ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸದ ಕಲೆ

Last Updated 21 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಬಾಲಿವುಡ್ ನಟ ಸಲ್ಮಾನ್ ಖಾನ್ 2002ರಲ್ಲಿ ಅಪಘಾತ ಪ್ರಕರಣದಲ್ಲಿ ನ್ಯಾಯಾಲಯದ ಕಟಕಟೆಯಲ್ಲಿ ನಿಂತಾಗ ಕನ್ನಡ ಚಿತ್ರರಸಿಕರು ನೆನಪಿಸಿಕೊಂಡಿದ್ದು ಶಂಕರ್‌ನಾಗ್ ನಿರ್ದೇಶನದ ‘ಆ್ಯಕ್ಸಿಡೆಂಟ್’ ಸಿನಿಮಾ. ಅಷ್ಟೇ ಅಲ್ಲ, ಯಾವುದೇ ಸೆಲೆಬ್ರಿಟಿ ಇಲ್ಲವೇ ರಾಜಕಾರಣಿಗಳ ಮಕ್ಕಳು ಎಸಗುವ ಅಪಘಾತ ಪ್ರಕರಣಗಳನ್ನು ಕೇಳಿದೊಡನೆ ನೆನಪಿಗೆ ಬರುವುದು ಈ ಚಿತ್ರವೇ. ಅಂದಹಾಗೆ, ‘ಆ್ಯಕ್ಸಿಡೆಂಟ್’ (1984) ತೆರೆ ಕಂಡು ಮೂವತ್ತು ವರ್ಷಗಳಾದವು. ಪರಿಣಾಮದ ದೃಷ್ಟಿಯಿಂದ ಮಾತ್ರ ಈ ಸಿನಿಮಾ ನವನವೀನ ಎನ್ನುವಂತೆ ಮತ್ತೆ ಮತ್ತೆ ನೆನಪಾಗುತ್ತಲೇ ಇದೆ.

ಎಂಟು ರಾಜ್ಯ ಪ್ರಶಸ್ತಿ ಮತ್ತು ಒಂದು ರಾಷ್ಟ್ರೀಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ಅಗ್ಗಳಿಕೆ ಈ ಚಿತ್ರದ್ದು. ಅಪಘಾತ ಪ್ರಕರಣವೊಂದರ ಮೂಲಕ– ವರ್ಗ ಸಂಘರ್ಷ, ಅಸಮಾನತೆ, ಅಸಹಾಯಕರ ಆಕ್ರಂದನ, ಬಲಿಷ್ಠ ರಾಜಕಾರಣದ ಸ್ವ ಹಿತಾಸಕ್ತಿಯನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದು ‘ಆ್ಯಕ್ಸಿಡೆಂಟ್’ ಚಿತ್ರದ ವಿಶೇಷ. ಸಾಮಾಜಿಕ ಜಾಡ್ಯಗಳ ವಿರುದ್ಧ ಸದಾ ಕಾಲ ಹೋರಾಟಕ್ಕೆ ತುಡಿಯುವ ಜನರು ಇರುವ ಆಶಾಭಾವವನ್ನೂ ಸಿನಿಮಾ ಚಿತ್ರಿಸಿತ್ತು.

‘ಆ್ಯಕ್ಸಿಡೆಂಟ್‌’ ಚಿತ್ರದ ಕಥೆ ವಸಂತ ಮೊಕಾಶಿ ಅವರದ್ದು. ಈ ಕಥೆಯನ್ನು ಚಿತ್ರರೂಪಕ್ಕೆ ಒಗ್ಗಿಸಿದ ಶಂಕರ್‌ನಾಗ್‌ ತಮ್ಮ ಸ್ವಂತ ಬ್ಯಾನರ್‌ನಡಿ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದರು. ಅವರ ಪ್ರಯತ್ನಕ್ಕೆ ಕೈ ಜೋಡಿಸಿದ್ದು ಪತ್ನಿ ಅರುಂಧತಿ ನಾಗ್  ಮತ್ತು ಸಹೋದರ ಅನಂತ್‌ನಾಗ್. ಚಿತ್ರದಲ್ಲಿ ಶಂಕರ್‌ನಾಗ್ ಪತ್ರಕರ್ತನಾಗಿ ಕಾಣಿಸಿಕೊಂಡಿದ್ದರೆ ಅನಂತ್‌ನಾಗ್ ತನ್ನ ಮಗನ ಅನಾಚಾರ ರಕ್ಷಿಸಲು ದುರ್ಬಲನನ್ನು ಬಲಿಪಶುವಾಗಿಸುವ ರಾಜಕಾರಣಿಯ ಪಾತ್ರದಲ್ಲಿದ್ದರು. ಈ ಎರಡು ಪಾತ್ರಗಳು ಒಳಿತು–ಕೆಡುಕಿನ ಎರಡು ಧ್ರುವಗಳಾಗಿದ್ದವು. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಸುಳಿ–ಒಳ ಸುಳಿಗಳನ್ನು ಹೇಳುತ್ತಲೇ ಮಾಧ್ಯಮಗಳ ವಿಶ್ಲೇಷಣೆಯೂ ಚಿತ್ರದಲ್ಲಿತ್ತು.

ಎಂಬತ್ತರ ದಶಕ ವರ್ಗ ಸಂಘರ್ಷದ ಹೋರಾಟಗಳ ಕಾವು ಪ್ರಬಲವಾಗಿದ್ದ ಮತ್ತು ತಳ ಸಮುದಾಯಗಳಲ್ಲಿ ರಾಜಕೀಯ ಪ್ರಜ್ಞೆ ತೀವ್ರವಾಗಿದ್ದ ಅವಧಿ. ‘ನಾವು ದುಡಿಬೇಕು; ಇವರು ಗಾಂಜಾ ಹೊಡೀಬೇಕು, ದೇವಸ್ಥಾನದೊಳಗೆ ಇವರನ್ನ ಬಿಟ್ಕೋಬೇಡ್ರೋ’ ಎನ್ನುವ ಶ್ರಮಿಕ ವರ್ಗದ ಸಿಟ್ಟು, ಆಕ್ರೋಶ ಚಿತ್ರದಲ್ಲಿ ಎದ್ದು ಕಾಣುವುದರ ಜೊತೆಗೆ, ‘ಹಿಂಸೆ, ಕೊಲೆಗಳೇ ಎಲ್ಲ ಸಮಸ್ಯೆಗಳಿಗೂ ಪರಿಹಾರವಾಗುವುದಿಲ್ಲ. ಮಹಾತ್ಮ ಗಾಂಧಿ, ಜಾನ್ ಎಫ್. ಕೆನಡಿ, ಮಾರ್ಟಿನ್ ಲೂಥರ್ ಕಿಂಗ್‌, ಇಂದಿರಾಗಾಂಧಿ ಇವರೆಲ್ಲ ತಮ್ಮ ಧ್ಯೇಯ ಮತ್ತು ದೇಶಕ್ಕಾಗಿ ಹುತಾತ್ಮರಾದವರು. ಅರ್ಥವಿಲ್ಲದ ಕೊಲೆಗೆ ಬಲಿಯಾದರು. ಆದರೂ ವ್ಯವಸ್ಥೆಯಲ್ಲಿ ಕೊಳಕು, ಭ್ರಷ್ಟಾಚಾರ ಹಾಗೇ ಉಳಿಯಿತು’ ಎನ್ನುವ ಜಿಜ್ಞಾಸೆಯೂ ಸಿನಿಮಾದಲ್ಲಿತ್ತು. ನೋಡುಗರನ್ನು ಹೊಸ ಯೋಚನೆಗೆ ಹಚ್ಚುವ ಗುಣ ಸಿನಿಮಾದ್ದಾಗಿತ್ತು. ಅಶೋಕ್ ಮಂದಣ್ಣ, ಶ್ರೀನಿವಾಸ್ ಪ್ರಭು ಮತ್ತಿತರ ರಂಗಭೂಮಿ ಹಿನ್ನೆಲೆಯ ಕಲಾವಿದರು ತಾರಾಗಣದಲ್ಲಿ ಇದ್ದುದು ಸಿನಿಮಾದ ಮತ್ತೊಂದು ವಿಶೇಷ.

‘ಆ್ಯಕ್ಸಿಡೆಂಟ್‌’ ಸಿನಿಮಾ ಇನ್ನೇನು ತೆರೆಗೆ ಬರುತ್ತದೆ ಎನ್ನುವ ಸಂದರ್ಭದಲ್ಲಿ ಇಂದಿರಾಗಾಂಧಿ (ಅಕ್ಟೋಬರ್ 31) ಅವರ ಹತ್ಯೆ ನಡೆಯಿತು. ಚಿತ್ರದಲ್ಲಿ ಕೆಲವೊಂದು ಅಂಶಗಳನ್ನು ಆಗ ಬದಲಿಸುವ ಅನಿವಾರ್ಯ ಎದುರಾಯಿತು. ಶಂಕರ್‌ನಾಗ್‌ ಅವರು ಎರಡೇ ದಿನಗಳಲ್ಲಿ ಕ್ಲೈಮ್ಸಾಕ್ ಬದಲಿಸಿದರು.
ಕನ್ನಡ ಸಿನಿಮಾ ಒಳಗೊಂಡ ಅತ್ಯುತ್ತಮ ರಾಜಕಾರಣ ಕಥನಗಳಲ್ಲಿ ‘ಆ್ಯಕ್ಸಿಡೆಂಟ್‌’ ಮುಖ್ಯವಾದುದು. ತೆರೆಕಂಡು ಮೂವತ್ತು ವರ್ಷಗಳಾದರೂ ಅದು ಹೊಸತೆನ್ನುವಂತೆ ಮತ್ತೆ ಮತ್ತೆ ನೆನಪಾಗುತ್ತಿರುತ್ತದೆ.

ನೃತ್ಯ ಮಾಡಲಿಲ್ಲ...
ಎನ್‌ಎಸ್‌ಡಿಯಲ್ಲಿ ಆಗ ತಾನೇ ಕಲಿಕೆ ಮುಗಿಸಿಕೊಂಡು ಬಂದಿದ್ದೆ. ಜಿ.ವಿ. ಅಯ್ಯರ್ ಅವರ ‘ಆದಿಶಂಕರ’ ಚಿತ್ರದಲ್ಲಿ ನಟಿಸಿದ್ದೆ. ಆದರೆ ಮುಖ್ಯಪಾತ್ರ ಸಿಕ್ಕಿದ್ದು ‘ಆ್ಯಕ್ಸಿಡೆಂಟ್‌’ ಚಿತ್ರದಲ್ಲಿ. ಡ್ರಗ್ ವ್ಯಸನಿಯ ಪಾತ್ರ ನನ್ನದು. ರಂಗಭೂಮಿಯಲ್ಲಿ ಪೂರ್ಣವಾಗಿ ತೊಡಗಿದ್ದ ನನಗೆ ಸಿನಿಮಾ ಎಂದರೆ ಒಂದು ರೀತಿಯ ಮಡಿವಂತಿಕೆ ಇತ್ತು. ಶಂಕರ್ ಕರೆದು ಪಾತ್ರ ಕೊಟ್ಟ. ಆ್ಯಕ್ಸಿಡೆಂಟ್ ಮಾಡಿದ್ದು, ರಾತ್ರಿ 12 ಗಂಟೆಯಲ್ಲಿ ಎಂ.ಜಿ. ರಸ್ತೆ ಸುತ್ತಿದ್ದು ಸೇರಿದಂತೆ ಇಡೀ ಚಿತ್ರವೇ ನನಗೆ ಒಳ್ಳೆಯ ಅನುಭವ ಕೊಟ್ಟಿತ್ತು. ಕಥೆಯ ಪ್ರಕಾರ ನಾನು ಒಳ್ಳೆಯ ಡಾನ್ಸರ್. ಆದರೆ ನನಗೆ ನೃತ್ಯವೇ ಬರುತ್ತಿರಲಿಲ್ಲ. ಅದಕ್ಕಾಗಿ ಡಾನ್ಸ್ ಕಲಿಯಬೇಕು ಎಂದು ಹೊರಟರೂ ಪ್ರಯೋಜನವಾಗಲಿಲ್ಲ. ಈ ಒಂದು ವಿಚಾರದಲ್ಲಿ ಶಂಕರ್‌ಗೆ ನಿರಾಶೆ ಮಾಡಿದೆ ಎಂದು ಹೇಳಬಹುದು.
-ಶ್ರೀನಿವಾಸ ಪ್ರಭು

‘ಆ್ಯಕ್ಸಿಡೆಂಟ್‌’ ದುಡ್ಡು ಮಾಡಲಿಲ್ಲ!

ನಾನು ಕಲಾತ್ಮಕ ಚಿತ್ರಗಳ ಹಿನ್ನೆಲೆಯಿಂದ ಬಂದವನು. ಶಂಕರ್ ಕೂಡ ಕಲಾತ್ಮಕ ಚಿತ್ರ ‘ಒಂದಾನೊಂದು ಕಾಲ’ದಿಂದ ಬಂದವನು. ನಾವು ಚಿತ್ರರಂಗದಲ್ಲಿ ದೃಢವಾಗಲು ಕಮರ್ಷಿಯಲ್ ಚಿತ್ರ ಮಾಡಬೇಕಾಗಿತ್ತು. ಕಲಾತ್ಮಕ ಹಾದಿಯಲ್ಲಿಯೇ ವ್ಯಾಪಾರೀ ಚಿತ್ರ ಮಾಡುವ ಆಲೋಚನೆಯ ಫಲ ‘ಆ್ಯಕ್ಸಿಡೆಂಟ್’. ಈ ಮುಂಚೆ ನಮ್ಮದೇ ಬ್ಯಾನರ್‌ನಲ್ಲಿ ‘ಮಿಂಚಿನ ಓಟ’ ನಿರ್ಮಿಸಿದ್ದೆವು. 1983–84ರಲ್ಲಿ ರಾಜಕಾರಣ ಬಿಗಡಾಯಿಸುತ್ತಿತ್ತು. ನಿರೀಕ್ಷೆಗಳು ಹುಸಿಯಾಗಿ ಜನ ಸಿಟ್ಟಾಗಿದ್ದರು. ಭ್ರಷ್ಟಾಚಾರ ಹೆಚ್ಚಿತ್ತು. ಆಗ ಸಾಮಾಜಿಕ, ರಾಜಕೀಯ ವಸ್ತು ಆಧರಿಸಿ ಕಮರ್ಷಿಯಲ್ ಸಿನಿಮಾ ಮಾಡಬೇಕಿತ್ತು. ವಸಂತ ಮೊಕಾಶಿ ಒಳ್ಳೆಯ ಕಥೆ ತಂದರು. ಅದಾಗಲೇ ಯು.ಆರ್‌. ಅನಂತಮೂರ್ತಿ ಅವರ ‘ಬರ’ ಸಿನಿಮಾದಲ್ಲಿ ನಾನು ನಟಿಸಿದ್ದೆ.

‘ಆ್ಯಕ್ಸಿಡೆಂಟ್‌’ ಸಿನಿಮಾ ಮಾಡುವಾಗಲೇ ಬಾಕ್ಸಾಫೀಸಿನಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕುತ್ತದೆ ಎನ್ನುವ ಸ್ಥಿತಿ ಇತ್ತು. ಆದರೆ ಚಿತ್ರ ತೆರೆಗೆ ಬಂದ ನಂತರ ನಿರೀಕ್ಷೆ ಹುಸಿಯಾಯಿತು. ಮೊದಲ ವಾರದ ಗಳಿಕೆ ಉತ್ತಮವಾಗಿತ್ತು, ಎರಡನೇ ವಾರಕ್ಕೆ ಚಿತ್ರದ ಕೊನೆ. ಪ್ರಶಸ್ತಿಗಳಿಂದ ಹಣ ಸಿಕ್ಕಿದ್ದರಿಂದ ಸರಿಹೋಯಿತು. ಸೆನ್ಸಾರ್ ಮಂಡಳಿಯಿಂದ ಪ್ರಮಾಣ ಪತ್ರ ಪಡೆದು ಚಿತ್ರ ಬಿಡುಗಡೆ ಮಾಡಬೇಕು ಎನ್ನುವ ವೇಳೆಗೆ ಇಂದಿರಾಗಾಂಧಿ ಹತ್ಯೆ ನಡೆಯಿತು. ಕೆಲವಷ್ಟು ಸನ್ನಿವೇಶಗಳು ಕಾಕತಾಳೀಯ ಎನ್ನುವಂತೆ ಇದ್ದವು. ಆ ಕಾರಣಕ್ಕೆ ಸ್ವಲ್ಪ ಬದಲಾವಣೆ ಮಾಡಿಕೊಂಡೆವು.
-ಅನಂತನಾಗ್‌

ಪೊಲೀಸ್! ಪೊಲೀಸ್‌!

* ಶೇಷಾದ್ರಿಪುರಂ ಸಮೀಪ ರಾತ್ರಿ ವೇಳೆಯಲ್ಲಿ ಅಪಘಾತದ ದೃಶ್ಯ ಚಿತ್ರೀಕರಿಸಲಾಯಿತು. ಬೆಳಿಗ್ಗೆ ಅದೇ ಸ್ಥಳದಲ್ಲಿ ಮಹಜರು ನಡೆಯಬೇಕಿತ್ತು. ಜನಸಂದಣಿಯ ಈ ಸ್ಥಳದಲ್ಲಿ ಚಿತ್ರೀಕರಣಕ್ಕೆ ಪೊಲೀಸರ ಅನುಮತಿ ಸಿಗಲಿಲ್ಲ. ಅಂತಿಮವಾಗಿ ಬೆಳಿಗ್ಗೆ 7ರಿಂದ 9ರೊಳಗೆ ಪೂರ್ಣಗೊಳಿಸುವ ಷರತ್ತು ಹಾಕಿದರು. ಸಮೀಪದ ರೈಲೈ ಟ್ರಾಕ್‌ನಲ್ಲಿ ಬೆಳಿಗ್ಗೆಯೇ ನಾಲ್ಕಾರು ರೈಲುಗಳು ಸಾಗುತ್ತವೆ. ಕಂಟೋನ್ಮೆಂಟ್ ಬಳಿಯ ಕಸಾಯಿಖಾನೆಯಿಂದ ದನಗಳ ಕಣ್ಣುಗುಡ್ಡೆ ತಂದು, ಮೇಕಪ್ ರಾಮಕೃಷ್ಣ ಅವರು ನೈಜ ಎನ್ನುವಂತೆ ಆ ಸನ್ನಿವೇಶ ಬರಲು ಪ್ರಯತ್ನಿಸಿದ್ದರು. ಸ್ವಲ್ಪ ಜನಜಂಗುಳಿಯೂ ಇತ್ತು. ರೈಲಿನಲ್ಲಿ ಸಾಗುವವರು ಈ ಸನ್ನಿವೇಶ ನೋಡಿ ದೊಡ್ಡ ಅಪಘಾತ ಸಂಭವಿಸಿದೆ; ಹಲವರು ಸತ್ತಿದ್ದಾರೆ ಎಂದು  ಮುಂದಿನ ನಿಲ್ದಾಣಗಳಿಗೆ ಸುದ್ದಿಕೊಟ್ಟರು. ಪೊಲೀಸರಿಗೆ, ಪ್ರೆಸ್‌ನವರಿಗೂ ಸುದ್ದಿ ತಲುಪಿಬಿಟ್ಟಿತ್ತು. ಏನೋ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತರಾತುರಿಯಲ್ಲಿ ಚಿತ್ರೀಕರಣ ಸ್ಥಳಕ್ಕೆ ಬಂದಿದ್ದರು.
* ನಾನು ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದೆ. ಅಲ್ಲದೆ ಸಿನಿಮಾದ ಸಹಾಯಕ ನಿರ್ದೇಶಕನೂ ಆಗಿದ್ದೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಪೊಲೀಸ್ ಯೂನಿಫಾರ್ಮ್‌ನಲ್ಲಿ ಇರುತ್ತಿದ್ದೆ. ಶೂಟಿಂಗ್‌ ಸಂದರ್ಭದಲ್ಲಿ ಜನರು ನಿಜವಾದ ಪೊಲೀಸ್ ಎಂದು ನನಗೆ ಗೌರವ ಕೊಡುತ್ತಿದ್ದರು.
* ಸೂರ್ಯೋದಯದ ಮೂಡ್‌ ಒಂದು ಸಿನಿಮಾಕ್ಕೆ ಬೇಕಾಗಿತ್ತು. ಆದರೆ ಹವಾಮಾನ ಚೆನ್ನಾಗಿರಲಿಲ್ಲ. ಶಂಕರ್‌ನಾಗ್ ತಮ್ಮ ಮನೆಯಲ್ಲಿಯೇ ಬಲ್ಬ್‌ ಬಳಸಿ ಸೂರ್ಯೋದಯದ ಸನ್ನಿವೇಶವನ್ನು ಸೃಷ್ಟಿಸಿದರು.
– ರಮೇಶ್ ಭಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT