ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಹಕ್ಕುಗಳ ದಮನ

Last Updated 22 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಶೃಂಗೇರಿ ಬಳಿಯ ಕೆರೆಕಟ್ಟೆ ಚೆಕ್‌ಪೋಸ್ಟ್‌ನಲ್ಲಿ ಜಾನುವಾರು ವ್ಯಾಪಾರಿ ಕಬೀರ್ ಎಂಬ ಯುವಕನನ್ನು ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿ ಗುಂಡಿಟ್ಟು ಕೊಂದಿರುವ ಪ್ರಕರಣ ದುರದೃಷ್ಟಕರ.

ಬೆಳಗಿನ ಜಾವ ಚೆಕ್‌ಪೋಸ್ಟ್‌ನಲ್ಲಿ ಜಾನುವಾರು ಸಾಗಾಟದ ವಾಹನವನ್ನು ನಿಲ್ಲಿಸಿ ಅಧಿಕಾರಿಗಳಿಗೆ ಕಾಗದ ಪತ್ರಗಳನ್ನು ತೋರಿಸುತ್ತಿದ್ದಾಗ ಅದೇ ವಾಹನದಲ್ಲಿದ್ದ ಕಬೀರ್‌ಗೆ ನಕ್ಸಲ್ ನಿಗ್ರಹ ದಳದವರು ಗುಂಡು ಹಾರಿಸಿ ಕೊಲ್ಲುವಂತಹ ತುರ್ತು ಏನಿತ್ತು ಎನ್ನುವುದು ಅರ್ಥವಾಗುತ್ತಿಲ್ಲ.

ನಕ್ಸಲರೆಂದು ಶಂಕಿಸಿ ಅನುಮಾನದಿಂದ ಗುಂಡು ಹಾರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದರೂ, ಘಟನೆಯ ಸಾಂದರ್ಭಿಕ ಸಾಕ್ಷ್ಯಗಳು ಪೊಲೀಸರ ವಾದಕ್ಕೆ ಪೂರಕವಾಗಿಲ್ಲ. ವಾಹನದಲ್ಲಿದ್ದ ಯುವಕರ ಬಳಿ ಯಾವ ಆಯುಧಗಳೂ ಇರಲಿಲ್ಲ. ಅದೂ ಅಲ್ಲದೆ ಕಬೀರ್‌ನ ಎದೆಗೇ ನೇರವಾಗಿ ಗುಂಡೇಟು ಬಿದ್ದಿರುವುದು ನೋಡಿದರೆ, ಘಟನೆಯ ಬಗ್ಗೆ ಹಲವು ಸಂಶಯಗಳು ಮೂಡುವುದು ಸಹಜ.

ಗುಂಡೇಟಿನ ಸದ್ದು ಕೇಳಿ ಅಲ್ಲಿಂದ ತಪ್ಪಿಸಿಕೊಂಡು ಬಂದ ಇತರ ಇಬ್ಬರ ಹೇಳಿಕೆಗಳನ್ನು ಗಮನಿಸಿದರೆ, ಅಮಾಯಕನೊಬ್ಬ ನಕ್ಸಲ್ ನಿಗ್ರಹ ಪಡೆಯ ಬೇಜವಾಬ್ದಾರಿತನಕ್ಕೆ ಬಲಿಯಾದಂತೆ ಕಾಣಿಸುತ್ತದೆ. ರಾಜ್ಯ ಸರ್ಕಾರ ಈ ಘಟನೆಯ ಬಗ್ಗೆ ಸಿಐಡಿ ಮತ್ತು ಮ್ಯಾಜಿಸ್ಟ್ರಿಯಲ್ ತನಿಖೆಗೆ ಆದೇಶಿಸಿರುವುದು ಸ್ವಾಗತಾರ್ಹ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ನಿರ್ದಿಷ್ಟ ಕಾಲ­ಮಿತಿ­ಯೊಳಗೆ ವಿಚಾರಣೆಯನ್ನು ಪೂರ್ಣಗೊಳಿಸಿ ವರದಿಯನ್ನು ಪಡೆಯಬೇಕು. ಘಟನೆಗೆ ಕಾರಣರಾದ ಸಿಬ್ಬಂದಿಯನ್ನು ಸೇವೆಯಿಂದ ಅಮಾನತು ಮಾಡಿ ತನಿಖೆ ನಡೆಸಿದರೆ ಸರ್ಕಾರದ ಪ್ರಾಮಾಣಿಕತೆಯನ್ನು ಶಂಕಿಸಲು ಅವಕಾಶ ಇರುವುದಿಲ್ಲ. ಗುಂಡಿಗೆ ಬಲಿಯಾದ ಕಬೀರ್ ಕುಟುಂಬಕ್ಕೆ ಸರ್ಕಾರ ಐದು ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿರುವುದು ಏನೇನೂ ಸಾಲದು. ಇಡೀ ಕುಟುಂಬವನ್ನು ಸಾಕುವ ಹೊಣೆಗಾರಿಕೆಯಿದ್ದ ಇನ್ನೂ ೨೧ರ ಹರೆಯದ ಯುವಕನ ಸಾವು ಆ ಕುಟುಂಬದ ಸದಸ್ಯರ ಮೇಲೆ ಉಂಟು ಮಾಡಿರುವ ಆಘಾತವನ್ನು ಸರ್ಕಾರ ಲಘುವಾಗಿ ಕಾಣುವುದು ಸರಿಯಲ್ಲ.

ನಕ್ಸಲರು ಬಂದೂಕಿನ ಭಾಷೆಗೆ ಒಗ್ಗಿದವರಿರಬಹುದು; ಆದರೆ ಪೊಲೀಸರು ಬಂದೂಕುಗಳನ್ನು ಬಳಸುವಾಗ ತುಂಬು ವಿವೇಚನೆಯಿಂದ ವರ್ತಿಸಬೇಕಾಗುತ್ತದೆ. ಪೊಲೀಸರ ಕೈಯಲ್ಲಿರುವ ಶಸ್ತ್ರ ಸ್ವಚ್ಛಂದವಾಗಿ ಬಳಕೆಯಾಗುವುದು ಪ್ರಜಾಪ್ರಭುತ್ವಕ್ಕೇ ಅಪಾಯಕಾರಿ. ಮೃತನ ಶವವನ್ನು ಪಡೆಯಲು ಆಗುಂಬೆಯ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದ ಮೃತನ ಸಂಬಂಧಿಕರ ಮೇಲೆ ಕೋಮು ಸಂಘಟನೆಯೊಂದರ ಸದಸ್ಯರು ಹಲ್ಲೆ ನಡೆಸಲು ಮುಂದಾ­ದದ್ದು ಇನ್ನೂ ಅಮಾನವೀಯ.

ಅಕ್ರಮವಾಗಿ ದನದ ವ್ಯಾಪಾರ ಮಾಡು­ತ್ತಿದ್ದರೆ ಅವರನ್ನು ಕಾನೂನು ಪ್ರಕಾರ ಬಂಧಿಸಿ ಕ್ರಮ ಕೈಗೊಳ್ಳಬೇಕೇ ಹೊರತು, ಸಾರ್ವಜನಿಕರು ಕಾನೂನನ್ನು ಕೈಗೆತ್ತಿಕೊಳ್ಳುವುದು ಅರಾಜ­ಕತೆಯ ಸಂಕೇತ. ಈ ಘಟನೆಯನ್ನು ಮಾನವ ಹಕ್ಕು ದಮನದ ಪ್ರಕರಣವಾಗಿ ಪರಿಗಣಿಸಬೇಕೇ ಹೊರತು, ಕೋಮುವಾದಿ ದೃಷ್ಟಿಕೋನದಿಂದ ವಿಶ್ಲೇಷಣೆ ಮಾಡಬಾರದು.

ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಕೋಮುವೈಷಮ್ಯಕ್ಕೆ ಎಡೆಗೊಡದಂತೆ ಎಚ್ಚರದ ಕ್ರಮಗಳನ್ನು ಕೈಗೊಳ್ಳಬೇಕು. ನಿಷ್ಪಕ್ಷಪಾತ ತನಿಖೆ ಕ್ಷಿಪ್ರವಾಗಿ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT