ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹಿತಿ ಪಡೆದ ಸಾವಿರಾರು ವಿದ್ಯಾರ್ಥಿಗಳು

‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ನ ಎರಡು ದಿನಗಳ ಶೈಕ್ಷಣಿಕ ಮೇಳಕ್ಕೆ ಚಾಲನೆ
Last Updated 28 ಮೇ 2016, 20:12 IST
ಅಕ್ಷರ ಗಾತ್ರ

ಬೆಂಗಳೂರು: ‘ಭಾರತದಲ್ಲಿ 2025ರ ವೇಳೆಗೆ ತಯಾರಿಕಾ ವಲಯದಲ್ಲಿ 9 ಕೋಟಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ’ ಎಂದು ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಇಂಡಿಯಾ ಎಲೆಕ್ಟ್ರಾನಿಕ್ಸ್‌ ಆಂಡ್‌ ಸೆಮಿಕಂಡಕ್ಟರ್‌ ಅಸೋಸಿಯೇಷನ್‌ (ಐಇಎಸ್‌ಎ) ಅಧ್ಯಕ್ಷ ಎಂ.ಎನ್‌. ವಿದ್ಯಾಶಂಕರ್‌ ಹೇಳಿದರು.

‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’  ಪತ್ರಿಕೆಗಳು ನಗರದ ಜಯಮಹಲ್‌ ಪ್ಯಾಲೇಸ್‌ ಹೋಟೆಲ್‌ ಮೈದಾನದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ‘ಎಜುವರ್ಸ್‌’ 8ನೇ ಅಧ್ಯಾಯದ ‘ಜ್ಞಾನ ದೇಗುಲ’ ಶೈಕ್ಷಣಿಕ ಮೇಳಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

‘ತಯಾರಿಕಾ ವಲಯ ದೇಶದ ಒಟ್ಟು ಆಂತರಿಕ ಉತ್ಪಾದನೆಗೆ (ಜಿಡಿಪಿ) ಶೇ 25ರಷ್ಟು ಕೊಡುಗೆ ನೀಡಿದೆ. ಆಟೋಮೊಬೈಲ್‌, ಟೆಕ್ಸ್‌ಟೈಲ್‌, ಮಾಹಿತಿ ತಂತ್ರಜ್ಞಾನ, ಆರೋಗ್ಯ, ಮೂಲಸೌಕರ್ಯ ಅಭಿವೃದ್ಧಿ, ಎಂಜಿನಿಯರಿಂಗ್‌, ರಕ್ಷಣಾ ಕ್ಷೇತ್ರ, ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಪುಲ ಉದ್ಯೋಗಾವಕಾಶಗಳು ಲಭ್ಯ ಇವೆ’ ಎಂದರು.

‘ಮುಂದಿನ 5 ವರ್ಷದಲ್ಲಿ ಸಿವಿಲ್‌ ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ 9 ಲಕ್ಷ ಹಾಗೂ ಟೆಲಿಕಾಂ ಕ್ಷೇತ್ರದಲ್ಲಿ 7 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಮೇಕ್‌ ಇನ್‌ ಇಂಡಿಯಾದ ಭಾಗವಾಗಿ ಅನೇಕ ಕಂಪೆನಿಗಳು ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಮಾಡಲು ಒಪ್ಪಂದ ಮಾಡಿಕೊಂಡಿವೆ. ಭಾರತದಲ್ಲಿ ಉದ್ಯೋಗಾವಕಾಶಗಳ ಸೃಷ್ಟಿಗೆ ಉತ್ತಮ ವಾತಾವರಣವಿದೆ’ ಎಂದರು.

‘ಕಂಪ್ಯೂಟರ್‌ ಎಂಜಿನಿಯರ್‌ ಪೂರೈಸಿದ ಶೇ 44 ರಷ್ಟು ಹಾಗೂ ಟೆಕ್ಸ್‌ಟೈಲ್‌ ಕೌಶಲ ಪಡೆದ ಶೇ 60ರಷ್ಟು ಪದವೀಧರರಿಗೆ ತಕ್ಕ ಉದ್ಯೋಗಗಳು ದೊರೆಯುತ್ತಿಲ್ಲ. ತಮ್ಮ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗಗಳು ಸಿಗುತ್ತಿಲ್ಲ’ ಎಂದು ಹೇಳಿದರು.

ನವೋದ್ಯಮ ಸ್ಥಾಪಿಸಿ: ‘ಇಂದು ನವೋದ್ಯಮ ಸ್ಥಾಪಿಸಲು ಹಣದ ಸಮಸ್ಯೆ ಉದ್ಭವವಾಗುವುದಿಲ್ಲ. ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ, ಸರ್ಕಾರದ ವಿವಿಧ ಯೋಜನೆಗಳ ಅನುಕೂಲ ಪಡೆಯಬಹುದು. ಹೊಸ ಕಲ್ಪನೆ, ವ್ಯವಹಾರ ಜ್ಞಾನ, ಛಲ, ಇಚ್ಛಾಶಕ್ತಿ ಇದ್ದರೆ ಯಾರು ಬೇಕಾದರೂ ಯಶಸ್ವಿ ಉದ್ಯಮಿ ಆಗಬಹುದು’ ಎಂದರು.

‘500 ನವೋದ್ಯಮಗಳು ಬೆಂಗಳೂರಿನಲ್ಲಿವೆ. ಜನರು ನವೋದ್ಯಮಗಳನ್ನು ಸ್ವಾಗತ ಮಾಡುತ್ತಾರೆ’ ಎಂದು ವಿವರಿಸಿದರು. ‘ಇಸ್ರೇಲ್‌ನಲ್ಲಿ ಪ್ರತಿವರ್ಷ 100–200 ನವೋದ್ಯಮಗಳು ಆರಂಭಗೊಳ್ಳುತ್ತವೆ.

ಅಲ್ಲಿ ಪದವೀಧರನೊಬ್ಬ ಆಹಾರ ಪದಾರ್ಥಗಳಲ್ಲಿ ಎಷ್ಟು ಪ್ರಮಾಣದ ಕ್ಯಾಲರಿ ಇದೆ? ಕಾಫಿಯಲ್ಲಿರುವ ಕೆಫಿನ್‌ ಪ್ರಮಾಣ ಎಷ್ಟು? ನಾವು ಧರಿಸಿದ ಬಟ್ಟೆ ಹತ್ತಿಯದ್ದೇ ಎಂಬುದನ್ನು ಪತ್ತೆ ಹಚ್ಚುವ ಸ್ಕ್ಯಾನರ್‌  ಯಂತ್ರವನ್ನು ಕಂಡು ಹಿಡಿದಿದ್ದಾನೆ’ ಎಂದರು.

‘ಬೆಂಗಳೂರಿನ ಕಸ್ತೂರಿ ನಗರದಲ್ಲಿ ದ ಮಿನಿಟ್‌ ಬಿಸ್ಟ್ರೊ ಎಂಬ ರೆಸ್ಟೋರೆಂಟ್‌ ಇದೆ. ಅಲ್ಲಿ ಯಾವುದೇ ತಿಂಡಿ–ತಿನಿಸುಗಳಿಗೆ ಹಣ ನೀಡಬೇಕಿಲ್ಲ. ಆದರೆ ಸಮಯಕ್ಕೆ ಹಣ ಪಾವತಿಸಬೇಕು. ನೀವು ರೆಸ್ಟೋರೆಂಟ್‌ನಲ್ಲಿ ಕಳೆಯುವ ಸಮಯದ ಮೇಲೆ ಶುಲ್ಕ ವಿಧಿಸಲಾಗುತ್ತದೆ. ಇಂತಹ ಹೊಸ ಕಲ್ಪನೆಗಳು ಯಶಸ್ವಿ ಉದ್ಯಮಿಯಾಗಲು ಸಹಕಾರಿಯಾಗಿವೆ’ ಎಂದು ಹೇಳಿದರು.

40 ಸಾವಿರ ರ್‍ಯಾಂಕ್‌ಗೂ ಸೀಟು ಲಭ್ಯ: ಕಾಮೆಡ್‌–ಕೆ ಸೀಟು ಹಂಚಿಕೆ ಪ್ರಕ್ರಿಯೆ  ಕುರಿತು ನಂದಿ ತಾಂತ್ರಿಕ ಸಂಸ್ಥೆಯ  ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರಾಮರಾವ್‌ ಮಾತನಾಡಿ, ‘ಎಂಜಿನಿಯರಿಂಗ್‌, ವೈದ್ಯಕೀಯ,

ದಂತ ವೈದ್ಯಕೀಯ ಹಾಗೂ ವಾಸ್ತುಶಿಲ್ಪ ಕೋರ್ಸ್‌ಗಳ ಪ್ರವೇಶಕ್ಕೆ ಕಾಮೆಡ್‌–ಕೆ ಪರೀಕ್ಷೆ ನಡೆಸಲಾಗುತ್ತದೆ. ತಮ್ಮ ಇಷ್ಟದ ಕೋರ್ಸ್‌ಗೆ ಸೀಟು ಸಿಗುತ್ತದೋ ಇಲ್ಲವೋ ಎಂದು ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ. 40 ಸಾವಿರ ರ್‍ಯಾಂಕ್‌ ಪಡೆದವರಿಗೂ ವೃತ್ತಿಪರ ಕೋರ್ಸ್‌ಗಳಿಗೆ ಸೀಟು ಸಿಗಲಿದೆ’ ಎಂದರು.

‘ಯಾವ ಎಂಜಿನಿಯರಿಂಗ್‌ ಕಾಲೇಜಿಗೆ ಸೇರಿದ್ದೇನೆ ಎಂಬುದು ಮುಖ್ಯವಲ್ಲ. ಪ್ರತಿ ಸೆಮಿಸ್ಟರ್‌ನಲ್ಲೂ ಶೇ 80–85ರಷ್ಟು ಅಂಕ ಪಡೆದರೆ ಉತ್ತಮ ಉದ್ಯೋಗವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ರಾಜ್ಯದಲ್ಲಿ 225 ಎಂಜಿನಿಯರಿಂಗ್‌ ಕಾಲೇಜುಗಳಿದ್ದು, ಈ ಪೈಕಿ 115 ಕಾಲೇಜುಗಳು ಬೆಂಗಳೂರಿನಲ್ಲಿವೆ’ ಎಂದರು.

ಸಿಇಟಿ: ಜೂ.3ರಂದು ದಾಖಲೆ ಪರಿಶೀಲನೆ: ‘ಸಿಇಟಿಯಲ್ಲಿ 1ರಿಂದ 750ರವರೆಗೆ ರ್‍ಯಾಂಕ್‌ ಗಳಿಸಿದ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ಜೂನ್‌ 3ರಂದು ನಡೆಯಲಿದೆ’ ಎಂದು  ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಪಿಆರ್‌ಒ ಎ.ಎಸ್‌.ರವಿ ಹೇಳಿದರು.

‘ರಾಜ್ಯದಾದ್ಯಂತ 15 ನೋಡಲ್‌ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ದಾಖಲಾತಿ ಪರಿಶೀಲನೆ ವೇಳೆ ಮೂಲ ದಾಖಲಾತಿ ಹಾಗೂ ಗೆಜೆಟೆಡ್‌ ಅಧಿಕಾರಿಯಿಂದ ದೃಢೀಕರಿಸಿದ ಜೆರಾಕ್ಸ್‌ ಪ್ರತಿಗಳನ್ನು ಹಾಜರುಪಡಿಸಬೇಕು. ಏಳು ವರ್ಷದ ಅಧ್ಯಯನ ಪ್ರಮಾಣಪತ್ರ, ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ಹಾಜರುಪಡಿಸಬೇಕು’ ಎಂದರು.

‘ಜೂನ್‌ 14ರಿಂದ 23ರವರೆಗೆ ಆಪ್ಶನ್‌ ಎಂಟ್ರಿ ಪ್ರಕ್ರಿಯೆ ನಡೆಯಲಿದೆ. ಈ ಸಂದರ್ಭದಲ್ಲಿ ಜಾಗರೂಕತೆ ವಹಿಸಿ ಕಾಲೇಜುಗಳು ಹಾಗೂ ಕೋರ್ಸ್‌ಗಳನ್ನು ಆದ್ಯತೆ ಮೇರೆಗೆ ಆಯ್ಕೆ ಮಾಡಿಕೊಳ್ಳಬೇಕು. ಆನ್‌ಲೈನ್‌ನಲ್ಲಿ ತಿದ್ದುಪಡಿಗೆ ಅವಕಾಶ ಇರುವುದಿಲ್ಲ’ ಎಂದು ಹೇಳಿದರು.

‘ನಿಮಗೆ ಇಷ್ಟವಾದ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಿ. ಬೇರೆಯವರ ಮಾತು ಕೇಳಬೇಡಿ’ ಎಂದು ಕಿವಿಮಾತು ಹೇಳಿದರು.

ಉನ್ನತ ಶಿಕ್ಷಣದ ಮಾಹಿತಿ ನೀಡಿದ ‘ಜ್ಞಾನ ದೇಗುಲ’
ವೃತ್ತಿಪರ ಕೋರ್ಸ್‌ಗಳಿಗೆ ನಡೆಸುವ ಸಿಇಟಿ, ಕಾಮೆಡ್‌–ಕೆ ಪರೀಕ್ಷೆ, ದಾಖಲಾತಿ ಪರಿಶೀಲನೆ ವೇಳೆ ಸಿದ್ಧತೆ ಮಾಡಿಕೊಳ್ಳುವುದು, ಆಪ್ಶನ್‌ ಎಂಟ್ರಿ ವೇಳೆ ಜಾಗರೂಕತೆ ವಹಿಸುವುದು,  ಕಾಲೇಜಿಗೆ ಪ್ರವೇಶಾತಿ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳು, ಶುಲ್ಕದ ವಿವರ, ಶಿಕ್ಷಣಕ್ಕೆ ಸಂಬಂಧಿಸಿದ ಮಾಹಿತಿಯ ಮಹಾಪೂರ...

‘ಜ್ಞಾನ ದೇಗುಲ’ ಶೈಕ್ಷಣಿಕ ಮೇಳಕ್ಕೆ ಭೇಟಿ ನೀಡಿದ ವಿದ್ಯಾರ್ಥಿಗಳು ಹಾಗೂ ಪೋಷಕರು ಶೈಕ್ಷಣಿಕ  ಮಾಹಿತಿ ಪಡೆದರು. ಮೇಳದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ  ಜಿಲ್ಲೆಗಳ 70ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಭಾಗವಹಿಸಿವೆ.

ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್‌, ಕೃಷಿ, ನರ್ಸಿಂಗ್‌,  ಬ್ಯುಸಿನೆಸ್‌, ಮ್ಯಾನೇಜ್‌ಮೆಂಟ್‌, ಆತಿಥ್ಯ, ಮಾರ್ಕೆಟಿಂಗ್‌, ಕಾನೂನು,  ಆನಿಮೇಷನ್‌ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಶಿಕ್ಷಣ ನೀಡುವ ಸಂಸ್ಥೆಗಳು ತಮ್ಮ ಮಳಿಗೆಗಳನ್ನು ತೆರೆದಿವೆ.

ಇವುಗಳ ಜೊತೆಗೆ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು, ವಿಜಯಾ ಬ್ಯಾಂಕ್‌, ಕರ್ನಾಟಕ ಬ್ಯಾಂಕ್‌, ಸಿಂಡಿಕೇಟ್‌ ಬ್ಯಾಂಕ್‌ಗಳು ಕೂಡ ಮೇಳದಲ್ಲಿ ಭಾಗವಹಿಸಿವೆ.

‘ಜ್ಞಾನ ದೇಗುಲ’ದಲ್ಲಿ ಇಂದು ಏನು...?
* ಬೆಳಿಗ್ಗೆ 10.30:
ನಂದಿ ತಾಂತ್ರಿಕ ಸಂಸ್ಥೆಯ  ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರಾಮರಾವ್‌ ಅವರಿಂದ ಕಾಮೆಡ್‌–ಕೆ ಕುರಿತು ಉಪನ್ಯಾಸ.

*ಬೆಳಿಗ್ಗೆ 11: ಸಿಇಟಿ ಕೌನ್ಸೆಲಿಂಗ್‌ ಪ್ರಕ್ರಿಯೆಯ ಬಗ್ಗೆ ಕೆಇಎ ಪಿಆರ್‌ಒ ಎ.ಎಸ್‌.ರವಿ ಅವರಿಂದ ವಿವರಣೆ.

*ಬೆಳಿಗ್ಗೆ 11.30: ಸೃಷ್ಟಿ ಸಂಸ್ಥೆಯ ನಿರ್ದೇಶಕ ಅರವಿಂದ್‌ ಲೋದಾಯ ‘ಪ್ರೇರಣೆ’ ಕುರಿತು ಭಾಷಣ.

*ಸ್ಥಳ: ಜಯಮಹಲ್‌ ಪ್ಯಾಲೇಸ್‌ ಹೋಟೆಲ್‌ ಮೈದಾನ, ಕಂಟೋನ್ಮೆಂಟ್‌ ರೈಲು ನಿಲ್ದಾಣದ ಹತ್ತಿರ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT