ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಯದ ಕಲೆ

Last Updated 28 ಮೇ 2016, 19:30 IST
ಅಕ್ಷರ ಗಾತ್ರ

ರಂಜಿತ್‌ನ ದೇಹದಿಂದ ಸುರಿಯುತ್ತಿದ್ದ ಬೆವರು ಕ್ಷಣಾರ್ಧದಲ್ಲೇ ಮಾಯವಾಗುತ್ತಿತ್ತು. ಆದರೆ ಅದರ ಗಾಢ ವಾಸನೆ ಅವನ ಮೈಮನಸ್ಸುಗಳನ್ನು ಕೆರಳಿಸುತ್ತಿತ್ತು. ಉತ್ತರಗಳೇ ಸಿಗದ ಹಲವು ಪ್ರಶ್ನೆಗಳನ್ನು ಮನಸ್ಸಿನ ತಳಕ್ಕೆ ತಳ್ಳಿದ ಆ ವಾಸನೆ ಅವನ ಎದೆಯ ಗೀರಿದರೂ ಒಳಗಿನ ನರನಾಡಿಗಳನ್ನೆಲ್ಲ ಸಡಿಲಗೊಳಿಸಿ ಅವನ ಜೀವವ ಹಗುರಾಗಿಸಿತು. 

ಕಣ್ಣ ಚಾಚುವವರೆಗೂ ಹರಡಿಕೊಂಡಿರುವ ಮರಳು ಆಗಾಗ ಕೆರಳುತ್ತ, ತಣ್ಣಗಿರುತ್ತ, ಸಮುದ್ರದಲೆಗಳಂತೆ ರಂಜಿತ್‌ನ ಮನಸ್ಸಿನಲ್ಲಿ ನೊರೆಯನ್ನು ಉಕ್ಕಿಸುತ್ತಿತ್ತು. ಸಂಜೆಯ ಸೂರ್ಯ ಮರುಭೂಮಿಯ ಮೇಲೆ ಹರಡಿಕೊಂಡು ಮರಳಿನೊಂದಿಗೆ ಚಕ್ಕಂದವಾಡುತ್ತಿದ್ದ. ರಂಜಿತ್‌ನ ದೇಹ ಉದ್ವೇಗಗೊಳ್ಳುತ್ತಿತ್ತು. ಮೂರು ವರ್ಷಗಳಾಯ್ತು, ಭಾರತಕ್ಕೆ ಹೋಗಿ.

ಹೆಂಡತಿ ಬಿಂದುವಿನ ನೆನಪು: ಅವಳ ವಯ್ಯಾರ, ಮಾತು, ಸ್ಪರ್ಶ, ದೇಹದ ವಾಸನೆ ಎಲ್ಲವನ್ನೂ ದೇಹದಿಂದ ಸುರಿಯುತ್ತಿದ್ದ ಅವನ ಬೆವರ ವಾಸನೆ ಹೊತ್ತುತಂದು ಇಳಿಸಂಜೆಯ ಬೆಳಕಿನ ಜೊತೆ ಲಾಸ್ಯವಾಡುತ್ತಿರೊ ಮರಳದಿನ್ನೆಗಳನ್ನು ನೋಡುವಂತೆ ಮಾಡಿತ್ತು. ಪ್ರಖರವಾಗಿ ಉರಿಯುತ್ತಿದ್ದ ಸೂರ್ಯ ಕೆಂಪಾಗುತ್ತ ನಿಶ್ಶಕ್ತನಾಗುತ್ತಿದ್ದ.

ರಾತ್ರಿಯಾಗತೊಡಗಿದರೆ ರಂಜಿತ್‌ಗೆ ಇಲ್ಲಿಯ ಬದುಕು ಅಸಹನೀಯವಾಗತೊಡಗುತ್ತದೆ. ಮದುವೆಯಾಗಿ ಹತ್ತು ವರ್ಷಗಳಾದವು, ಎಲ್ಲರೂ ಊರಲ್ಲಿ ಇನ್ನೂ ಮಕ್ಕಳಾಗಿಲ್ಲವೇ? ಎಂದು ಕೇಳಿ ದೇಹ ಮನಸ್ಸುಗಳಿಗೆ ಅಗಾಧ ನೋವು ನೀಡುವವರೆ! ಮದುವೆಯಾದಾಗಿನಿಂದ ನಾಲ್ಕು ಬಾರಿ ಇಂಡಿಯಾಕ್ಕೆ ಹೋಗಿರುವ ರಂಜಿತ್– ಆಸ್ಪತ್ರೆ, ದೇವಳ, ಆಯುರ್ವೇದ, ಯುನಾನಿ, ಹೋಮಿಯೊಪತಿ ಎಂದು ಎಲ್ಲಾ ಕಡೆ ಸುತ್ತಿಯಾಯ್ತು; ದಿನಗಳ ಲೆಕ್ಕ ಇಟ್ಟುಕೊಂಡು ಕೂಡಿದ್ದೂ ಆಯ್ತು. ಏನೊಂದೂ ಪ್ರಯೋಜನವಿಲ್ಲ.

ಈ ಬಾರಿ ಫೈನಲ್ ಎಕ್ಸಿಟ್‌ನಲ್ಲಿ ಹೋಗಿ ಬಿಡುವ, ನಾಡಲ್ಲೇ ಟ್ಯಾಕ್ಸಿ ಓಡಿಸಿದರಾಯ್ತು, ಅಥವ ಆಟೊ ಖರೀದಿಸಿ ಹೊಸ ಜೀವನ ಆರಂಭಿಸುವ ಎಂದೆಲ್ಲ ಯೋಚಿಸಿದ್ದಿದೆ. ಫಾರಿನ್‌ನಲ್ಲಿ ಹತ್ತು–ಹನ್ನೆರೆಡು ವರ್ಷಗಳು ದುಡಿದು ವಾಪಸ್ ಊರಿಗೆ ಹೋಗಿ ಆಟೊ ಓಡಿಸಿದರೆ, ಜನ ಆಡಿಕೊಂಡು ನಗುವುದಿಲ್ಲವೆ! ಹೋಗಲಿ, ಒಂದು ಕಾರ್ ಕೊಳ್ಳುವ... ಇವೆಲ್ಲಕ್ಕಿಂತ ಮುಂಚಿತವಾಗಿ ಬೇಗ ಒಂದು ಮಗುವಿಗೆ ಅಪ್ಪ ಎನ್ನಿಸಿಕೊಳ್ಳಬೇಕು.

ಫ್ಲೈಟ್ ಇಳಿದದ್ದೇ ಅವಳನ್ನು ಮೂನಾರ್‌ಗೆ ಕರೆದುಕೊಂಡು ಹೋಗಿ, ಒಂದು ವಾರ ನೆಮ್ಮದಿಯಾಗಿ ಕಳೆಯಬೇಕು. ಮನಸ್ಸು ನೆಮ್ಮದಿಯಾಗಿದ್ದಾಗ ಕೂಡಿದರೆ ಗರ್ಭ ಧರಿಸುವುದು ಗ್ಯಾರಂಟಿಯಂತೆ! ತನಗಿಂತಲೂ ಅವಳಿಗೇ ಬೇಗ ಮಗುವೊಂದು ಬೇಕು...

ರಂಜಿತ್ ನಿಟ್ಟುಸಿರಿಟ್ಟ. ಹಿಂದೆ ತಿರುಗಿ ನೋಡಿದ. ಆ ಪಾಕಿಸ್ತಾನಿ ಟ್ರಕ್ ಡ್ರೈವರ್‌ಗಳು ಮಾತನಾಡುತ್ತಿದ್ದುದು ಯಾವ ಭಾಷೆ ಎಂದು ಅರ್ಥವಾಗಲಿಲ್ಲ. ಟ್ರಕ್‌ನಲ್ಲಿದ್ದವರ ಏರಿಸಿಕೊಂಡು ವಾಪಸ್ ಮಿಜ಼್ರಾನ್ ಕಡೆ ಗಾಡಿ ಓಡಿಸುವುದರೊಳಗೆ ಅವನಿಗೆ ಸಾಕುಸಾಕಾಗಿತ್ತು. ಅಲ್ಲಿ ಸಂಭವಿಸಿದ್ದು ಆಕ್ಸಿಡೆಂಟ್ ಆಗಿದ್ದರಿಂದ ಟ್ರಕ್‌ನಲ್ಲಿದ್ದವರು ಅಷ್ಟು ಸುಲಭವಾಗಿ ಹೊರಡುವಂತಿರಲಿಲ್ಲ.

ಪೊಲೀಸ್ ಅವರನ್ನು ಅಷ್ಟು ಬೇಗ ಕಳುಹಿಸುದೇ ಇದ್ದುದನ್ನು ಕಂಡು ಈ ಬಾಡಿಗೆಯನ್ನು ತಾನು ಯಾಕಾಗಿ ಒಪ್ಪಿಕೊಂಡೆನೊ ಎಂದು ತನಗೆ ತಾನೇ ಅಲವತ್ತುಕೊಳ್ಳುತ್ತಿದ್ದ. ಈ ಕೇಸ್‌ನಲ್ಲಿ ತನ್ನನ್ನೂ ಸಿಲುಕಿಸಿಬಿಟ್ಟಾರು ಎಂದು ದೂರದಲ್ಲಿ ನಿಂತು ಎಲ್ಲವನ್ನೂ ಗಮನಿಸುತ್ತಿದ್ದ. ಕೊನೆಗೆ ಎಲ್ಲವೂ ಮುಗಿದು ಟ್ರಕ್‌ನಲ್ಲಿದ್ದವರನ್ನು ಕೂರಿಸಿಕೊಂಡು ಹೊರಟಿದ್ದ.

ಮರುಭೂಮಿಯನ್ನು ಸೀಳಿರುವ ಕಪ್ಪು ರಸ್ತೆಯ ಮೇಲೆ ಓಡುತ್ತಿರುವಾಗ ಪೊಲೀಸ್ ಚೆಕ್‌ಪಾಯಿಂಟ್ ಇರುವುದನ್ನೇ ಮರೆತು ಜೋರಾಗಿ ಹೋಗುತ್ತಿದ್ದ ರಂಜಿತ್‌ನನ್ನು ಪಾಕಿಸ್ತಾನಿ ನಿಲ್ಲಿಸಿದ. ರಂಜಿತ್ ದಿಗಿಲುಗೊಂಡು ಮುಂದೆ ನೋಡಿದ. ಹತ್ತಾರು ವಾಹನಗಳನ್ನು ಪೊಲೀಸರು ಶೋಧಿಸುತ್ತಿರುವುದು ಕಾಣಿಸಿತು.

ಇಷ್ಟು ಹೊತ್ತು ತಾನು ರಸ್ತೆಯನ್ನು ನೋಡದೆ ತನ್ನ ಮಿದುಳಿಗೆ ಕಣ್ಣ ನೆಟ್ಟು ಗಾಡಿ ಓಡಿಸುತ್ತಿದ್ದುದು ನೆನಸಿ ಚಣ ಅದುರಿದ. ವಾಹನವನ್ನು ಚಲಿಸತೊಡಗಿದಂತೆ ಅಂತರ್ಮುಖಿಯಾಗಿ ಕಳೆದುಹೋಗುತ್ತಿದ್ದುದು ಇದುವೇ ಮೊದಲೇನಲ್ಲ! ಈ ಟ್ರಕ್‌ನವರಿಗೆ ಸಂಭವಿಸಿದಂತೆ ತನ್ನ ಗಾಡಿಗೆ ಸಂಭವಿಸಿದ್ದಿದ್ದರೆ! ನಿಟ್ಟುಸಿರಿಟ್ಟು ಡ್ಯಾಶ್ ಬೋರ್ಡಿನಲ್ಲಿಟ್ಟಿದ್ದ ತನ್ನ ದಾಖಲೆ, ಗಾಡಿಯ ದಾಖಲೆ ಎಲ್ಲವನ್ನೂ ತಯಾರು ಮಾಡಿಕೊಂಡ.

ಗಾಡಿಗಳು ಒಂದೊಂದಾಗಿ ಮುಂದೆ ಚಲಿಸುತ್ತಿದ್ದಂತೆ ತನ್ನ ಸರದಿ ಬಂದು, ಪೊಲೀಸರನ್ನು ನೋಡಿ ‘ಸಲಾ ಲೇಖುಂ’ ಎಂದು, ತನ್ನ ದಾಖಲೆಗಳನ್ನು ಅವರಿಗೆ ಕೊಟ್ಟ. ಪೊಲೀಸರು ಇವನ ಮುಖವನ್ನೊಮ್ಮೆ ನೋಡಿ ಅರಬ್ಬಿಯಲ್ಲಿ ‘ಹಿಂದಿ... ಸಾ?’ ಎನ್ನುತ್ತ ದಾಖಲೆಗಳ ನೋಡಿ, ಏನೂ ಮಾತನಾಡದೆ ವಾಪಸ್ ಕೊಟ್ಟು, ಒಳಗಿರುವ ಪಾಕಿಸ್ತಾನಿಗಳ ಬಗ್ಗಿ ನೋಡಿ, ‘ಮೀನ್ ಹುವಾ?’ ಎಂದು ಕೇಳಿದರು.

ರಂಜಿತ್ ನಗುತ್ತ ‘ಹಗ್ ಸಿಮ್ ಸಿಮ್ ಕಫೀಲ್, ಹುವ ಶುಗುಲ್ ಡ್ಯಾನ’ ಎಂದ. ಪೊಲೀಸರು ಆ ಪಾಕಿಸ್ತಾನಿಯರಿಗೆ ಗುರುತಿನ ಪತ್ರ ತೋರಿಸುವಂತೆ ಕೇಳಿದರು. ಒಳಗಿದ್ದ ನಾಲ್ವರೂ ತಮ್ಮ ತಮ್ಮ ಹಕಾಮಾಗಳ ಕೊಟ್ಟು ರಂಜಿತನನ್ನು ನೋಡಿದರು. ರಂಜಿತನಿಗೆ ಸಣ್ಣದೊಂದು ಭಯ ಶುರುವಾಯ್ತು. ಇವರಲ್ಲಿ ಯಾರಾದರೊಬ್ಬರು ಇಲ್ಲಿಯ ವೀಸಾ ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡುವವರಾಗಿದ್ದರೆ...?! ಎದೆ ಬಡಿತ ಮೆಲ್ಲಗೆ ಏರಲಾಂಭಿಸಿತು.

ಯಾವನಾದ್ರೂ ಡ್ರಗ್ಸ್ ಇಟ್ಟುಕೊಂಡಿದ್ದರೆ!? ಎದೆ ಬಡಿತ ಕಿವಿಗೆ ಕೇಳುತ್ತಿತ್ತು. ಗಂಟಲು ಒಣಗುತ್ತಿತ್ತು. ತನ್ನ ಅಸ್ವಸ್ಥ ಜೀವನಕ್ಕೆ ಸಮಾಧಾನವೆಂಬುದೇ ಇಲ್ಲವೇ? ಆ ಪೊಲೀಸ್ ‘ಯಾಲ್ಲಾ’ ಎಂದು ಸನ್ನೆ ಮಾಡಿದ. ಗಾಡಿಯನ್ನು ಬದಿಗೆ ನಿಲ್ಲಿಸಿ ಬರುವಂತೆ ಸೂಚಿಸಿದ. ರಂಜಿತ್‌ನಿಗೆ ಏನು ಮಾಡುವುದೆಂದು ತೋಚಲೇ ಇಲ್ಲ. ಚೀರಿಕೊಳ್ಳುವಷ್ಟು ಭಯವಾಯ್ತು.

‘ಕ್ಯಾ ಹೆ ಭಾಯ್? ಆಪ್‌ಕ ಸಬ್ ಹಕಾಮಾ ಹೇನಾ?’
‘ಹೇ’
‘ಫಿರ್ ಕ್ಯೂಂ?’
‘ಪತ ನಹಿ’
ರಂಜಿತ್ ಗಾಡಿಯನ್ನು ರಸ್ತೆಯ ಬದಿಗೆ ನಿಲ್ಲಿಸಿದ, ಪೊಲೀಸ್ ಒಬ್ಬಾತ ಬಂದು ಪಾಕಿಸ್ತಾನಿಗಳನ್ನು ಕರೆದುಕೊಂಡು ಹೋದ. ತಾನು ಹೊರಡಲೇ ಎಂದು ಕೇಳುವಂತೆಯೂ ಇಲ್ಲ... ವಸ್ತುಶಃ ಚಡಪಡಿಸಿದ. ಫೈನಲ್ ಎಕ್ಸಿಟ್‌ನಲ್ಲಿ ಇಂಡಿಯಾಕ್ಕೆ ಹೋಗಲು ಇನ್ನು ಎರಡು ತಿಂಗಳು ಇವೆ... ಈ ಕೊನೇ ಗಳಿಗೆಯಲ್ಲಿ ಏನಾದರೂ ಘಟಿಸಿದರೆ? ಇಲ್ಲ, ಅಂತಹದ್ದೇನೂ ಘಟಿಸುವುದಿಲ್ಲ.

ಬೇಗ ಶಾಪಿಂಗ್ ಮುಗಿಸಬೇಕು. ಫೈನಲ್ ಎಕ್ಸಿಟ್ ಆದ್ದರಿಂದ ಲಗ್ಗೇಜ್‌ನ ತಲೆ ನೋವಿಲ್ಲ. ಫ್ಲೈಟ್‌ನವ್ರು ೧೦೦ ಕೇಜಿಯವರೆಗೂ ಬಿಡುತ್ತಾರೆ. ಇನ್ನೂ ಏನೇನು ತಗೊಬೇಕು...!?
ಆಗಸ ತಿಳಿನೀಲಿಗೊಳ್ಳುತ್ತ ಕತ್ತಲಿಗೆ ಜಾರುತ್ತಿತ್ತು.

ಬೀದಿ ದೀಪಗಳ ಪ್ರಖರ ಬೆಳಕು ರಂಜಿತ್‌ನನ್ನು ಬೆಚ್ಚಿಸಿತು. ತಿರುಗಿ ನೋಡಿದ. ತನ್ನ ಜೊತೆ ಬಂದ ಪಾಕಿಸ್ತಾನಿಗಳಲ್ಲಿ ಮೂವರು ಬರುತ್ತಿರುವುದು ಕಾಣಿಸಿತು. ಮನಸ್ಸು ನಿಧಾನವಾಗತೊಡಗಿತು. ನಿಟ್ಟುಸಿರು ಯಾಕೋ ಬರಲೇ ಇಲ್ಲ. ‘ತಮ್ಮನ್ನೆಲ್ಲ ಜೈಲಿಗೆ ಹಾಕುತ್ತಾರಂತೆ’– ಪಾಕಿಸ್ತಾನಿಯ ಮಾತು ಕೇಳಿ ರಂಜಿತ್ ಕುಸಿದ; ಆಘಾತಗೊಂಡು ನಡುಗುತ್ತಿದ್ದ.
****
ಕಣ್ಣು ಮಂಜುಮಂಜಾಗುತ್ತಿತ್ತು. ತಲೆ ಕೊಡವಿ ಮತ್ತೆ ನೇರವಾಗಿ ಕೂತ. ತಾನು ಇಲ್ಲೇಕೆ ಹೀಗೆ ಒಬ್ಬಂಟಿಯಾಗಿ ಕೂತಿದ್ದೇನೆ ಎನ್ನುವುದೇ ಸ್ಪಷ್ಟವಾಗದೆ ಗೊಂದಲದಲ್ಲಿ ತಡಕಾಡುತ್ತಿದ್ದ. ನಡೆಯುತ್ತಿರುವುದೆಲ್ಲ ಕೌತುಕವೆನಿಸಿದರೂ ಅವನ ಜೀವದೆದುರು ಸಾವನ್ನು ಎದುರು ನಿಲ್ಲಿಸಿದಂತಾಯ್ತು. ಪೊಲೀಸ್ ಸ್ಟೇಷನ್‌ಗೆ ಕರೆದುಕೊಂಡು ಹೋಗುವರೇನೊ ಅಂದುಕೊಂಡಿದ್ದವನಿಗೆ ಇದನ್ನು ನಂಬಲಾಗಲೇ ಇಲ್ಲ.

ಇದೇ ಮೊದಲ ಬಾರಿಗೆ ರಂಜಿತ್ ಜೈಲಲ್ಲಿದ್ದಾನೆ. ಅದೂ ವಿದೇಶವೊಂದರ ಜೈಲಲ್ಲಿ. ಒಳಗೆ ಬಂದ ಗಳಿಗೆ ಎದೆ ವಾಡಿಕೆಯಂತೆ ಬಡಿದುಕೊಂಡರೂ ಕ್ರಮೇಣ ತಣ್ಣಗಾಯಿತು.

ತನ್ನನ್ನು ಮಾತ್ರ ಜೈಲಿನ ಒಳಗೆ ಹಾಕಲಿಲ್ಲ, ದೇವರ ಅನುಗ್ರಹ, ಪ್ರತ್ಯೇಕವಾಗಿ ಕೂರಿಸಿದ್ದಾರೆ. ಆ ಪಾಕಿಸ್ತಾನಿಗಳೆಲ್ಲರೂ ಒಳಗೆ ಇದ್ದಾರೆ. ಯಾಕಿದ್ದಾರೆ, ಏನು ಮಾಡಿದ್ದಾರೆ ಎನ್ನುವುದು ಗೊತ್ತಾಗುತ್ತಲೇ ಇಲ್ಲ. ಅವರನ್ನು ತಾನು ಬಾಡಿಗೆ ಪಿಕ್‌ಅಪ್‌ನಲ್ಲಿ ಕರೆದುಕೊಂಡು ಹೋಗಿದ್ದನ್ನು ತನ್ನ ಕಫೀಲ್ ದೃಢಪಡಿಸಿದರೆ ತನ್ನನ್ನು ಬಿಡುವುದು ಗ್ಯಾರಂಟಿ! ಈ ಕಫೀಲ್ ಎಷ್ಟು ಹೊತ್ತಿಗೆ ಬರುತ್ತಾನೊ!

ಪಾಪ, ತುಂಬಾ ಒಳ್ಳೆಯ ಮನುಷ್ಯ, ತನ್ನ ಕಷ್ಟಕ್ಕೆ ಎಷ್ಟೋ ಬಾರಿ ನಿಂತಿದ್ದಾನೆ. ಮೃದು ಸ್ವಭಾವದ ಅರಬ್ಬಿ. ಆತ ಕೋಪಗೊಂಡಿದ್ದನ್ನು ತಾನು ಕಂಡೇ ಇಲ್ಲ. ಅವನೂ ಈ ಪಾಕಿಸ್ತಾನಿಗಳ ಕೇಸ್‌ನಲ್ಲಿ ತಗುಲಿಹಾಕಿಕೊಂಡರೆ! ಅಯ್ಯೊ, ಮೊದಲು ತಾನು ಸಿಕ್ಕಿ ಹಾಕಿಕೊಳ್ಳದಿದ್ದರೆ ಸಾಕು. ಉಸಿರು ಕಟ್ಟುತ್ತಿತ್ತು. ಜೀವ ಬಾಯಿಗೆ ಬಂದಂತೆ ಅನ್ನಿಸಿ ತೇಗಬೇಕೆನಿಸಿತು.

ಜೈಲಿನ ಪ್ರಾಂಗಣದ ಗೋಡೆಗಳು ಬೃಹದಾಕಾರವಾಗಿ ನಿಂತು ಅವನನ್ನು ಬೆಚ್ಚಿಬೀಳಿಸುತ್ತಿದ್ದವು.ಯಾರೋ ಕೂಗುತ್ತಿದ್ದಾರೆ. ಏನೋ ಗದ್ದಲ. ಸದ್ದು ಜೋರಾಗುತ್ತಿದೆ. ಮೆಲ್ಲಗೆ ಇಡೀ ಜೈಲನ್ನೇ ಆ ಸದ್ದು ತುಂಬಿಕೊಳ್ಳುತ್ತಿದೆ. ಕೆಲವರು ಅತ್ತ ಓಡುತ್ತಿದ್ದಾರೆ. ರಂಜಿತ್ ಧಿಗ್ಗನೆ ಎದ್ದು ನಿಂತ. ಏನು ನಡೆಯುತ್ತಿದೆ ಎನ್ನುವುದು ಗೊತ್ತಾಗದೆ ಪತರುಗುಟ್ಟುತ್ತಿದ್ದ.

ಮಾಮೂಲಿಯಂತೆ ಅವನ ಎದೆ ಬಡಿದುಕೊಳ್ಳಲಾರಂಭಿಸಿತು. ಪೊಲೀಸರು ಓಡುತ್ತಿದ್ದರು. ಗದ್ದಲವೋ ಗದ್ದಲ. ಏನು ನಡೆಯುತ್ತಿದೆ ಎನ್ನುವುದನ್ನು ಯಾರೂ ಅವನಿಗೆ ಹೇಳುತ್ತಿಲ್ಲ. ಗುಂಯ್ ಗುಂಯ್ ಎಂದು ಪೊಲೀಸರ ವ್ಯಾನು, ಜೀಪು, ಕಾರುಗಳು ಕ್ಷಣಾರ್ಧದಲ್ಲೇ ಜೈಲನ್ನು ಸುತ್ತುವರಿದದ್ದು ಕೇಳಿಸಿತು.

ರಂಜಿತ್ ಗಡಗಡ ನಡುಗುತ್ತಿದ್ದ. ಹೊರಗೆ ಓಡಿ ಹೋಗುವುದು ಸಾಧ್ಯವಿಲ್ಲದ ಮಾತು! ತನ್ನಂತೆ ಕಚೇರಿಯಲ್ಲಿ ಕೂತಿದ್ದ ಅರಬ್ಬಿಗಳೂ ಚಡಪಡಿಸುತ್ತಿರುವುದನ್ನು ಕಂಡು ಏನು ಮಾಡುವುದೆಂದು ತೋಚದೆ ಪೆದ್ದುಪೆದ್ದಾಗಿ ತಲೆ ಕೆರೆದುಕೊಂಡ. ಅಚಾನಕ್ಕಾಗಿ ಬಂದು ಈ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡು ನರಳುತ್ತಿರುವುದನ್ನು ನೆನಸಿಕೊಂಡರೇನೇ ಕೋಪ ನೆತ್ತಿಗೇರುತ್ತಿತ್ತು.

‘ಇಷ್ ಮುದೀರ್! ಇಷ್ ಮುಷ್ಕಿಲ?’ ಬಾಯಿ ಬಿಟ್ಟು ಕೇಳಿಯೂ ನೋಡಿದ. ಗೋಡೆಗಳಂತೆಯೇ ಅವರ ಉಸಿರುಗಳೂ ಇವನನ್ನು ತಿವಿಯುತ್ತಿದ್ದವು. ಗದ್ದಲ ಏರುತ್ತಲೇ ಇತ್ತು.

ಪೊಲೀಸರ ಸದ್ದು ಕ್ರಮೇಣ ಜೋರಾಗುತ್ತಿತ್ತು. ಅವರ ಬಂದೂಕುಗಳಿಂದ ಗುಂಡುಗಳು ಸಿಡಿದ ಸದ್ದು ಕೇಳಿಸಿ ರಂಜಿತ್‌ನ ತೊಡೆಗಳು ನಿಶ್ಶಕ್ತಗೊಂಡು ಉದುರಿಬಿಡುವಷ್ಟು ಪಕಪಕ ಕುಣಿಯುತ್ತಿದ್ದವು.

ಪೊಲೀಸರು ಮೆಷಿನ್‌ಗನ್‌ಗಳನ್ನು ಹಿಡಿದು ನಿಂತಿದ್ದಾರೇನೊ! ಬಾಗಿಲಲ್ಲಿ ಸರಸರ ಓಡಾಡುತ್ತಿರುವುದು ಕಾಣಿಸಿತು. ಯಾವುದೊ ಸಿನಿಮಾವೊಂದರ ದೃಶ್ಯದಂತೆ ಕಾಣಿಸುತ್ತಿದ್ದ ಆ ಘಟನೆಯ ತಲೆಬುಡ ಅರ್ಥ ಆಗದೆ ಗಲಿಬಿಲಿಗೊಂಡ ರಂಜಿತ್ ಇವತ್ತು ತನ್ನ ಗ್ರಹಚಾರ ನೆಟ್ಟಗಿಲ್ಲ ಎಂದುಕೊಂಡ. ಮ್! ಯಾವತ್ತು ತಾನೆ ಅದು ತನಗೆ ನೆಟ್ಟಗಿದ್ದಿದೆ! ತನಗೆ ಮಗುವಾಗದೆ ಇರುವುದಕ್ಕೆ ಇದೂ ಕಾರಣವಾಗಿರಬಹುದೆ? ಆ ಆಫೀಸ್‌ನಲ್ಲಿದ್ದ ತಂಪು ಪಾನೀಯವೊಂದರ ಬಾಟೆಲ್ ನೋಡಿದ ಕ್ಷಣ ಅವನಿಗೆ ಹಾಗನ್ನಿಸಿತು.

ಯಾರೊ ಹಾಗೆ ಹೇಳಿದ ನೆನಪು! ಅತಿಯಾದ ತಂಪು ಪಾನೀಯ ಸೇವನೆ ವೀರ್ಯವನ್ನು ನಾಶಗೈಯುತ್ತದಂತೆ! ಗಲ್ಫ್‌ನಲ್ಲಿ ದುಡಿಯುತ್ತಿರೊ ಅನೇಕ ವಿದೇಶಿಯರಿಗೆ ಇದೇ ಸಮಸ್ಯೆ. ಆದರೆ ಈ ದೇಶದವರಿಗೇನೂ ಆಗುತ್ತಿಲ್ಲವಲ್ಲ... ೭೦ ವರ್ಷದವನಿಗೂ ಇಲ್ಲಿ ಮಗು ಹುಟ್ಟುತ್ತದೆ.

ಕಳೆದ ಎರಡು ವರ್ಷಗಳ ಹಿಂದೆ ತನ್ನ ಕಫೀಲ್ ಮೂರನೇ ಮದುವೆಯಾದ. ವರ್ಷ ಕಳೆಯುವುದರೊಳಗೆ ಮೂರನೇ ಹೆಂಡತಿಯಿಂದಲೂ ಮಗು ಪಡೆದ! ಆತನಿಗೆ ವಯಸ್ಸೆಷ್ಟು ಇರಬಹುದು... ಸುಮಾರು ೭೦. ಓ! ಇನ್ನೂ ಹೆಚ್ಚೇ ಇರಬೇಕು. ಆತ ಮದುವೆಯಾಗಿದ್ದು ೨೦–೨೫ರ ಪ್ರಾಯದ ಹುಡುಗಿಯಂತೆ. ಮರುಭೂಮಿಯೊಳಗೆ ಗುಡಾರಗಳಲ್ಲಿ ಈಗಲೂ ವಾಸಿಸುತ್ತಿರುವ ಬದೂನ್‌ಗಳ ಹುಡುಗಿ ಅವಳು.

ತನ್ನ ಕಫೀಲನೂ ಬದೂವೇ. ಸುಮಾರು ವರ್ಷಗಳ ಹಿಂದೆಯೇ ಮನೆ ಕಟ್ಟಿಕೊಂಡು ಒಂದೇ ಕಡೆ ನೆಲೆ ಕಂಡುಕೊಂಡ ಬದೂವನ್. ಹಣವುಳ್ಳ ಬದೂ... ಪಾಪ, ಅವರುಗಳು ಬಡ ಬದೂವನ್‌ಗಳು. ಒಂಟೆ, ಕುರಿ ಎಂದು ಮರುಭೂಮಿಯಲ್ಲಿ ಅಲೆಯುವ ಬದೂವನ್‌ಗಳು. ಖೇಮಾ ಎಂಬ ಬಟ್ಟೆಯ ಗುಡಾರಗಳಲ್ಲಿ ಜೀವಿಸುತ್ತ ತಮ್ಮ ರಕ್ಷಣೆಗೆಂದು ಬಂದೂಕುಗಳನ್ನು ಸದಾ ನೇತು ಹಾಕಿಕೊಂಡು ಒಂಟೆಗಳ ವಾಸನೆಯಲ್ಲಿ ಅರಳಿದವರು. 

ಕಳೆದುಹೋದ ಒಂದು ದುಬಾರಿ ಒಂಟೆಯ ಹುಡುಕುತ್ತ ತನ್ನ ಕಫೀಲ್ ಒಮ್ಮೆ ಆಳ ಮರುಭೂಮಿಗೆ ಹೋದಾಗ ಆ ಹುಡುಗಿಯ ಅಣ್ಣನನ್ನು ನೋಡಿದ್ದಾನೆ. ದಿಟ್ಟ ಮನಸ್ಸಿನ, ಅಂಜದ ಎದೆಯ ಆ ಹುಡುಗಿಯ ಅಣ್ಣ ಮರುಭೂಮಿಯ ತಮ್ಮ ವ್ಯಾಪ್ತಿಯೊಳಗೆ ಬಂದ ಒಬ್ಬ ಅನಾಮಿಕನ ಕಂಡು ಸಿಡಿದೆದ್ದು ನಿಂತಾಗ ಈ ಕಫೀಲ್ ಸಮಾಧಾನಿಸಿ, ತಾನೂ ಬದುವನ್ನೇ ಎಂದು ಮನದಟ್ಟು ಮಾಡಿಸಿ, ಗೆಳೆತನ ಬೆಳಸಿಕೊಂಡಿದ್ದಾನೆ.

ಈತ ಅಲ್ಲಿಗೆ ಹೋಗುವುದೂ ಅವನು ಊರಿನೊಳಗೆ ಬರುವುದು ಎಂದು ಸ್ನೇಹ ದಿನದಿನ ಬೆಳೆದು ಕೊನೆಗೆ ಈ ಕಫೀಲ್ ಮಹರ್ ಕೊಟ್ಟು ಆತನ ತಂಗಿಯನ್ನು ಮದುವೆಯಾದ.

ಇದು ಈತನಿಗೆ ಮೂರನೇ ಮದುವೆ. ಒಂದೇ ವರ್ಷಕ್ಕೆ ಗಂಡು ಮಗುವಿನ ತಂದೆಯಾದ. ಅದೃಷ್ಟದ ಮುದುಕ, ಒಂಟೆ ಹುಡುಕಹೋದವನು ಮಗದೊಂದು ಮದುವೆಯಾದ! ಹೌದು, ಆ ಒಂಟೆ ಏನಾಯ್ತು!? ಸಿಗಲೇ ಇಲ್ಲ ಎನ್ನಿಸುತ್ತದೆ, ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನು ತನ್ನ ಕಫೀಲ್ ನಿಲ್ಲಿಸಿಬಿಟ್ಟಿದ್ದಾನೆ.

ಎಪ್ಪತ್ತು ವರ್ಷದ ಮುದುಕನಿಗೆ ಮಗು ಆಗುವುದಾದರೆ ತನಗ್ಯಾಕೆ ಆಗುತ್ತಿಲ್ಲ? ತನ್ನ ಕುಟುಂಬದಲ್ಲಿ ಎಲ್ಲರಿಗೂ ಮಗುವಾಗಿದೆ. ಜೀವನವೇ ಬೇಡವಾಗುತ್ತಿದೆ... ತಾನೂ ಗಂಡಸಲ್ಲವೆ!? ಇನ್ನೊಂದು ಮದುವೆ ಆಗಿ ನೋಡೋಣವೆ! ತನ್ನ ಹೆಂಡತಿಯಲ್ಲೇ ಏನೋ ಸಮಸ್ಯೆಯಿರಬೇಕು!

ಢಂ ಎಂದು ಪೊಲೀಸರ ಗನ್ನೊಂದು ಕೂಗಿಕೊಂಡಿದ್ದೇ ರಂಜಿತ್ ಬೆಚ್ಚಿಬಿದ್ದ. ತನ್ನ ಕಣ್ಣನ್ನೇ ನಂಬಲಾಗುತ್ತಿಲ್ಲ. ಎಲ್ಲಿ ನೋಡಿದರಲ್ಲಿ ಪೊಲೀಸರೇ ತುಂಬಿದ್ದಾರೆ. ಗನ್ನುಗಳೊಂದಿಗೆ.

ಇವನು ಮೂಲೆಯೊಳಗೆ ಅವಿತು ಕೂತಿದ್ದಾನೆ. ಕಳೆದ ಏಳೆಂಟು ವರ್ಷಗಳಲ್ಲಿ ಹೀಗೆ ತನಗೂ ತನ್ನ ಕಣ್ಣ ಮುಂದಿನ ಜಗತ್ತಿಗೂ ಇರುವ ವ್ಯತ್ಯಾಸಗಳನ್ನು ಕಂಡು ಬೆಚ್ಚಿಬಿದ್ದಿದ್ದಾನೆ. ಒಂದು ಮಗುವಿಗೆ ತಂದೆಯಾಗಿದ್ದಿದ್ದರೆ ತನ್ನ ಬದುಕು, ಯೋಚಿಸೊ ಕ್ರಮಗಳೇ ಬದಲಾಗುತ್ತಿದ್ದವೇನೊ ಎಂದೂ ಎಷ್ಟೋ ಬಾರಿ ತಲೆ ಚಚ್ಚಿಕೊಂಡಿದ್ದಾನೆ.

ಮಂಕು ಕವಿದಿದ್ದ ಅವನ ಮನಸ್ಸಿಗೆ ತುಸು ಗೆಲುವು ಸಿಗುವಂತಾದ ಘಟನೆ ಮೆಲ್ಲಗೆ ಶುರುವಾಗುತ್ತಿತ್ತು. ಪೊಲೀಸರ ಸಾಲು ಸಿನಿಮಾದಲ್ಲಿ ನಡೆಯುವಂತೆ ಗನ್ನುಗಳನ್ನು ಹಿಡಿದು ಹಿಂದೆ ಸರಿಯುತ್ತ ಹೋಗುತ್ತಿದ್ದರು. ಅರಬ್ಬಿಯಲ್ಲಿ ಏನನ್ನೊ ಹೇಳಿಕೊಳ್ಳುತ್ತಿದ್ದರು. ಪೊಲೀಸರ ಸಾಲು ಮುಗಿದು ಜೈಲಿನೊಳಗಿದ್ದ ಕೈದಿಗಳು ನೆಲದಲ್ಲಿ ದೇಕುತ್ತ ತಮ್ಮತಮ್ಮ ದೇಹಗಳ ಮುಂದೆ ತಳ್ಳುತ್ತಿರುವುದು ಕಾಣಿಸಿ ರಂಜಿತ್‌ನ ಕಣ್ಣುಗಳು ರೋಮಾಂಚನಗೊಂಡವು.

ಇದೆಂತಹ ದೃಶ್ಯ! ತನ್ನ ಜೀವಿತದಲ್ಲೇ ನೋಡಿರದ ದೃಶ್ಯ! ಕೈದಿಗಳು ನೆಲವನ್ನು ಅಪ್ಪಿ ಉಲ್ಟಾ ಮಲಗಿ ಹೊಟ್ಟೆಯ ಎಳೆಯುತ್ತ ದೇಕುತ್ತಿದ್ದರು. ಅವರಲ್ಲಿ ಕೆಲವರು ಪಡುತ್ತಿರುವ ಪಾಡನ್ನು ನೋಡಿ ಗಕ್ಕನೆ ನಕ್ಕರೂ ಗಂಭೀರವಾಗಿ ನಿಂತಂತೆ ರಂಜಿತ್ ನಟಿಸಿದ. ನರನಾಡಿಗಳು ಸಡಿಲಗೊಂಡಂತೆ ಭಾಸವಾಗಿ ನಿಟ್ಟುಸಿರಿಟ್ಟ.

ಕೈದಿಗಳ ದೇಕುವ ಸಾಲು ಮುಗಿದು ಆ ಜಾಗವೇ ಪಿಚ್ಚೆನಿಸಿತು. ಹಿಂದೆ ಇನ್ನೂ ಇರುವರೇನೊ... ಬರುತ್ತಲೇ ಇಲ್ಲವಲ್ಲ! ಒಬ್ಬನಾದರೂ ದೇಕಿಕೊಂಡು ಹೋಗಬಾರದೆ...! ನೋಡಲು ಅದೆಷ್ಟು ಚೆಂದ ಇತ್ತು. ಅವರ ಕಣ್ಣುಗಳಲ್ಲಿ ಕಾಣುತ್ತಿದ್ದ ಸಾವಿನ ಭಯ, ಆತಂಕ, ಅಸಹಾಯಕತೆ... ಎಲ್ಲವೂ ಒಟ್ಟಾಗಿ ತೆವಳುತ್ತಿರುವಂತಿತ್ತು. ಈ ದೃಶ್ಯವನ್ನು ತಾನೆಂದೂ ಮರೆಯುವುದಿಲ್ಲ.

ಜೈಲಿನಲ್ಲಿ ಇಂತಹ ಶಿಕ್ಷೆಗಳೂ ಇರುತ್ತವೆಯೇ!? ಪತ್ರಿಕೆಗಳಲ್ಲಿ ಓದಿದ್ದೇನೆ, ಪೊಲೀಸರು ಕೊಡುವ ಯಾತನೆಯನ್ನು, ಅದರಲ್ಲೂ ತನ್ನ ನಾಡಿನ ಪೊಲೀಸರು ಹಿಂಸಿಸುವುದರಲ್ಲಿ ಎತ್ತಿದ ಕೈಯಂತೆ! ತನ್ನ ಊರಿನ ಅಬ್ದುಲ್ಲಾ ಕಾಕಾನಿಗೆ ಪೊಲೀಸರು ಸಖತ್ ಹಿಂಸೆ ಕೊಟ್ಟಿದ್ದರಲ್ಲವೆ, ಹಾಗಂತ ಜನ ಮಾತಾಡಿಕೊಂಡಿದ್ದರು! ಅದೇನೊ ಕೇಸು... ಗಂಧದ ಮರಗಳ ಕಳ್ಳತನದಲ್ಲಿ ಮಾರುತ್ತಿದ್ದನಂತೆ. ಅವನನ್ನು ಒದ್ದು ಎಳೆದುಕೊಂಡು ಹೋದಾಗ ತಾನೂ ನಿಂತು ನೋಡಿದ್ದೆ.

ಬೇಲ್‌ನಲ್ಲಿ ಅವನು ಬಂದಾಗ ಜನ ಅವನನ್ನು ಮುತ್ತಿಕೊಂಡಿದ್ದರು. ಅವನು ಹೇಳುತ್ತಿದ್ದ ಪೊಲೀಸ್ ಯಾತನೆಗಳ ಕಥೆಯನ್ನು ತಾನೂ ಕೇಳಿಸಿಕೊಳ್ಳುತ್ತಿದ್ದೆ. ಕೇಳಲು ವಿಚಿತ್ರವಾಗಿತ್ತು. ಮೈ ರೋಮಗಳೆಲ್ಲವೂ ನೆಟ್ಟಗೆ ನಿಂತುಕೊಂಡಿದ್ದವು. ಮೂರ್ನಾಲ್ಕು ದಿನಗಳು ಅವನು ಹೇಳಿದ್ದನ್ನೇ ಊಹಿಸಿಕೊಂಡು ಪುಲಕಗೊಳ್ಳುತ್ತಿದ್ದುದು ಇನ್ನೂ ನೆನಪಿದೆ.

ಅಂತಹ ಒಂದು ರೋಮಾಂಚನ ದೃಶ್ಯವನ್ನು ತಾನು ನೇರ ಕಂಡಿದ್ದು ಇದೇ ಮೊದಲು. ನಾಡಿಗೇ ಹೋದದ್ದೇ ಎಲ್ಲರಿಗೂ ಹೇಳಬೇಕು. ಆ ಅಬ್ದುಲ್ಲಾ ಕಾಕಾ ಎಲ್ಲಿ ಹೋದನೊ! ಪೊಲೀಸರು ಮತ್ತೊಮ್ಮೆ ಬಂಧಿಸಿದರು ಅಂತ ಜನ ಮಾತಾಡಿಕೊಂಡಿದ್ದು ನೆನಪಿದೆ!

ಹೌದು, ಈ ಗದ್ದಲ ಯಾಕೆ ಶುರುವಾಯ್ತು? ಪೊಲೀಸರು ಏನನ್ನೊ ಅರಚುತ್ತಿದ್ದರು. ಚಣ ಮೌನ. ಬಾಗಿಲ ಬಳಿ ಹೋಗಿ ನಿಂತು ಇತರರಂತೆ ಇವನೂ ಇಣುಕಿದ. ಹೊರಗೆ, ಬಯಲಲ್ಲಿ ಕೈದಿಗಳೆಲ್ಲರೂ ಕುಕ್ಕರಗಾಲಲ್ಲಿ ಕೂತಿದ್ದರು. ಸುತ್ತಲೂ ಪೊಲೀಸರು. ಏನನ್ನೋ ಹೇಳುತ್ತಿದ್ದಾರೆ. ಮೂವರು ಕೈದಿಗಳು ಎದ್ದು ನಿಂತರು. ಪೊಲೀಸರು ಜೋರು ದನಿಯಲ್ಲಿ ಏನನ್ನೊ ಒದರಿದರು.

ಆ ಮೂವರನ್ನು ಹೊರತುಪಡಿಸಿದ ಕೈದಿಗಳು ಕುಕ್ಕರಗಾಲಲ್ಲೇ ಹೆಜ್ಜೆಗಳ ಊರುತ್ತಾ ವಾಪಸ್ ಇತ್ತ ಬರತೊಡಗಿದರು. ಅವರ ಹಿಂದೆ ಮುಂದೆ ಪೊಲೀಸರು. ಕೋಳಿಗಳಂತೆ ಹೆಜ್ಜೆ ಊರುತ್ತಾ ಕೈದಿಗಳು ಬರುತ್ತಿರುವುದನ್ನು ನೋಡಿ ಎದೆ ಕುಣಿಸುತ್ತಾ ರಂಜಿತ್ ನಕ್ಕ. ಅಲ್ಲಿ ನಕ್ಕಿದ್ದು ಅವನು ಮಾತ್ರವಲ್ಲ, ಅಲ್ಲಿದ್ದ ಎಲ್ಲರೂ. ನಗುತ್ತಿದ್ದವರ ನೋಡಿದ.

ಎಲ್ಲರೂ ಆ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಚಿಕ್ಕ ಹುಡುಗರು ಟಾಯ್ಲೆಟ್‌ಗೆ ಹೋಗುತ್ತಾ ಮುಂದೆ ಮುಂದೆ ಹೋಗುತ್ತಿರುವಂತೆ ಕಾಣಿಸಿ ರಂಜಿತ್ ಜೋರಾಗಿ ನಕ್ಕ. ಅಲ್ಲಿದ್ದವರು ಅವನನ್ನು ನೋಡಿ ತಮ್ಮ ತಮ್ಮ ನಗುವನ್ನು ಮತ್ತಷ್ಟು ಹರಿತಗೊಳಿಸಿಕೊಂಡು ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಿದ್ದರು. ಅದೊಂದು ಆನಂದಮಯ ದೃಶ್ಯವಾಗಿತ್ತು. ಮನಸ್ಸು ಕುಣಿಯುತ್ತಿತ್ತು. 

ಮೂವರು ಕೈದಿಗಳನ್ನು ಪೊಲೀಸರು ಎಲ್ಲಿಗೊ ಕರೆದೊಯ್ಯುತ್ತಿರುವುದು ಕಾಣಿಸಿತು. ಅವರುಗಳಲ್ಲಿ ಇಬ್ಬರು ಆಫ್ರಿಕನ್ನರು, ಮತ್ತೊಬ್ಬ ಮಸ್ರಿ. ಉಳಿದ ಕೈದಿಗಳು ಮೊಣಕಾಲಿಗೆ ಕೈಗಳನ್ನು ಬಂಧಿಯಾಗಿಸಿಕೊಂಡು ತಮ್ಮ ತಮ್ಮ ತಾತ್ಕಾಲಿಕ ವಾಸ್ತವ್ಯದತ್ತ ಮುಂದಡಿಯಿಡುತ್ತಿದ್ದರು. ಪೊಲೀಸರು ಕೈದಿಗಳ ಜೊತೆ ಇವರನ್ನು ದಾಟಿ ಹೋಗುತ್ತಿದ್ದರು. ಅಲ್ಲಿ ಜೈಲಿನ ಪ್ರಾಂಗಣದಲ್ಲಿ ತನ್ನ ಕಫೀಲ್ ನಿಂತಿದ್ದ.

ಕಣ್ಣುಗಳು ಮಿರಮಿರ ಮಿಂಚಿ ಅತ್ತ ಓಡಿ ‘ಸಲಾಮ ಲೇಖುಂ’ ಎಂದ. ಕಫೀಲ್‌ನ ಕಣ್ಣುಗಳಲ್ಲಿ ನೆಮ್ಮದಿ ಮೂಡಿ ರಂಜಿತ್‌ನ ತೋಳ ತಟ್ಟಿ ‘ವ್ಯನ್ ಹೆ ರಜ್ಜಾಲ್... ಹನ ದವ್ವರ್, ದವ್ವರ್, ಇಂತ ಮಾಫಿ ಅಸ್ಸಲ್... ತಾಲ್’ ಎನ್ನುತ್ತ ರಂಜಿತ್‌ನ ತೋಳ ಎಳೆದು ನಡೆದ. ರಂಜಿತ್‌ನಿಗೆ ಅಗಾಧ ಸಂತೋಷವಾಯ್ತು. ನದಿ ಕಡಲಿಗೆ ಸೇರುವಾಗಿನ ಗಳಿಗೆಯಂತೆ ಇವನೂ ಬಳುಕುತ್ತ ತನ್ನ ಕಫೀಲ್‌ನ ಹಿಂದೆ ನಡೆಯುತ್ತಿದ್ದ.

‘ಹುವಾ? ಪಾಕಿಸ್ತಾನಿ?’ ‘ತಾಲ್ ಇಂತ... ಹುವ ಹರಾಮಿ’ ಎಂದು ಏನೊಂದೂ ಹೇಳದೆ ಕಾರ್ ಹತ್ತಿದ. ರಂಜಿತ್ ತನ್ನ ಪಿಕ್‌ಅಪ್‌ನಲ್ಲಿ ಬರುತ್ತೇನೆಂದ. ಪೊಲೀಸರು ನಿನ್ನ ಪಿಕ್‌ಅಪ್‌ನ್ನು ನಾಳೆ ಕೊಡುತ್ತಾರಂತೆ, ಬಾ ಈಗ ಹತ್ತು ಎಂದ ಕಫೀಲ್‌ನ ಮಾತ ಕೇಳಿ ಚಣ ಭಯವಾದರೂ ಈತ ಇದ್ದಾನೆ ತನಗೆ ಎನ್ನಿಸಿ ಕಾರ್ ಹತ್ತಿದ.

ಹೋಗುತ್ತಿರುವ ಹಾದಿ ಕಪ್ಪಗೆ ಹರಡಿಕೊಳ್ಳುತ್ತಿತ್ತು. ಇರುಳು ಕಾಲನೆಂಬ ಮಾಯಾವಿಯನ್ನು ತುಳಿಯುತ್ತಿತ್ತು. ಕಪ್ಪು ಟಾರ್ ರಸ್ತೆಯ ಸೀಳುತ್ತಿರುವ ಕಾರ್‌ನ ಬೆಳಕನ್ನು ನೋಡುತ್ತಿದ್ದ ರಂಜಿತ್ ತನ್ನ ಕಫೀಲ್‌ನತ್ತ ತಿರುಗಿ ಜೈಲಿನಲ್ಲಿ ಏನು ಸಂಭವಿಸಿತೆಂದು ಕೇಳಿದ. ಆತ ನಕ್ಕು, ‘ಮಜ್ನೂನ್ ಹುವ, ಷುರ್ತಾ’ ಎಂದು ಪೊಲೀಸರ ಬೈಯ್ದ.

ಸರ್ಕಾರದ ಹೊಸ ನಿಯಮದಂತೆ ಹಕಾಮ ಇಲ್ಲದೆ ದೇಶದೊಳಗೆ ಕೆಲಸ ಮಾಡುತ್ತಿರುವ ವಿದೇಶಿಯರನ್ನು ಪೊಲೀಸರು ಬಂಧಿಸುತ್ತಿದ್ದಾರೆ. ಹಾಗೇ ಬಂಧಿಸಿದವರಲ್ಲಿ ಕೆಲವರು ಇಥಿಯೋಪಿಯನ್ನರು. ಅವರುಗಳನ್ನು ಬಂಧಿಸಿ ತಿಂಗಳಾಯ್ತಂತೆ. ಅವರಿಗೆ ಊಟ ಕೊಡದೆ ಶಿಕ್ಷೆ ನೀಡಿದ್ದಾರೆ. ಅವರಲ್ಲಿ ಕೆಲವರು ಊಟ ಬೇಕೆಂದು ಗಲಾಟೆ ಮಾಡಿದ್ದಾರೆ.

ಈ ಗಲಾಟೆಯನ್ನು ಪೊಲೀಸರು ಬೇರೆ ಥರ ಅರ್ಥೈಸಿಕೊಂಡಿದ್ದಾರೆ. ಜೈಲಿನೊಳಗೆ ಉಗ್ರಗಾಮಿಗಳು ಸೇರಿಕೊಂಡಿದ್ದಾರೆಂದೂ ಅವರುಗಳು ಗದ್ದಲ ಎಬ್ಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದೇ ತಿಳಿದುಕೊಂಡ ಪೊಲೀಸರು ಅವರುಗಳೆನ್ನೆಲ್ಲ ಒಟ್ಟಾಗಿ ಸೇರಿಸಿ ಗಲಾಟೆ ಶುರು ಮಾಡಿದವರ ಹಿಡಿದು ವಿಚಾರಿಸಲು ಕರೆದುಕೊಂಡು ಹೋಗಿದ್ದಾರೆ.


ಕಫೀಲ್ ಜೋರಾಗಿ ನಗುತ್ತ ‘ಪೊಲೀಸರು ಹುಚ್ಚರು... ಪಾಪ, ಹೊಟ್ಟೆ ಹಸಿವಿಗೆ ಅವರು ಕೂಗುತ್ತಿದ್ದರೆ ಇವರುಗಳು ಟೆರರಿಸ್ಟ್ಸ್ ಅಂತ ಹಿಡಿಯುತ್ತಾರಲ್ಲ. ಇದ್ದರೂ ಇರಬಹುದೇನೊ, ಯಾರಿಗೆ ಗೊತ್ತು’ ಎಂದು ಕುತ್ತಿಗೆಯ ಕುಣಿಸುತ್ತ ನಕ್ಕ. ರಂಜಿತ್‌ನೂ ನಕ್ಕ. ಆದರೆ ಅವನ ಮಾತಿನ ಧಾಟಿಯಲ್ಲಿ ಏನೊ ಬದಲಾವಣೆ ಇದೆ ಅನ್ನಿಸಿತು.

ಇಬ್ಬರೂ ಸರಕ್ಕನೆ ಒಬ್ಬರನ್ನೊಬ್ಬರು ನೋಡಿಕೊಂಡರು. ಚಣ ಕಳೆದು ಕಫೀಲ್ ರಂಜಿತ್‌ನ ನೋಡಿ ‘ಮಿಥಾ ಇಂತ ರೋಹ್ ಹಿಂದ್?’ ಕೇಳಿದ. ಈ ಪ್ರಶ್ನೆಯ ಅಪೇಕ್ಷಿಸದಿದ್ದ ರಂಜಿತ್ ಗಲಿಬಿಲಿಗೊಂಡು, ತಡವರಿಸುತ್ತ ‘ಬಾದ್ ಷಹರ್’ ಎಂದ. ತಾನು ಇಂಡಿಯಾಕ್ಕೆ ಹೋಗುವ ದಿನಾಂಕವ ಈಗ್ಯಾಕೆ ಕೇಳುತ್ತಿದ್ದಾನೆ ಎಂಬುದು ಅರ್ಥವಾಗಲಿಲ್ಲ.

‘ರೋಹ್ ಸುರ’ ಎಂದ. ಕಫೀಲ್‌ನ ದನಿ ಗಡುಸಾಗಿದ್ದುದು ರಂಜಿತ್‌ನ ಅರಿವಿಗೆ ಬಂತು. ಇದ್ದಕ್ಕಿದ್ದಂತೆ ಈತ ತನ್ನನ್ನು ಬದುಕಿನ ಅಂಚಿಗೆ ತಳ್ಳುತ್ತಿರುವಂತೆ ಅನ್ನಿಸಿ ಗಲಿಬಿಲಿಗೊಂಡ.   ಆ ಮಾತಿನ ಗೂಡಾರ್ಥ ತಿಳಿಯದೆ ರಂಜಿತ್ ಕಫೀಲನನ್ನೇ ನೋಡಿದ. ಆತನ ಮುಖ ಈಗ ಗಂಭೀರವಾಗಿತ್ತು.

ಆತ ಹೇಳುವುದರಲ್ಲಿ ಏನೋ ಒಳಾರ್ಥವಿದೆ ಎನ್ನುವುದು ಖಾತ್ರಿಯಾಯ್ತು, ಆದರೆ ಕೇಳಲು ಭಯ. ಪೊಲೀಸರೇನಾದರು ತನ್ನ ಹಿಂದೆ ಬೀಳಬಹುದೆ? ಯಾಕಾಗಿರಬಹುದು? ನಿದ್ರೆಯಿಲ್ಲದ ರಾತ್ರಿಗಳು ಮತ್ತೊಮ್ಮೆ ಶುರುವಾಗುತ್ತಲಿವೆ. ಎದೆ ಬಡಿತ ಕಿವಿಗೆ ಸ್ಪಷ್ಟವಾಗಿ ಕೇಳಿಸುತ್ತಿತ್ತು. ತೇಗು ಒತ್ತೊತ್ತಿ ಬರುತ್ತಿತ್ತು. 
****
ವಿಮಾನದಿಂದ ಇಳಿದು ಬ್ಯಾಗೇಜ್ ಎಳೆದುಕೊಂಡು ಹೊರಬಂದ. ಕೊಚ್ಚಿನ್ ಬಿಸಿಲು ಹಿತವೆನಿಸಿತು. ಕೇರಳದ ಗಾಳಿ ಮೈಗೆ ತೀಡುತ್ತಿದ್ದಂತೆ ಮನಸ್ಸು ತಿಳಿಯಾಗಿ ಇಷ್ಟು ದಿನಗಳು ಇದ್ದ ಆತಂಕ ಮಾಯವಾಯ್ತು. ತನ್ನ ಮಾಮೂಲಿ ಟ್ಯಾಕ್ಸಿಯವನಿಗೆ ಹುಡುಕಿದ. ಅಷ್ಟರಲ್ಲಿ ವ್ಯಕ್ತಿಯೊಬ್ಬ ಸನಿಹಕ್ಕೆ ಬಂದು, ‘ರಂಜಿತ್ ಇಲ್ಲೆ!?’ ಕೇಳಿದ.
ಹೌದೆಂದು ರಂಜಿತ್ ತಲೆಯಾಡಿಸಿದ. ತನ್ನ ಗೆಳೆಯ ಕಳುಹಿಸಿರುವುದಾಗಿ ಹೇಳಿ ಬ್ಯಾಗೇಜನ್ನು ಎತ್ತಿಕೊಂಡ.

ಈತನನ್ನು ತಾನು ಈ ಮುಂಚೆ ನೋಡಿಯೇ ಇಲ್ಲ. ‘ಯಾವೂರು?’ ಕೇಳಿದ. ಆತ ಗುಮ್ಮನೆ ಕಾರು ಓಡಿಸುತ್ತ ‘ಕೊಲ್ಲಂ’ ಎಂದ. ಈ ಮುಂಚೆ ಎಲ್ಲಿ ಕೆಲಸ ಮಾಡುತ್ತಿದ್ದೆ ಎಂದು ಕೇಳಬೇಕೆನಿಸಿದರೂ ಸುಮ್ಮನೆ ಕೂತ ರಂಜಿತ್‌ನನ್ನು ಅರಿತವನಂತೆಯೋ ಏನೋ ಆತ, ಈ ಮೊದಲು ತಾನು ಬಾಂಬೆಯಲ್ಲಿ ಇದ್ದುದಾಗಿಯೂ ನಂತರ ಕತಾರ್‌ನಲ್ಲಿ ಎಂಟು ವರ್ಷ ಇದ್ದುದಾಗಿಯೂ ಹೇಳಿದ.

ಹೇಳುವಾಗ ಆತನ ಮುಖ ಕಪ್ಪಿಟ್ಟುದ್ದುದನ್ನು ರಂಜಿತ್ ಗಮನಿಸಿದ. ರಂಜಿತ್‌ನ ಮನಸ್ಸು ಕ್ರಮೇಣ ಸರಾಗವಾಗಿ ಹರಿಯತೊಡಗಿತು. ಅದೂ ಇದೂ ಎಂದು ಮಾತನಾಡುತ್ತಿದ್ದರು ಇಬ್ಬರು. ಆತನಿಗೆ ಬಂದ ಒಂದು ಫೋನ್ ಕಾಲ್ ಇಬ್ಬರ ಮಾತುಗಳಿಗೆ ಬ್ರೇಕ್ ಹೇಳಿತು. ಕಾರಿನ ಹೊರಗೆ ನೋಡುತ್ತಲೇ ಆತ ಮಾತನಾಡುತ್ತಿದ್ದುದನ್ನು ಕೇಳಿಸಿಕೊಳ್ಳುತ್ತಾ ರಂಜಿತ್ ತುಟಿಗಳನ್ನು ಒದ್ದೆ ಮಾಡಿಕೊಂಡ. ಕಾರು ಈಗ ಸಿಟಿಯನ್ನು ಪ್ರವೇಶಿಸುತ್ತಿದೆ.

ಎಷ್ಟು ಕಾರುಗಳು! ಅದೆಷ್ಟು ಅಪಾರ್ಟ್‌ಮೆಂಟ್‌ಗಳು! ಜನಕ್ಕೆ ಅದೆಲ್ಲಿಂದ ದುಡ್ಡು ಬರುತ್ತದೆಯೊ! ಏಳೆಂಟು ವರ್ಷಗಳು ವಿದೇಶದಲ್ಲಿದ್ದೆವೆಂಬ ಹೆಸರು ಮಾತ್ರ! ಹಳೆಯ ಮನೆಯನ್ನು ರಿಪೇರಿ ಮಾಡಿಸಿ, ತಂಗಿ ತಮ್ಮಂದಿರ ಮದುವೆ ಮಾಡಿಸಿದ್ದಷ್ಟೇ ತಾನು ಇಷ್ಟು ವರ್ಷ ದುಡಿದದ್ದು? ತನ್ನಂತಹ ಅದೆಷ್ಟು ಮಂದಿ ನರಳುತ್ತಿದ್ದಾರೊ! ಹುಟ್ಟಿದ ದೇಶ ಬಿಟ್ಟು ಪರದೇಶಕ್ಕೆ ಹೋದರೂ ತಮ್ಮಗಳ ಜೀವನ ಹೀಗೇ ಇದೆಯಲ್ಲ! ಈತನೂ ತನ್ನಂತೆಯೇ ಗಲ್ಫ್‌ನಲ್ಲಿ ಇದ್ದವನು. ಅಷ್ಟಾಗಿ ದುಡಿದಂತೆ ಕಾಣುತ್ತಿಲ್ಲ...

ಆತ ಫೋನ್ ಮಾತ ಮುಗಿಸಿ ರಂಜಿತ್‌ನ ನೋಡಿದ. ರಂಜಿತ್‌ನೂ ಅವನನ್ನು ನೋಡಿ ‘ಮಗಳಾ?’ ಎಂದು ಕೇಳಿದ. ಆತನ ಮುಖ ಅರಳುವುದನ್ನು ಕಂಡ. ಆತ ಹೌದೆನ್ನುತ್ತಾ ‘ನಿಮಗೆಷ್ಟು ಮಕ್ಕಳು?’ ಎಂದ.

ರಂಜಿತ್‌ನಿಗೆ ಅಗಾಧ ಸಿಟ್ಟು ಉಕ್ಕಿ ಬಂತು. ಊರಿಗೆ ಬಂದದ್ದೇ ಶುರುವಾಯ್ತಲ್ಲ, ಈ ಹಾಳಾದ ಪ್ರಶ್ನೆ... ಆತನನ್ನು ಜಾಡಿಸಿ ಹೊಡೆಯಬೇಕೆನ್ನಿಸಿತು. ಮನಸ್ಸನ್ನು ಹತೋಟಿಗೆ ತಂದುಕೊಂಡು ‘ಮೂರು’ ಎಂದ. ಹಾಗೇ ಹೇಳುವಾಗ ಮೈಯೆಲ್ಲ ಮುಳ್ಳುಗಳು ಮೂಡಿದಂತೆ ಭಾಸವಾಯ್ತು. ಮನಸ್ಸು ಕುದಿಯುತ್ತಿತ್ತು. ಆತ ಏನೋ ಹೇಳುತ್ತಿದ್ದ, ಅವನ ಮಾತುಗಳು ರಂಜಿತ್‌ನ ಕಿವಿಯೊಳಗೆ ಮೆಲ್ಲಗೆ ಇಳಿದವು.

ಆತ ಬಿಕ್ಕುವ ದನಿಯಲ್ಲಿ ಮಾತನಾಡುತ್ತಿದ್ದ. ಏನನ್ನು ಹೇಳುತ್ತಿದ್ದಾನೀತ!? ಇಷ್ಟು ಬೇಗ ಒಬ್ಬ ಮನುಷ್ಯ ತನ್ನ ನೋವನ್ನು ಅಪರಿಚಿತರ ಬಳಿ ಹೇಳಿಕೊಳ್ಳಬಲ್ಲನೆ!? ಅಥವ ಇದು ದುಡ್ಡು ಕೀಳುವ ಮೋಸದಾಟವೆ?

ಹೌದಾ...!?
ನಿಜಾನಾ...!? (ಕೇಳಲು ಒಂದ್ ಥರ ಮಜವಾಗಿದೆ... ಮುಂದುವರೆಸು ಗೆಳೆಯ...)
....
.... (ತನ್ನ ಮಕ್ಕಳಿಲ್ಲದ ನೋವನ್ನು ಹಂಚಿಕೊಂಡರೆ ಖಂಡಿತ ಇವನೂ ಎಂಜಾಯ್ ಮಾಡುತ್ತಾನೆ)
....
.... (ವುಫ್! ಇದೆಂತಹ ತೇಗು! ವುಫ್! ನಿಲ್ಲದೆ ಬರುತ್ತಲೇ ಇದೆಯಲ್ಲ!) ಕಾರು ವೇಗವಾಗಿ ಹೋಗುತ್ತಿತ್ತು. ಸಿಗ್ನಲ್ ಒಂದರಲ್ಲಿ ನಿಂತಿತು.

120 ಸೆಕೆಂಡ್‌ಗಳು ಕಳೆದು ಸಿಗ್ನಲ್ ಹಸಿರಿಗೆ ಬಿದ್ದಿದ್ದೇ ವಾಹನಗಳು ಸಮುದ್ರದಲೆಗಳಂತೆ ಓಡಲು ಶುರು ಮಾಡಿದವು. ರಂಜಿತ್ ಕೂತಿದ್ದ ಕಾರು ನಿಂತೇ ಇತ್ತು. ಅದರ ಹಿಂದಿದ್ದ ವಾಹನಗಳು ಒಂದೇ ಸಮನೆ ಹಾರ್ನ್ ಮಾಡುತ್ತಲೇ ಇದ್ದವು. ಜಪ್ಪಯ್ಯ ಎಂದರೂ ರಂಜಿತ್‌ನ ಕಾರು ಒಂದು ಅಂಗುಲವೂ ಅಲುಗಾಡಲಿಲ್ಲ. ಹಿಂದಿದ್ದ ವಾಹನದವರು ಇಳಿದು ಈ ಕಾರ್‌ನ ಬಳಿ ಬಂದು ಬಗ್ಗಿ ನೋಡಿದರು.

ಎಲ್ಲರೂ ಅವಕ್ಕಾಗಿ ನಿಂತರು. ಟ್ರಾಫಿಕ್ ಪೊಲೀಸ್ ಲಗುಬಗನೆ ಬಂದು ಜನರ ಸರಿಸಿ ಕಾರಿನ ಕಿಟಕಿಯೊಳಗೆ ಕಣ್ಣ ಹಾಯಿಸಿದ. ಒಳಗೆ ಯಾರೊಬ್ಬರೂ ಇಲ್ಲ. ಜನ ಆಶ್ಚರ್ಯಚಕಿತರಾಗಿ ನಿಂತಿದ್ದರು. ಕಾರಿನ ನಾಲ್ಕೂ ಡೋರ್‌ಗಳು ಲಾಕ್ ಆಗಿವೆ. ಕಾರ್ ನಿಲ್ಲಿಸಿ ಇಲ್ಲೇ ಎಲ್ಲಾದರೂ ಹೋಗಿರಬೇಕು ಎಂದ ಟ್ರಾಫಿಕ್ ಪೊಲೀಸ್‌ಗೆ ಸಿಕ್ಕ ಉತ್ತರವನ್ನು ನಂಬುವುದೊ ಬಿಡುವುದೊ ಗೊತ್ತಾಗದೆ ಅಲ್ಲಿದ್ದ ಹಲವರು ನಿಬ್ಬೆರಗಾಗಿ ನಿಂತಿದ್ದರು.

ಈ ಕಾರಿನಿಂದ ಯಾರೊಬ್ಬರೂ ಇಳಿಯಲಿಲ್ಲ, ಸಿಗ್ನಲ್ ಬಿದ್ದಾಗ ಇಬ್ಬರು ಕೂತಿದ್ದನ್ನು ತಾವು ನೋಡಿದ್ದಾಗಿ ಕೆಲವರು ಹೇಳಿದರು. ಆದರೆ ಅವರು ಎಲ್ಲಿ ಹೋದರೆನ್ನುವುದು ಯಾರಿಗೂ ಗೊತ್ತಾಗುತ್ತಿಲ್ಲ. ಮಗುವೊಂದು ತೊದಲು ನುಡಿಯಲ್ಲಿ ಏನೊ ಹೇಳಿತು. ಎಲ್ಲರ ಗಮನ ಅತ್ತ ತಿರುಗಿತು. ಆ ಮಗು ಹೇಳುತ್ತಿತ್ತು: ಇಬ್ಬರು ಅಂಕಲ್‌ಗಳು ಕಾರಿನೊಳಗೆ ಇದ್ದರು, ಮಾತನಾಡುತ್ತಿದ್ದರು... ಹಾಗೇ ಕಾರಿನೊಳಗೇ ಮಾಯವಾದರು. 

ಸೇರಿದ್ದ ಜನ ಪುಲಕಗೊಳ್ಳುತ್ತಿದ್ದರು. ಕೆಲವರು ತಮ್ಮ ಮೊಬೈಲ್‌ಗಳಲ್ಲಿ ಆ ಕಾರನ್ನೂ ಆ ಹುಡುಗಿಯ ಮಾತುಗಳನ್ನೂ ವಿಡಿಯೊ ಮಾಡಿಕೊಳ್ಳುತ್ತಿದ್ದರು. ಆ ಹುಡುಗಿಯ ಮಾತನ್ನು ನಂಬದಿದ್ದವರು ದಿಗಿಲ್ಗೊಂಡು ನಿಂತಿದ್ದು ಮಗದೊಂದು ಸಂಭವಿಸಿದಾಗ: ಆ ಕಾರು ಮೆಲ್ಲಗೆ ಕರಗತೊಡಗಿತು, ಎಲ್ಲರ ಕಣ್ಮುಂದೆ ಅದೂ ಇಲ್ಲವಾಯ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT