ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನಸಿಕ ಆರೋಗ್ಯ ಸೇವೆಗೆ ವಿನೂತನ ನೀಲನಕ್ಷೆ ಗೆ ಸಲಹೆ

ನಿಮ್ಹಾನ್ಸ್‌ 20ನೇ ಘಟಿಕೋತ್ಸವದಲ್ಲಿ ಕೇಂದ್ರ ಸಚಿವ ವೆಂಕಯ್ಯ ನಾಯ್ಡು * 162 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ
Last Updated 13 ಫೆಬ್ರುವರಿ 2016, 19:55 IST
ಅಕ್ಷರ ಗಾತ್ರ

ಬೆಂಗಳೂರು: ನಗರ ಪ್ರದೇಶಗಳಲ್ಲಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸೇವೆಗಳಿಗಾಗಿ  ವಿನೂತನ ಮತ್ತು ಸಮಗ್ರವಾದ ನೀಲನಕ್ಷೆಯನ್ನು ಸಿದ್ಧಪಡಿಸುವಂತೆ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ನಿಮ್ಹಾನ್ಸ್‌ಗೆ ಸಲಹೆ ನೀಡಿದರು.

ಸಂಸ್ಥೆಯ 20ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಲು ಉದ್ದೇಶಿಸಿರುವ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಹೊಸ ಮಸೂದೆಯು ಅಗತ್ಯ ತಿದ್ದುಪಡಿಗಳೊಂದಿಗೆ ಶೀಘ್ರ ಜಾರಿಗೆ ಬರುವ ವಿಶ್ವಾಸ ವ್ಯಕ್ತಪಡಿಸಿದರು.

ನಗರ ಪ್ರದೇಶಗಳಲ್ಲಿ ರಸ್ತೆ ಅಪಘಾತದಿಂದ ಮಿದುಳಿಗೆ ಏಟು ಬಿದ್ದು ಜನರು ಸಾವನ್ನುಪ್ಪುತ್ತಿರುವ ಪ್ರಮಾಣ ಹೆಚ್ಚುತ್ತಿರುವುದಕ್ಕೆ ಕಳವಳ ವ್ಯಕ್ತಪಡಿ
ಸಿದ ಸಚಿವರು, ‘ಇದನ್ನು ತಪ್ಪಿಸಲು ನರಕ್ಕೆ ಸಂಬಂಧಿಸಿದ ಕ್ಲಿಷ್ಟ ಸಮಸ್ಯೆಗಳಿಗೆ ಶೀಘ್ರದಲ್ಲಿ ಚಿಕಿತ್ಸೆ ಲಭ್ಯವಾಗುವಂತೆ ಮಾಡುವ ಅವಶ್ಯಕತೆ ಇದೆ’ ಎಂದು ಅಭಿಪ್ರಾಯಪಟ್ಟರು.

ಸಾರ್ವಜನಿಕ ಸಾರಿಗೆ: ‘ನಗರದ ಜನರು ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸುವುದರಿಂದ ರಸ್ತೆ ಅಪಘಾತಗಳನ್ನು ತಪ್ಪಿಸಬಹುದು’ ಎಂದು ಹೇಳಿದ ಅವರು ದೆಹಲಿಯಲ್ಲಿರುವ ವಾಹನ ದಟ್ಟಣೆಯನ್ನು ಪ್ರಸ್ತಾಪಿಸಿದರು. ‘ಈ ವಿಚಾರದಲ್ಲಿ  ಬೆಂಗಳೂರು ನಗರ ದೆಹಲಿಯ ಸಹೋದರಿ’ ಎಂದು ಬಣ್ಣಿಸಿದರು.

ಗ್ರಾಮೀಣ ಭಾಗಕ್ಕೆ ಮಹತ್ವ:  ‘ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸೇವೆಗಳು ನಗರ ಕೇಂದ್ರೀಕೃತವಾಗಿವೆ. ಇವುಗಳು 2ನೇ ಮತ್ತು ಮೂರನೇ ಶ್ರೇಣಿಯ ನಗರಗಳು ಮತ್ತು ಗ್ರಾಮೀಣ ಭಾಗದಲ್ಲೂ ಸಿಗುವಂತೆ ಆಗಬೇಕು’ ಎಂದರು.

ಕೌನ್ಸೆಲಿಂಗ್‌: ‘ಖಿನ್ನತೆಯಿಂದ ಬಳಲುತ್ತಿರುವ ಯುವಕ –ಯುವತಿಯರು ಆತ್ಮಹತ್ಯೆಗೆ ಶರಣಾಗುವ ಪ್ರಕರಣಗಳು ಹೆಚ್ಚುತ್ತಿವೆ. ಇವರಿಗೆ ಕೌನ್ಸೆಲಿಂಗ್‌ ನೀಡುವ ಅಗತ್ಯವಿದೆ. ನಿಮ್ಹಾನ್ಸ್‌ ಈ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕು. ದೇಶದ ವಿವಿಗಳು,  ಶಿಕ್ಷಣ ಸಂಸ್ಥೆಗಳ ಜೊತೆ ಸೇರಿ ಕೌನ್ಸೆಲಿಂಗ್‌ ನಡೆಸಬೇಕು’ ಎಂದು ಸಲಹೆ ನೀಡಿದರು.

ಅವಕಾಶ: ಇಸ್ರೊ ಮಾಜಿ ಅಧ್ಯಕ್ಷ ಪ್ರೊ. ರಾಧಾಕೃಷ್ಣನ್‌ ಮಾತನಾಡಿ, ‘ನರವಿಜ್ಞಾನ ಮತ್ತು ಎಂಜಿನಿಯರಿಂಗ್‌, ಮಾಹಿತಿ ತಂತ್ರಜ್ಞಾನ ಹಾಗೂ ರೊಬೋಟ್‌ ತಂತ್ರಜ್ಞಾನದಂತಹ ಭೌತ ವಿಜ್ಞಾನ ವಿಷಯಗಳ ಒಂದುಗೂಡಿಸುವಿಕೆ, ಮಿದುಳಿನ ಸಂಶೋಧನಾ ಕ್ಷೇತ್ರದಲ್ಲಿ ಹಲವಾರು ಅನುಕೂಲತೆ ಸೃಷ್ಟಿಸಲಿದೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಅಥವಾ ಅಂತರಿಕ್ಷದಲ್ಲಿ ದೀರ್ಘಕಾಲ ಕೆಲಸ ಮಾಡುವ ಗಗನಯಾನಿಗಳ ಮಾನಸಿಕ ಆರೋಗ್ಯದ ಕುರಿ
ತಾಗಿ ಅಧ್ಯಯನ ನಡೆಸಲು ಸಾಕಷ್ಟು ಅವಕಾಶಗಳಿವೆ’ ಎಂದರು.

162 ಜನರಿಗೆ ಪದವಿ: ಘಟಿಕೋತ್ಸವದಲ್ಲಿ  162 ಮಂದಿಗೆ ಪದವಿ ಪ್ರದಾನ ಮಾಡಲಾಯಿತು. 24 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ.
ಕೇಂದ್ರ ಆರೋಗ್ಯ ಸಚಿವ ಮತ್ತು ನಿಮ್ಹಾನ್ಸ್‌ ಅಧ್ಯಕ್ಷ ಜೆ.ಪಿ. ನಡ್ಡಾ, ನಿಮ್ಹಾನ್ಸ್‌ ನಿರ್ದೇಶಕ  ಡಾ. ಬಿ.ಎನ್‌. ಗಂಗಾಧರ್‌,  ನರವಿಜ್ಞಾನಗಳ ಡೀನ್‌ ಡಾ. ಕೆ. ಜಯರಾಮ್‌ ಮತ್ತಿತರರು ಇದ್ದರು.

ಸಾಧಕರಿವರು...
* ನ್ಯೂರೊ ಇಮೇಜಿಂಗ್‌ ಮತ್ತು ಇಂಟರ್‌ವೆನ್ಶನಲ್‌ ರೇಡಿಯಾಲಜಿಯ ಡಾಕ್ಟರ್‌ ಆಫ್‌ ಮೆಡಿಸಿನ್‌ (ಡಿಎಂ) ವಿಷಯದಲ್ಲಿ ಅತ್ಯುತ್ತಮ ವಿದ್ಯಾರ್ಥಿಗೆ ನೀಡಲಾಗುವ ಸ್ವರ್ಣ ಮಹೋತ್ಸವ ಪ್ರಶಸ್ತಿಗೆ ಡಾ. ಸುಬೇಂದು ಪರಿದಾ ಪಾತ್ರರಾಗಿದ್ದಾರೆ. ಘಟಿಕೋತ್ಸವಕ್ಕೆ ಇವರು ಗೈರಾಗಿದ್ದರು.

* ಸೈಕಿಯಾಟ್ರಿ ವಿಷಯದ ಎಂಡಿ ಕೋರ್ಸ್‌ನಲ್ಲಿ ಅತ್ಯುತ್ತಮ ವಿದ್ಯಾರ್ಥಿಗೆ ನೀಡುವ ರಜತ ಮಹೋತ್ಸವ ಪ್ರಶಸ್ತಿಗೆ ಡಾ. ಜಿ. ಸುಹಾಸ್‌ ಅವರು ಭಾಜನರಾಗಿದ್ದಾರೆ.

* ಸೈಕಿಯಾಟ್ರಿ ಡಿಪ್ಲೊಮಾ ವಿಷಯದಲ್ಲಿ    ಅತ್ಯುತ್ತಮ ವಿದ್ಯಾರ್ಥಿಗೆ ನೀಡುವ ಡಾ. ಡಿ.ಎಲ್‌.ಎನ್‌. ಮೂರ್ತಿ ರಾವ್‌ ಸ್ಮಾರಕ ಬಹುಮಾನವನ್ನು ಡಾ. ಮಾನಸ ಎಸ್‌. ಶೇಷಾದ್ರಿ ಅವರು ಮುಡಿಗೇರಿಸಿಕೊಂಡಿದ್ದಾರೆ.

ಇತರೆ ಪ್ರಶಸ್ತಿ ಪಡೆದವರು
* ಕಾಸಂದ್ರಾ ಶ್ರುತಿ ಸುಂದರಾಜ –ಡಾ ಎಂ.ವಿ. ಗೋವಿಂದಸ್ವಾಮಿ ಸ್ಮಾರಕ ಬಹುಮಾನ (ಕ್ಲಿನಿಕಲ್‌ ಸೈಕಾಲಜಿಯಲ್ಲಿ ಅತಿ ಹೆಚ್ಚು ಅಂಕ)

* ವೈ. ಜಾಯ್ಸ್‌ ಸ್ಟೆಫಿ– ಡಾ. ಎಂ.ವಿ. ಗೋವಿಂದಸ್ವಾಮಿ ಸ್ಮಾರಕ ಬಹುಮಾನ (ಸೈಕಿಯಾಟ್ರಿಕ್‌ ಸಮಾಜ ಸೇವೆ ವಿಷಯದಲ್ಲಿ ಅತಿ ಹೆಚ್ಚು ಅಂಕ)

* ಕಲಾ ಪಿ.ನಾಯರ್‌– ಡಾ. ಆರ್‌.ಎನ್‌. ಮೂರ್ತಿ ಪ್ರಶಸ್ತಿ (ನ್ಯೂರೊಫಿಸಿಯಾಲಜಿ ಎಂ.ಫಿಲ್‌ನಲ್ಲಿ ಅತಿ ಹೆಚ್ಚು ಅಂಕ)

* ಕೆ. ತಂಗ ಮೀನಾಕ್ಷಿ– ಡಾ. ಆರ್.ಎನ್‌. ಮೂರ್ತಿ (ಬಯೊಫಿಸಿಕ್ಸ್‌ ಎಂ.ಫಿಲ್‌ನಲ್ಲಿ ಅತಿ ಹೆಚ್ಚು ಅಂಕ) (ಘಟಿಕೋತ್ಸವಕ್ಕೆ ಹಾಜರಾಗಿರಲಿಲ್ಲ)

* ಅರ್ಪಿತಾ ಎಲಿಜಬೆತ್‌ ಜೋಲಿ– ಡಾ. ಆರ್‌.ಎನ್‌. ಮೂರ್ತಿ ಪ್ರಶಸ್ತಿ (ಸೈಕಿಯಾಟ್ರಿಕ್‌ ನರ್ಸಿಂಗ್‌ ಸ್ನಾತಕೋತ್ತರ ಪದವಿಯಲ್ಲಿ ಅತಿ ಹೆಚ್ಚು ಅಂಕ)

* ಡಾ. ಎಂ. ಮಂಜುನಾಥ್‌ ಮತ್ತು ಡಾ. ನಿತೀಶ್‌ ಕಾಂಬ್ಳೆ – ಡಾ ಅನಿಷ್ಯಾ ವಸಂತ್‌ ಸ್ಮಾರಕ ಪ್ರಶಸ್ತಿ (ನ್ಯೂರಾಲಜಿಯಲ್ಲಿ ಸ್ನಾತಕೋತ್ತರ ಪದವಿ)

* ಡಾ. ಮೋಹಿತ್‌ ಮಿತ್ತಲ್‌ – ಡಾ. ಉಷಾ ಪೂಂಜಾ ಪ್ರಶಸ್ತಿ (ಡಿಎಂ ನ್ಯೂರೊಅನಸ್ತೇಶಿಯಾ ವಿಷಯದಲ್ಲಿ ಅತ್ಯುತ್ತಮ ವಿದ್ಯಾರ್ಥಿ)

ಸಾಧಕರ ಮಾತು
* ಸಾಣೇಹಳ್ಳಿಯ ಸಾಮಾನ್ಯ ಕುಟುಂಬದಿಂದ ಬಂದವನು ನಾನು. 10ನೇ ತರಗತಿವರೆಗೆ ಕನ್ನಡ ಮಾಧ್ಯಮಲ್ಲೇ ಓದಿದೆ. ಪ್ರಶಸ್ತಿ ಬಂದಿರವುದು ಖುಷಿ ನೀಡಿದೆ. ಈ ಸಾಧನೆಗೆ ಪೋಷಕರು, ಗುರುಗಳು ಸ್ನೇಹಿತರು ಕಾರಣ.

– ಡಾ. ಎಂ. ಮಂಜುನಾಥ್‌

* ನಾನು ಬೆಂಗಳೂರಿನವಳೇ. ಈ ಸಾಧನೆಯಿಂದ ಸಂತಸವಾಗಿದೆ. ಇದೊಂದು ಕಷ್ಟಕರ ಪ್ರಯಾಣ. ನಿಮ್ಹಾನ್ಸ್‌ನಲ್ಲಿ ಡಿಪ್ಲೊಮಾ ಮಾಡಲು ಅವಕಾಶ ಸಿಗುವುದೇ ದೊಡ್ಡ  ಬಹುಮಾನ. ಮುಂದೆ ಎಂಡಿ ಮಾಡಬೇಕು ಎನ್ನುವ ಬಯಕೆ ಇದೆ.
–ಡಾ. ಮಾನಸ ಎಸ್. ಶೇಷಾದ್ರಿ

* ಇದೊಂದು ಅದ್ಭುತವಾದ ಪ್ರಯಾಣ. ಮಾನಸಿಕ ವಿಜ್ಞಾನಕ್ಕೆ ಮತ್ತು ಔಷಧ ವಿಜ್ಞಾನಕ್ಕೆ ಸಂಬಂಧಿಸಿದ ತರಬೇತಿಗೆ ಇಲ್ಲಿ ಒಂದೇ ರೀತಿಯ ಪ್ರಾಮುಖ್ಯ ನೀಡಲಾಗುತ್ತದೆ. ಸರ್ಕಾರಿ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸಲು ಮೊದಲ ಆದ್ಯತೆ ನೀಡುತ್ತೇನೆ.
– ಡಾ. ಜಿ. ಸುಹಾಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT