ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆ- ಸ್ವಾತಂತ್ರ್ಯ ಮತ್ತು ನಾವು

Last Updated 27 ಜುಲೈ 2015, 9:43 IST
ಅಕ್ಷರ ಗಾತ್ರ

ವರ್ಷದ ಮೊದಲ ಭಾಗದಿಂದಲೂ ಭಾರತದ ಇಂಟರ್ನೆಟ್ ಹಾಗೂ ಟೆಲಿಕಾಂ ಜಗತ್ತಿನಲ್ಲಿ ಚರ್ಚೆಯಾಗುತ್ತಿರುವ ವಿಷಯ ‘ನೆಟ್ ನ್ಯೂಟ್ರಾಲಿಟಿ’. ಸಾಮಾಜಿಕ ಜಾಲತಾಣಗಳು ನಮ್ಮ ದಿನನಿತ್ಯದ ಬದುಕಿನ ಅದೆಷ್ಟೋ ಹೋರಾಟಗಳನ್ನು ವಾಸ್ತವಿಕ ಜಗತ್ತಿಗೆ ಕೊಂಡೊಯ್ದು ಹೊಸ ಆಯಾಮಗಳನ್ನು ಸೃಷ್ಟಿಸುತ್ತಿರುವಾಗ, ನೆಟ್ ನ್ಯೂಟ್ರಾಲಿಟಿ ಎಂಬ ಇಂಟರ್ನೆಟ್ ಜಗತ್ತಿನ ಬಳಕೆದಾರನ ಸ್ವಾತಂತ್ರ್ಯ ಮಹತ್ವ ಪಡೆದದ್ದರಲ್ಲಿ ಆಶ್ಚರ್ಯವೇನಿಲ್ಲ. ಆದರೆ, ಈ ಹೋರಾಟ ಸಾಮಾನ್ಯನಿಗೆ ಅರ್ಥವಾಗಲು ಬಹಳ ಸಮಯವೇ ಹಿಡಿಯಿತು. ಅದನ್ನು ಅರ್ಥ ಮಾಡಿಸುವುದರಲ್ಲಿ ತಂತ್ರಜ್ಞಾನ ಪರಿಣತರಿಂದ ಹಿಡಿದು, ಜಾಗೃತ ನೆಟ್ಟಿಜನ್‌ಗಳು ಇಂಟರ್ನೆಟ್‌ನಲ್ಲಿ ಸಾಧ್ಯವಿರುವ ಎಲ್ಲ ಆಯಾಮಗಳನ್ನೂ ಬಳಸಿಕೊಂಡರು.

ನೆಟ್ ನ್ಯೂಟ್ರಾಲಿಟಿಯ ಬಗ್ಗೆ ತಿಳಿಯಲು ನಾವು, ಮುಕ್ತ ಮಾಹಿತಿ ವಿನಿಮಯಕ್ಕೆ ಮತ್ತು ಸಂವಹನಕ್ಕೆ ಇಂಟರ್ನೆಟ್ ದಾರಿಯಾಗಿರುವುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಜಗತ್ತಿನ ಯಾವುದೇ ಒಂದು ಗಣಕಯಂತ್ರದಿಂದ ಮತ್ತೊಂದು ಗಣಕಯಂತ್ರಕ್ಕೆ ಮುಕ್ತ ಮಾಹಿತಿ ರವಾನೆಗೆಂದೇ ಪ್ರಾರಂಭವಾದ ಇಂಟರ್ನೆಟ್ ಬಳಕೆದಾರನನ್ನು ತಲುಪುವುದು ಅದರ ಸೇವೆಯನ್ನು ದೊರಕಿಸಿಕೊಡುವ ಸೇವಾದಾತರ ಮೂಲಕ. ಮಾಸಿಕ ಅಥವಾ ಇಂತಿಷ್ಟು ಡೇಟಾ ಸೇವೆಗೆ ನಿಗದಿತ ದರವನ್ನು ಪಾವತಿ ಮಾಡಿ ಇಂಟರ್ನೆಟ್ ಪಡೆಯುವ ಬಳಕೆದಾರ ಅದನ್ನು ತನ್ನಿಚ್ಛೆ ಬಂದಂತೆ ಬಳಸಿಕೊಳ್ಳಬಹುದು. ವೆಬ್‌ಸೈಟ್ ಇತ್ಯಾದಿಗಳನ್ನು ಹೊಂದಿರುವವರು, ಇಂಟರ್ನೆಟ್ ಸೇವೆ ಬಳಸಿ ಅದನ್ನು ಜಗತ್ತಿನಲ್ಲಿ ಯಾರು ಬೇಕಾದರೂ ನೋಡುವಂತೆ ಮಾಡಬಹುದು.

ಮಾಹಿತಿ ಪಡೆಯಲು ಇಚ್ಛಿಸುವ ಬಳಕೆದಾರರು ತಮ್ಮ ಸಂಪರ್ಕವನ್ನು ಬಳಸಿಕೊಂಡು ಇಂಟರ್ನೆಟ್‌ನಲ್ಲಿ ಲಭ್ಯವಿರುವ ವಿಷಯ ತಿಳಿಯಬಹುದು. ಇಲ್ಲಿ ಯಾವ ರೀತಿಯ ವೆಬ್‌ಸೈಟ್/ಜಾಲತಾಣಗಳನ್ನು ಬಳಸುತ್ತಿದ್ದೀರಿ, ಯಾವ ಸೇವೆ ಪಡೆಯುತ್ತಿದ್ದೀರಿ, ವ್ಯಾಸಂಗಕ್ಕೋ, ವ್ಯವಹಾರಕ್ಕೋ, ಸ್ವಂತಕ್ಕೆ ಇಂಟರ್ನೆಟ್ ಬಳಸುತ್ತಿದ್ದೀರಾ ಎಂಬ ಯಾವುದೇ ಭೇದವಿಲ್ಲದೆ ಸಂಪರ್ಕವನ್ನು ಉಪಯೋಗಿಸುತ್ತೇವೆ. ಇದು ಮೊಬೈಲ್‌ನಲ್ಲಿ ಬಳಸುವ ಇಂಟರ್ನೆಟ್‌ಗೂ ಅನ್ವಯಿಸುತ್ತದೆ. ವ್ಯಕ್ತಿಗತವಾಗಿ ನಿಮಗೆ ಇಂಟರ್ನೆಟ್ ಸಂಪರ್ಕದ ಮೂಲಕ ಜಗತ್ತನ್ನು ಅಂಗೈನಲ್ಲಿಟ್ಟುಕೊಳ್ಳುವ ಅವಕಾಶ ಒಂದೆಡೆಯಾದರೆ, ಮುಕ್ತ ಮತ್ತು ಸ್ವತಂತ್ರ ಸಂವಹನದ ಅವಕಾಶ ಜೊತೆಯಲ್ಲಿ ಸಿಗುತ್ತದೆ. ಸಮಾಜದ ಒಂದು ಅಂಗವಾಗಿ ಎಷ್ಟು ಸ್ವತಂತ್ರವಾಗಿ ನಿಮಗೆ ಬದುಕಲು ಸಾಧ್ಯವಾಗುತ್ತದೆಯೋ, ಅದೇ ರೀತಿ ಇಂಟರ್ನೆಟ್‌ನಲ್ಲೂ ನೀವು ನಿಮ್ಮ ವಾಸ್ತವದ ಬದುಕಿನ ಸ್ವಾತಂತ್ರ್ಯ ಕಂಡುಕೊಳ್ಳಬಹುದು.

ಈ ಮಧ್ಯೆ ಸೇವಾದಾತರು ತಮ್ಮ ಸೇವೆಯನ್ನು ವಿಸ್ತರಿಸುತ್ತಾ ಬಂದಂತೆ ಹಾಗೂ ಇಂಟರ್ನೆಟ್ ಬಳಕೆ ಹೆಚ್ಚಾದಂತೆಲ್ಲ, ಮೂಲತಃ ದೂರವಾಣಿ/ಟೆಲಿಕಾಂ ಸೇವೆಯನ್ನು ನೀಡುತ್ತಿದ್ದ ಐ.ಎಸ್.ಪಿ/ ಇಂಟರ್ನೆಟ್ ಸರ್ವೀಸ್ ಪ್ರೊವೈಡರ್‌ಗಳಿಗೆ ಸ್ಥಿರ ದೂರವಾಣಿ ಅಥವಾ ಮೊಬೈಲ್ ಬಳಕೆಯ ಸೇವೆಗಳಿಂದ ಬರುವ ಆದಾಯದ ಜೊತೆಗೆ ಇಂಟರ್ನೆಟ್ ಬಳಕೆಯ ಆದಾಯವೂ ಹೆಚ್ಚಾಗುತ್ತಾ ಬಂತು. ತಂತ್ರಜ್ಞಾನ ಅಭಿವೃದ್ಧಿ ಹೊಂದಿದಂತೆಲ್ಲ, 2ಜಿ, 3ಜಿ, 4ಜಿ ಸೇವೆಗಳನ್ನು ಜನಸಾಮಾನ್ಯರಿಗೆ ಹೊಸ ಪ್ಯಾಕೇಜ್‌ಗಳ ಮೂಲಕ ಸೇವಾದಾತರು ಪರಿಚಯಿಸಿದರು. ವ್ಯಾವಹಾರಿಕವಾಗಿ ಮತ್ತಷ್ಟು ಹೆಚ್ಚು ಹಣ ಮಾಡಲು ಯೋಚಿಸಿದ ಐ.ಎಸ್.ಪಿ.ಗಳಿಗೆ ಹೊಳೆದದ್ದು ದೊಡ್ಡ ಮತ್ತು ಮಧ್ಯಮ ಗಾತ್ರದ ಸಂಸ್ಥೆಗಳಿಗೆ ತಮ್ಮ ವೆಬ್‌ಸೈಟ್ ಹಾಗೂ ಇತರ ಇಂಟರ್ನೆಟ್‌ ಸೇವೆಗಳನ್ನು ಉಚಿತವಾಗಿ ಬಳಕೆದಾರರಿಗೆ ದೊರಕುವಂತೆ ಮಾಡಿ, ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಕಟ್ಟಿಕೊಡುವ ಉಪಾಯ.

ಅಂದರೆ, ಇಂಟರ್ನೆಟ್ ಸೇವೆ ಬಳಸದಿದ್ದವರೂ ತಮ್ಮ ಮೊಬೈಲ್ ಮೂಲಕ ಬಳಕೆದಾರ ಕೆಲವೊಂದು ಸಂಸ್ಥೆಗಳ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಷನ್‌ಗಳನ್ನು ಬಳಸುವಂತೆ ಮಾಡುವ ಸೇವೆ. ತಮ್ಮ ಉತ್ಪನ್ನಗಳನ್ನು ಜನರಿಗೆ ತಲುಪಿಸಲು ಯಾವುದೇ ಜಾಹೀರಾತು ಇತ್ಯಾದಿ ಮಾರ್ಕೆಟಿಂಗ್ ಮಾರ್ಗಗಳನ್ನು ಅನುಸರಿಸಲು ಶಕ್ತವಿರುವ ಸಂಸ್ಥೆಗಳು ನೇರವಾಗಿ ಐ.ಎಸ್.ಪಿ.ಗಳ ಜೊತೆಗೆ ಒಪ್ಪಂದ ಮಾಡಿಕೊಂಡು ಬಳಕೆದಾರರನ್ನು ಸೇರುವುದೇ ಆಗಿದೆ. ಇದರಲ್ಲಿ ತಪ್ಪೇನಿದೆ, ಜನರಿಗೆ ಸುಲಭವಾಗಿ ಮಾಹಿತಿ/ಸೇವೆ ದೊರಕಿದರೆ ಒಳಿತಲ್ಲವೇ, ಆದರೂ ಏಕೆ ಈ ಹೋರಾಟ ಎಂದು, ಈ ಸೇವೆಯ ಬಗ್ಗೆ ಕೆದಕಲು ಶುರು ಮಾಡಿದವರಿಗೆ ಮೊದಲು ಅನಿಸಬಹುದು. ಆದರೆ, ಇಂಟರ್ನೆಟ್ ಬಳಕೆದಾರನ ಬಳಕೆಯ ಸ್ವಾತಂತ್ರ್ಯಕ್ಕೆ ಹೊಡೆತ ಬೀಳುವುದಕ್ಕೆ ಇದು ಮೊದಲ ಪೆಟ್ಟು ಮಾತ್ರ.

ಫ್ಲಿಪ್‌ಕಾರ್ಟ್ ಕಂಪೆನಿ ಏರ್‌ಟೆಲ್‌ನ ‘ಝೀರೊ’ ಸೇವೆಯಡಿ ಈ ರೀತಿಯ ಪ್ರಯೋಗಕ್ಕೆ ಮುಂದಾಗುವ ಮಾತನ್ನು ಆಡಿದ್ದೇ ತಡ, ಸಾಮಾಜಿಕ ಜಾಲತಾಣದಲ್ಲಿನ ಜಾಗೃತ ಗ್ರಾಹಕರು ಎನ್ನಬಹುದಾದ ಕೆಲ ನೆಟ್ಟಿಜನ್ನರು ‘ನೆಟ್ ನ್ಯೂಟ್ರಾಲಿಟಿ’ಯ ಬಗ್ಗೆ ಮಾತನಾಡಲು ಪ್ರಾರಂಭಿಸಿದರು. ಇಂಟರ್ನೆಟ್ ಮುಕ್ತವಾಗಿ ಲಭ್ಯವಾಗಿರುವುದರಿಂದ, ಅದರಲ್ಲಿ ಸ್ವತಂತ್ರವಾಗಿ ಯಾವುದೇ ರೀತಿಯ ವ್ಯವಹಾರ, ಹವ್ಯಾಸ ಇತ್ಯಾದಿಗಳನ್ನು ರೂಢಿಸಿಕೊಳ್ಳಬಹುದು. ಇದು ಭಾರತದಲ್ಲಿ ಅಷ್ಟೇ ಅಲ್ಲ, ವಿಶ್ವದಾದ್ಯಂತ ಅದೆಷ್ಟೋ ಹೊಸ ಇಂಟರ್ನೆಟ್ ಸಂಸ್ಥೆಗಳನ್ನು ಪ್ರಾರಂಭಿಸಲು ಸಾಧ್ಯವಾಗಿಸಿದೆ. ಐ.ಎಸ್.ಪಿ.ಗಳ ‘ಝೀರೊ’ ಸೇವೆ, ಹಣವಂತ ಸಂಸ್ಥೆಗಳ ಮಾರುಕಟ್ಟೆಯನ್ನು ಹೆಚ್ಚಿಸಲು ಇಂಟರ್ನೆಟ್ ಸೇವೆಯನ್ನು ಒದಗಿಸಿದಲ್ಲಿ ಮಾರುಕಟ್ಟೆಯ ಏಕಸ್ವಾಮ್ಯವನ್ನು ಯಾವುದೋ ಕೆಲವು ಕಂಪೆನಿಗಳಿಗೆ ಮಾತ್ರ ಒದಗಿಸಿದಂತಾಗುತ್ತದೆ. ಇದರಿಂದಾಗಿ ಸಮಾಜದಲ್ಲಿ ಅಸಮಾನತೆಯ ಗಾಳಿ ಇಂಟರ್ನೆಟ್ ಮೂಲಕವೂ ಹರಿದಾಡುವುದಕ್ಕೆ ಮೊದಲಾಗುತ್ತದೆ.

ಇಂಟರ್ನೆಟ್‌ನಿಂದಾಗಿ ಸಾಧ್ಯವಾಗಿರುವ ‘ಸ್ಟಾರ್ಟಪ್ ಯುಗ’ದಲ್ಲಿ ಈಗ ತಾನೇ ಸ್ವಂತ ಕಾಲಿನ ಮೇಲೆ ನಿಲ್ಲಲು ಜೀವಮಾನದ ಬಂಡವಾಳವನ್ನು ತೊಡಗಿಸಿರುವ, ಉದ್ಯೋಗಪತಿಗಳಾಗಲು ಮುನ್ನೋಡುತ್ತಿರುವ ಎಷ್ಟೋ ಯುವಕರಿಗೆ ತಂತ್ರಜ್ಞಾನದ ಮೂಲಕವೇ ಇಲ್ಲಿ ಅಡ್ಡಗಾಲು ಹಾಕಿದಂತಾಗುತ್ತದೆ. ಈಗಾಗಲೇ ಇಂತಹ ಹೊಸ ಪುಟ್ಟ ಪುಟ್ಟ ಕಂಪೆನಿಗಳನ್ನು ಸ್ಥಾಪಿಸಿರುವವರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಇಂಟರ್ನೆಟ್‌ ಸೇವಾದಾತರಿಗೆಂದೇ ಬಂಡವಾಳ ಕೂಡಿಡಬೇಕಾಗುತ್ತದೆ. ಇದು ವ್ಯಾವಹಾರಿಕವಾಗಿ ಇಂಟರ್ನೆಟ್ ಬಳಸುವವರಿಗೆ ಸಂಬಂಧಿಸಿದ ವಿಷಯವಾಗಿ ನಿಮಗೆ ಕಂಡುಬಂದಲ್ಲಿ, ಒಮ್ಮೆ ನೀವೇ ಹೊಸ ಸಂಸ್ಥೆಯನ್ನು ಹುಟ್ಟುಹಾಕುವವರ ಬೂಟಿನಲ್ಲಿ ಕಾಲಿಟ್ಟು ನೋಡಿದಾಗ ಕಣ್ಮುಂದಿನ ಸತ್ಯ ಮತ್ತೂ ಸುಲಭವಾಗಿ ನಿಮಗೆ ಅರ್ಥವಾಗುತ್ತದೆ.

ಇಂಟರ್ನೆಟ್ ಸೇವಾದಾತರ ಮೂಲಕ ಸೇವೆ ಸುಲಭವಾಗಿ ನಮಗೆ, ಅಂದರೆ ಬಳಕೆದಾತರಿಗೆ ಸಿಗುತ್ತದೆ ಎಂಬ ಖುಷಿ ಏನಾದರೂ ನಿಮಗೆ ಮಂದಹಾಸ ತರಿಸಿದ್ದಲ್ಲಿ, ಎಚ್ಚರ! ನಿಮ್ಮ ಇಂಟರ್ನೆಟ್ ಬಳಕೆಯ ಸ್ವಾತಂತ್ರ್ಯವನ್ನು ಕೂಡ ಇದರ ಮೂಲಕ ಕಡಿತಗೊಳಿಸಲಾಗುತ್ತಿದೆ. ಈಗಾಗಲೇ ಡಿ.ಟಿ.ಎಚ್. ಮೂಲಕ ಬೇರೆ ಬೇರೆ ಟಿ.ವಿ ಚಾನಲ್ಲುಗಳ ಚಂದಾದಾರರಾಗಿರುವವರಿಗೆ ತಮ್ಮ ನೆಚ್ಚಿನ ಚಾನಲ್ ಬರದಿದ್ದಾಗ, ಪ್ಯಾಕೇಜ್ ಬದಲಿಸಿಕೊಳ್ಳುವ ಪ್ರಮೇಯ ಬಂದಾಗ, ತಮ್ಮ ಕೈಯಿಂದ ಪ್ರತಿ ತಿಂಗಳೂ ಹೊರ ಹೋಗುವ ಹಣದ ಪ್ರಮಾಣದ ಅರಿವಾಗುತ್ತದೆ. ಇದೇ ಸ್ಥಿತಿ ನಿಮ್ಮ ಮೊಬೈಲ್ ಮೂಲಕ, ಲ್ಯಾಪ್‌ಟಾಪ್, ಟ್ಯಾಬ್ಲೆಟ್‌ಗಳ ಮೂಲಕ ನೀವು ಉಪಯೋಗಿಸಬಹುದಾದ ಜಾಲತಾಣಗಳಿಗೂ ಮುಂದೆ ಒದಗಿ ಬಂದಲ್ಲಿ?

ಇಂಟರ್ನೆಟ್‌ನಲ್ಲಿ ಇಂದು ಲಕ್ಷಾಂತರ ಜಾಲತಾಣಗಳಿವೆ. ವಿಶ್ವದ ಒಟ್ಟಾರೆ ಜ್ಞಾನವನ್ನು ಹಂಚಿಕೊಳ್ಳುವ ವಿಕಿಪೀಡಿಯಾದಂತಹ ವಿಶ್ವಕೋಶಗಳಿಂದ ಹಿಡಿದು, ಆರೋಗ್ಯ, ಹವ್ಯಾಸ, ಪ್ರವಾಸ ಅಷ್ಟೇ ಏಕೆ ನಮ್ಮ ಪ್ರಧಾನಿಯವರ ‘ಡಿಜಿಟಲ್ ಇಂಡಿಯಾ’ ಯೋಜನೆ ಅಡಿ ಬರುವ ಸರ್ಕಾರದ ಎಲ್ಲ ಜಾಲತಾಣಗಳೂ ಇಲ್ಲಿ ಸೇರಿವೆ. ತುರ್ತು ಸ್ಥಿತಿಯಲ್ಲಿ ಮಾಹಿತಿ ಒದಗಿಸುವ ಸುದ್ದಿವಾಹಿನಿಗಳ ಜಾಲತಾಣಗಳೂ, ಸಾಮಾಜಿಕ ಜಾಲತಾಣಗಳೂ ನಮ್ಮ ಮುಂದಿವೆ. ಹೀಗಿರುವಾಗ ಇಂಟರ್ನೆಟ್ ಬಳಕೆಗೆ ಸೇವಾದಾತರ ಸೇವೆಗೆ ನೀಡಬೇಕಿರುವ ಶುಲ್ಕವನ್ನು ಕೊಟ್ಟೂ ಮತ್ತೆ ನಮಗೆ ಬೇಕಿರುವ ತಾಣಗಳನ್ನು ನೋಡಲು ಹೆಚ್ಚಿಗೆ ಹಣ ಸುರಿಯಬೇಕಾಗಿ ಬಂದರೆ? ‘ಡಿಜಿಟಲ್ ಇಂಡಿಯಾ’ದ ಕನಸಿಗೂ ನಮ್ಮ ಸರ್ಕಾರ ನಮ್ಮ ತೆರಿಗೆಯ ಹಣವನ್ನು ವ್ಯಯಿಸಲು ಇದರ ಮೂಲಕ ಸಾಧ್ಯವಾಗಿಸಬಹುದು.

ಈ ಲೇಖನವನ್ನು ಬರೆಯಲು ಪ್ರಾರಂಭಿಸಿದಾಗಲೂ ಫೇಸ್‌ಬುಕ್ ಅಭಿವೃದ್ಧಿ ಹೊಂದುತ್ತಿರುವ ಮತ್ತು ಹಿಂದುಳಿದ ಆರ್ಥಿಕತೆಗಳ ಜನರಿಗೆ ಇಂಟರ್ನೆಟ್ ಲಭ್ಯವಾಗಿಸಲೆಂದೇ ಪ್ರಾರಂಭಿಸಿದ http://internet.org ಎಂಬ ಜಾಲತಾಣವನ್ನು ನನಗೆ ನನ್ನ ಕಂಪ್ಯೂಟರ್ ಹಾಗೂ ಮೊಬೈಲ್‌ನಿಂದ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಇದಕ್ಕೆ ರಿಲಯನ್ಸ್ ಅವರ ಇಂಟರ್ನೆಟ್ ಕನೆಕ್ಷನ್ ಬೇಕು ಎಂಬ ದೊಡ್ಡ ಮಾಹಿತಿ ನನ್ನ ತೆರೆಯ ಮೇಲೆ ಬಂತು. ಇತ್ತೀಚೆಗೆ ‘ನೆಟ್ ನ್ಯೂಟ್ರಾಲಿಟಿ’ಯ ಹೋರಾಟ ಪ್ರಾರಂಭವಾಗುವುದಕ್ಕಿಂತ ಮುಂಚೆಯೇ ಈ ತೊಂದರೆ ಇದ್ದದ್ದನ್ನು ನೋಡುತ್ತಾ ಬಂದಿರುವವರಿಗೆ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ನಡೆಸಿರುವ ಹುನ್ನಾರದ ಅರಿವು ಬಹಳ ಬೇಗ ಆಯಿತು. http://www.savetheinternet.com/& http://www.netneutrality.in/ ಮುಂತಾದ ತಾಣಗಳ ಮೂಲಕ ಜನರಿಗೆ ಇದರ ಹಿಂದಿನ ಒಳಹನ್ನು ಅರಿವು ಮಾಡಿಸಲು ಸ್ವಯಂಸೇವಕರು ಮುಂದೆ ಬಂದರು. ಇದು ಭಾರತದಲ್ಲಷ್ಟೇ ಆಲ್ಲ, ಅಮೆರಿಕ ಹಾಗೂ ಇತರ ಪಾಶ್ಚಾತ್ಯ ದೇಶಗಳಲ್ಲೂ ನೆಟ್ಟಿಜನ್ನರನ್ನು ಒಂದಾಗಿಸಿದೆ.

ಜಾಗತಿಕವಾದ ಸ್ವತಂತ್ರ ಮತ್ತು ಮುಕ್ತ ಸಂವಹನ ವೇದಿಕೆಯೊಂದನ್ನು ವ್ಯಾವಹಾರಿಕ ದೃಷ್ಟಿಕೋನದಿಂದ ಮಾತ್ರ ನೋಡುತ್ತಿರುವ ಡಾಟ್/ಐ.ಎಸ್.ಪಿ.ಗಳು, ಏಕಸ್ವಾಮ್ಯ ಸ್ಥಾಪಿಸಲು ಹಪಹಪಿಸುವ ಬಂಡವಾಳಶಾಹಿಗಳು, ಇಂತಹದ್ದೊಂದು ಬದಲಾವಣೆಯ ಮೂಲಕ ತಮ್ಮ ಲಾಭಹೆಚ್ಚಿಸಿಕೊಳ್ಳುವ ಯೋಚನೆಯನ್ನು ಮಾತ್ರ ಮಾಡುತ್ತಿವೆ. ಸೇವೆಯ ಒಳಗೆ ಮತ್ತೊಂದು ಸೇವೆಯನ್ನು ಸೃಷ್ಟಿಸಿ ಮುಂದೆ ನಾವು ಅದರಲ್ಲಿ ನಡೆಸುತ್ತಿರುವ ವ್ಯವಹಾರದ ಮೇಲೆ, ಸಂವಹನದ ಮೇಲೆ ಹಿಡಿತ ಸಾಧಿಸುವುದೇ ಇಲ್ಲಿ ಮುಖ್ಯ ಗುರಿಯಾಗಿರುವಂತೆ ತೋರುತ್ತಿದೆ.

ವಾಟ್ಸ್‌ಆ್ಯಪ್, ಮೆಸೆಂಜರ್‌ಗಳ ಮೂಲಕ ನಡೆಸುವ ಧ್ವನಿ ಮತ್ತು ವಿಡಿಯೊ ಚಾಟ್‌ಗಳಿಗೆ ಇಂಟರ್ನೆಟ್ ಸೇವೆಯ ಶುಲ್ಕದ ಜೊತೆಗೆ ಟಾಕ್‌ಟೈಮ್ ರೂಪದ ಅಧಿಕ ಹೊರೆ ಇನ್ನುಮುಂದೆ ನಮ್ಮ ಮೊಬೈಲ್ ಬಿಲ್‌ಗಳ ಭಾಗವಾಗಬಹುದು. ಇಂಟರ್ನೆಟ್ ಬರೀ ಸೇವೆ ಅಷ್ಟೇ ಅಗಿರದೆ, ಇಡೀ ಜಗತ್ತನ್ನೇ ಒಂದು ವ್ಯವಸ್ಥೆಯಾಗಿ, ಸಂವಹನ ವೇದಿಕೆಯಾಗಿ ಪರಿವರ್ತಿಸಿದ ತಂತ್ರಜ್ಞಾನದ ಸಾಧ್ಯತೆ ಆಗಿದೆ. ಇದುವರೆಗೆ ಲಭ್ಯವಾಗಿರುವ ಸ್ವಾತಂತ್ರ್ಯವನ್ನು ಕಡಿತಗೊಳಿಸುವುದೂ ಸ್ವಾತಂತ್ರ್ಯಹರಣವೇ ಸರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT