ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲ್‌ ಆಗಲಿದೆ ಬಿಡಿಎ ಕಾಂಪ್ಲೆಕ್ಸ್‌

ಜಯನಗರದ ‘ಲ್ಯಾಂಡ್‌ಮಾರ್ಕ್‌’ಗೆ ಹೊಸತನ
Last Updated 2 ಜುಲೈ 2015, 19:30 IST
ಅಕ್ಷರ ಗಾತ್ರ

ನಗರದಲ್ಲಿ ಸಾಕಷ್ಟು  ಮಾಲ್‌ಗಳಿವೆ, ಮಳಿಗೆಗಳಿವೆ, ರಸ್ತೆಗಳೂ ಇವೆ. ಆದರೆ ನಗರದ ದಕ್ಷಿಣ ಭಾಗದಲ್ಲಿರುವ ಅನೇಕ ಬಡಾವಣೆಗಳ ಪಾಲಿಗೆ ನಿಜವಾದ ಶಾಪಿಂಗ್ ಅನುಭವ ನೀಡುವ ಪ್ರಮುಖ ತಾಣವೆಂದರೆ, ಅದು ಜಯನಗರದ 4ನೇ ಬ್ಲಾಕ್‌ನಲ್ಲಿರುವ ಬಿಡಿಎ ಕಾಂಪ್ಲೆಕ್ಸ್.

ವರ್ಷಗಳಿಂದ ಅನೇಕರಿಗೆ ಬದುಕಿನ ಬಂಡಿ ಎಳೆಯುವ ಕಲ್ಪವೃಕ್ಷವೂ ಆಗಿದ್ದ ಜಯನಗರದ ಬಿಡಿಎ ಕಾಂಪ್ಲೆಕ್ಸ್, ಬೃಹತ್ ರೂಪದ ಮಲ್ಟಿಪ್ಲೆಕ್ಸ್‌ ಮಾಲ್‌ ಆಗಿ ಮರುಹುಟ್ಟು ಪಡೆಯಲಿದೆ ಮತ್ತು ಆ ಕಾರ್ಯ ಈಗ ಚುರುಕುಗೊಂಡಿದೆ. ಸ್ಥಳೀಯ ಶಾಸಕರು, ಕಾರ್ಪೋರೇಟರ್‌ಗಳು ಈ ಮಾಲ್‌ ಬೇಗ ತಲೆಎತ್ತಲಿ ಎಂದು ಕಾರ್ಯಪ್ರವೃತ್ತರಾಗಿದ್ದು, ಅಧಿಕಾರಿಗಳೂ ಭರದ ಸಿದ್ಧತೆ ನಡೆಸಿದ್ದಾರೆ. ಒಂದು ಕಡೆ ಕಾಮಗಾರಿ ತನ್ನ ವೇಗ ಹೆಚ್ಚಿಕೊಂಡು ಸಾಗುತ್ತಿದ್ದರೆ, ಇನ್ನೊಂದು ಕಡೆ ವರ್ತಕರ ಆತಂಕ ಹೆಚ್ಚಾಗುತ್ತಿದೆ.

ಏನೇನಿರಲಿವೆ ಇಲ್ಲಿ?
ಈ ಮಾಲ್‌ನಲ್ಲಿ  ಒಟ್ಟು ನಾಲ್ಕು ಬ್ಲಾಕ್‌ಗಳು ಇರಲಿವೆ. ಮೊದಲ ಮೂರು  ಬ್ಲಾಕ್‌ಗಳಲ್ಲಿ ತಲಾ 9, 4ನೇ ಬ್ಲಾಕ್‌ನಲ್ಲಿ 8 ಮಹಡಿಗಳು ಇರುತ್ತವೆ. ಯಾವ ಬ್ಲಾಕ್‌ನ ಯಾವ ಮಹಡಿಯ ಯಾವ ಮಳಿಗೆಗಳನ್ನು ಯಾವ ಯಾವ ಉದ್ದೇಶಗಳಿಗೆ ಹಂಚಿಕೆ ಮಾಡಬೇಕು ಎನ್ನುವ ಬಗ್ಗೆ ಈಗಾಗಲೇ ಲೆಕ್ಕಾಚಾರ ನಡೆದಿದೆ.

‘ಜಯನಗರದ ಈಗಿನ ಮೊದಲ ಸಮಸ್ಯೆ ಎಂದರೆ ಪಾರ್ಕಿಂಗ್‌. ಹೀಗಾಗಿ ಮೊದಲ ಆದ್ಯತೆಯನ್ನು ಪಾರ್ಕಿಂಗ್‌ಗೆ‌ ನೀಡಲಾಗಿದೆ. 750 ಕಾರುಗಳನ್ನು ಹಾಗೂ ಸಾಕಷ್ಟು ಸಂಖ್ಯೆಯಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಎಲ್ಲಾ ಮಹಡಿಗಳ ಮೂರು ಬೇಸ್‌ಮೆಂಟ್‌ಗಳನ್ನು ಹಾಗೂ 2ನೇ ಬ್ಲಾಕ್‌ ಪೂರ್ತಿಯಾಗಿ ಪಾರ್ಕಿಂಗ್‌ಗೇ ಮೀಸಲು’ ಎನ್ನುತ್ತಾರೆ ಬೈರಸಂದ್ರ ವಾರ್ಡ್‌ನ ಮಾಜಿ ಕಾರ್ಪೊರೇಟರ್ ಎನ್. ನಾಗರಾಜು.

‘ಈ ಮಾಲ್‌ನಲ್ಲಿ ಒಂದು ಸುಸಜ್ಜಿತವಾದ ಸಭಾಂಗಣ ಬರಲಿದೆ. ಸಾವಿರಕ್ಕೂ ಅಧಿಕ ಜನರು ಕುಳಿತುಕೊಳ್ಳಬಹುದಾದ, ಆಧುನಿಕ ಸೌಕರ್ಯಗಳನ್ನು ಒಳಗೊಂಡ ಅತ್ಯುತ್ತಮ ಸಭಾಂಗಣ ಇದಾಗಲಿದೆ’ಎನ್ನುತ್ತಾರೆ ಅವರು. ಜಯನಗರದಲ್ಲಿ ಈಗ ಎನ್‌.ಎಂ.ಕೆ.ಆರ್.ವಿ. ಸಭಾಂಗಣ, ಎಚ್‌.ಎನ್. ಕಲಾಸೌಧ, ಜೆಎಸ್‌ಎಸ್‌ ಸಭಾಂಗಣ, ರಂಗಶಂಕರ ಸಭಾಂಗಣಗಳಿವೆ. ಈ ಸಭಾಂಗಣಗಳಿಗಿಂತ ಹೆಚ್ಚು ಸಾಮರ್ಥ್ಯವಿರುವ, ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಸಭಾಂಗಣ ಇದಾಗಲಿದೆ ಎನ್ನುವುದು ಅಧಿಕಾರಿಗಳ ವಿವರಣೆ.

ಧ್ವಂಸಗೊಳ್ಳಲಿರುವ ಕಟ್ಟಡಗಳು
ಈಗಾಗಲೇ ಮೊದಲ ಹಂತದ ಕಾರ್ಯ ಪೂರ್ಣಗೊಂಡಿದ್ದು, 1ನೇ ಬ್ಲಾಕ್‌ನ 163 ಮಳಿಗೆಗಳು ಸಿದ್ಧವಾಗಿವೆ. ಮುಖ್ಯ ಕಟ್ಟಡದಲ್ಲಿರುವ ಎಲ್ಲಾ ಮಳಿಗೆಗಳನ್ನು (ಸುಮಾರು 150ಕ್ಕೂ ಅಧಿಕ), ಕಚೇರಿಗಳನ್ನು ಕೆಡವಿ ಆ ಜಾಗದಲ್ಲಿ 2ನೇ ಹಂತದ ಕಾಮಗಾರಿಯನ್ನು ಆರಂಭಿಸಲಾಗುವುದು. ಅಲ್ಲಿರುವ ಜನತಾ ಬಜಾರ್, ಕೆನರಾ ಬ್ಯಾಂಕ್, ತರಕಾರಿ ಮಾರುಕಟ್ಟೆಯನ್ನು 1ನೇ ಬ್ಲಾಕ್‌ಗೆ ವರ್ಗಾಯಿಸಲಾಗುವುದು.

ಪ್ರಸ್ತುತ ಜೆ.ಪಿ.ನಗರದ ಸೆಂಟ್ರಲ್‌ ಮಾಲ್ ಬಿಟ್ಟರೆ ಈ ಭಾಗದಲ್ಲಿ ಪ್ರಮುಖ ಶಾಪಿಂಗ್‌ ಮಾಲ್‌ಗಳಿಲ್ಲ. ಜಯನಗರ ಪೂರ್ವ, ಜೆ.ಪಿ.ನಗರ, ಬೈರಸಂದ್ರ, ಪಟ್ಟಾಭಿರಾಮನಗರ, ಗುರಪ್ಪನ ಪಾಳ್ಯ, ಶಾಖಾಂಬರಿ ನಗರ, ಸಾರಕ್ಕಿ ಸೇರಿದಂತೆ ಒಟ್ಟು 7 ವಾರ್ಡ್‌ಗಳ ಜನರ ಉಪಯೋಗಕ್ಕೆ ಈ ಮಾಲ್‌ ಬರಲಿದೆ.

ಹತ್ತು ಬ್ಲಾಕ್‌ಗಳು ಹಾಗೂ 7 ವಾರ್ಡ್‌ಗಳನ್ನು ಒಳಗೊಂಡಿರುವ ಜಯನಗರದಲ್ಲಿ ವ್ಯಾಪಾರ–ವಹಿವಾಟಿಗೇನೂ ಕೊರತೆ ಇಲ್ಲ. ಫರ್ಲಾಂಗು ಅಂತರದಲ್ಲಿಯೇ ಅನೇಕ ಸಣ್ಣ ಅಂಗಡಿಗಳು ಉಂಟು. ಜೊತೆಗೆ ಅಂತರರಾಷ್ಟ್ರೀಯ ಬ್ರ್ಯಾಂಡ್ ಮಳಿಗೆಗಳೂ ಇಲ್ಲಿವೆ. ಆದರೆ ಪ್ರಮುಖ ವಾಣಿಜ್ಯ ಸಂಕೀರ್ಣವಾಗಿ ಬಿಡಿಎ ಕಾಂಪ್ಲೆಕ್ಸ್‌ ಗುರುತಿಸಿಕೊಂಡಿದ್ದು, ಇದೀಗ ಅದು ಮಾಲ್‌ ರೂಪ ತಾಳುತ್ತಿರುವುದು ವಿಶೇಷ. ನಗರದ ಇತರೆ ಭಾಗಗಳಲ್ಲಿರುವ ಬಿಡಿಎ ಕಾಂಪ್ಲೆಕ್ಸ್‌ಗಳನ್ನೆಲ್ಲ ನೆಲಸಮ ಮಾಡಿ ಮಾಲ್‌ಗಳನ್ನಾಗಿಸುವ ಯೋಜನೆ ಸರ್ಕಾರದ ಮುಂದಿದ್ದೂ, ಇದಕ್ಕೆ ಜಯನಗರದ ಕಾಂಪ್ಲೆಕ್ಸ್‌ ಮುನ್ನುಡಿ ಬರೆದಿದೆ. ‌

ವರ್ತಕರ ಕಾರ್ಪಣ್ಯ...
ಒಪ್ಪಿಕೊಳ್ಳುವುದು ಸುಲಭವಲ್ಲ...
ಸುಮಾರು 40 ವರ್ಷಗಳಿಂದ ಇಲ್ಲೇ ಜೀವ ತೇಯ್ದಿದ್ದೇವೆ. ಕಷ್ಟವೋ ಸುಖವೋ ಎಲ್ಲಕ್ಕೂ ಈ ಅಂಗಡಿ ಸಾಕ್ಷಿಯಾಗಿದೆ. ಕಷ್ಟವನ್ನೆಲ್ಲ

ಎದುರಿಸಿ ಈಗ ನೆಮ್ಮದಿಯ ನಿಟ್ಟುಸಿರು ಬಿಡುವ ಸಮಯದಲ್ಲಿ ಬಂದು, ಎದ್ದು ಹೋಗಿ ಅಂದರೆ ಒಪ್ಪಿಕೊಳ್ಳುವುದು ಸುಲಭವಲ್ಲ. ಹೊಸ ಕಟ್ಟಡದಲ್ಲಿ ಜಾಗ ಕೊಡುತ್ತೇವೆ ಎನ್ನುತ್ತಾರೆ. ಆದರೆ ಈಗಿರುವ ಮಳಿಗೆಗಳಿಗಿಂತ ಅವು ತುಂಬಾ ಚಿಕ್ಕದಾಗಿವೆ. ಇಷ್ಟೆಲ್ಲಾ ವಸ್ತುಗಳನ್ನು ಅಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಅಲ್ಲದೇ, ಬಾಡಿಗೆಯೂ ಹೆಚ್ಚಾಗುವ ಸಾಧ್ಯತೆ ಇದೆ.

ನಾವೀಗ ಎಲ್ಲಿ, ಎಷ್ಟು ಚದರ ಅಡಿ ಜಾಗದಲ್ಲಿ ಇದ್ದೇವೆಯೋ ಅದೇ ಪ್ರಕಾರ ಹೊಸ ಕಟ್ಟದಲ್ಲಿ ಜಾಗ ಹಂಚಿಕೆ ಮಾಡಬೇಕು, ಬಾಡಿಗೆಯೂ ಅಷ್ಟೇ ಇರಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ನೀಡಿದ್ದೇವೆ. ಇನ್ನೂ ಅಲ್ಲಿಂದ ಯಾವುದೇ ಉತ್ತರ ಬಂದಿಲ್ಲ.

ನಾವೀಗ ಎಲ್ಲಿ, ಎಷ್ಟು ಚದರ ಅಡಿ ಜಾಗದಲ್ಲಿ ಇದ್ದೇವೆಯೋ ಅದೇ ಪ್ರಕಾರ ಹೊಸ ಕಟ್ಟದಲ್ಲಿ ಜಾಗ ಹಂಚಿಕೆ ಮಾಡಬೇಕು, ಬಾಡಿಗೆಯೂ ಅಷ್ಟೇ ಇರಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ನೀಡಿದ್ದೇವೆ. ಇನ್ನೂ ಅಲ್ಲಿಂದ ಯಾವುದೇ ಉತ್ತರ ಬಂದಿಲ್ಲ.
ಎಂ.ಸಿ.ಪುಟ್ಟಸ್ವಾಮಿ, ಜಾಯ್ ಎಂಟರ್‌ಪ್ರೈಸೆಸ್‌

ಹೊಂದಾಣಿಕೆ ಕಷ್ಟ

ಒಮ್ಮೆ ಹೆಚ್ಚು, ಒಮ್ಮೆ ಕಡಿಮೆ ಹೇಗೂ ಜೀವನಕ್ಕಾಗುವಷ್ಟು ವ್ಯಾಪಾರವಂತೂ ಆಗುತ್ತಿತ್ತು. 30 ವರ್ಷಗಳಿಂದ ಇದನ್ನೇ ನಂಬಿಕೊಂಡು

ಜೀವನ ಸಾಗಿಸಿದ್ದೇವೆ. ಈಗ ಅದೇನೋ ಹೊಸ ಕಟ್ಟಡ, ಅಲ್ಲಿಗೆ ಹೋಗಬೇಕು ಅನ್ನೋ ಮಾತು ಕೇಳಿ ದಿಗಿಲಾಗಿದೆ. ಅಲ್ಲಿ ಬಾಡಿಗೆ ಹೆಚ್ಚಿರುತ್ತದೆ. ಜಾಗ ಚಿಕ್ಕದಿದೆ. ಖಂಡಿತವಾಗಿಯೂ ಹೊಂದಾಣಿಕೆ ಕಷ್ಟವಾಗುತ್ತದೆ. ಮುಂದೆ ಏನಾಗುವುದೋ ಗೊತ್ತಿಲ್ಲ?
 -ಎಸ್.ಬಸವರಾಜ್, ವರ್ತಕ

ನಾವು ಸೇಫ್
ಕಾರ್ಪೋರೇಷನ್, ಸಿಂಡಿಕೇಟ್, ಎಸ್‌ಬಿಎಂ ಬ್ಯಾಂಕುಗಳು ಹಾಗೂ ಸರ್ಕಾರಿ ಕಚೇರಿಗಳಿರುವ ಮುಖ್ಯ ಕಟ್ಟಡವನ್ನು ಈಗೇನೂ ಕೆಡಹುವುದಿಲ್ಲ. ಹೀಗಾಗಿ ಈ ಕಟ್ಟಡದಲ್ಲಿರುವ ನಾವಂತೂ ಸದ್ಯಕ್ಕೆ ಸೇಫ್ ಎನ್ನುವ ನೆಮ್ಮದಿ ಇದೆ.
ವೆಂಕಟರೆಡ್ಡಿ, ಕೀರ್ತನಾ ಎಂಟರ್‌ಪ್ರೈಸಿಸ್

ಕಾದು ನೋಡಿ–ಭಯ ಬೇಡ
ಎಲ್ಲಾ ರೀತಿಯ ಅನುಕೂಲಗಳಿರುವ ಒಂದು ಸುಸಜ್ಜಿತ ಸರ್ಕಾರಿ ಸ್ವಾಮ್ಯದ ಮಾಲ್ ಈ ಭಾಗದಲ್ಲಿ ತಲೆ ಎತ್ತಲಿದೆ ಎನ್ನುವುದು ಸಾಮಾನ್ಯವಾಗಿ ಈ ಭಾಗದ ಜನರಲ್ಲಿ ಹರ್ಷವನ್ನು ಹೆಚ್ಚಿಸುವ ಸಂಗತಿಯಾಗಿದೆ. ಅತಿ ಹೆಚ್ಚು ಗಿಡ–ಮರಗಳನ್ನು ಉಳಿಸಿಕೊಂಡಿರುವುದು, ಅತ್ಯುತ್ತಮ ಕ್ರೀಡಾಂಗಣವನ್ನು ಹೊಂದಿರುವುದು, 5 ಲಕ್ಷ ಲೀಟರ್‌ ಮಳೆ ಸಂಗ್ರಹದ ವ್ಯವಸ್ಥೆಯನ್ನು ಹೊಂದಿರುವುದು ಸೇರಿದಂತೆ ಅನೇಕ ವಿಚಾರಗಳಲ್ಲಿ ವಿಶಿಷ್ಟ ಹೆಜ್ಜೆ ಇಟ್ಟಿರುವ ಜಯನಗರಕ್ಕೆ ಇದೊಂದು ಕಿರೀಟ ಸೇರ್ಪಡೆಗೊಳ್ಳಲಿದೆ.

ಆದರೆ ಯಾವುದೇ ಹೊಸ ಬದಲಾವಣೆಯಾದರೂ  ಅಲ್ಲಲ್ಲಿ ಅಸಮಾಧಾನ ಏಳುವುದು ಸಾಮಾನ್ಯ. ಆದರೆ ವರ್ತಕರು ಅನಗತ್ಯ

ಕಳವಳ, ಭಯ ಪಡುವುದು ಬೇಡ. ಯಾರಿಗೂ ಅನ್ಯಾಯ ಆಗದಂತೆ ಮಳಿಗೆಗಳನ್ನು ಹಂಚಲಾಗುತ್ತದೆ. ಅಭಿವೃದ್ಧಿ ಕಾರ್ಯಕ್ಕೆ ಅವರೂ ಸಹಕಾರ ನೀಡಬೇಕು. ಮಾರುಕಟ್ಟೆ ಸ್ಥಾಯಿ ಸಮಿತಿಯೊಂದಿಗೆ ಚರ್ಚಿಸಿ, ಆಯುಕ್ತರ ನೆರವಿನಿಂದ ಈಗಾಗಲೇ ಸೂಕ್ತ ಯೋಜನೆಯನ್ನು ರೂಪಿಸಲಾಗಿದೆ. ಬಾಡಿಗೆಯ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದರೆ ಮಳಿಗೆಗಳ ಹಂಚಿಕೆಯ ವಿಷಯದಲ್ಲಿ ವರ್ತಕರ ಆಶಯವನ್ನೂ ಗಮನದಲ್ಲಿ ಇಟ್ಟುಕೊಳ್ಳಲಾಗಿದೆ.

ಈಗ ಯಾರು ಕೆಳಗಿನ ಮಹಡಿಗಳಲ್ಲಿ ಇದ್ದಾರೆ ಅವರಿಗೆ ಕೆಳಗಡೆಯೇ ಜಾಗ ಹೊಂದಿಸಿಕೊಡಲು ಪ್ರಯತ್ನಿಸಲಾಗುತ್ತದೆ. ಎಲ್ಲಾ ರೀತಿಯ ಸೌಕರ್ಯಗಳಿರುವ, ಅಂದವಾದ, ಅಚ್ಚುಕಟ್ಟಾದ ಮಾಲ್‌ ರೂಪುಗೊಳ್ಳಲಿದೆ ಎನ್ನುವುದಕ್ಕೆ ಎಲ್ಲರೂ ಸಂತೋಷ ಪಡಬೇಕು. ಕಾಮಗಾರಿ ನಡೆಯುವಾಗ ವ್ಯಾಪಾರಕ್ಕೆ, ಗ್ರಾಹಕರಿಗೆ ಸ್ವಲ್ಪ ತೊಂದರೆ ಆಗಬಹುದಷ್ಟೇ. ಇದು ಪೂರ್ಣಗೊಂಡ ಮೇಲೆ ನಿಜವಾದ ಸ್ವರೂಪ ನೋಡಿ ಗ್ರಾಹಕರೂ, ವರ್ತಕರೂ ಖಂಡಿತ  ಖುಷಿ ಪಡುತ್ತಾರೆ. -ಎನ್. ನಾಗರಾಜು, ‌ ಬೈರಸಂದ್ರ (ಜಯನಗರ 1ನೇ ಬ್ಲಾಕ್) ಮಾಜಿ ಕಾರ್ಪೊರೇಟರ್

ಎಲ್ಲೆಲ್ಲಿ ಏನೇನು

*1, 3 ಹಾಗೂ 4ನೇ ಬ್ಲಾಕ್‌ಗಳ ಕೆಳಗಿನ ಎರಡು ಮತ್ತು ಮೇಲಿನ (ಅಪ್ಪರ್‌) ಒಂದು ಬೇಸ್‌ಮೆಂಟ್‌ಗಳಲ್ಲಿ ಕಾರ್ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ.

*2ನೇ ಬ್ಲಾಕ್
ಪೂರ್ತಿಯಾಗಿ ಪಾರ್ಕಿಂಗ್‌

*1ನೇ ಬ್ಲಾಕ್
1,2 ಹಾಗೂ 3ನೇ ಮಹಡಿ: ತರಕಾರಿ ಮಾರುಕಟ್ಟೆ
4 ಹಾಗೂ 5ನೇ ಮಹಡಿ: ಜನತಾ ಬಜಾರ್
6ನೇ ಮಹಡಿ: ಕೆನರಾ ಬ್ಯಾಂಕ್

*3ನೇ ಬ್ಲಾಕ್
ನೆಲ ಮಹಡಿ 1 ಹಾಗೂ 2ನೇ ಮಹಡಿಗಳಲ್ಲಿ ವಾಣಿಜ್ಯ ಮಳಿಗೆಗಳು
3 ಮತ್ತು 4ನೇ ಮಹಡಿ: ಫುಡ್‌ಕೋರ್ಟ್
5 ಮತ್ತು 6ನೇ ಮಹಡಿ ಮೂರು ಸುಸಜ್ಜಿತ, ಆಧುನಿಕ ಶೈಲಿಯ ಥಿಯೇಟರ್‌ಗಳು

*4ನೇ ಬ್ಲಾಕ್
1, 2ನೇ ಮಹಡಿ: ವಾಣಿಜ್ಯ ಮಳಿಗೆಗಳು
3, 4ನೇ ಮಹಡಿ: ಫುಡ್‌ಕೋರ್ಟ್
5ನೇ ಮಹಡಿ: ಸುಸಜ್ಜಿತವಾದ ಸಭಾಂಗಣ  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT