ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹಿತಿ ಕಣಜ ಈ ದಿನದರ್ಶಿಕೆ

Last Updated 22 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಪ್ರತಿ ವರ್ಷ ಬಳಸಿ ಬಿಸಾಡಬಾರದು ಎಂಬ ಎಚ್ಚರಿಕೆಯನ್ನಿರಿಸಿಕೊಂಡು, ಪ್ರತಿದಿನವೂ ಒಂದು ಹೊಸ ಮಾಹಿತಿಯನ್ನು ಒದಗಿಸುತ್ತಿದೆ ಚಿಕ್ಕಬಳ್ಳಾಪುರದ ಅಭಯ ಮಹಿಳಾ ವೇದಿಕೆ. ಸಂಗ್ರಹಯೋಗ್ಯ ಸಂಚಿಕೆ ನಿರ್ವಹಣೆಯೇ ಇವರ ಉದ್ದೇಶ.

ಆಯಾ ವರ್ಷದ ಸೋಲು–ಗೆಲುವು, ಸುಖ–ದುಃಖ ಎಲ್ಲವನ್ನೂ ನೆನಪಿಡುವಂತಹ ಮತ್ತು ದಾಖಲಿಸುವಂತಹ ದಿನದರ್ಶಿಕೆ ಬಹುತೇಕ ಎಲ್ಲರ ಪಾಲಿಗೂ ಜೀವನದ ಒಂದು ಭಾಗ. ಹಳೆಯ ಕ್ಷಣಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಲು ಮತ್ತು ಭವಿಷ್ಯವನ್ನು ಸುಭದ್ರವಾಗಿ ಕಟ್ಟಿಕೊಳ್ಳಲು ಕಣ್ಣುಗಳು ಪದೇ ಪದೇ ದಿನದರ್ಶಿಕೆಯತ್ತ ಹೋಗದೇ ಇರುವುದಿಲ್ಲ.

ಸಾಂಪ್ರದಾಯಿಕ ಮಾದರಿಯ ದಿನದರ್ಶಿಕೆಗಳ ಬದಲು ತೀರ ವಿಭಿನ್ನ ಮತ್ತು ವಿಶಿಷ್ಟ ರೀತಿಯದ್ದು ಸಿದ್ಧಪಡಿಸುವುದು ಕೊಂಚ ಕಷ್ಟದ ಮಾತು. ಆದರೆ ಕಷ್ಟವೆಂಬುದನ್ನು ಸವಾಲಾಗಿ ಸ್ವೀಕರಿಸಿ ಕಳೆದ ಹತ್ತು ವರ್ಷಗಳಿಂದ ಚಿಕ್ಕಬಳ್ಳಾಪುರದ ಅಭಯ ಮಹಿಳಾ ವೇದಿಕೆಯು ವಿನೂತನ ಮಾದರಿಯ ದಿನದರ್ಶಿಕೆ ಹೊರತರುತ್ತಿದೆ. ಪ್ರತಿ ವರ್ಷ ಹೊಸ ವಿಷಯ, ವಿಚಾರ ಮತ್ತು ಪ್ರತಿಯೊಬ್ಬರಿಗೂ ಜ್ಞಾನವೃದ್ಧಿ.

‘ಬದುಕು’ ಸಾಮಾಜಿಕ–ಸಾಂಸ್ಕೃತಿಕ–ಶೈಕ್ಷಣಿಕ ಸಂಸ್ಥೆಯಡಿ ರೂಪಿತಗೊಂಡ ಅಭಯ ಮಹಿಳಾ ವೇದಿಕೆಯು ಸಮಾಜ, ವಿಜ್ಞಾನ, ಕಲೆ, ಸ್ವಾತಂತ್ರ್ಯ ಹೋರಾಟಗಾರರು ಸೇರಿದಂತೆ ವಿಶೇಷವಾದ ದಿನದರ್ಶಿಕೆಯನ್ನು ಹೊರತಂದಿದ್ದಾರೆ. ಸಾಕಷ್ಟು ಪೂರ್ವಸಿದ್ಧತೆ, ಸಂಶೋಧನೆ ಮತ್ತು ಮಾಹಿತಿ ಸಂಗ್ರಹಣೆ ಮಾಡಿಕೊಂಡೇ ದಿನದರ್ಶಿಕೆ ಹೊರತರುವ ವೇದಿಕೆ ಸದಸ್ಯರು, ‘ಜನರು ವರ್ಷ ಬೇಕಾದರೂ ಮರೆಯಬಹುದು. ಆದರೆ ನಮ್ಮ ದಿನದರ್ಶಿಕೆ ಮಾತ್ರ ಜೋಪಾನವಾಗಿ ಇಟ್ಟುಕೊಳ್ಳುತ್ತಾರೆ’ ಎಂದು ನುಡಿಯುತ್ತಾರೆ. 

ವೇದಿಕೆ ಸಂಚಾಲಕಿ ಡಾ. ಜಿ. ಸುಧಾ. ಚಿಕ್ಕಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕಿ. ‘ಇದೆಲ್ಲವೂ ಸಾಧ್ಯ. ಒಮ್ಮೆ ಮಾಡಿ ನೋಡಿ’ ಎಂದು ಸೃಜನಾತ್ಮಕ ಮತ್ತು ಸಾಹಿತ್ಯಾತ್ಮಕ ಕೃಷಿಗೆ ಕಾರಣವಾಗಿದ್ದಾರೆ.

‘ನಾವು ಸಮಾಜಕ್ಕೆ ಏನಾದರೂ ಹಿಂದಿರುಗಿಸಬೇಕೆಂಬ ಪಣತೊಟ್ಟು ಬದುಕು ಎಂಬ ಸಂಸ್ಥೆ ರಚಿಸಿದೆವು. ಉಚಿತ ಆರೋಗ್ಯ ಶಿಬಿರ, ವಿದ್ಯಾರ್ಥಿಗಳಿಗೆ ನೆರವು, ಆರೋಗ್ಯ ರಕ್ಷಣೆ ಜೊತೆಗೆ ಅತ್ಯಂತ ವಿಭಿನ್ನ ದಿನದರ್ಶಿಕೆ ಸಿದ್ಧಪಡಿಸಲು ಆಲೋಚಿಸಿದೆವು. ಬಳಸಿ ಬಿಸಾಕಬಾರದು ಎಂಬ ಎಚ್ಚರವಹಿಸಿದೆವು. 2005ರಲ್ಲಿ ಆರಂಭಗೊಂಡ ಪಯಣ ಮುಂದುವರೆದಿದೆ ಎಂದು ಡಾ. ಜಿ. ಸುಧಾ ‘ಭೂಮಿಕಾ’ಗೆ ತಿಳಿಸಿದರು.

ಈ ವೇದಿಕೆಯು ಮಹಿಳೆಯರನ್ನು ಕೇಂದ್ರೀಕರಿಸಿ ಹಲವಾರು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ವಿವಿಧ ರೀತಿಯ ಭಾಷಾ ಆಟಗಳು, ಸ್ವಾತಂತ್ರ್ಯ ಹೋರಾಟಗಾರರು, ವಿಜ್ಞಾನಿಗಳ ಜೀವನಸಾಧನೆ ಕುರಿತು ರಸಪ್ರಶ್ನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೂ ಉತ್ತೇಜನ ನೀಡುತ್ತದೆ.

ಮಹಿಳೆಯರಲ್ಲಿ ಸಾಹಿತ್ಯಾತ್ಮಕ ಯೋಚನೆ ಹೊರಹೊಮ್ಮಲಿ ಮತ್ತು ಬರವಣಿಗೆ ಸಾಮರ್ಥ್ಯ ಬೆಳಕಿಗೆ ಬರಲಿ ಎಂಬ ಉದ್ದೇಶದಿಂದ ‘ಅಪೂರ್ವ ಕಣ್ಮಣಿ’ ಎಂಬ ಮಾಸಪತ್ರಿಕೆಯನ್ನೂ ಸಹ ಹೊರತರುತ್ತಿದೆ. ಕತೆ, ಕವನ, ಪ್ರಬಂಧ ಮತ್ತು ಲೇಖನಗಳನ್ನು ಬರೆಯುವಂತೆ ಮಹಿಳೆಯರಿಗೆ ಪ್ರೋತ್ಸಾಹಿಸಲಾಗುತ್ತದೆ. ದಿನದರ್ಶಿಕೆ ಮಾರಾಟದಿಂದ ಬಂದ ಹಣವನ್ನು ವೇದಿಕೆಯ ಕಾರ್ಯಚಟುವಟಿಕೆಗಳಿಗೆ ಇಲ್ಲವೇ ವಿದ್ಯಾರ್ಥಿಗಳ ಅಥವಾ ಅಗತ್ಯವಿರುವವರ ನೆರವಿಗೆ ಬಳಸಲಾಗುತ್ತದೆ.

ಅನುಪಮಾ ಸಾಹಿತ್ಯ ವೇದಿಕೆ: ಅಭಯ ಮಹಿಳಾ ವೇದಿಕೆ ದಿನದರ್ಶಿಕೆ ಮತ್ತು ಇನ್ನಿತರ ಚಟುವಟಿಕೆಗೆ ಸೀಮಿತವಾದರೆ, ಇದಕ್ಕೆ ಪೂರಕ ಎಂಬಂತೆ ಅನುಪಮಾ ಸಾಹಿತ್ಯ ವೇದಿಕೆಯು ಒಂದಿದೆ. 

ದಿವಂಗತ ಸಾಹಿತಿ ಡಾ. ಅನುಪಮಾ ನಿರಂಜನ್ ಅವರ ಹೆಸರಿನ ಸ್ಫೂರ್ತಿಯಿಂದ ಹೊರಹೊಮ್ಮಿರುವ ಇದು ಅಪ್ಪಟ ಮಹಿಳೆಯರದ್ದೇ ವೇದಿಕೆ. ವರ್ಷಪೂರ್ತಿ ವೈವಿಧ್ಯಮಯ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಮತ್ತು ಸ್ಪರ್ಧೆಗಳನ್ನು ಆಯೋಜಿಸುತ್ತದೆ. 

‘ಜನನಿ’ ಎಂಬ ತ್ರೈಮಾಸಿಕ ಪತ್ರಿಕೆ ಹೊರತರುತ್ತಿದೆ. ಲೇಖಕಿಯರು ಹೊಸ ಕವನ ಸಂಕಲನ, ಕಾದಂಬರಿ ಅಥವಾ ಕಥಾ ಸಂಕಲನ ಹೊರತರಲು ಬಯಸಿದ್ದಲ್ಲಿ, ವೇದಿಕೆ ಅವರಿಗೆ ಸೂಕ್ತ ನೆರವು ಸಹ ನೀಡುತ್ತದೆ.

ಮಹಿಳಾ ದಿನದರ್ಶಿಕೆಯ ವಿಶೇಷ
ಪ್ರತಿ ವರ್ಷ ಹೊಸದೊಂದು ದಿನದರ್ಶಿಕೆ ಹೊರತಂದಾಗ ಹಳೆಯದ್ದನ್ನು ಅನಿವಾರ್ಯವಾಗಿ ಬದಲಿಸಲೇಬೇಕಾಗುತ್ತದೆ. ದಿನದರ್ಶಿಕೆಗಳು ಯಾಕೆ ಹಳೆಯ ವಸ್ತುಗಳ ಜೊತೆಗೆ ಸೇರ್ಪಡೆಯಾಗಬೇಕು. ಒಂದೇ ದಿನದರ್ಶಿಕೆಯು ಶಾಶ್ವತವಾಗಿ ಉಳಿಯಲಿ ಎಂಬ ಗುರಿಯೊಂದಿಗೆ ಮಹಿಳೆಯರ ಜನ್ಮದಿನ ಆಧರಿಸಿದ ವಿಶಿಷ್ಟ ಮಾದರಿಯ ದಿನದರ್ಶಿಕೆಯನ್ನು ಅಭಯ ಮಹಿಳಾ ವೇದಿಕೆಯವರು ಹೊರತಂದಿದ್ದಾರೆ. ವರ್ಷದ 365 ದಿನವೂ ಸಹ ಒಬ್ಬ ಖ್ಯಾತನಾಮ ಮಹಿಳೆಯ ಜನ್ಮದಿನ ಆಚರಿಸಬಹುದು.

ಅತ್ಯಂತ ದೊಡ್ಡ ದೇಶದಿಂದ ಆರಂಭಗೊಂಡು ಹೆಸರೇ ಕೇಳಿರದ ಪುಟ್ಟ ಪುಟ್ಟ ದೇಶಗಳಲ್ಲಿನ ಖ್ಯಾತನಾಮ ಮಹಿಳೆಯರ ಭಾವಚಿತ್ರ, ಸಾಧಕ ಕ್ಷೇತ್ರ ಮತ್ತು ಅವರು ಬದುಕಿದ ಅವಧಿಯನ್ನು ಮುದ್ರಿಸಲಾಗಿದೆ. ಇತಿಹಾಸದ ಪುಟಗಳಲ್ಲಿ ಬರೀ ಹೆಸರನ್ನು ಮಾತ್ರ ಕೇಳಿದವರು ಆಯಾ ಮಹಿಳೆಯರ ಭಾವಚಿತ್ರಗಳನ್ನು ಇಲ್ಲಿ ಕಾಣಬಹುದು. ವಿಶ್ವದ ಏಳು ಖಂಡಗಳ ಬಹುತೇಕ ಎಲ್ಲಾ ದೇಶದ ಮಹಿಳೆಯರ ಜನ್ಮದಿನಕ್ಕೆ ಅನುಸಾರ ಆಯಾ ತಿಂಗಳ ತಾರೀಕುಗಳಲ್ಲಿ ಅವರ ಭಾವಚಿತ್ರಗಳನ್ನು ಪ್ರಕಟಿಸಲಾಗಿದೆ.

ಫಿಲಿಪ್ಪೀನ್ಸ್‌ನ ಸ್ವಾತಂತ್ರ್ಯ ಹೋರಾಟಗಾರ್ತಿ ಮೆಲ್ಚೊರಾ ಅಖ್ವಿನೊಸ್, ಲಿಥ್ಯುಯೇನಿಯಾ ಕ್ರಾಂತಿಕಾರಿ ನಾಯಕಿ ಎಮಿಲಿಯಾ ಪ್ಲೇಟರ್, ನೈಜೀರಿಯಾದ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಫನ್ಮಿಲಯೊ ರನ್ಸೋಮ್, ವೆನಿಜುವೆಲಾದ ಶಿಲ್ಪಿ ಲಿಯಾ ಬೆರ್ಮುಡೆಜ್, ಇರಾನ್‌ನ ಮಾನವ ಹಕ್ಕುಗಳ ಹೋರಾಟಗಾರ್ತಿ ಶಿರಿನ್ ಇಬಾದಿ ಸೇರಿದಂತೆ ಖ್ಯಾತನಾಮ ಮಹಿಳೆಯರ ಭಾವಚಿತ್ರಗಳನ್ನು ನೋಡಬಹುದು ಮತ್ತು ಆಯಾ ದಿನದಂದು ಅವರ ಜನ್ಮದಿನ ಕೂಡ ಆಚರಿಸಬಹುದು.

ಆಸಕ್ತಿಮಯ ಸಂಗತಿಯೆಂದರೆ, ಈ ದಿನದರ್ಶಿಕೆಯಲ್ಲಿ ಭಾರತದ 70 ಮಂದಿ ಸಾಧಕಿಯರು ಸ್ಥಾನ ಪಡೆದುಕೊಂಡಿದ್ದರೆ, ಅವರಲ್ಲಿ ರಾಜ್ಯದ ಎಂ.ಕೆ. ಇಂದಿರಾ, ಜಯದೇವಿತಾಯಿ ಲಿಗಾಡೆ ಮತ್ತು ಅನುಪಮಾ ನಿರಂಜನ್ ಪ್ರಮುಖ ಸ್ಥಾನ ಪಡೆದಿದ್ದಾರೆ. ಇವರಲ್ಲದೇ ಪಾಕಿಸ್ತಾನದ ಕೆಲ ಸಾಧಕಿಯರದ್ದು ಭಾವಚಿತ್ರಗಳಿವೆ.

‘ಮಹಿಳೆಯರದ್ದೇ ವಿಶೇಷ ಮತ್ತು ಸರ್ವಕಾಲಿಕ ದಿನದರ್ಶಿಕೆ ಸಿದ್ಧಪಡಿಸಲು ನಾನು, ಗೆಳತಿ ಅಶ್ವಿನಿ ಮತ್ತು ಇತರರು ತುಂಬಾ ಶ್ರಮಪಟ್ಟೆವು. ದಿನಪೂರ್ತಿ ಮನೆಗೆಲಸ, ಕಚೇರಿ–ಕಾಲೇಜು ಕೆಲಸ ಮುಗಿಸಿ ಸಂಜೆ ದಿನದರ್ಶಿಕೆ ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗುತ್ತಿದ್ದೆವು. ಇಂಟರ್ನೆಟ್, ಪುಸ್ತಕ, ಹಳೆಯ ಪತ್ರಿಕೆಗಳು ಎಲ್ಲವನ್ನೂ ಗುಡ್ಡೆ ಹಾಕಿಕೊಂಡು ವಿವಿಧ ಕ್ಷೇತ್ರಗಳ ಸಾಧಕಿಯರನ್ನು ಪತ್ತೆ ಮಾಡುವ ಕಾರ್ಯದಲ್ಲಿ ನಿರತರಾಗುತ್ತಿದ್ದೆವು’ ಎಂದು ಡಾ. ಜಿ. ಸುಧಾ ‘ಭೂಮಿಕಾ’ಗೆ ತಿಳಿಸಿದರು.

10 ವರ್ಷಗಳ ದಿನದರ್ಶಿಕೆ ವಿಶೇಷ
2006–ಖ್ಯಾತ ಭೌತಶಾಸ್ತ್ರಜ್ಞರ
ಭಾವಚಿತ್ರ, ಸಂಕ್ಷಿಪ್ತ ಜೀವನ
ಚರಿತ್ರೆ ಮತ್ತು ಸೂಕ್ತಿ.

2007–ಅಂಗವೈಕಲ್ಯ
ನಡುವೆಯೂ ಉತ್ತಮ ಸಾಧನೆ
ತೋರಿದವರ ಕುರಿತು ಮಾಹಿತಿ.

2008–ಶಿಕ್ಷಣ ಕ್ಷೇತ್ರದಲ್ಲಿ
ವಿನೂತನ ಪ್ರಯೋಗ ಮಾಡಿದ
ಸಾಧಕರು.

2009–ವಿವಿಧ ಕ್ಷೇತ್ರಗಳಲ್ಲಿ
ಅದ್ವಿತೀಯ ಸಾಧನೆ ಮಾಡಿದ
ಖ್ಯಾತನಾಮ ಮಹಿಳೆಯರು.

2010–ದೇಶದ ಸ್ವಾತಂತ್ರ್ಯಕ್ಕಾಗಿ
ಹುತಾತ್ಮರಾದವರು.

2011–ಸಮಾಜಸೇವೆ
ಸಲ್ಲಿಸುತ್ತಿರುವ ಮಕ್ಕಳ ಕುರಿತು
ಮಾಹಿತಿ.

2012–ಶಾಲಾ ಶಿಕ್ಷಣ ಪಡೆಯದೇ
ವಿವಿಧ ಕ್ಷೇತ್ರಗಳಲ್ಲಿ ಸಾಧನೆ
ತೋರಿದವರು.

2013–ಮನುಕುಲಕ್ಕೆ ವಿಶೇಷ
ಕೊಡುಗೆ ನೀಡಿದ
ವೈದ್ಯವಿಜ್ಞಾನಿಗಳು.

2014–ವಯಸ್ಸು 35 ದಾಟಿದ
ನಂತರವೂ ವಿಶಿಷ್ಟ ಸಾಧನೆ
ಮಾಡಿದವರು.

ಎಷ್ಟೋ ಸಂದರ್ಭಗಳಲ್ಲಿ ಇಂಟರ್ನೆಟ್‌ನಲ್ಲಿ ಅವರ ಹೆಸರುಗಳನ್ನು ಸರಿಯಾಗಿ ಉಚ್ಛರಿಸುವುದು ಮತ್ತು ಅವರನ್ನು ಗುರುತಿಸುವುದೇ ಕಷ್ಟವಾಗುತಿತ್ತು. ದಕ್ಷಿಣ ಆಫ್ರಿಕಾ, ಯೂರೋಪ್, ಮಧ್ಯ ಏಷ್ಯಾದ ದೇಶದಗಳಲ್ಲಿನ ಸಾಧಕಿಯರ ಪರಿಚಯ ಮತ್ತು ವಿವರಣೆ ಬೇಗನೇ ಸಿಕ್ಕಿಬಿಡುತಿತ್ತು. ಆದರೆ ನೈಜೀರಿಯಾ, ಇರಾನ್ ಸೇರಿದಂತೆ ಇತರೆ ದೇಶದ ಸಾಧಕಿಯರ ಬಗ್ಗೆ ಮಾಹಿತಿ ಸಂಗ್ರಹಣೆ ಕಷ್ಟವಾಗುತಿತ್ತು.

15ನೇ ಶತಮಾನದಿಂದ ಆರಂಭಿಸಿ ಈಗಿನವರೆಗಿನ ಸಾಧಕಿಯರನ್ನು ಹುಡುಕಿ, ಜನ್ಮದಿನಗಳು ಖಾತ್ರಿಪಡಿಸಿಕೊಂಡು ಮುದ್ರಿಸಿದೆವು. ಜನ್ಮದಿನಗಳು ಒಂದೇ ದಿನದಂದು ಬಂದಿದ್ದರಿಂದ ಕೆಲವೊಬ್ಬರ ಹೆಸರುಗಳನ್ನು ಕೈಬಿಡಬೇಕಾಯಿತು’ ಎಂದು ಅವರು ವಿವರಿಸಿದರು.

ವಿಶ್ವದ ಎಲ್ಲಾ ಖ್ಯಾತನಾಮ ಮಹಿಳೆಯರನ್ನು ಸೇರ್ಪಡೆ ಮಾಡಿದ್ದರೆ, ಪಟ್ಟಿ ಇನ್ನಷ್ಟು ಉದ್ದವಾಗುತಿತ್ತು. ದಿನದರ್ಶಿಕೆಯ ಒಟ್ಟಾರೆ ಸ್ವರೂಪವೇ ಬದಲಾಗುವ ಸಾಧ್ಯತೆ ಇತ್ತು. ಎಚ್ಚರವಹಿಸಿ ಆಯ್ದ ಕ್ಷೇತ್ರಗಳಲ್ಲಿನ ಮಹಿಳೆಯರಿಗೆ ಮಾತ್ರವೇ ಆದ್ಯತೆ ನೀಡಿದೆವು.

ಸ್ವಾತಂತ್ರ್ಯ ಹೋರಾಟ, ಕ್ರಾಂತಿಕಾರಿ ಬದುಕು, ಸಾಹಿತ್ಯ, ಮಾನವ ಮತ್ತು ಮಹಿಳಾ ಹಕ್ಕಿನ ಹೋರಾಟಗಾರರು, ಕಲಾವಿದರು, ಸಮಾಜ ಸುಧಾರಕರು, ಚಿಂತಕರು ಮುಂತಾದವರನ್ನು ಮಾತ್ರ ಆಯ್ಕೆ ಮಾಡಿದೆವು. ವಿನೂತನ ಮಾದರಿಯ ಈ ಪ್ರಯೋಗಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಎಂದು ಅವರು ತಿಳಿಸಿದರು. ಮಾಹಿತಿಗೆ: 94483 14130.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT