ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವಿನ ಮಡಿಲಲ್ಲಿ ಬಾಡಿದ ಬದುಕು

Last Updated 3 ಸೆಪ್ಟೆಂಬರ್ 2015, 10:24 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಮಾವಿನ ಮಡಿಲು ಎಂದು ಕರೆಯಲ್ಪಡುವ ಶ್ರೀನಿವಾಸಪುರ ತಾಲ್ಲೂಕಿಗೂ, ಬರಕ್ಕೂ ತೀರದ ನಂಟು. ಇಲ್ಲಿನ ಜನರಿಗೆ ಮುಂಗಾರು ಸುರಿದು ಕಣಜ ತುಂಬಿದ ನೆನಪು ಮಾಸಿದೆ.

ಹೌದು, ತಾಲ್ಲೂಕಿನ ಕೆರೆಗಳು ತುಂಬಿ ಸುಮಾರು ಎರಡು ದಶಕ ಉರುಳಿದೆ. ವಾಡಿಕೆ ಮಳೆ ಎಂಬುದು ಕನಸಿನ ಮಾತಾಗಿದೆ. ತಾಲ್ಲೂಕಿನ ಮುಖ್ಯ ಆಹಾರ ಬೆಳೆಯಾದ ರಾಗಿಯು ಮಳೆ ಆಶ್ರಯದಲ್ಲಿ ಬೆಳೆಯುತ್ತಿದ್ದ ಕಾಲ ದೂರವಾಗಿದೆ.

ಕೃಷಿ ಹಾಗೂ ತೋಟಗಾರಿಕಾ ಕ್ಷೇತ್ರ ಸಮಸ್ಯೆಯ ಸುಳಿಗೆ ಸಿಕ್ಕಿ ನಲುಗಿದೆ. ಪರಿಸ್ಥಿತಿ ಹದಗೆಟ್ಟಿರುವುದಕ್ಕೆ ನಿದರ್ಶನವಾಗಿ ತಾಲ್ಲೂಕಿನಲ್ಲಿ ಈಚೆಗೆ ನಾಲ್ವರು ರೈತರು ಸಾಲಬಾಧೆ ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಾಲ್ಲೂಕಿನ ಭೌಗೋಳಿಕ ವಿಸ್ತೀರ್ಣ 85,824 ಹೆಕ್ಟೇರ್‌ ಇದ್ದು, ಇದರಲ್ಲಿ 46,799 ಹೆಕ್ಟೇರ್‌ ಪ್ರದೇಶವನ್ನು ಕೃಷಿಗೆ ಯೋಗ್ಯವೆಂದು ಗುರುತಿಸಲಾಗಿದೆ. ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿಗೆ 914.8 ಕ್ವಿಂಟಲ್‌ ಬಿತ್ತನೆ ಬೀಜ ಹಾಗೂ 2,369 ಮೆಟ್ರಿಕ್‌ ಟನ್‌ ಗೊಬ್ಬರ ಪೂರೈಕೆಯಾಗಿದೆ. ರೈತರಿಗೆ 742.2 ಕ್ವಿಂಟಲ್‌ ಬಿತ್ತನೆ ಬೀಜ ಮತ್ತು 1,282 ಮೆಟ್ರಿಕ್‌ ಟನ್‌ ಗೊಬ್ಬರ ವಿತರಣೆ ಮಾಡಲಾಗಿದೆ.

ತಾಲ್ಲೂಕಿನ ವಾಡಿಕೆ ಮಳೆ ಪ್ರಮಾಣ 751 ಮಿ.ಮೀ ಇದ್ದು, ಪ್ರಸಕ್ತ ಸಾಲಿನಲ್ಲಿ ಆಗಸ್ಟ್‌ ಅಂತ್ಯದವರೆಗೆ 405 ಮಿ.ಮೀ ಮಳೆಯಾಗಿದೆ. ಈ ಬಾರಿಯೂ ತಾಲ್ಲೂಕಿನಲ್ಲಿ ಮಳೆ, ಬೆಳೆ ಪರಿಸ್ಥಿತಿ ಸುಧಾರಿಸಿಲ್ಲ. ಕೆಲವೆಡೆ ಮುಂಗಾರು ಪೂರ್ವದಲ್ಲಿ ಅಕಾಲಿಕ ಮಳೆ ಸುರಿಯಿತು. ಅದು ಇಳೆ ತಣಿಸಿದರೂ, ಹಳ್ಳಕೊಳ್ಳಕ್ಕೆ ನೀರು ತರಲಿಲ್ಲ. ಮಳೆ ಮುಂದಾಯಿತೆಂದು ಬಹುತೇಕ ರೈತರು ಕೃಷಿ ಚಟುವಟಿಕೆಯಿಂದ ದೂರ ಉಳಿದರು. ಆದರೆ, ಆ ಮಳೆ ಮಾವಿನ ಗಿಡ ಜೀವ ಹಿಡಿದುಕೊಳ್ಳಲು ಸಹಕಾರಿಯಾಯಿತು.

ಮತ್ತೆ ಮುಂಗಾರು ತಡವಾಯಿತು. ಸುರಿದ ಅಲ್ಪ ಮಳೆಯನ್ನೇ ನಂಬಿ ಉಳುಮೆ ಮಾಡಿ ರಾಗಿ ಬಿತ್ತಿದವರು, ನಂತರ ಮಳೆಯಾಗದ ಕಾರಣ ಬೆಳೆ ಕಳೆದುಕೊಂಡರು. ಅನ್ನದಾತ ದಿಕ್ಕು ತೋಚದೆ ಕುಳಿತಿದ್ದಾಗ ಆಗಸ್ಟ್‌ನಲ್ಲಿ ತಾಲ್ಲೂಕಿನಾದ್ಯಂತ ಚದುರಿದಂತೆ ಮಳೆಯಾಯಿತು. ಈ ಮಳೆಗೆ ತಾಲ್ಲೂಕಿನ ಐದೂ ಹೋಬಳಿಗಳ ವ್ಯಾಪ್ತಿಯಲ್ಲಿ ರಾಗಿ ಬಿತ್ತನೆ ಮಾಡಲಾಗಿದೆ. ಬೇರೆ ಹೋಬಳಿಗಳಿಗೆ ಹೋಲಿಸಿದರೆ ನೆಲವಂಕಿ ಹೋಬಳಿಯಲ್ಲಿ ಸದ್ಯಕ್ಕೆ ರಾಗಿ ಬೆಳೆ ಕವಲೊಡೆಯುವ ಹಂತದಲ್ಲಿದೆ.

ಉಳಿದಂತೆ ಆಂಧ್ರಪ್ರದೇಶದ ಗಡಿಗೆ ಅಂಟಿಕೊಂಡಿರುವ ರಾಯಲ್ಪಾಡು ಮತ್ತು ಕಸಬಾ ವ್ಯಾಪ್ತಿಯಲ್ಲಿ ತೀರಾ ಕಡಿಮೆ ಮಳೆಯಾಗಿದೆ. ಈಗ ಬಿತ್ತನೆ ಶಾಸ್ತ್ರ ನಡೆಯುತ್ತಿದೆ. ಇನ್ನು ಯಲ್ದೂರು, ರೋಣೂರು ಹಾಗೂ ಶ್ರೀನಿವಾಸಪುರ, ಕಸಬಾ ಹೋಬಳಿಯಲ್ಲಿ ಮಾವು ಪ್ರಧಾನ ಬೆಳೆ. ಮಳೆಯಾದರೂ, ಮಾವಿನ ಸುಗ್ಗಿ ಮುಗಿಯುವವರೆಗೆ ಉಳುಮೆ ಸಾಧ್ಯವಾಗಲಿಲ್ಲ. ಹೀಗಾಗಿ ಈ ಹೋಬಳಿಗಳಲ್ಲಿ ತಡವಾಗಿ ಬಿತ್ತನೆ ಮಾಡಲಾಗಿದೆ. ಮಾವಿನ ತೋಟಗಳಲ್ಲಿ ಅಕ್ಕಡಿ ಬೆಳೆಯಾಗಿ ರಾಗಿ, ಅವರೆ, ಹುರುಳಿ, ಅಲಸಂದೆ ಬಿತ್ತಲಾಗಿದೆ. ಬೆಳೆ ಮೊಳಕೆ ಹೊಡೆಯುವ ಹಾಗೂ ಎಲೆ ಬಿಡುವ ಹಂತದಲ್ಲಿದೆ. ಕೆರೆಗಳಿಗೆ ನೀರು ಬರದ ಕಾರಣ ಗದ್ದೆ ಬಯಲಿನ ಬೇಸಾಯ ನಿಂತು ದಶಕವಾಗಿದೆ.

ತಾಲ್ಲೂಕಿನ 17,125 ಹೆಕ್ಟೇರ್‌ ಪ್ರದೇಶದಲ್ಲಿ ವಾಡಿಕೆಯಂತೆ ಬಿತ್ತನೆಯಾಗಬೇಕಿದ್ದು, ಪ್ರಸ್ತುತ 5,616 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ವಿವಿಧ ದವಸ ಧಾನ್ಯ ಬಿತ್ತಲಾಗಿದೆ. ಆದರೆ, ಇಂದಿನ ಪರಿಸ್ಥಿತಿ ನೋಡಿ ಬರ ನೀಗಿತು ಎಂದು ಹೇಳಲಾಗದು. ಮನೆ ಸಾರಿಸಿದ ಮಾತ್ರಕ್ಕೆ ಹಬ್ಬ ಆಗುವುದಿಲ್ಲ. ಚಲ್ಲಿದ ಕಾಳು ಮೊಳೆತು, ಫಸಲು ಮನೆ ಸೇರಬೇಕಾದರೆ ಮಳೆ ಕೊರತೆ ಎಂಬ ಮಾತು ಕೇಳಬಾರದು. ಈಗ ಸುರಿದಿರುವ ಮಳೆಯ ಪ್ರಮಾಣ ತಾಲ್ಲೂಕಿನಾದ್ಯಂತ ಒಂದೇ ರೀತಿಯಾಗಿಲ್ಲ. ವಾಡಿಕೆಗಿಂತ ಹೆಚ್ಚು ಪ್ರಮಾಣದ ಮಳೆಯಾಗಿದೆ ಎಂದು ಕೃಷಿ ಇಲಾಖೆ ಹೇಳುತ್ತದೆಯಾದರೂ, ಕೃಷಿ ಚಟುವಟಿಕೆ ಕೈಗೊಳ್ಳಲು ಪೂರಕವಾಗಿ ಬಿದ್ದ ಮಳೆ ಕಡಿಮೆ ಎಂದು ಹೇಳಬಹುದು.

ಮೇವಿನ ಸಮಸ್ಯೆ: ತಾಲ್ಲೂಕಿನಲ್ಲಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ಮುಂದುವರಿದಿದೆ. ಎಲ್ಲೂ ಒಣ ಹುಲ್ಲು ದಾಸ್ತಾನು ಇಲ್ಲ. ನೆರೆಯ ಆಂಧ್ರಪ್ರದೇಶದಿಂದ ಭತ್ತದ ಹುಲ್ಲನ್ನು ತರಿಸಿಕೊಳ್ಳಲಾಗಿತ್ತು. ಈಗ ಅದೂ ಸಿಗುತ್ತಿಲ್ಲ. ಗ್ರಾಮೀಣ ಮಹಿಳೆಯರು ಬಯಲಿನ ಮೇಲೆ ಸಂಚರಿಸಿ ಸಿಕ್ಕಿದ ಹುಲ್ಲನ್ನು ವರಾರಿಯಿಂದ ವರೆದು ಸಂಗ್ರಹಿಸಿ ತಂದು ಜಾನುವಾರುಗಳ ಜೀವ ಉಳಿಸುತ್ತಿದ್ದಾರೆ. ತಾಲ್ಲೂಕಿನಲ್ಲಿ 56,015 ಜಾನುವಾರುಗಳಿದ್ದು, 28,482 ಮೆಟ್ರಿಕ್‌ ಟನ್‌ ಮೇವು ದಾಸ್ತಾನು ಇದೆ. ಈ ಮೇವು ಸುಮಾರು ಎರಡು ತಿಂಗಳವರೆಗೆ ಸಾಕಾಗುತ್ತದೆ.

ನೀರಿನ ಬವಣೆ: ತಾಲ್ಲೂಕಿನ 347 ಗ್ರಾಮಗಳ ಪೈಕಿ 69 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಜನ ಹಾಗೂ ಜಾನುವಾರುಗಳಿಗೆ ನೀರಿನ ಬವಣೆ ಏಕಪ್ರಕಾರವಾಗಿದೆ. ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕೊರೆದಿರುವ ಕೊಳವೆ ಬಾವಿಗಳು ಬತ್ತಿವೆ. ಹೀಗಾಗಿ 71 ಹಳ್ಳಿಗಳಿಗೆ ಟ್ಯಾಂಕರ್‌ ಮತ್ತು ಖಾಸಗಿ ಕೊಳವೆ ಬಾವಿಗಳ ಮೂಲಕ ದಿನಕ್ಕೆ 169 ಟ್ರಿಪ್‌ಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ಪಟ್ಟಣದ 16 ವಾರ್ಡ್‌ಗಳಿಗೆ ಟ್ಯಾಂಕರ್‌ಗಳಿಂದ ದಿನಕ್ಕೆ 75 ಟ್ರಿಪ್‌ ನೀರು ಪೂರೈಸಲಾಗುತ್ತಿದೆ. ಆದರೆ, ಕಳೆದ ಒಂದು ತಿಂಗಳಿನಿಂದ ವಿದ್ಯುತ್‌ ಅಭಾವದಿಂದ ನೀರಿನ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ. ನೀರು ಪೂರೈಕೆಗೆ ಸರ್ಕಾರದ ಪ್ರಯತ್ನ ಮುಂದುವರೆದಿದ್ದರೂ, ಪ್ರಕೃತಿ ಸಹಕರಿಸುತ್ತಿಲ್ಲ.

ಅಂತರ್ಜಲ ಕೊರತೆ: ತಾಲ್ಲೂಕಿನಲ್ಲಿ ಅಂತರ್ಜಲ ಕೊರತೆ ಪರಿಣಾಮವಾಗಿ ಮಾವಿನ ಮರಗಳು ಒಣಗುತ್ತಿವೆ. ಈಗಾಗಲೆ ನೂರಾರು ಹೆಕ್ಟೇರ್‌ ಪ್ರದೇಶದಲ್ಲಿ ಒಣಗಿದ ಮರಗಳನ್ನು ಕಡಿಯಲಾಗಿದೆ. ಕೊಳವೆ ಬಾವಿಗಳಲ್ಲಿ ನೀರು ಬತ್ತಿದ ಪರಿಣಾಮ ಟೊಮೆಟೊ ಮತ್ತಿತರ ತೋಟದ ಬೆಳೆಗಳು ಒಣಗಿ ರೈತರು ನಷ್ಟ ಅನುಭವಿಸಿದ್ದಾರೆ. ಈ ಪರಿಸ್ಥಿತಿ ಮುಂದುವರಿದಿದೆ. ಒಟ್ಟಾರೆ ತಾಲ್ಲೂಕಿನಲ್ಲಿ ಕೃಷಿಯು ಹಿಂದಿನ ವರ್ಷದಂತೆ ಈ ವರ್ಷವೂ ತಾಳ ತಪ್ಪಿದೆ. ಬರ ತಾಲ್ಲೂಕಿನ ಬೆನ್ನಿಗೆ ಅಂಟಿಕೊಂಡಿದೆ.

ಕೃಷಿ ಹೊಂಡ
ಕಳೆದ ಸಾಲಿನಲ್ಲಿ ಬೆಳೆ ನಷ್ಟ ಅನುಭವಿಸಿದ್ದ ತಾಲ್ಲೂಕಿನ 11,242 ರೈತರಿಗೆ ಕೃಷಿ ಇಲಾಖೆಯಿಂದ ₨ 3.71 ಕೋಟಿ ಪರಿಹಾರ ನೀಡಲಾಗಿದೆ. ಈಗ ಮಳೆ ನೀರು ಸಂಗ್ರಹಿಸುವ ದೃಷ್ಟಿಯಿಂದ ಕೃಷಿ ಹೊಂಡ ನಿರ್ಮಿಸುವ ಸಾಮಾನ್ಯ ವರ್ಗದ ರೈತರಿಗೆ ಶೇ 80 ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ ಶೇ 90ರಷ್ಟು ಸಹಾಯಧನ ನೀಡಲಾಗುತ್ತಿದೆ.
–ರವಿ,
ಕೃಷಿ ಇಲಾಖೆ ಅಧಿಕಾರಿ

ಬರ ಕಿತ್ತು ತಿನ್ನುತ್ತಿದೆ. ಹಳ್ಳಿಗಾಡು ಆರ್ಥಿಕವಾಗಿ ಕುಸಿದಿದೆ. ಸರ್ಕಾರ ರೈತರ ನೆರವಿಗೆ ಬರಬೇಕು. ಬರ ಪರಿಹಾರ ಕಾರ್ಯಕ್ರಮ ಕೈಗೊಳ್ಳಬೇಕು.
ಮುರಳಿ,
ಕೃಷಿಕ, ಕಲ್ಲೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT