ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವತ್ತೂರು ಕೆರೆಗೆ ಬಾಗಿನ ಅರ್ಪಣೆ

Last Updated 30 ನವೆಂಬರ್ 2015, 11:17 IST
ಅಕ್ಷರ ಗಾತ್ರ

ಕನಕಪುರ: ‘ಗ್ರಾಮಾಂತರ ಕ್ಷೇತ್ರದ ಲೋಕಸಭಾ ಉಪ ಚುನಾವಣೆ ವೇಳೆ ನೀಡಿದ ಮಾತಿನಂತೆ ಮಾವತ್ತೂರು ಕೆರೆಗೆ ನೀರು ತುಂಬಿಸುವ ಭರವಸೆ ಈಡೇರಿಸಲು ಸನ್ನದ್ಧವಾಗಿದ್ದೇವೆ’ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.

ತಾಲ್ಲೂಕಿನ ಎರಡನೇ ಅತಿ ದೊಡ್ಡ ಜಲಾಶಯವಾದ ಮಾವತ್ತೂರು ಕೆರೆಗೆ ಬಾಗಿನ ಸಮರ್ಪಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ  ಮಾತನಾಡಿದರು.

‘ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ಈ ಕ್ಷೇತ್ರವನ್ನು ಪ್ರತಿನಿಧಿಸಿದಾಗ ಮಾವತ್ತೂರು ಕೆರೆಗೆ ಅರ್ಕಾವತಿ ನದಿಯಿಂದ ನೀರು ತುಂಬಿಸುವ ಭರವಸೆ ನೀಡಿ ಚುನಾವಣೆಯಲ್ಲಿ ಗೆದ್ದಿದ್ದರು. ಆದರೆ ನಂತರ ಅವರು ಕೊಟ್ಟ ಮಾತನ್ನು ಈಡೇರಿಸಿಲ್ಲ. ಅವರು ಸಂಕಲ್ಪ ಮಾಡಿದ್ದರೆ ಅರ್ಧಗಂಟೆಯಲ್ಲಿ ಕೆರೆಗೆ ನೀರು ತುಂಬಿಸುವ ಕೆಲಸ ಮಾಡಬಹುದಿತ್ತು’ ಎಂದರು.

‘ದೇವೇಗೌಡರು ರೈತರ ಮಗ, ರೈತರ ಬಗ್ಗೆ ಕಾಳಜಿ ಇದೆ ಎಂದು ಹೇಳುತ್ತಾರೆ. ಆದರೆ ಅವರು ಅಧಿಕಾರದಲ್ಲಿ ಇದ್ದಾಗಲೂಮಾವತ್ತೂರು ಕೆರೆಗೆ ನೀರು ತುಂಬಿಸುವ ಕೆಲಸ ಮಾಡಿಲ್ಲ. ಒಂದು ವೇಳೆ ಅವರೇ ತುಂಬಿಸಿದ್ದರೆ ಇಂದು ನನಗೆ ಈ ಅವಕಾಶ ಸಿಗುತ್ತಿರಲಿಲ್ಲ. ಆ ಒಂದು ಅವಕಾಶವನ್ನು ನಮಗೆ ಕೊಟ್ಟಿದ್ದಕ್ಕೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಹೇಳಿದರು.

ಸಂಸದ ಡಿ.ಕೆ.ಸುರೇಶ್‌ ಮಾತನಾಡಿ, ‘ರೈತರಿಗೆ ನೀರಿನ ವ್ಯವಸ್ಥೆ ಮಾಡಿಕೊಟ್ಟರೆ ಶೇಕಡ 50 ಭಾಗ ಅವರು ಅಭಿವೃದ್ಧಿಯಾದಂತಾಗುತ್ತದೆ. ಅದಕ್ಕಾಗಿ ಜಿಲ್ಲೆಯಲ್ಲಿ ನೀರಿನ ಮೂಲಗಳನ್ನು ಹುಡುಕಿ ಎಲ್ಲಾ ಕೆರೆಗಳಿಗೂ ನೀರು ತುಂಬಿಸುವ ಕೆಲಸ ಮಾಡಲಾಗುತ್ತಿದೆ’ ಎಂದರು.

‘ಮಾವತ್ತೂರು ಕೆರೆಗೆ ಶಾಶ್ವತವಾಗಿ ನೀರು ಹರಿಸಲು ದಕ್ಷಿಣಿ ಪಿನಾಕಿನಿ ನದಿಯಿಂದ ಬನ್ನೇರುಘಟ್ಟದ ಮೂಲಕ ನೀರು ಹರಿಸುವ ಯೋಜನೆ ಸಿದ್ಧತೆ ಮಾಡಿದ್ದು, ಶೀಘ್ರ ನೀರು ಹರಿಯಲಿದೆ. ತಟ್ಟೆಕೆರೆ, ಮರಳವಾಡಿ ನಂತರ ಮಾವತ್ತೂರು ಕೆರೆಗೆ ಬರಲಿದೆ. ಈ ನೀರಿನಿಂದ ಕಸಬಾ ಹೋಬಳಿಯ ಎಲ್ಲಾ ಕೆರೆಗಳು ತುಂಬಲಿವೆ’ ಎಂದರು.

ಡಿ.ಕೆ.ಶಿವಕುಮಾರ್‌ ಮತ್ತು ಡಿ.ಕೆ.ಸುರೇಶ್‌ ಅವರು ಕೆರೆಗೆ ಬಾಗಿನ ಅರ್ಪಿಸಿದರು.  ಕಳಸವನ್ನು ಹೊತ್ತ ಮಹಿಳೆಯರು, ಪೂಜಾ ಕುಣಿತ, ಗಾರುಡಿ, ಡೊಳ್ಳುಕುಣಿತ, ವೀರಭದ್ರನ ವೇಷಧಾರಿಗಳು ಮೆರವಣಿಗೆಗೆ ಸಾಥ್‌ ನೀಡಿದರು.

ಅಭಿನಂದನೆ: ಮಾವತ್ತೂರು ಕೆರೆಗೆ ಏತಾ ನೀರಾವರಿ ಮೂಲಕ ನೀರು ತರಲು ವೃಷಭಾವತಿ ನದಿಯ ದಡದಲ್ಲಿ ಯೋಜನೆಯ ಪಂಪು ಮೋಟರ್‌ ಅಳವಡಿಸಲು ಜಾಗವನ್ನು ನೀಡಿದ ರಾಂಪುರ ನಾಗರಾಜು ಅವರನ್ನು ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಮತ್ತು ಸಂಸದ ಡಿ.ಕೆ.ಸುರೇಶ್‌ ಮತ್ತು ಕೆರೆ ಅಚ್ಚುಕಟ್ಟುದಾರರು ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT