ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ್‌ ಗೆಳೆಯರು

Last Updated 29 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬದುಕಿನಲ್ಲಿ ಅನುಭವಿಸಿದ ಮುಜುಗರ, ಕೀಳರಿಮೆ, ಹಿನ್ನಡೆ, ಅಪಹಾಸ್ಯಗಳು ಸಾಧನೆಗೆ ನೆರವಾಗುತ್ತದೆ ಎಂಬುದಕ್ಕೆ ಉದಾಹರಣೆಯಾಗಿದ್ದಾರೆ ಹುಬ್ಬಳ್ಳಿಯ ನಾಲ್ವರು ಯುವಕರು. ತಮ್ಮ ಜೀವನದಲ್ಲಿ ಘಟಿಸಿದ ಕಹಿಗಳಿಗೆ ಬೇಸತ್ತು ಹೋಗದೆ ಅವನ್ನೇ ಸವಾಲಾಗಿ ತೆಗೆದುಕೊಂಡು ಸ್ನಾತಕೋತ್ತರ ಪದವಿ ಪಡೆದ ಮುಗಿಸಿದ ಈ ಯುವಕರು ವರ್ಷದ ಹಿಂದೆ ‘4 ಮಾಸ್‌’ ಎಂಬ ಸಂಸ್ಥೆ ಕಟ್ಟಿದ್ದಾರೆ.

ಓದುವಾಗ, ಕೆಲಸ ಗಿಟ್ಟಿಸುವಾಗ ತಮಗಾದ ಕಹಿ ಅನುಭವಗಳನ್ನು ಹಳ್ಳಿಗಾಡಿನ ಯಾವ ಹುಡುಗರೂ ಅನುಭವಿಸಬಾರದು. ಅವರಲ್ಲಿ ಆತ್ಮವಿಶ್ವಾಸ ಹೆಚ್ಚಬೇಕು. ಹೀಗಾಗಲು ವಿದ್ಯಾರ್ಥಿ ಜೀವನದಲ್ಲಿಯೇ ಅವರನ್ನು ಸರ್ವರೀತಿಯಲ್ಲಿಯೂ ಸಜ್ಜುಗೊಳಿಸಬೇಕು ಎಂಬುದನ್ನು ಮನಗಂಡು ಕಂಪೆನಿಗೆ ಶ್ರೀಕಾರ ಹಾಕಿದ್ದಾರೆ ಮಯೂರ್‌ ಹಟ್ವಾರ್‌, ಅಮೋಘ್‌ ಗುಂಡುರ್‌, ಸುಮಿತ್‌ ಬೇಕಲ್‌ ಮತ್ತು ಸುನಿಲ್‌ ಕುಮಾರ್‌ ಬೊಬ್ಬ.

ಆಕ್ಸ್‌ಫರ್ಡ್‌ ಕಾಲೇಜಿನಲ್ಲಿ ಬಿಬಿಎಂ ಓದುವಾಗ ಸ್ನೇಹಿತರಾದ ಇವರಿಗೆ ಆಗಿನಿಂದಲೇ ಕಂಪೆನಿ ಆರಂಭಿಸುವ ಆಸೆ ಇತ್ತು. ಆದರೆ ಪದವಿ ಮುಗಿದ ನಂತರ ಸ್ನಾತಕೋತ್ತರ ಪದವಿಗಾಗಿ ಎರಡು ವರ್ಷಗಳ ಕಾಲ ನಾಲ್ವರು ಬೇರೆಯಾದರು. ಸುಮಿತ್‌ ಬೆಂಗಳೂರಿನ ಕ್ರೈಸ್ಟ್‌ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಪಡೆದರೆ, ಇನ್ನುಳಿದ ಮೂವರು ಹುಬ್ಬಳ್ಳಿಯಲ್ಲಿ ಎಂಬಿಎ ಪೂರೈಸಿದರು. ಶಿಕ್ಷಣ ಮುಗಿದ ಬಳಿಕ ಮೂರು ವರ್ಷಗಳ ಅವಧಿ ವಿವಿಧ ಕಂಪೆನಿಗಳಲ್ಲಿ ದುಡಿಯುತ್ತಿದ್ದ ಇವರು ಅಲ್ಲಿನ ಅನುಭವಗಳನ್ನೇ ಆಧಾರವಾಗಿಟ್ಟುಕೊಂಡು ಹೊಸ ಸಂಸ್ಥೆ ಕಟ್ಟಿದರು. ನಾಲ್ವರು ಪಾಲುದಾರರ ಹೆಸರಿನ ಮೊದಲ ಅಕ್ಷರ ತೆಗೆದು ‘ಮಾಸ್‌’ ಹುಟ್ಟಿಕೊಂಡಿತು.

ಶೂನ್ಯ ಬಂಡವಾಳ!


ಕಂಪೆನಿ ಆರಂಭಿಸಲು ಅವರು ನಯಾ ಪೈಸೆ ಖರ್ಚು ಮಾಡಿಲ್ಲ. ಹುಬ್ಬಳ್ಳಿಯ ಮಯೂರ್‌ ಮನೆಯ ಕೋಣೆಯೊಂದರಲ್ಲಿ 2013ರ ಜೂನ್‌ನಲ್ಲಿ ಕಂಪೆನಿ ಆರಂಭವಾಯಿತು. ದುಡಿಯುತ್ತಲೇ ನಾಲ್ವರು ತಮ್ಮ ಸಂಬಳದಲ್ಲಿ ಉಳಿದ ಹಣವನ್ನು ಕಚೇರಿಗೆ ವಿನಿಯೋಗಿಸಿ ದ್ದಾರೆ. ಇದೀಗ ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ಕಂಪೆನಿ ಸ್ವಂತ ಕಚೇರಿ ಇದ್ದು, ಆರು ಮಂದಿ ಸ್ನೇಹಿತರಿಗೂ ಉದ್ಯೋಗ ನೀಡಿದ್ದಾರೆ.

ಭಾವಿ ಎಂಜಿನಿಯರ್‌ಗಳಿಗೆ ತರಬೇತಿ
ರಾಷ್ಟ್ರೀಯ ಸಾಫ್ಟ್‌ವೇರ್‌ ಮತ್ತು ಸೇವಾ ಸಂಸ್ಥೆಯ ಆಶ್ರಯದಲ್ಲಿ ಸದ್ಯ ರಾಜ್ಯ ಸರ್ಕಾರದ 9 ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳ ಕಂಪ್ಯೂಟರ್‌ ಸೈನ್ಸ್‌ ಮತ್ತು ಎಲೆಕ್ಟ್ರಾನಿಕ್ಸ್‌ ಹಾಗೂ ಕಮ್ಯುನಿಕೇಶನ್‌ ವಿದ್ಯಾರ್ಥಿಗಳಿಗೆ ಸೂಕ್ಷ್ಮ ಕೌಶಲದ ಕುರಿತು ಈ ತಂಡ ತರಬೇತಿ ನೀಡುತ್ತಿದೆ.  ವಿದ್ಯಾರ್ಥಿಗಳಿಗೆ ಉದ್ಯೋಗದ ಅವಶ್ಯಕತೆಯನ್ನು ತಿಳಿಸುವುದರ ಜೊತೆಗೆ ಉದ್ಯಮಗಳ ಸಂಪರ್ಕ ಕಲ್ಪಿಸುವ ಈ ಸಂಸ್ಥೆ ಉತ್ತರ ಕರ್ನಾಟಕದ ಮಟ್ಟಿಗೆ ಮೊದಲನೆಯದು.

ಜಾಗತಿಕ ಮಾರುಕಟ್ಟೆಯಲ್ಲಿ ಕೆಲಸಗಾರ ಎಷ್ಟೇ ಪ್ರತಿಭಾವಂತನಾದರೂ ಸಾಮಾನ್ಯ ಕೌಶಲವಿಲ್ಲದೇ ಇದ್ದರೆ ಕಂಪೆನಿಗಳು ಅವರನ್ನು ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ. ಇಂದಿನ ದಿನಮಾನದಲ್ಲಿ ಕಂಪೆನಿಗಳು ಅಭ್ಯರ್ಥಿಯ ಸಂವಹನ, ಕಂಪೆನಿ ಮುನ್ನಡೆಸುವ ಛಾತಿ, ತಂಡದ ಜೊತೆ ಕೆಲಸ ನಿರ್ವಹಿಸಲು ಬೇಕಾದ ಸಾಮರ್ಥ್ಯ, ಆಪತ್ತಿನ ಸಮಯ ನಿರ್ವಹಣೆ ಸೇರಿದಂತೆ ಹಲವು ವಿಷಯಗಳಲ್ಲಿ ಆತನ ಅರ್ಹತೆ ಪರಿಶೀಲಿಸುತ್ತವೆ.

‘ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ನಗರ ಪ್ರದೇಶ ವಿದ್ಯಾರ್ಥಿಗಳಿಗೆ ಹೋಲಿಕೆ ಮಾಡಿದರೆ ಸಾಕಷ್ಟು ಪ್ರತಿಭಾವಂತರಿದ್ದಾರೆ. ಆದರೆ ಸಂವಹನ ಸೇರಿದಂತೆ ಅತ್ಯಂತ ಸೂಕ್ಷ್ಮ ವಿಚಾರಗಳ ಕಡೆ ಗಮನಹರಿಸದೇ ವೈಫಲ್ಯ ಅನುಭವಿಸುತ್ತಾರೆ. ವ್ಯಕ್ತಿಯ ಔದ್ಯಮಿಕ ಯಶಸ್ಸಿನಲ್ಲಿ ಶೇ 15ರಷ್ಟು ಹಾರ್ಡ್‌ ಸ್ಕಿಲ್ಸ್‌ ಮುಖ್ಯವಾದರೆ, ಶೇ 85ರಷ್ಟು ಸಾಮಾನ್ಯ ಕೌಶಲದ್ದಾಗಿರುತ್ತದೆ. ಈ ನಿಟ್ಟಿನಲ್ಲಿ ಅವರಿಗೆ ತರಬೇತಿ ಅಗತ್ಯ’ ಎನ್ನುತ್ತಾರೆ ಸುಮಿತ್‌.

ಕ್ಲಾಸಿನಲ್ಲಿ ಆತ್ಮೀಯತೆ
ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಸಾಮಾನ್ಯ ಕೌಶಲಗಳ (ಸಾಫ್ಟ್‌ ಸ್ಕಿಲ್ಸ್‌) ಬಗ್ಗೆ ವಿದ್ಯಾರ್ಥಿ ದಿಶೆಯಿಂದಲೇ ಶಿಕ್ಷಣ ಕೊಡಲಾರಂಭಿಸಿದರೆ ಕೆಲಸಕ್ಕೆ ಸೇರುವ ಸಂದರ್ಭದಲ್ಲಿ ಅವರಿಗೆ ಅಷ್ಟು ಕಷ್ಟವೆನಿಸುವುದಿಲ್ಲ. ಆದ್ದರಿಂದ ಸ್ವಪ್ರಜ್ಞೆ, ವಿಮರ್ಶೆ, ನಿರ್ಧಾರ ಕೈಗೊಳ್ಳುವುದು, ಪರಿಣಾಮಕಾರಿ ಸಂವಹನ, ಒತ್ತಡದ ಸಂದರ್ಭದಲ್ಲಿ ಕೆಲಸ ಮಾಡುವುದು, ತಾದಾತ್ಮ್ಯಾನುಭೂತಿ, ಸೃಜನಶೀಲತೆ, ಸಮಸ್ಯೆ ಬಗೆಹರಿಸುವ ರೀತಿ, ವ್ಯಕ್ತಿಗಳ ನಡುವಣ ಸಂಬಂಧ, ಭಾವನೆಗಳಿಗೆ ಸ್ಪಂದಿಸುವ ಬಗೆ ಕುರಿತು ಶಿಕ್ಷಣ ನೀಡಲಾಗುತ್ತಿದೆ. ಅಲ್ಲದೇ ಸಮಯವನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎನ್ನುವುದನ್ನು ಮನಮುಟ್ಟುವ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ತಿಳಿಸುವ ಮೂಲಕ ಅವರು ತಮ್ಮ ಗುರಿಯೆಡೆಗೆ ನಡೆಯುವಂತೆ ಮಾಡಲಾಗುತ್ತದೆ.

ಸಂಭಾಷಣೆ ಕೌಶಲ, ಸಂವಹನ, ಅದರಲ್ಲಿನ ಅಡೆತಡೆಗಳು, ಯಶಸ್ಸಿನೆಡೆಗೆ ತಂಡವನ್ನು ಪ್ರೇರೇಪಿಸುವುದರ ಕುರಿತು ಸೂಕ್ಷ್ಮ ಮತ್ತು ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳಿಗೆ ವಿಡಿಯೊ, ಆಡಿಯೊ, ಪ್ರೆಸೆಂಟೇಶನ್‌ಗಳ ಮೂಲಕ ಗಮನ ಸೆಳೆಯಲಾಗುತ್ತದೆ. ಕಾರ್ಪೊರೇಟ್‌ ವಲಯದಲ್ಲಿ ಕೆಲಸ ಮಾಡುತ್ತಿರುವ ತಜ್ಞರನ್ನು ಮೂರು ದಿನ ನಡೆಯುವ ತರಬೇತಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲಾಗುತ್ತದೆ. ಈ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ತುಂಬುವ ಯತ್ನ ಈ ಹುಡುಗರದ್ದು. ಹಳ್ಳಿಗಳಲ್ಲಿ ಇನ್ನೂ ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಯಿದೆ. ‘ಮಾಮೂಲಿ ರೀತಿ ಪಾಠ ಕೇಳಿ ಜಡಗೊಂಡ ವಿದ್ಯಾರ್ಥಿಗಳಿಗೆ ಅವರ ರೀತಿಯಲ್ಲಿಯೇ ತರಗತಿಯಲ್ಲಿ ವರ್ತಿಸಿದರೆ ಇನ್ನಿಲ್ಲದ ಸಂತೋಷವಾಗುತ್ತದೆ. ಅಲ್ಲದೇ ನಾವು ಹೇಳುವುದನ್ನು ಗಮನವಿಟ್ಟು ಕೇಳಿಸಿಕೊಳ್ಳುದಲ್ಲದೇ, ಅವರೂ ಪ್ರತಿಕ್ರಿಯಿಸುತ್ತಾರೆ. ಇದು ಅವರಲ್ಲಿರುವ ಭಯವನ್ನು ಹೋಗಲಾಡಿಸಿ, ಆತ್ಮೀಯತೆ ತಂದು, ಮಾನಸಿಕವಾಗಿ ಸದೃಢರನ್ನಾಗಿಸುತ್ತದೆ’ ಎನ್ನುತ್ತಾರೆ ಮಯೂರ್‌.

ಫೇಸ್‌ಬುಕ್‌ ಪೇಜ್‌ಫುಲ್‌
‘ನಮ್ಮ ತರಗತಿಯಿಂದ ಪ್ರೇರಿತರಾದ ವಿದ್ಯಾರ್ಥಿಗಳು ಮೊಬೈಲ್‌, ಇ–ಮೇಲ್‌ ಐಡಿ, ಫೇಸ್‌ಬುಕ್‌ ಮೂಲಕ  ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ವಿದ್ಯಾರ್ಥಿ ಮಿತ್ರರ ಸಂದೇಶದಿಂದ ನಾಲ್ವರ ಫೇಸ್‌ಬುಕ್‌ ಖಾತೆ ತುಂಬಿದೆ. ಅದರಲ್ಲೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ನಮ್ಮ ಬೋಧನೆ ವಿಶೇಷವಾಗಿ ಹಿಡಿಸಿದೆ. ಅವರು ನಮ್ಮ ಮೇಲೆ ತೋರುವ ಪ್ರೀತಿ, ಬಾಂಧವ್ಯ ಅವರ್ಣನೀಯ. ಹಲವು ಬಡ ವಿದ್ಯಾರ್ಥಿಗಳು ತಮ್ಮ ಬದುಕನ್ನು ವಿವರಿಸಿ ಕಣ್ಣೀರಿಟ್ಟಿದ್ದಾರೆ. ಇಷ್ಟೆಲ್ಲವಾದರೂ ಆ ಮಕ್ಕಳಲ್ಲಿನ ಅಚಲ ವಿಶ್ವಾಸ ನಮಗೆ ಇಷ್ಟವಾಗುತ್ತದೆ. ದೂರಶಿಕ್ಷಣದ ಮೂಲಕ ಶಿಕ್ಷಣ ಪಡೆಯುತ್ತಿರುವ ಕೆಲವರು ಬೇರೆ ಕಡೆಯಿಂದ ನಮ್ಮನ್ನು ಸಂಪರ್ಕಿಸುತ್ತಾರೆ. ಅವರೆಲ್ಲರಿಗೂ ನಮ್ಮ ಕಡೆಯಿಂದ ಆಗುವ ಸಹಾಯ ಮಾಡುತ್ತಿದ್ದೇವೆ. ವಿದ್ಯಾರ್ಥಿಗಳಿಂದ ಸಿಗುವ ಸ್ಫೂರ್ತಿ ಎಂಥದ್ದು ಎನ್ನುವುದನ್ನು ತರಗತಿಯಲ್ಲಿ ಅವರ ಎದುರು ನಿಂತು ಅನುಭವಿಸಬೇಕು’ ಎನ್ನುವ ಮಾಸ್‌ ಗೆಳೆಯರು, ಶೈಕ್ಷಣಿಕ ಕೌಶಲ, ಅನುಭವ, ವಿಷಯದ ಮೇಲಿನ ಹಿಡಿತ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲು ನೆರವಾದರೆ ಸೂಕ್ಷ್ಮ ಕೌಶಲಗಳು ಕೆಲಸ ಗಿಟ್ಟಿಸಲು ಅತ್ಯವಶ್ಯ ಎನ್ನುತ್ತಾರೆ.

ನಿರಂತರ ಓದು, ಕಾರ್ಪೊರೇಟ್‌ ವಲಯದ ಅವಶ್ಯಕತೆ, ತಾಂತ್ರಿಕ ಬದಲಾವಣೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುವುದು ಈ ಯುವಕರನ್ನು ಚಲನಶೀಲರನ್ನಾಗಿಸಿದೆ. ನಾಲ್ವರು ಒಂದಲ್ಲಾ ಒಂದು ರೀತಿಯಲ್ಲಿ ಸಂಶೋಧನೆಯಲ್ಲಿ ತೊಡಗಿರುತ್ತಾರೆ. ಹೊಸದನ್ನು ಒಬ್ಬೊರಿಗೊಬ್ಬರು ಹಂಚಿಕೊಳ್ಳುತ್ತಾರೆ. ಎಲ್ಲರೂ ಕಾರ್ಯಾಗಾರದಲ್ಲಿ ಒಂದೊಂದು ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ಬೋಧಿಸುತ್ತಾರೆ. ಕಲಿಸುವುದರ ಜೊತೆಗಿನ ಕಲಿಕೆ ಅವರ ವಿಶೇಷ. ಇವರ ಸಂಪರ್ಕಕ್ಕೆ: 9886287849.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT