ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಸಹಿತ ಯಾನ ತಂತ್ರಜ್ಞಾನ ಪ್ರಗತಿಯಲ್ಲಿ: ಇಸ್ರೊ

ಮಾನವ ಹಸ್ತಕ್ಷೇಪವಿಲ್ಲದೆ ಉಪಗ್ರಹಗಳು ಸ್ವಯಂ ಕಾರ್ಯ ನಿರ್ವಹಿಸುವ ಕೃತಕ ಬುದ್ಧಿಮತ್ತೆ
Last Updated 27 ಜೂನ್ 2016, 23:30 IST
ಅಕ್ಷರ ಗಾತ್ರ

ಬೆಂಗಳೂರು: ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸುವ ‘ಮಾನವ ಸಹಿತ ಯಾನ’ ತಂತ್ರಜ್ಞಾನ ಮತ್ತು ಉಪಗ್ರಹಗಳು ಮಾನವ ಹಸ್ತಕ್ಷೇಪವಿಲ್ಲದೆ ಸ್ವಯಂ ಕಾರ್ಯ ನಿರ್ವಹಿಸುವ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ  (ಇಸ್ರೊ) ಸಿದ್ಧಿಸಿಕೊಂಡಿದೆ. ಇಸ್ರೊ ಅಧ್ಯಕ್ಷ ಎ.ಎಸ್‌.ಕಿರಣ್‌ ಕುಮಾರ್‌ ‘ಪ್ರಜಾವಾಣಿ’ಗೆ ಈ ವಿಷಯ ತಿಳಿಸಿದರು.

‘ಚಂದ್ರಯಾನ–1’ ಮತ್ತು ‘ಮಂಗಳಯಾನ’ದ ಬಳಿಕ ಮಾನವನನ್ನು ಬಾಹ್ಯಾಕಾಶಕ್ಕೆ ಒಯ್ಯುವ  ‘ಮಾನವ ಸಹಿತ ಬಾಹ್ಯಾಕಾಶ ನೌಕೆ’ಯನ್ನು ಇಸ್ರೊ ಸಿದ್ಧಗೊಳಿಸುತ್ತಿದೆಯೇ? ಹಾಗಿದ್ದರೆ ಯಾವಾಗ ಬಾಹ್ಯಾಕಾಶ ನೌಕೆಗೆ ಉಡಾವಣೆ ಮಾಡುತ್ತದೆ ಎಂಬ ಪ್ರಶ್ನೆಗೆ ನೇರ ಉತ್ತರ ನೀಡದ ಕಿರಣ್‌ಕುಮಾರ್‌, ಈ ನಿಟ್ಟಿನಲ್ಲಿ ಇಸ್ರೊ ಮಾಡಿಕೊಂಡಿರುವ ತಯಾರಿಗಳನ್ನು ವಿವರಿಸಿದರು.

‘ಸರ್ಕಾರ ಇದಕ್ಕೆ  ಒಪ್ಪಿಗೆ ನೀಡಿದರೆ, ಅಂತಹ ಉಡಾವಣೆಯ ಸಾಮರ್ಥ್ಯ ನಮ್ಮ ಬಳಿ ಇದೆ’ ಎಂದು ಹೇಳಿದರು. ‘ಕ್ಯಾಪ್ಸೂಲ್‌ ಉಡಾವಣೆ ಮತ್ತು ಅದನ್ನು ಸುರಕ್ಷಿತವಾಗಿ ಮರುವಶಕ್ಕೆ ತೆಗೆದುಕೊಳ್ಳುವ ಪರೀಕ್ಷೆ ಯಶಸ್ವಿಯಾಗಿದೆ. ಕ್ಯಾಪ್ಸೂಲ್‌ ಉಡಾವಣೆ ಮತ್ತು ಮರುವಶಕ್ಕೆ ತೆಗೆದುಕೊಳ್ಳುವ ಸಂದರ್ಭದಲ್ಲಿ ತೊಂದರೆ ಆದಲ್ಲಿ ಅದನ್ನು ನಿಭಾಯಿಸುವ ಪರೀಕ್ಷೆಯೂ ಯಶಸ್ವಿಯಾಗಿದೆ.

ಮಾನವ ಸಹಿತ ಯಾನಕ್ಕೆ ಬಾಹ್ಯಾಕಾಶ ನೌಕೆಯನ್ನು ರವಾನಿಸುವ ಸಾಮರ್ಥ್ಯ ಒರೆಗೆ ಹಚ್ಚಲು ಹಲವು ಪೂರಕ ಪರೀಕ್ಷೆ ನಡೆಸಲಾಗಿದೆ. ಆ ಪೈಕಿ ಇತ್ತೀಚೆಗೆ ನಡೆದ ಮರು ಬಳಕೆಯ ವಾಹನ (ರೀ ಯೂಸೆಬಲ್‌  ವೆಹಿಕಲ್‌) ಪ್ರಾತ್ಯಕ್ಷಿಕೆ ಪ್ರಮುಖವಾದುದು’ ಎಂದು ಕಿರಣ್‌ ಕುಮಾರ್‌ ಹೇಳಿದರು.

ಏನಿದು ಕೃತಕ ಬುದ್ದಿ ಮತ್ತೆ?: ಇನ್ನು ಕೆಲವೇ ವರ್ಷಗಳಲ್ಲಿ ಭಾರತದ ಕೃತಕ  ಉಪಗ್ರಹಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲಿವೆ. ಈಗಿನಂತೆ ಭೂಮಿಯ ನಿಯಂತ್ರಣ ಕೇಂದ್ರಗಳಿಂದ ಅವುಗಳನ್ನು ನಿರ್ವಹಿಸುವ ಅಗತ್ಯವಿರುವುದಿಲ್ಲ. ಈ ದಿಸೆಯಲ್ಲಿ ವಿವಿಧ ದೇಶಗಳಲ್ಲಿ ಸಾಕಷ್ಟು ಸಂಶೋಧನೆ ಮತ್ತು ಪರೀಕ್ಷೆಗಳು ನಡೆದಿವೆ. ಇಸ್ರೊ ಕೂಡ ಹಿಂದೆ ಬಿದ್ದಿಲ್ಲ.

ಇಸ್ರೊ ಅಧ್ಯಕ್ಷ ಕಿರಣ್‌ಕುಮಾರ್‌ ಅವರ ಪ್ರಕಾರ,  ಮುಂಬರುವ ಕೆಲವೇ ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆಯುಳ್ಳ ಉಪಗ್ರಹಗಳ ಉಡಾವಣೆ ಸಾಕಾರಗೊಳ್ಳಲಿದೆ. ‘ಅಂತಹ ಉಪಗ್ರಹಗಳು ಬಾಹ್ಯಾಕಾಶದಲ್ಲಿ ಎದುರಾಗುವ ಅಪಾಯಗಳು, ಆಂತರಿಕವಾಗಿ ಸೃಷ್ಟಿಯಾಗುವ ತಾಂತ್ರಿಕ ಸಮಸ್ಯೆಗಳನ್ನು ಮೊದಲೇ ಗ್ರಹಿಸಿ  ಸರಿಪಡಿಸಿಕೊಳ್ಳುತ್ತವೆ. ಇಂಧನ ಕ್ಷಮತೆ ಕಾಯ್ದುಕೊಳ್ಳುತ್ತವೆ’ ಎಂದು ಕಿರಣ್‌ ಕುಮಾರ್‌ ತಿಳಿಸಿದರು.

ಸದ್ಯಕ್ಕೆ ಉಪಗ್ರಹಗಳು ಕಕ್ಷೆಗೆ ಸೇರಿದ ಮೇಲೆ ಅವುಗಳ ಬಹುತೇಕ ಕಾರ್ಯಗಳು ಭೂಮಿಯಲ್ಲಿನ  ನಿಯಂತ್ರಣ ಕೇಂದ್ರಗಳಿಂದಲೇ ನಿರ್ವಹಿಸಲಾಗುತ್ತದೆ. ಕೃತಕ ಬುದ್ಧಿಮತ್ತೆಯುಳ್ಳ  ಉಪಗ್ರಹಗಳು ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತವೆ.

ಸಾಮಾನ್ಯವಾಗಿ ಉಪಗ್ರಹಗಳು ಒಂದಕ್ಕಿಂತ ಹೆಚ್ಚು ಪೇಲೋಡ್‌ಗಳನ್ನು ಹೊಂದಿರುತ್ತವೆ. ಇವುಗಳ ಕಾರ್ಯಗಳೂ ವಿಭಿನ್ನವಾಗಿರುತ್ತವೆ. ಒಂದಕ್ಕಿಂತ ಹೆಚ್ಚು ಪೇಲೋಡ್‌ಗಳಿದ್ದಾಗ  ಕಾರ್ಯ ನಿರ್ವಹಣೆಯಲ್ಲಿ  ದ್ವಂದ್ವ ಉಂಟಾಗುತ್ತದೆ. ಈ ರೀತಿ ತಾಂತ್ರಿಕ ದ್ವಂದ್ವಗಳನ್ನು ಸ್ವಯಂ ನಿವಾರಣೆ ಮಾಡಿಕೊಳ್ಳುವಂತೆ ಪ್ರೊಗ್ರಾಮಿಂಗ್‌ ಮಾಡಲಾಗಿರುತ್ತದೆ.

ಹಲವು ದೇಶಗಳಲ್ಲಿ ಪ್ರಯೋಗ
ಉಪಗ್ರಹಗಳಲ್ಲಿ ಆರ್ಟಿರ್ಫಿಷಿಯಲ್‌ ಇಂಟೆಲಿಜೆನ್ಸ್‌ ಬಳಸಲು ವಿಶ್ವದ ವಿವಿಧ ದೇಶಗಳ ಬಾಹ್ಯಾಕಾಶ ಸಂಸ್ಥೆಗಳು ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿವೆ. ನಾಸಾ, ಯುರೋಪಿಯನ್‌ ಸ್ಪೇಸ್‌ ಏಜೆನ್ಸಿ, ರಷ್ಯಾದ ಬಾಹ್ಯಾಕಾಶ ಸಂಸ್ಥೆ,  ಜರ್ಮನಿ  ಏರೋ ಸ್ಪೇಸ್‌ ಸೆಂಟರ್‌ ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯೋಗಗಳನ್ನು ನಡೆಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT