ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಾಟ: ಪರವಾನಗಿ ಕಡ್ಡಾಯ

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ: ಜಿಲ್ಲಾಧಿಕಾರಿ ಸೂಚನೆ
Last Updated 26 ಮೇ 2016, 8:22 IST
ಅಕ್ಷರ ಗಾತ್ರ

ಹಾವೇರಿ: ‘ಜಿಲ್ಲೆಯಲ್ಲಿನ ವೃತ್ತಿಪರ ಆಹಾರ ಪದಾರ್ಥ ಮಾರಾಟಗಾರರು ಜೂನ್ 15 ರೊಳಗಾಗಿ ‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ’ ಅಡಿಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿ, ಪರವಾನಗಿ ಪಡೆದುಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ರಮಣದೀಪ ಚೌಧರಿ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‘ದೈನಂದಿನ ಬಳಕೆಯ ಆಹಾರ ಪದಾರ್ಥಗಳಾದ ಚಹಾಪುಡಿ, ಅರಿಶಿನಪುಡಿ, ಖಾರದಪುಡಿ ಹಾಗೂ ಹಾಲಿನ ಮಾದರಿಗಳನ್ನು ಮೇಲಿಂದ ಮೇಲೆ ಪರಿಶೀಲಿಸಿ, ವಿಶ್ಲೇಷಣೆಗೆ ಕಳುಹಿಸಿ ಕ್ರಮಕೈಗೊಳ್ಳಬೇಕು’ ಎಂದು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಸೂಚಿಸಿದರು.

‘ಜಿಲ್ಲೆಯಲ್ಲಿ ತಳ್ಳುಗಾಡಿಯಲ್ಲಿ ಮಾರಾಟ ಮಾಡುವ ಹಾಗೂ ತಯಾರಿಸುವ ಆಹಾರವನ್ನು ಮತ್ತು ಉಪಯೋಗಿಸುವ ನೀರನ್ನು ಪರಿಶೀಲಿಸಬೇಕು. ಅನಧಿಕೃತ ಕುಡಿಯುವ ನೀರಿನ ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲ. ಆದರೂ, ಈ ಬಗ್ಗೆ ಎಚ್ಚರ ವಹಿಸಿ ನಿಗಾವಹಿಸಬೇಕು. ಒಟ್ಟು 5 ಐ.ಎಸ್.ಐ. ಪ್ರಮಾಣಪತ್ರ ಘಟಕಗಳಿದ್ದು, ಅವುಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು’ ಎಂದರು.

‘ಅಸುರಕ್ಷಿತ ಆಹಾರದ ಬಗ್ಗೆ ಜಿಲ್ಲೆಯ ಎಲ್ಲ ತಾಲ್ಲೂಕು ಮಟ್ಟದ ಜನ ಸಾಮಾನ್ಯರಿಗೆ ಅರಿವು ಮೂಡಿಸುವ ಕಾರ್ಯಾಗಾರವನ್ನು ಏರ್ಪಡಿಸಬೇಕು. ಎಲ್ಲ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಮಾರಾಟ ಮಾಡುವ ಹಾಲು ಮತ್ತಿತರ ಆಹಾರ ಪದಾರ್ಥಗಳನ್ನು ಪರಿಶೀಲಿಸಿ ವಿಶ್ಲೇಷಣೆಗೆ ಕಳುಹಿಸಬೇಕು’ ಎಂದರು.

‘ಹಣ್ಣಿನ ವ್ಯಾಪಾರಿಗಳು ಬೇಗನೆ ಹಣ್ಣು ಮಾಗಿಸಲು ರಸಾಯನಿಕಗಳಾದ ಕ್ಯಾಲ್ಸಿಯಂ ಕಾರ್ಬೈಡ್‌, ಇಥಿಪಾಸ್ ದ್ರಾವಣಗಳನ್ನು ಉಪಯೋಗಿಸದಂತೆ ಸಂಬಂಧಿಸಿದವರಿಗೆ ನೋಟಿಸ್‌ ನೀಡಿ ಪರಿಶೀಲಿಸಬೇಕು. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾನೂನು ಬಗ್ಗೆ ತಾಲ್ಲೂಕುಗಳಲ್ಲಿ ಜಾಗೃತಿ ಮೂಡಿಸಬೇಕು. ಜನದಟ್ಟಣೆ ಇರುವ ಸಂತೆ ಮತ್ತಿತರೆಡೆ  ಬೀದಿನಾಟಕ ಮತ್ತು  ಕಾರ್ಯಾಗಾರವನ್ನು ಏರ್ಪಡಿಸಬೇಕು’ ಎಂದರು.

ಜಿಲ್ಲಾ ಅಂಕಿತ ಅಧಿಕಾರಿ ಆರ್.ಪಿ. ಮುದಿಗೌಡ್ರ ಮಾತನಾಡಿ, ‘ರಾಸಾಯನಿಕಗಳನ್ನು ಉಪಯೋಗಿಸುವ ಹಣ್ಣಿನ ವ್ಯಾಪಾರದ ಕಡೆ ದಾಳಿ ನಡೆಸಿ ತನಿಖೆ ಕೈಗೊಂಡು, ರಾಸಾಯನಿಕ ಬಳಸುವವರ ಮೇಲೆ ಎರಡು ಕೇಸ್‌ಗಳನ್ನು ದಾಖಲಿಸಲಾಗಿದೆ. ಈಗ ಎಲ್ಲರೂ ಶೀಥಲಿಕರಣಗೊಳಿಸಿ ಹಣ್ಣುಗಳನ್ನು ಮಾಗಿಸುವುದನ್ನು ಅಳವಡಿಸಿಕೊಂಡಿದ್ದಾರೆ. ಕೆಲವರು ಸ್ವಾಭಾವಿಕವಾಗಿ ಬಟ್ಟಿ ಹಾಕುವ ಕ್ರಮ ಕೈಗೊಂಡಿದ್ದಾರೆ’ ಎಂದರು.

ಇದೇ ವೇಳೆ ಕೆ.ಎಂ.ಎಫ್ ಮಾಜಿ ಅಧ್ಯಕ್ಷ ಬಸವರಾಜ ಅರಬಗೊಂಡ ಮಾತನಾಡಿ, ‘ಜಿಲ್ಲೆಯಲ್ಲಿ ಆಹಾರ ಪ್ರಯೋಗಾಲಯವನ್ನು ಪ್ರಾರಂಭಿಸ ಬೇಕು’ ಎಂದು ಮನವಿ ಮಾಡಿದರು.

ರಾಣೆಬೆನ್ನೂರಿನ ಆಹಾರ ಸುರಕ್ಷತಾ ಅಧಿಕಾರಿ ಎಸ್.ಸಿ.ಕೋರಿ, ಡಿವೈಎಸ್ಪಿ ಡಾ. ಗೋಪಾಲ ಬ್ಯಾಕೋಡ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT