆಯ ಭಾವಚಿತ್ರದಲ್ಲಿಯೂ ಈ ಅಂಶ ಕಾಣಿಸುತ್ತದೆ).

ದೈಹಿಕ ನ್ಯೂನತೆಯಂತೂ ಹೆಣ್ಣುಮಕ್ಕಳನ್ನು ಇನ್ನಿಲ್ಲದಂತೆ ಕುಗ್ಗಿಸಿಬಿಡುತ್ತದೆ. ಆದರೆ, ಮುಂದೆ ಬಂದ ಹಲ್ಲುಗಳೋ, ನಡುಹರೆಯಕ್ಕೂ ಮುಂಚೆಯೇ ಕುರುಡಾದ ಕಣ್ಣುಗಳೋ ಈ ಯಾವುದೂ ಅದ್ದ್ಯಾಳ ಆತ್ಮವಿಶ್ವಾಸವನ್ನಾಗಲೀ ಜೀವನಪ್ರೀತಿಯನ್ನಾಗಲೀ ಕಸಿಯುವುದಿಲ್ಲ. ತನ್ನಲ್ಲಿ ಯಾವ ನ್ಯೂನತೆಯೂ ಇಲ್ಲವೇನೋ ಎನ್ನುವ ದೃಢತೆಯಲ್ಲಿಯೇ ಅದ್ದ್ಯಾ ತನ್ನ ಬದುಕನ್ನು ಮುನ್ನಡೆಸುತ್ತಾಳೆ. ನೀರೊಲೆಗೆ ಉರಿ ಹಾಕುವುದರಿಂದ ಹಿಡಿದು, ಬಾವಿಯಿಂದ ನೀರು ಸೇದುವ ತನಕ, ಮಕ್ಕಳಿಗೆ ಸ್ನಾನ ಮಾಡಿಸುವ ತನಕ ಅವಳು ಅತ್ಯಂತ ಸಹಜವಾಗಿ ತನ್ನ ನಿತ್ಯಬದುಕನ್ನು ಲೀಲಾಜಾಲವಾಗಿ ನಿರ್ವಹಿಸುತ್ತಾಳೆ.

ಅದ್ದ್ಯಾಳ ವ್ಯಕ್ತಿತ್ವದ ಇನ್ನೊಂದು ಕೇಂದ್ರ ಅವಳ ಜೀವಜಾಲವನ್ನು ಕುರಿತ ಅದಮ್ಯ ಪ್ರೀತಿ. ಕರ್ಮಠ ಬ್ರಾಹ್ಮಣ ಕುಟುಂಬದಲ್ಲಿ, ಕುರುಡು ಸಂಪ್ರದಾಯಗಳ ನಡುವೆ ಬದುಕುತ್ತಿದ್ದ ಆಕೆ, ಹಬ್ಬದ ಸಂದರ್ಭವೊಂದರಲ್ಲಿ, ಮುನ್ನಾದಿನವೇ ಮಾಡಿದ್ದ ಉಂಡೆಯನ್ನು ತಿನ್ನಲು ಮನೆಯ ಮಗು ಹಟ ಮಾಡುತ್ತಿದ್ದಾಗ, ‘‘ಸುಶ್ಲಾಬಾಯಿ, ದೇವರು ಎಳೆಮಕ್ಕಳೊಳಗ ವಿಶೇಷ ಇರ್ತಾನ, ದೇವರಿಗೆ ಆ ಉಂಡೆ ತೋರಿಸಿ, ಮಗೂಗ ತಿನ್ನಲಿಕ್ಕೆ ಕೊಡು, ಮಕ್ಕಳನ್ನ ಮರಮರ ಮರಗಿಸಬಾರದು’’ ಎನ್ನುತ್ತಾಳೆ. ಇನ್ನೊಂದು ಸಂದರ್ಭದಲ್ಲಿ, ತನ್ನ ಅಕ್ಕನ ಮಗ ತನ್ನ ಹೆಂಡತಿಯ ಸೀರೆಯನ್ನು ಯಾರಿಗೋ ದಾನ ಮಾಡಿದಾಗ ಮುಲಾಜಿಲ್ಲದೆ, ‘‘ನೀನು ಸುಶ್ಲಾಬಾಯಿಗೆ ಸೀರಿನರೆ ತಂದು ಕೊಡು, ಇಲ್ಲಾ ಅದರ ರೊಕ್ಕ ಕೊಡು’’ ಎಂದು ಖಡಾಖಂಡಿತವಾಗಿ ಹೇಳುತ್ತಾಳೆ.

‘ಪುಟ್ಟ ವಿಧವೆ’ ಕವಿತೆಯಲ್ಲಿ ಬೆಂದ್ರೆಯವರು ಹೇಳುವ ‘ಹಿಟ್ಟು ಅವಲಕ್ಕಿಗಳ ಮೂಲಕ್ಕೆ ಹುಟ್ಟಿದಳೋ’ ಎನ್ನುವ ಚಿತ್ರಕ್ಕೆ ವಿರುದ್ಧವಾದ ವ್ಯಕ್ತಿತ್ವ ಅದ್ದ್ಯಾಳದು. ಜೀವ ಹಿಡಿ ಮಾಡಿಕೊಂಡು, ಪ್ರತಿ ತುತ್ತನ್ನೂ ಹಂಗಿನಲ್ಲಿ, ಕಣ್ಣೀರಿನಲ್ಲಿ ತಿನ್ನುವ ವಿಧವೆ ಇಲ್ಲಿಲ್ಲ. ತಾನೂ ಆ ಮನೆಯ ಅಧಿಕಾರ ಕೇಂದ್ರಗಳಲ್ಲಿ ಒಬ್ಬಳು ಎನ್ನುವುದನ್ನು, ಹಕ್ಕಿನಲ್ಲೂ, ಮಾನವೀಯ ಘನತೆಯಲ್ಲೂ ತೋರಿಸುವ ಈ ಅದ್ದ್ಯಾ, ಒಂದ್ ಶಕ್ತಿಕೋಶದಂತೆ ಭಾಸವಾಗುತ್ತಾಳೆ. ದೈನ್ಯ ಮತ್ತು ಅಹಂಕಾರ ಎನ್ನುವ ಎರಡೂ ವಿಕಾರಗಳಿಂದ ಪಾರಾಗಿ ಮಾನವ ಪ್ರೀತಿಯ ಪರಿಮಳದ ಹೂವಾಗಿ ಅರಳುತ್ತಾ ಹೋಗುತ್ತಾಳೆ.

ಈ ಕೃತಿಯಲ್ಲಿ ಬರುವ ಕಾಮತ್ ಬಾಯಿ ಕೂಡ ಒಂದು ಕುತೂಹಲಕರ ವ್ಯಕ್ತಿತ್ವ. ಈ ಹೆಣ್ಣೂ ಕೂಡ ಮೌಲ್ಯವ್ಯವಸ್ಥೆಯನ್ನು ತನ್ನ ನಡವಳಿಕೆಯಿಂದಲೇ ಧಿಕ್ಕರಿಸುತ್ತಾ ತನ್ನ ಬದುಕಿನ ದಾರಿಯನ್ನು ತಾನೇ ನಿರ್ಮಿಸಿಕೊಳ್ಳುತ್ತಾ ಹೋಗುತ್ತಾಳೆ, ಮತ್ತೆ ಇಲ್ಲಿಯೂ ಮುಖ್ಯವಾಗುವುದು ಅದೇ ಹೆಣ್ಣಿನ ನೈತಿಕ ಶಕ್ತಿ. ಈ ಕೃತಿ ಪ್ರಿಯವಾಗುವುದು, ಅಸಾಮಾನ್ಯ ಹೆಣ್ಣಿನ ಚಿತ್ರವೊಂದನ್ನು ಇದು ಕೊಡುತ್ತದೆ ಎಂದಲ್ಲ, ಹೆಣ್ಣಿನ ಅಸಾಮಾನ್ಯ ಗುಣಗಳನ್ನು ಎತ್ತಿಹಿಡಿಯುತ್ತದೆ ಎಂದು. ಹೆಣ್ಣನ್ನು, ಅವಳ ಛಾತಿಯನ್ನು ಕುರಿತ ನಮ್ಮ ನಂಬಿಕೆ, ಪ್ರೀತಿ, ಗೌರವವನ್ನು ಸಕಾರಣವಾಗಿ ಹೆಚ್ಚಿಸುತ್ತದೆ ಎನ್ನುವ ಕಾರಣಕ್ಕಾಗಿ. ಒಂದು ಕಲಾಪಠ್ಯ ಎಂದು ನೋಡುವಾಗ ಇದರಲ್ಲಿ ನಮಗೆ ಅನೇಕ ಪ್ರಶ್ನೆಗಳು ಎದುರಾಗುತ್ತವೆ. ಆದರೆ, ಅದನ್ನೂ ಮೀರಿದ ಹೆಣ್ಣಿನ ರೇಖಾಚಿತ್ರದ ಕಾರಣಕ್ಕಾಗಿ ಇದು ನಮಗೆ ಆಪ್ತವಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT