ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಗಸೂಚಿ ಜಾರಿಗೆ ಪೊಲೀಸರ ನಿರ್ಧಾರ

ಹಣಕಾಸು ಸಂಸ್ಥೆಗಳಲ್ಲಿ ಹೆಚ್ಚಿದ ದರೋಡೆ ಪ್ರಕರಣಗಳು
Last Updated 27 ನವೆಂಬರ್ 2015, 19:57 IST
ಅಕ್ಷರ ಗಾತ್ರ

ಬೆಂಗಳೂರು: ಆಭರಣ ಮಳಿಗೆ, ಹಣ ಪೂರೈಕೆ ಏಜೆನ್ಸಿ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಹೆಚ್ಚುತ್ತಿರುವ ದರೋಡೆ ಮತ್ತು ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ರಾಜಧಾನಿ ಪೊಲೀಸರು, ಹೊಸದಾಗಿ ಸುರಕ್ಷತಾ ಮಾರ್ಗಸೂಚಿಗಳನ್ನು ಜಾರಿಗೆ ತರಲು ಮುಂದಾಗಿದ್ದಾರೆ.

ಈ ಸಂಬಂಧ ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಿರುವ ನಗರ ಪೊಲೀಸ್ ಕಮಿಷನರ್ ಎನ್‌.ಎಸ್‌. ಮೇಘರಿಕ್, ಶೀಘ್ರವೇ ಮಾರ್ಗಸೂಚಿಗಳನ್ನು ಸಿದ್ದಪಡಿಸುವಂತೆ ಸೂಚನೆ ನೀಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಮಾರ್ಗಸೂಚಿ ಅಂತಿಮಗೊಳಿಸುವುದಕ್ಕೂ ಮುನ್ನ ನಗರದಲ್ಲಿರುವ ಆಭರಣ ಮಳಿಗೆಗಳು, ಹಣ ಪೂರೈಕೆ ಏಜೆನ್ಸಿಗಳು ಹಾಗೂ ಖಾಸಗಿ ಫೈನಾನ್ಸ್‌ ಸಂಸ್ಥೆಗಳ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಿ, ಅವರಿಂದಲೂ ಸಲಹೆ ಸೂಚನೆಗಳನ್ನು ಪಡೆಯಲು ನಿರ್ಧರಿಸಲಾಗಿದೆ ಎಂದು ಹೇಳಿದರು.

‘ಸಾರ್ವಜನಿಕರ ಹಣದ ಸುರಕ್ಷತೆ ದೃಷ್ಟಿಯಿಂದ ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ), ಖಾಸಗಿ ಹಣಕಾಸು ಸಂಸ್ಥೆಗಳಿಗೆ ಕೆಲವೊಂದು ಸುರಕ್ಷತಾ ಕ್ರಮಗಳನ್ನು ಕಡ್ಡಾಯಗೊಳಿಸಿದೆ. ಆದರೆ, ಆ ನಿಯಮ ಉಲ್ಲಂಘಿಸುವವರ ವಿರುದ್ಧ ಕೈಗೊಳ್ಳುವ ಕ್ರಮಗಳ ಬಗ್ಗೆ ವಿವರಿಸಿಲ್ಲ. ಇದರಿಂದಾಗಿಯೇ  ಕಂಪೆನಿಗಳ ಮಾಲೀಕರು ಸುರಕ್ಷತೆ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ ಕುಮಾರ್ ತಿಳಿಸಿದ್ದಾರೆ.

‘ಆರೋಪಿಗಳ ಪತ್ತೆಯೇ ನಮ್ಮ ಮೊದಲ ಆದ್ಯತೆ. ಆ ನಂತರ ಘಟನಾ ಸ್ಥಳದಲ್ಲಿ ಸಂಸ್ಥೆ ಅಥವಾ ಏಜೆನ್ಸಿ ಕೈಗೊಂಡಿದ್ದ ಸುರಕ್ಷತಾ ಕ್ರಮಗಳ ಕುರಿತು ಸಂಬಂಧಪಟ್ಟವರನ್ನು ಪ್ರಶ್ನಿಸಲಾಗುವುದು. ಅಗತ್ಯವಿದ್ದರೆ ಸಂಸ್ಥೆಗೆ ನೋಟಿಸ್ ಕೊಡಲಾಗುವುದು’ ಎಂದು ಆಗ್ನೇಯ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ತಿಳಿಸಿದರು.

ಕೈಗೊಳ್ಳಬೇಕಾದ ಕ್ರಮಗಳು: ಹಣ ಅಥವಾ ಚಿನ್ನಾಭರಣ ಇಡುವ ‘ಸ್ಟ್ರಾಂಗ್ ರೂಂ’ ಗಟ್ಟಿಯಾದ ಗೋಡೆ ಮತ್ತು ಮೇಲ್ಛಾವಣಿ ಹೊಂದಿರಬೇಕು. ಅತ್ಯುತ್ತಮ ಲಾಕರ್ ಸೌಲಭ್ಯ, ದಿನದ 24 ಗಂಟೆ ವಿದ್ಯುತ್ ಸರಬರಾಜು, ಕಾವಲು ಸಿಬ್ಬಂದಿ, ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ, ದುಷ್ಕರ್ಮಿಗಳು ಒಳ ನುಗ್ಗಿದ ತಕ್ಷಣ ಮಾಲೀಕರಿಗೆ ಅಥವಾ ಸ್ಥಳೀಯ ಪೊಲೀಸರಿಗೆ ವಿಷಯ ಗೊತ್ತಾಗುವಂತಹ ಎಚ್ಚರಿಕೆಯ ಅಲಾರಂ ಸೇರಿದಂತೆ ಹಲವು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು.
*
ಹಿಂದಿನ ಘಟನೆಗಳು
* 2015, ನ.25: ಬೊಮ್ಮನಹಳ್ಳಿ ಮುಖ್ಯರಸ್ತೆಯ ‘ಮಣಪ್ಪುರಂ ಗೋಲ್ಡ್‌ ಲೋನ್’ ಕಚೇರಿಯಲ್ಲಿ 800 ಗ್ರಾಂ ಒಡವೆ ಕಳವು

* ಅ.21: ಎಂ.ಜಿ.ರಸ್ತೆಯಲ್ಲಿ ‘ಬ್ರಿಂಕ್ಸ್ ಆರ್ಯ ಇಂಡಿಯಾ ಪ್ರೈ.ಲಿ’ ನೌಕರನಿಂದ ₹ 50 ಲಕ್ಷ ಕಳವು

* ಅ.15: ಜ್ಞಾನಭಾರತಿ ಸಮೀಪದ ಜ್ಞಾನಗಂಗಾನಗರದ ‘ಮಣಪ್ಪುರಂ ಗೋಲ್ಡ್‌ ಫೈನಾನ್ಸ್‌’ಯಲ್ಲಿ  18 ಕೆ.ಜಿ ಚಿನ್ನ ದರೋಡೆ

*  2014, ಸೆ.14: ರಾಜರಾಜೇಶ್ವರಿನಗರದ ಬಿಇಎಂಎಲ್‌ ಲೇಔಟ್‌ನ ‘ಐಐಎಫ್‌ಎಲ್‌ ಗೋಲ್ಡ್‌ ಲೋನ್‌’ ಸಂಸ್ಥೆಯಲ್ಲಿ 9 ಕೆ.ಜಿ ಚಿನ್ನ
ಕಳವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT