ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಗರೆಟ್‌ ನೆನಪಿನ ಬುತ್ತಿ ತೆರೆದಾಗ...

ವ್ಯಕ್ತಿ
Last Updated 23 ಜುಲೈ 2016, 19:30 IST
ಅಕ್ಷರ ಗಾತ್ರ

ಅದು 2008ರ ಮೊದಲಾರ್ಧ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಯ ಕಾವು ಮೇರೆ ಮೀರಿತ್ತು. ‘ಕಾಂಗ್ರೆಸ್‌ನ ಟಿಕೆಟ್‌ಗಳನ್ನು ಮಾರಾಟಕ್ಕೆ ಇಡಲಾಗಿದೆ’ ಎಂಬ ಹೇಳಿಕೆ ನೀಡುವ ಮೂಲಕ ಆಗ ಕೋಲಾಹಲ ಸೃಷ್ಟಿಸಿದ್ದ ಮಾರ್ಗರೆಟ್‌ ಆಳ್ವಾ, ಅದಾಗಿ ಎಂಟು ವರ್ಷಗಳ ನಂತರ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.

ಜೀವನದ ಅತಿ ಹೆಚ್ಚು ಅವಧಿಯನ್ನು ರಾಜಕೀಯದೊಂದಿಗೇ ಸವೆಸಿರುವ ಮಾರ್ಗರೆಟ್, ರಾಜಕೀಯ ಜೀವನದ ಅನುಭವವನ್ನು ತಮ್ಮ ಆತ್ಮಕಥೆ ‘ಕರೇಜ್‌ ಅಂಡ್‌ ಕಮಿಟ್‌ಮೆಂಟ್‌’ ಮೂಲಕ ಬಹಿರಂಗಪಡಿಸಿದ್ದಾರೆ. ಆ ಮೂಲಕ ಅವರು ಮತ್ತೊಮ್ಮೆ ಕಾಂಗ್ರೆಸ್‌ನ ಒಳ– ಹೊರಗನ್ನು ತೆರೆದಿಟ್ಟಿರುವುದರಿಂದಲೇ ಚರ್ಚೆಗೆ ಗ್ರಾಸ ಒದಗಿಸಿದ್ದಾರೆ. ವಿವಾದ ಸಹಜವಾಗಿಯೇ ಸೃಷ್ಟಿಯಾಗಿದೆ. ಆದರೆ, ‘ನನ್ನ ಪುಸ್ತಕದಿಂದಾಗಿ ವಿವಾದ ಉಂಟಾಗುವುದು ನನಗೆ ಇಷ್ಟ ಇಲ್ಲ’ ಎಂದು ಲೇಖಕಿ ಸೂಚ್ಯವಾಗಿ ತಿಳಿಸಿ, ಅದರೊಳಗೆ ಅಪಾರ ಸತ್ಯ ಅಡಗಿದೆ ಎಂಬುದನ್ನು ಪ್ರಚುರಪಡಿಸಿದ್ದಾರೆ.

‘ಕಾಂಗ್ರೆಸ್‌ ಹೈಕಮಾಂಡ್‌ನ ಜತೆ ನಿಕಟ ಸಂಪರ್ಕ ಹೊಂದಿದ್ದವರು’ ಮತ್ತು ‘ಪಕ್ಷದಲ್ಲಿ ಅತ್ಯಂತ ಪ್ರಭಾವಿ’ ಎಂದು ಕರೆಸಿಕೊಂಡ ಇವರು, ಆಪ್ತ ವಲಯದಲ್ಲಿ ‘ಮ್ಯಾಗಿ’ ಎಂದೇ ಖ್ಯಾತರಾಗಿದ್ದವರು. ಅದು 1942. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಮಹತ್ವದ ತಿರುವು ನೀಡಿದ ವರ್ಷ. ಆಗ ಇಡೀ ಜಗತ್ತು ಎರಡನೇ ಮಹಾಯುದ್ಧದ ಕರಿ ನೆರಳಲ್ಲಿತ್ತು. ಉಪ್ಪಿನ ಸತ್ಯಾಗ್ರಹ ನಡೆದ ಆ ವರ್ಷದ ಏಪ್ರಿಲ್‌ 14ರಂದು ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ಮಾರ್ಗರೆಟ್‌ ನಜರೆತ್‌ ಜನ್ಮತಾಳಿದರು. ಅವರು ಹುಟ್ಟಿದ ಹಿಂದಿನ ದಿನವಷ್ಟೇ ಕರಾವಳಿಯ ಆ ನಗರಕ್ಕೆ ಜಪಾನ್‌ ಪಡೆಗಳು ಲಗ್ಗೆ ಇರಿಸಿದ್ದವು.

ಇಡೀ ಪ್ರದೇಶದಲ್ಲಿ ಆತಂಕ ಮಡುಗಟ್ಟಿತ್ತು. ಬಂದರುಗಳಲ್ಲಿ ಬಾಂಬ್‌ಗಳು ಸ್ಫೋಟಗೊಳ್ಳುತ್ತಿದ್ದವು. ಜನ ಜೀವ ಉಳಿಸಿಕೊಳ್ಳಲು ಓಡುತ್ತಿದ್ದರು. ಹೆರಿಗೆಗೆಂದು ತಾಯಿ ದಾಖಲಾಗಿದ್ದ ಆಸ್ಪತ್ರೆಯಲ್ಲಿ ಒಬ್ಬ ದಾದಿಯನ್ನು ಹೊರತುಪಡಿಸಿ ಯಾರೂ ಇಲ್ಲದ ಸ್ಥಿತಿ. ಒಂದೊಮ್ಮೆ ಜಪಾನಿ ಪಡೆಗಳು ಆಸ್ಪತ್ರೆಗೂ ಧಾವಿಸಿದರೆ ಎಂಬ ಅಳುಕು ತಾಯಿಯಲ್ಲಿತ್ತು. ಅಂಥ ಸಂದರ್ಭದಲ್ಲಿ ಜನಿಸಿದ ಮ್ಯಾಗಿ, ಬದುಕಿನುದ್ದಕ್ಕೂ ಸವಾಲುಗಳನ್ನು ಎದುರಿಸಿದವರು. ಸಂಘರ್ಷವನ್ನು ಹತ್ತಿರದಿಂದ ಕಂಡವರು.

ಬ್ರಿಟಿಷರ ಮದ್ರಾಸ್‌ ಪ್ರಾಂತ್ಯದ ಆಡಳಿತದಲ್ಲಿ ನ್ಯಾಯಾಧೀಶರಾಗಿದ್ದ ತಂದೆಗೆ ಆಂಧ್ರ, ಕರ್ನಾಟಕ, ಕೇರಳ ಎಂದೆಲ್ಲ ವರ್ಗವಾಗುತ್ತಿದ್ದುದರಿಂದ ಅವರೊಟ್ಟಿಗೆ ಸಂಚರಿಸಿದ ‘ಮ್ಯಾಗಿ’ಗೂ ಎಲ್ಲ ಪರಿಸರಗಳ ಪರಿಚಯ ಆಯಿತು. ಪ್ರಾಥಮಿಕ ಶಿಕ್ಷಣದ ನಂತರ ಬೆಂಗಳೂರಿನ ಮೌಂಟ್‌ ಕಾರ್ಮೆಲ್‌ ಕಾಲೇಜಿನಲ್ಲಿ ಪದವಿ ಅಭ್ಯಾಸ ಮಾಡಿದ ಅವರು, ತಂದೆಯಂತೆ ವಕೀಲ ವೃತ್ತಿಯಲ್ಲಿ ಮುಂದುವರಿಯುವ ಬಯಕೆಯೊಂದಿಗೆ ಅಲ್ಲಿನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಪದವಿ ಪಡೆದರು. ಆ ಸಂದರ್ಭದಲ್ಲಿ, ಸಹಪಾಠಿಯಾಗಿದ್ದ ನಿರಂಜನ್‌ ಆಳ್ವಾ ಅವರನ್ನು ಮದುವೆಯಾಗಿದ್ದು, (1964) ರಾಜಕೀಯ ಕ್ಷೇತ್ರದತ್ತ ಆಕರ್ಷಿತರಾಗುವಂತೆ ಮಾಡಿತು.

ವಕೀಲರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿ ಹೆಸರು ಮಾಡಿದ್ದ ಮಾವ ಜೋಕಿಮ್‌ ಆಳ್ವಾ, ರಾಜ್ಯಸಭೆ ಸದಸ್ಯೆಯಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದ ಅತ್ತೆ ವಯಲೆಟ್‌ ಆಳ್ವಾ ಅವರ ಪ್ರೋತ್ಸಾಹದೊಂದಿಗೆ ರಾಜಕೀಯದತ್ತ ಧುಮುಕಿದ ಮ್ಯಾಗಿ ಅವರೂ 1974, 1980, 1986, 1992ರಲ್ಲಿ ಸತತ ನಾಲ್ಕು ಬಾರಿ ರಾಜ್ಯಸಭೆಗೆ ಆಯ್ಕೆಯಾದವರು.

1999ರಲ್ಲಿ ಉತ್ತರ ಕನ್ನಡ ಕ್ಷೇತ್ರದಿಂದ ಲೋಕಸಭೆ ಸದಸ್ಯೆಯಾಗಿಯೂ ಆಯ್ಕೆಯಾಗಿದ್ದ ಇವರು, ಕೇಂದ್ರ ಸಚಿವೆಯಾಗಿಯೂ ಕೆಲಸ ಮಾಡಿದ ಅನುಭವಿ. ಆದರೂ 2004ರ ಚುನಾವಣೆಯಲ್ಲಿ ಸೋಲನುಭವಿಸಿದರು. ‘ನನ್ನ ಆ ಸೋಲಿಗೆ ನಂಬಿದವರು ಬೆನ್ನಿಗೆ ಚೂರಿ ಹಾಕಿದ್ದೇ ಕಾರಣ’ ಎಂದೂ ಅವರು ದೂರಿದ್ದರು.

ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ಎರಡನೇ ಅವಧಿಯಲ್ಲಿ (2009ರಿಂದ 2014ರವರೆಗೆ) ಉತ್ತರಾಖಂಡ ಮತ್ತು ರಾಜಸ್ತಾನಗಳ ರಾಜ್ಯಪಾಲರಾಗಿ ನೇಮಕಗೊಂಡಿದ್ದ ಇವರು ಬಿಜೆಪಿ ಅಧಿಕಾರವಿದ್ದ ಈ ರಾಜ್ಯಗಳಲ್ಲಿ ಸಮರ್ಥವಾಗಿ ಸೇವೆ ಸಲ್ಲಿಸಿದರೂ ಕೆಲವು ವಿವಾದಗಳಿಗೂ ಕಾರಣರಾದವರು. ‘ದಶಕಗಳ ಕಾಲ ದೇಶವನ್ನು ಮುನ್ನಡೆಸಿದ ಕಾಂಗ್ರೆಸ್‌ನ ಭಾಗವಾಗಿದ್ದುದು ಈ ಐದು ವರ್ಷಗಳ ಅವಧಿಯಲ್ಲಿ ರಾಜ್ಯಪಾಲೆಯಾಗಿ ದಿಟ್ಟತನ ಪ್ರದರ್ಶಿಸುವುದಕ್ಕೆ ಪ್ರೇರಣೆಯಾಯಿತು’ ಎಂದೂ ಅವರು ಹೇಳಿಕೊಂಡಿದ್ದಾರೆ.

ದೇಶ ಎದುರಿಸಿದ ಮೊದಲ ಸಾರ್ವತ್ರಿಕ ಚುನಾವಣೆಯ ದಿನಗಳಲ್ಲಿ ಬಹಿರಂಗ ಪ್ರಚಾರವನ್ನು ಹತ್ತಿರದಿಂದ ಅವಲೋಕಿಸಿದ್ದ ಮಾರ್ಗರೆಟ್‌, 10ನೇ ವಯಸ್ಸಿನಲ್ಲಿ ತಂದೆಯೊಂದಿಗೆ ಜವಾಹರಲಾಲ್‌ ನೆಹರೂ ಅವರನ್ನು ಸಮೀಪದಿಂದ ಕಂಡಿದ್ದರು.

ಅದು ಮಾರ್ಗರೆಟ್‌ ಅವರು ಆಳ್ವಾ ಕುಟುಂಬ ಸೇರಿದ ಮಾರನೇ ವರ್ಷ (1963). ಕೇರಳದಲ್ಲಿ ಇ.ಎಂ.ಎಸ್‌. ನಂಬೂದಿರಿಪಾಡ್‌ ನೇತೃತ್ವದ ಕಮ್ಯುನಿಸ್ಟ್‌ ಸರ್ಕಾರ ಅಸ್ತಿತ್ವದಲ್ಲಿತ್ತು. ಅಲ್ಲಿನ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದ ಕಾಲವದು. ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ಕೇರಳದ ಸ್ಥಿತಿಗತಿಯ ಅಧ್ಯಯನಕ್ಕೆ ಹೊರಟುನಿಂತ ಅತ್ತೆ ವಯಲಟ್‌ ಅವರೊಂದಿಗೆ ಕೇರಳಕ್ಕೆ ಭೇಟಿ ನೀಡಿದ್ದು ಇವರು ‘ಪಕ್ಕಾ ರಾಜಕೀಯ’ದ ಆಟವನ್ನು ಮೊತ್ತಮೊದಲ ಬಾರಿಗೆ ಕಾಣಲು ಕಾರಣವಾಯಿತು. ವಯಲೆಟ್‌ ಅವರ ವರದಿಯನ್ನಾಧರಿಸಿ ನಂಬೂದಿರಿಪಾಡ್‌ ಸರ್ಕಾರವನ್ನು ಕೇಂದ್ರ ಸರ್ಕಾರ ಕಿತ್ತೆಸೆದಿತ್ತು.

ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ಸೋನಿಯಾ ಗಾಂಧಿ, ಪಿ.ವಿ.ನರಸಿಂಹರಾವ್‌ ಸೇರಿದಂತೆ ದಿಗ್ಗಜರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ‘ಮ್ಯಾಗಿ’, 80ರ ದಶಕದ ಮಧ್ಯ ಭಾಗದಲ್ಲಿ ಭೇಟಿಯಾಗಿದ್ದ ಕ್ಯೂಬಾದ ನೇತಾರ ಫಿಡೆಲ್‌ ಕ್ಯಾಸ್ಟ್ರೊ ಅವರು ಹೇಳಿದ್ದ ಕಿವಿಮಾತನ್ನು ರಾಜೀವ್‌ ಗಾಂಧಿ ಅವರ ಕಿವಿಗೆ ವರ್ಗಾಯಿಸಿದ್ದರು.

‘ರಾಜೀವ್‌ ಸಂಪುಟದಲ್ಲಿಯೇ ಹಣಕಾಸು ಮತ್ತು ರಕ್ಷಣಾ (1984ರಿಂದ 1989ರ ಅವಧಿ) ಸಚಿವರಾಗಿದ್ದ ವಿ.ಪಿ.ಸಿಂಗ್‌ ಅವರು ರಾಜೀವ್‌ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ. ಅವರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ, ಸುಲಭಕ್ಕೆ ನಂಬದಂತೆ ತಿಳಿಸಿ. ಇಂದಿರಾ ಅವರು ನಡೆದ ದಾರಿಯಲ್ಲೇ ಸಾಗುವಂತೆಯೂ, ಅವರ ಕಾರ್ಯಕ್ರಮಗಳನ್ನು ಕೈಬಿಡದಂತೆಯೂ ಹೇಳಿ’ ಎಂಬ ಕ್ಯಾಸ್ಟ್ರೊ ಅವರ ಸಲಹೆಯನ್ನು ರಾಜೀವ್‌ ಆಲಿಸಲಿಲ್ಲ ಎಂಬ ವಿಷಯವನ್ನು ಬಹಿರಂಗಪಡಿಸಿರುವ ಮಾರ್ಗರೆಟ್‌, ದೇಶದ ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾದ ಗಳಿಗೆಗಳನ್ನೆಲ್ಲ ಅತ್ಯಂತ ವಿವರವಾಗಿ ತಮ್ಮ ಆತ್ಮಕಥೆಯ ಮೂಲಕ ಬಿಚ್ಚಿಟ್ಟಿದ್ದಾರೆ.

‘ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ನಂಟು ಹೊಂದಿದ್ದಾರೆ ಎನ್ನಲಾದ ಬೊಫೋರ್ಸ್‌ ಹಗರಣದ ಪ್ರಕರಣವನ್ನು ತಿರಸ್ಕರಿಸಿದ್ದ ದೆಹಲಿ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದ ಪ್ರಧಾನಿ ಪಿ.ವಿ.ನರಸಿಂಹರಾವ್‌ ಅವರ ಆಲೋಚನೆಯನ್ನು ಸೋನಿಯಾ ಗಾಂಧಿ ಅವರಿಗೆ ತಲುಪಿಸಿದ್ದೆ. ನರಸಿಂಹರಾವ್‌ ವಿರುದ್ಧ ಸೋನಿಯಾ ಕಿಡಿ ಕಾರಿದ್ದರು’ ಎಂದೂ ಅವರು ತಮ್ಮ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟಿದ್ದಾರೆ.

ಪಿತೂರಿ, ನಂಬಿಕೆ ದ್ರೋಹ, ಕೃತಘ್ನ ಮನಸ್ಸುಗಳ ಬಗ್ಗೆ ರೋಸಿ ಹೋದಂತಿರುವ ಮಾರ್ಗರೆಟ್‌, ಕಾಂಗ್ರೆಸ್‌ನಲ್ಲಿ ಅಷ್ಟೆಲ್ಲ ಪ್ರಭಾವಿಯಾದರೂ ಕರ್ನಾಟಕದ ರಾಜಕಾರಣದಲ್ಲಿ ಛಾಪು ಮೂಡಿಸದವರು.

‘ನನ್ನನ್ನು ರಾಜಕೀಯವಾಗಿ ಮುಗಿಸಲು ಎಷ್ಟೆಲ್ಲ ಜನ ಪಿತೂರಿ ಮಾಡಿದರು. ಕುಟುಂಬ ರಾಜಕಾರಣವನ್ನೇ ಪೋಷಿಸಿಕೊಂಡು ಬಂದಿರುವ ಪಕ್ಷ ನನ್ನ ಪುತ್ರ ನಿವೇದಿತ್‌ಗೆ ಟಿಕೆಟ್‌ ನೀಡಲಿಲ್ಲ. ಇದಕ್ಕೆ ಕಾರಣ ಕೇರಳದ ಮಾಜಿ ಮುಖ್ಯಮಂತ್ರಿ ಎ.ಕೆ.ಆ್ಯಂಟನಿ. 2004ರಲ್ಲಿ ಕೇರಳದಲ್ಲಿನ ನಾಯಕತ್ವ ಬದಲಾವಣೆಗೆ ಸಂಬಂಧಿಸಿದ ಬೆಳವಣಿಗೆಯನ್ನು ಹೈಕಮಾಂಡ್‌ ಸೂಚನೆಯ ಮೇರೆಗೆ ಅಭ್ಯಸಿಸಿ ಯಥಾವತ್‌ ವರದಿ ಒಪ್ಪಿಸಿದ್ದರಿಂದ ಆ್ಯಂಟನಿ ಅಧಿಕಾರ ಕಳೆದುಕೊಂಡರು. ಉಮ್ಮನ್‌ ಚಾಂಡಿ ಮುಖ್ಯಮಂತ್ರಿಯಾದರು. ನಿರ್ಧಾರ ಸೋನಿಯಾ ಅವರದ್ದಾದರೂ ಬೆಲೆ ತೆತ್ತವಳು ನಾನು’ ಎಂಬುದು ಅವರ ಅಳಲು.

ಬೃಹತ್‌ ಕೈಗಾರಿಕೆ ಸಚಿವ ಆರ್‌.ವಿ.ದೇಶಪಾಂಡೆ ಅವರ ವಿರುದ್ಧವೂ ವಿಶ್ವಾಸಘಾತುಕತನದ ಆರೋಪ ಹೊರಿಸಿರುವ ಇವರು, ‘ನನಗೆ ಮಾತ್ರವಲ್ಲದೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ನಂಬಿಕೆಗೂ ದ್ರೋಹ ಬಗೆದವರು’ ಎಂದು ತಿಳಿಸಿ, ಕಳೆದುಹೋಗಿರುವ ‘ಕರಾಳ’ದಿನಗಳನ್ನು ಬಯಲಿಗೆಳೆಯುವ ಪ್ರಯತ್ನ ಮಾಡಿದ್ದಾರೆ.

ಸರಿಸುಮಾರು ಐದು ದಶಕಗಳ ಕಾಲ ರಾಜಕೀಯದ ಆಯಕಟ್ಟಿನ ಸ್ಥಾನಗಳಲ್ಲಿದ್ದು, ಅಪಾರ ಅನುಭವವನ್ನು ಸಂಪಾದಿಸಿರುವ ಈ ಮಹಿಳೆ ದಿಟ್ಟತನಕ್ಕೆ ಹೆಸರಾದವರು. ಕೆಲವು ವಿಷಯಗಳನ್ನು ಹೇಳಲು ಧೈರ್ಯ ಮತ್ತು ಬದ್ಧತೆ ಬೇಕು. ಅದೇ ಅವರ ಆತ್ಮಕಥೆಯ ಶೀರ್ಷಿಕೆಯೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT