ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಹಕ್ಕಿಗಾಗಿ ಹೋರಾಟ ಶೋಚನೀಯ

ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌.ಕೆ. ಮುಖರ್ಜಿ ವಿಷಾದ
Last Updated 4 ಮೇ 2016, 20:17 IST
ಅಕ್ಷರ ಗಾತ್ರ

ಬೆಂಗಳೂರು: ಮನುಕುಲದಷ್ಟೇ ಪುರಾತನವಾದ ಮಾನವ ಹಕ್ಕುಗಳ ಬಗ್ಗೆ ಈಗಲೂ ಹೋರಾಟಗಳು ನಡೆಯುತ್ತಿ­ರು­ವುದು ಶೋಚನೀಯ ಸಂಗತಿ ಎಂದು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌.ಕೆ. ಮುಖರ್ಜಿ ವಿಷಾದಿಸಿದರು.

ಭಾರತೀಯ ವಿದ್ಯಾಭವನ, ಬೆಂಗಳೂರಿನ ವಕೀಲರ ಸಂಘ, ಭಾರತ ವಿಕಾಸ ಪರಿಷತ್‌, ವಿಜ್ಞಾನೇಶ್ವರ ಪ್ರತಿಷ್ಠಾನ ಜಂಟಿಯಾಗಿ ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ನಿವೃತ್ತ ನ್ಯಾಯಮೂರ್ತಿ ಎಂ. ರಾಮಾ ಜೋಯಿಸ್ ಅವರ ‘ಹ್ಯೂಮನ್ ರೈಟ್ಸ್ ಭಾರತೀಯ ವ್ಯಾಲ್ಯೂಸ್‘ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಹುಸಂಸ್ಕೃತಿಯ ದೇಶ ಭಾರತದಲ್ಲಿ ಮೊದಲಿನಿಂದಲೂ ಸಹಿಷ್ಣುತೆ ನೆಲೆಸಿದೆ. ಮಾನವ ಹಕ್ಕುಗಳಿಗೆ ಧರ್ಮವೇ ಬುನಾದಿಯಾಗಿದೆ. ಸನಾತನ ಧರ್ಮ­ದಲ್ಲಿಯೂ ಇದನ್ನೇ ಕಾಣುತ್ತೇವೆ. ಆದರೆ ಮಧ್ಯಯುಗದ ನಂತರ ದೇಶದಲ್ಲಿ ಪ್ರತ್ಯೇಕತೆಯ ಭಾವನೆಗಳನ್ನು ಬಿತ್ತಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪುಸ್ತಕ ಬಿಡುಗಡೆ ಮಾಡಿದ ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಆರ್‌.ಸಿ. ಲಹೋಟಿ, ಸೃಜನಶೀಲ ಸಂಸ್ಕೃತಿ ಹೊಂದಿರುವ ಭಾರತದಲ್ಲಿ ಕೆಲವರು ರಾಜಕೀಯ ಲಾಭಕ್ಕಾಗಿ ಅಸಹಿಷ್ಣತೆಯನ್ನು ಪ್ರಚರಿಸುತ್ತಿ­ದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಸಂಸತ್ ಭವನದ ಗೋಡೆಗಳ ಮೇಲೆ ಕೆತ್ತಲಾಗಿರುವ ವೇದ ಉಪನಿಷತ್ತುಗಳ ಸಂದೇಶದ ಪೈಕಿ ಯಾವುದಾದರೂ ಒಂದನ್ನು ಸಂಸದರು ಪಾಲಿಸದರೆ ದೇಶಕ್ಕೆ ಒಳ್ಳೆಯದಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸಭಾಪತಿ ಡಿ. ಎಚ್ ಶಂಕರಮೂರ್ತಿ, ‘ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಭಗತ್‌ ಸಿಂಗ್‌ ಅವರನ್ನು ಶಾಲಾ ಪಠ್ಯಕ್ರಮಗಳಲ್ಲಿ ಭಯೋತ್ಪಾದಕ ಎಂಬಂತೆ ಬಿಂಬಿಸಲಾಗಿದೆ. ಇದೇ ಅಲ್ಲದೆ ದೇಶದ ಶಿಕ್ಷಣ ಕ್ರಮದಲ್ಲಿ ದೇಶದ ಭವ್ಯ ಪರಂಪರೆಯನ್ನು ಮರೆಮಾಚಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕೆಟ್ಟದ್ದನ್ನು ವೈಭಕೀಕರಿಸುವ ದುಶ್ಚಟ ಕೆಲವರಿಗೆ ಬಂದಿದ್ದು, ಅದರ ವಿರುದ್ಧ ರಾಮಾ ಜೋಯಿಸರು ಕೃತಿಯಲ್ಲಿ ಧ್ವನಿ ಎತ್ತಿದ್ದಾರೆ ಎಂದು ಅವರು ಹೇಳಿದರು.
ಕೃತಿಯ ಕತೃ ಎಂ. ರಾಮಾ ಜೋಯಿಸ್‌ ಮಾತನಾಡಿ, ‘ನಮ್ಮ ಸಂವಿಧಾನ ರಚನೆಯಾದಾಗ ಮೂಲಭೂತ ಕರ್ತವ್ಯಗಳ ಬಗ್ಗೆ ಹೇಳಿಯೇ ಇರಲಿಲ್ಲ.

ಆ ನಂತರ ಸಂವಿಧಾನಕ್ಕೆ ತಿದ್ದುಪಡಿ ತಂದು ಮೂಲಭೂತ ಕರ್ತವ್ಯಗಳನ್ನು ಸೇರಿಸಲಾಯಿತು. ಮೂಲಭೂತ ಹಕ್ಕಿನಂತೆ ಕರ್ತವ್ಯವೂ ಪ್ರಮುಖವಾದದ್ದು. ಹಕ್ಕು ಎಂಬುದು ಸ್ವಾರ್ಥವನ್ನು, ಕರ್ತವ್ಯ ಎಂಬುದು ನಿಸ್ವಾರ್ಥವನ್ನು ಪ್ರತಿಬಿಂಬಿಸುತ್ತದೆ. ಕರ್ತವ್ಯವನ್ನು ಮಕ್ಕಳಲ್ಲಿ ಬಿಂಬಿಸುವ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕಿದೆ ಎಂದರು.

ಭಾರತೀಯ ವಿದ್ಯಾಭವನದ ಅಧ್ಯಕ್ಷ ಎನ್. ರಾಮಾನುಜ, ಉಪಾಧ್ಯಕ್ಷ ಕೆ.ಜಿ ರಾಘವನ್, ಕಾರ್ಯದರ್ಶಿ ಎಚ್. ಎನ್ ಸುರೇಶ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಶಿವರಾಮೇಗೌಡ, ಹೆಚ್ಚುವರಿ ಡಿಜಿಪಿ ಸಂಜಯ್ ಸಹಾಯ್, ಭಾರತ ವಿಕಾಸ ಪರಿಷತ್ತಿನ ಅಧ್ಯಕ್ಷ ರೇವಣ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT