ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಗಸೂಚಿ ಅನುಷ್ಠಾನ ವರದಿ ಸಲ್ಲಿಕೆಗೆ ಸೂಚನೆ

ವಿಬ್ಗಯೊರ್‌ ಶಾಲೆಯ ಅತ್ಯಾಚಾರ ಪ್ರಕರಣ
Last Updated 2 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಲೈಂಗಿಕ ಕಿರುಕುಳ ತಪ್ಪಿಸುವ ಸಲುವಾಗಿ ರೂಪಿಸಲಾಗಿರುವ ಸರ್ಕಾರದ ಮಾರ್ಗ­ಸೂಚಿಗಳನ್ನು ಎಷ್ಟರಮಟ್ಟಿಗೆ ಪಾಲನೆ ಮಾಡ­ಲಾಗಿದೆ ಎಂಬುದನ್ನು ಇನ್ನೆರಡು ವಾರಗಳಲ್ಲಿ ತಿಳಿಸಿ’ ಎಂದು ಹೈಕೋರ್ಟ್‌ ಖಾಸಗಿ ಶಾಲೆಗಳಿಗೆ ನಿರ್ದೇಶನ ನೀಡಿದೆ.

ಈ ಸಂಬಂಧ ರಾಜ್ಯದ ಖಾಸಗಿ ಶಾಲಾ ಆಡಳಿತ ಮಂಡಳಿ (ಕೆ.ಎಸ್.ಪಿ.ಎಸ್‌.ಎಂ) ಸಲ್ಲಿಸಿರುವ ರಿಟ್‌ ಅರ್ಜಿ ಬಗ್ಗೆ ನ್ಯಾಯಮೂರ್ತಿ ಎ.ಎನ್‌.ವೇಣುಗೋಪಾಲ ಗೌಡ ಅವರ ಪೀಠ ಮಂಗಳವಾರ ವಿಚಾರಣೆ ನಡೆಸಿತು.

ಸರ್ಕಾರದ ಮಾರ್ಗದರ್ಶಿ ಸೂತ್ರಗಳನ್ನು ಅನುಷ್ಠಾನಕ್ಕೆ ತರಲು ಎಷ್ಟು ಸಮಯ ಬೇಕು ಎಂಬುದನ್ನು ನಿಖರವಾಗಿ ತಿಳಿಸುವಂತೆ ಪೀಠವು ಅರ್ಜಿದಾರರಿಗೆ ಸೂಚಿಸಿತು.

‘ಮಾರ್ಗಸೂಚಿಯಲ್ಲಿನ ಕೆಲವು ಅಂಶಗಳನ್ನು ಅನುಷ್ಠಾನಕ್ಕೆ ತರುವುದು ಕಷ್ಟ. ಉದಾ­­ಹರಣೆಗೆ ಮಕ್ಕಳನ್ನು ಶಾಲಾ ವಾಹನಗಳಲ್ಲಿ ಕರೆದೊಯ್ಯುವಾಗ ಮತ್ತು ಮನೆಗೆ ವಾಪಸು ಕರೆತರುವಾಗ ಮಕ್ಕಳ ಜೊತೆಗೆ ಮಹಿಳಾ ಸಹಾಯಕಿಯರೂ ಇರ­ಬೇಕು ಎಂಬ ಅಂಶವನ್ನು ವಾಸ್ತವದಲ್ಲಿ  ಕಾರ್ಯರೂಪಕ್ಕೆ ತರುವುದು ಸಾಧ್ಯವಿಲ್ಲ. ಅಂತೆಯೇ ಈ ವಾಹನಗಳಿಗೆ ಜಿಪಿಆರ್‌ಎಸ್‌ ಸಾಧನ ಹಾಗೂ ಶಾಲೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕೆಂಬುದೂ ಅಸಾಧ್ಯ’ ಎಂದು ಕೆಎಸ್‌ಪಿಎಸ್‌ಎಂ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.

‘ಅನುಷ್ಠಾನಕ್ಕೆ ತರಲು ಸಾಧ್ಯವಾಗುವ ಎಲ್ಲ ಅಂಶಗಳನ್ನೂ ಜಾರಿಗೆ ತರುತ್ತೇವೆ. ಆದರೆ ಅದಕ್ಕೆ ಒಂದಿಷ್ಟು ಕಾಲಾವಕಾಶ ಬೇಕು’ ಎಂದು ವಕೀಲರು ಮನವಿ ಮಾಡಿ­ದರು. ಅರ್ಜಿದಾರರ ಮನವಿ ಪುರಸ್ಕರಿಸಿದ ಪೀಠವು ರಾಜ್ಯ ಸರ್ಕಾರ ಮತ್ತು ನಗರ ಪೊಲೀಸ್‌ ಕಮಿಷನರ್‌ಗೆ ನೋಟಿಸ್‌ ಜಾರಿ ಮಾಡಲು ಆದೇಶಿಸಿ ವಿಚಾರಣೆಯನ್ನು ಮುಂದೂಡಿತು.

ಇತ್ತೀಚೆಗೆ ಬೆಂಗಳೂರಿನ ವಿಬ್ಗಯೊರ್‌ ಶಾಲೆಯಲ್ಲಿ ಬಾಲಕಿಯೊಬ್ಬಳ ಮೇಲೆ ಅತ್ಯಾ­ಚಾರ ನಡೆದಿದೆ ಎಂಬ ಪ್ರಕರಣದ ಸಂಬಂಧ ನಗರ ಪೊಲೀಸ್‌ ಕಮಿಷನರ್‌ ಎಂ.­ಎನ್‌.­ರೆಡ್ಡಿ ಅವರು ಆಗಸ್ಟ್‌ 26ರಂದು ಮಾರ್ಗಸೂಚಿಯೊಂದನ್ನು ಹೊರಡಿಸಿದ್ದರು. ಎಲ್ಲ ಶಾಲೆಗಳೂ ಈ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸ­ಲಾಗಿತ್ತು. ಇದನ್ನು ಪ್ರಶ್ನಿಸಿ ಕೆಎಸ್‌ಪಿಎಸ್‌ಎಂ ಹೈಕೋರ್ಟಿನಲ್ಲಿ ದಾವೆ ಹೂಡಿದೆ.

ಶಾಸಕ ವಿಶ್ವನಾಥ್‌ಗೆ ನಿರೀಕ್ಷಣಾ ಜಾಮೀನು
ಬೆಂಗಳೂರು: ಏಕಕಾಲಕ್ಕೆ ಜಿಲ್ಲಾ ಪಂಚಾಯ್ತಿ ಸದಸ್ಯ  ಹಾಗೂ ಎಚ್‌ಎಎಲ್‌ ಉದ್ಯೋಗಿಯೂ ಆಗಿ ಸಂಬಳ ಪಡೆದು ಪ್ರಜಾ ಪ್ರತಿನಿಧಿ ಕಾಯ್ದೆ ಉಲ್ಲಂಘಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಯಲಹಂಕ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರಿಗೆ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ನೀಡಿದೆ.

ಮಂಗಳವಾರ ನ್ಯಾಯಮೂರ್ತಿ ಆರ್‌.ಬಿ.ಬೂದಿಹಾಳ್‌ ಅವರಿದ್ದ ನ್ಯಾಯಪೀಠವು, ‘ಪ್ರಕರಣ 14 ವರ್ಷಗಳಷ್ಟು ಹಳೆಯದಾಗಿದೆ. ಅರ್ಜಿದಾರರು ಚುನಾವಣೆಗೆ ಸ್ಪರ್ಧಿಸುವ ಸಮಯದಲ್ಲಿ ಎಚ್‌ಎಎಲ್‌ ಮೇಲಧಿಕಾರಿಗಳಿಗೆ ಈ ವಿಷಯವನ್ನು ಗಮನಕ್ಕೆ ತಂದಿದ್ದರು  ಎಂಬ  ಅಂಶಗಳನ್ನು ಪರಿಗಣಿಸಿ’ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತು. ಅರ್ಜಿದಾರರ ಪರ ಪಿ.ಪ್ರಸನ್ನಕುಮಾರ್‌ ವಕಾಲತ್ತು ವಹಿಸಿದ್ದರು.

ಶಾಸಕ ಸೈಲ್‌ಗೆ ವಾರದ ಪೆರೋಲ್‌
ಬೆಂಗಳೂರು: ಅದಿರು ಕಳ್ಳಸಾಗಣೆ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿರುವ ಕಾರವಾರದ ಶಾಸಕ ಸತೀಶ್‌ ಸೈಲ್‌ ಅವರಿಗೆ ಕುಟುಂಬದ ಸದಸ್ಯರ ಜೊತೆ ಇರಲು ಒಂದು ವಾರದ ಅವಧಿಗೆ ಸಿಬಿಐ ವಿಶೇಷ ನ್ಯಾಯಾಲಯ ಪೆರೋಲ್‌ ಮಂಜೂರು ಮಾಡಿದೆ.

ಹನ್ನೊಂದು ತಿಂಗಳಿನಿಂದ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಮುನ್ನ ತಂದೆಯ ಅನಾರೋಗ್ಯದ ಕಾರಣದಿಂದ ಕೆಲವು ದಿನಗಳ ಕಾಲ ಪೊಲೀಸ್‌ ಕಣ್ಗಾವಲಿನಲ್ಲಿ ಕಾರವಾರದಲ್ಲಿ ಇರಲು ಅನುಮತಿ ಪಡೆದಿದ್ದರು.

‌ಈಗ ಕುಟುಂಬದ ಸದಸ್ಯರ ಜೊತೆ ಇರಲು ಮತ್ತು ಕುಟುಂಬದ ಕೆಲಸಗಳಲ್ಲಿ ಭಾಗವಹಿಸಲು ಪೆರೋಲ್‌ ಮಂಜೂರು ಮಾಡುವಂತೆ ಸಲ್ಲಿಸಿದ್ದ ಅರ್ಜಿಯನ್ನು  ನ್ಯಾಯಾಲಯ ಮಾನ್ಯ ಮಾಡಿದೆ.

ಫಿಲಂ ಸಿಟಿ: ಕಾಲಾವಕಾಶ ಕೋರಿದ ಸರ್ಕಾರ
ಬೆಂಗಳೂರು: ‘ನಗರದ ಹೆಸರಘಟ್ಟ ಬಳಿ ಸ್ಥಾಪಿಸಲು ಉದ್ದೇಶಿಸಿರುವ ‘ಫಿಲಂ ಸಿಟಿ’ ನಿರ್ಮಾಣ ಕುರಿತ ನಿಲುವುಗಳನ್ನು  ತಿಳಿಸಲು ಕಾಲಾ­ವ­ಕಾಶ ಬೇಕು’ ಎಂದು ಸರ್ಕಾರವು ಹೈಕೋರ್ಟ್‌ಗೆ ಮನವಿ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಡಿ.ಎಚ್‌.ವಘೇಲಾ ಹಾಗೂ ನ್ಯಾಯ­ಮೂರ್ತಿ ಅಶೋಕ ಬಿ.ಹಿಂಚಿ­ಗೇರಿ ಅವರಿದ್ದ ಪೀಠವು ಮಂಗಳವಾರ ಈ ಸಂಬಂಧದ ವಿಚಾರಣೆ ಮುಂದು­ವರಿಸಿತು.

ಈ ವೇಳೆ ಸರ್ಕಾರದ ಪರ ವಕೀಲರು, ‘ಹೆಸರಘಟ್ಟ ಬಳಿಯಲ್ಲಿನ ೩೪೨ ಎಕರೆ ಜಮೀನನ್ನು ರಾಜ್ಯ ಸರ್ಕಾರವು ೧೯೭೨ರಲ್ಲಿ ‘ಫಿಲಂ ಕಾರ್ಪೊರೇಷನ್ ಆಫ್ ಲಿಮಿ­ಟೆಡ್’ಗೆ ೯೯ ವರ್ಷಗಳ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಿತ್ತು. ಆದರೆ ಸಂಸ್ಥೆಯು ಈ ಜಮೀನಿನಲ್ಲಿ ಸುಮಾರು 45 ಎಕರೆ­ಯನ್ನು ನೃತ್ಯಗ್ರಾಮ ಹಾಗೂ ಆದರ್ಶ ಫಿಲಂ ಇನ್‌ಸ್ಟಿಟ್ಯೂಟ್ ಸೇರಿದಂತೆ ಮೂರು ಸಂಸ್ಥೆಗಳಿಗೆ ಉಪಗುತ್ತಿಗೆ ನೀಡಿದೆ. ಅಲ್ಲೀಗ ಯಾವುದೇ ಸಾಂಸ್ಕೃತಿಕ ಚಟುವಟಿಕೆ ನಡೆಯುತ್ತಿಲ್ಲ. ಆದಕಾರಣ ರಾಜ್ಯ ಸರ್ಕಾರವು ಫಿಲಂ ಸಿಟಿ ಆರಂಭಿಸಲು  ಉದ್ದೇಶಿಸಿದೆ. ಈ ಸಂಬಂಧ ವಾರ್ತಾ ಮತ್ತು ಪ್ರಚಾರ ಇಲಾಖೆ, ಅರಣ್ಯ ಇಲಾಖೆ, ಪಶು ಸಂಗೋಪನೆ ಮತ್ತಿತರ ಇಲಾಖೆಗಳ ಜತೆ ಚರ್ಚೆ ನಡೆಸಬೇಕಿದೆ. ಈ ವಿಷಯವು ಸಂಪುಟ ಸಭೆಯಲ್ಲಿ ಚರ್ಚೆಯಾಗಬೇಕಿರುವುದರಿಂದ ಸರ್ಕಾರದ ನಿರ್ಧಾರ ತಿಳಿಸಲು ಇನ್ನಷ್ಟು ಸಮಯಾವಕಾಶ ಬೇಕು’ ಎಂದು ಮನವಿ ಮಾಡಿದರು.

‘ಹೆಸರಘಟ್ಟ ಪ್ರದೇಶದಲ್ಲಿ ‘ಫಿಲಂ ಸಿಟಿ’ ಅಥವಾ ‘ಥೀಮ್‌ ಪಾರ್ಕ್‌’ ಆರಂಭಿಸುವುದರಿಂದ ಅಲ್ಲಿನ ಬೃಹತ್‌ ಕೆರೆಯ ಪರಿಸರಕ್ಕೆ ಧಕ್ಕೆ ಬರಲಿದೆ. ಅಲ್ಲದೇ ಇದನ್ನು ಈಗಾಗಲೇ ಹಸಿರು ವಲಯ ಎಂದು ಗುರುತಿಸಲಾಗಿದೆ. ಈ ಕೆರೆಯ ಸಮೀಪದಲ್ಲೇ ಇರುವ ಪಶು ಸಂಗೋಪನಾ ಸಂಶೋಧನಾ ಕೇಂದ್ರದ ಚಟುವಟಿಕೆಗಳಿಗೂ ಫಿಲಂ ಸಿಟಿ ನಿರ್ಮಾಣದಿಂದ ಧಕ್ಕೆ ಉಂಟಾಗಲಿದೆ. ಹೀಗಾಗಿ ಸರ್ಕಾರದ ನಿರ್ಧಾರಕ್ಕೆ ಅನುಮತಿ ನೀಡಬಾರದು’ ಎಂದು ಅರ್ಜಿದಾರರ ಪರ ವಕೀಲ ಟಿ.ಐ.ಅಬ್ದುಲ್ಲಾ ಪ್ರತಿಪಾದಿಸಿದರು.

ವಿಚಾರಣೆಯನ್ನು ಅಕ್ಟೋಬರ್‌ 7ಕ್ಕೆ ಮುಂದೂಡಲಾಗಿದೆ. ಅರ್ಕಾವತಿ ಕುಮದ್ವತಿ ನದಿ ಪುನಶ್ಚೇತನ ಸಮಿತಿಯು ಈ  ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT