ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ದವ ತಾಂಡವ!

Last Updated 24 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

‘ನಾನು ಪುನಃ ನಾಯಕಿಯಾಗಿ ನಟಿಸಲು ಮಾಧ್ಯಮಗಳ ಪ್ರೋತ್ಸಾಹವೇ ಕಾರಣ. ಸ್ವೀಟಿ ಚಿತ್ರದಲ್ಲಿ ನನ್ನನ್ನು ಪ್ರೇಕ್ಷಕರು ಒಪ್ಪಿಕೊಳ್ಳದಿದ್ದರೆ ಮುಂದೆ ನಾಯಕಿಯಾಗಿ ನಟಿಸುವುದಿಲ್ಲ ಎಂದಿದ್ದೆ. ಆದರೆ  ಮಾಧ್ಯಮಗಳಲ್ಲಿ ನನ್ನ ಪಾತ್ರಕ್ಕೆ ಸಿಕ್ಕ ಪ್ರಶಂಸೆಯಿಂದ ಮತ್ತೆ ನಾಯಕಿಯಾಗಿ ನಟಿಸುತ್ತಿದ್ದೇನೆ’ ಎಂದು ಮುಖ ಅರಳಿಸಿದರು ನಟಿ ರಾಧಿಕಾ ಕುಮಾರಸ್ವಾಮಿ.

ಗುರು ದೇಶಪಾಂಡೆ ನಿರ್ದೇಶನದ ‘ರುದ್ರತಾಂಡವ’ ಚಿತ್ರತಂಡ ಇತ್ತೀಚೆಗೆ ಮುಹೂರ್ತ ಮುಗಿಸಿ ಮಾಧ್ಯಮಗಳಿಗೆ ಮುಖಾಮುಖಿಯಾಯಿತು. ಚಿತ್ರದಲ್ಲಿ ನಾಯಕ ಚಿರಂಜೀವಿ ಸರ್ಜಾ ಅವರಿಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ ರಾಧಿಕಾ, ‘ತಮ್ಮ ಬ್ಯಾನರ್ ಅಲ್ಲದೇ ಬೇರೊಬ್ಬರ ಬ್ಯಾನರ್ ಅಡಿಯೂ ನಟಿಸಲು ಸಿದ್ಧ’ ಎಂದು ಸಾರಿ ಹೇಳಿದರು. 

‘ರುದ್ರತಾಂಡವ’ ತಮಿಳಿನ ‘ಪಾಂಡಿಯನಾಡು’ ಚಿತ್ರದ ಕನ್ನಡ ಅವತರಣಿಕೆ. ಅಲ್ಲಿನ ಚಿತ್ರವನ್ನು ಇಲ್ಲಿ ಭಟ್ಟಿ ಇಳಿಸುವ ಹೊಣೆ ಹೊತ್ತಿರುವ ಗುರು ದೇಶಪಾಂಡೆ, ಚಿತ್ರೀಕರಣದ ಮಾಹಿತಿ ನೀಡಿದರು.

‘ಚಿತ್ರೀಕರಣ ಕೋಲಾರ, ಬಂಗಾರಪೇಟೆ ಸುತ್ತಮುತ್ತ ಮೂರು ಹಂತಗಳಲ್ಲಿ ನಡೆಯಲಿದೆ. ಮೂಲ ಚಿತ್ರದ ಕಥೆ ಕೋಲಾರ, ಬಂಗಾರಪೇಟೆಯ ಸ್ಥಳೀಯತೆಗೆ ಒಗ್ಗುತ್ತಿದ್ದುದರಿಂದ ‘ರುದ್ರತಾಂಡವ’ವನ್ನು ಅಲ್ಲಿಯೇ ಚಿತ್ರೀಕರಿಸಲು ನಿರ್ಧರಿಸಲಾಯಿತು. ಮೊದಲ ಎರಡು ಹಂತದ ಚಿತ್ರೀಕರಣ ಮುಗಿದ ನಂತರ ಚಿತ್ರೀಕರಣಕ್ಕೆ ಒಂದೂವರೆ ತಿಂಗಳ ಬಿಡುವು ನೀಡಲಾಗಿದೆ. ಅದಕ್ಕೆ ನಾಯಕ ಚಿರಂಜೀವಿ ಸರ್ಜಾ ಅವರ ಪಾತ್ರದ ಶೇಡ್ ಸ್ವಲ್ಪ ಬದಲಾಗುವುದೇ ಕಾರಣ’ ಎಂದರು ಸ್ಪಷ್ಟಪಡಿಸಿದರು ಗುರುದೇಶಪಾಂಡೆ.

ನಾಯಕ ಚಿರಂಜೀವಿ ಸರ್ಜಾ ಮಾತನಾಡಿ, ‘ಚಿತ್ರದಲ್ಲಿನ ಅಪ್ಪ-ಮಗನ ನಡುವಿನ ಭಾವನಾತ್ಮಕ ಸಂಘರ್ಷ ಅದ್ಭುತವಾಗಿದೆ. ಹೀಗಾಗಿಯೇ ನಾನು ಈ ಚಿತ್ರದಲ್ಲಿ ಪಾತ್ರ ಮಾಡಲು ಒಪ್ಪಿಕೊಂಡೆ’ ಎಂದರು.

ರೀಮೇಕ್ ಸಮರ್ಥನೆ: ಪತ್ರಿಕಾಗೋಷ್ಠಿಯಲ್ಲಿದ್ದ ಹಿರಿಯ ಸಾಹಿತಿ ಡಾ. ಗಿರೀಶ್ ಕಾರ್ನಾಡ್ ಅವರು ರೀಮೇಕ್ ಚಿತ್ರಗಳನ್ನು ಸಮರ್ಥಿಸಿದರು. ‘ರೀಮೇಕ್ ಬಗ್ಗೆ ನಿಮ್ಮ ಅಭಿಪ್ರಾಯವೇನು?’ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಭಾರತೀಯ ಚಿತ್ರರಂಗದಲ್ಲಿ ವರ್ಷಕ್ಕೆ ಸರಾಸರಿ 1200 ಚಿತ್ರಗಳು ನಿರ್ಮಾಣವಾಗುತ್ತಿವೆ. ಅಷ್ಟು ಸಿನಿಮಾಗಳು ನಿರ್ಮಾಣವಾಗಬೇಕು ಎಂದರೆ ರೀಮೇಕ್ ಅನಿವಾರ್ಯ. ಇಷ್ಟಕ್ಕೂ ವರ್ಷಕ್ಕೆ 1200 ಕತೆ, ಕಾದಂಬರಿಗಳು ಸೃಷ್ಟಿಯಾಗುತ್ತಿಲ್ಲ. ಎಲ್ಲ ಕಥೆ, ಕಾದಂಬರಿಗಳನ್ನೂ ಚಿತ್ರ ಮಾಡಲು ಸಾಧ್ಯವಿಲ್ಲ.

ಒಮ್ಮೆ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆಯಲ್ಲಿ ಭಾಗವಹಿಸಿ, ರೀಮೇಕ್ ಚಿತ್ರಗಳನ್ನು ಸಮರ್ಥಿಸಿದಾಗ ನಟ ಕಮಲ್ ಹಾಸನ್, ನಾನು ತಮಾಷೆ ಮಾಡುತ್ತಿದ್ದೇನೆ ಎಂದು ನಕ್ಕರು. ವಾಸ್ತವವಾಗಿ ನಾನು ಅದನ್ನು ಗಂಭೀರವಾಗಿಯೇ ಹೇಳಿದ್ದೆ’ ಎಂದರು. ಚಿತ್ರರಂಗವನ್ನು ರೈತರೊಂದಿಗೆ ತಳಕು ಹಾಕುವುದನ್ನು ವಿರೋಧಿಸಿದ ಕಾರ್ನಾಡರು, ಎಲ್ಲ ಉದ್ಯಮಗಳೂ ದುಡ್ಡು ಹಾಕಿ ದುಡ್ಡು ತೆಗೆಯುವ ಕೆಲಸವನ್ನೇ ಮಾಡುವುದರಿಂದ ಅದರ ಕುರಿತು ತಕರಾರು ಅನಗತ್ಯ ಎಂದು ಪ್ರತಿಪಾದಿಸಿದರು.

ಚಿತ್ರದ ಮತ್ತೊಬ್ಬ ನಾಯಕ ಸುನಿಲ್, ನಿರ್ಮಾಪಕ ಎಸ್. ವಿನೋದ್, ಛಾಯಾಗ್ರಾಹಕ ಜಗದೀಶ್ ವಾಲಿ, ನಟರಾದ ರವಿಶಂಕರ್, ವಸಿಷ್ಠ, ಸುರೇಶ್ ಮಂಗ್ಳೂರು ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT